ಪ್ರಮುಖ ವರದಿಗಳು

ಕೃಷ್ಣಮೃಗ ಬೇಟೆ ಪ್ರಕರಣ: ಸಲ್ಮಾನ್ ಖಾನ್ ದೋಷಿ; ಸೈಫ್ ಅಲಿ ಖಾನ್, ಟಬು, ನೀಲಮ್, ಸೋನಾಲಿ ಬೇಂದ್ರೆಗೆ ಬಿಗ್ ರಿಲೀಫ್!

Pinterest LinkedIn Tumblr

ಜೋಧ್ಪುರ; 20 ವರ್ಷಗಳ ಹಿಂದೆ ಬಾಲಿವುಡ್ ನಟ ಸಲ್ಮಾನ್ ಖಾನ್ ಹಾಗೂ ಇತರೆ ನಟರ ವಿರುದ್ಧ ದಾಖಲಾಗಿದ್ದ ಕೃಷ್ಣಮೃಗ ಬೇಟೆ ಪ್ರಕರಣ ತೀರ್ಪನ್ನು ರಾಜಸ್ತಾನದ ಜೋಧ್ಪುರ ನ್ಯಾಯಾಲಯದ ಪ್ರಕಟಿಸಿದ್ದು, ಸಲ್ಮಾನ್ ಖಾನ್ ಅವರನ್ನು ದೋಷಿ ಎಂದು ತೀರ್ಪು ನೀಡಿದೆ.

ಹಮ್ ಸಾಥ್ ಸಾಥ್ ಹೇ ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ನಡೆದಿದ್ದ ಬೇಟೆ ಪ್ರಕರಅ ಇದಾಗಿದ್ದು, ಸಲ್ಮಾನ್ ಮಾತ್ರವೇ ಅಲ್ಲದೇ, ಸೈಫ್ ಅಲಿ ಖಾನ್, ಟಬು, ಸೋನಾಲಿ ಬೇಂದ್ರೆ, ನೀಲಂ ಕೂಡ ಆರೋಪಿಗಳಾಗಿದ್ದಾರೆ. ಎಲ್ಲಾ ಆರೋಪಿಗಳು ಇಂದು ಜೋಧ್ಪುರ ನ್ಯಾಯಾಲಯಕ್ಕೆ ಹಾಜರಾಗಿದ್ದು, ಇದರಂತೆ ತೀರ್ಪು ಪ್ರಕಟಿಸಿರುವ ನ್ಯಾಯಾಲಯ ಸಲ್ಮಾನ್ ಖಾನ್ ಅವರನ್ನು ದೋಷಿ ಎಂದು ತೀರ್ಪು ನೀಡಿದ್ದು, ಇತರೆ ಆರೋಪಿಗಳನ್ನು ಖುಲಾಸೆಗೊಳಿಸಿದೆ.

ವನ್ಯಜೀವಿ ಸಂರಕ್ಷಣಾ ಕಾಯ್ದೆ ಸೆಕ್ಷನ್ 51ರ ಅಡಿ ಸಲ್ಮಾನ್ ಖಾನ್ ಅವರನ್ನು ಮುಖ್ಯ ನ್ಯಾಯಮೂರ್ತಿ ದೇವ್ ಕುಮಾರ್ ಖಾತ್ರಿ ಅವರು ದೋಷಿ ಎಂದು ತೀರ್ಪು ನೀಡಿದೆ. ಅಲ್ಲದೆ, ನಟ ಸೈಫ್ ಅಲಿ ಖಾನ್, ನಟಿ ಟಬು, ನೀಲಮ್ ಮತ್ತು ಸೋನಾಲಿ ಬೇಂದ್ರೆ ಅವರನ್ನು ಖುಲಾಸೆಗೊಳಿಸಿದ್ದಾರೆ. ಈ ಮೂಲಕ ನಟ-ನಟಿಯರಿಗೆ ಬಿಗ್ ರಿಲೀಫ್ ದೊರೆತಂತಾಗಿದೆ.

ಚಿತ್ರೀಕರಣಕ್ಕೆಂದು ರಾಜಸ್ತಾನದಲ್ಲಿ ತಂಗಿದ್ದ ಸಲ್ಮಾನ್ ಖಾನ್ ಹಾಗೂ ಇತರೆ ಆರೋಪಿಗಳು 1998ರ ಅ.1 ಹಾಗೂ 2 ರ ನಡುವಣ ರಾತ್ರಿ ಜೋಧ್ಪುರ ಬಳಿಯ ಕಂಕಣಿ ಗ್ರಾಮದಲ್ಲಿ ಜಿಪ್ಸಿಯಲ್ಲಿ ಪ್ರಯಾಣಿಸುತ್ತಿದ್ದರು. ಆಗ ಅವರ ಕಣ್ಣಿಗೆ ಕೃಷ್ಣಮೃಗಗಳ ಹಿಂಡು ಕಾಣಿಸಿತ್ತು.

ಚಾಲಕನ ಸೀಟಿನಲ್ಲಿ ಕುಳಿತಿದ್ದ ಸಲ್ಮಾನ್ ಆ ಹಿಂಡಿನತ್ತ ಗುಂಡು ಹಾರಿಸಿದ್ದರು. ಈ ವೇಳೆ 2 ಕೃಷ್ಣಮೃಗಗಳು ಮೃತಪಟ್ಟಿದ್ದವು. ಇದನ್ನು ಸಾರ್ವಜನಿಕರು ಗಮನಿಸಿ, ಬೆನ್ನಟ್ಟಿದಾಗ, ಮೃತ ಕೃಷ್ಣಮೃಗಗಳನ್ನು ಅಲ್ಲಿಯೇ ಬಿಟ್ಟು ಸಲ್ಮಾನ್ ಮತ್ತು ತಂಡ ಸ್ಥಳದಿಂದ ಪರಾರಿಯಾಗಿತ್ತು ಎಂದು ಹೇಳಲಾಗಿತ್ತು.

ಚಿಂಕಾರ ಬೇಟೆ ಕುರಿತ ಪ್ರಕರಣದಲ್ಲೂ ಸಲ್ಮಾನ್ ಖಾನ್ ದೋಷಿ ಎಂದು ಸಾಬೀತಾಗಿ, 5 ವರ್ಷ ಶಿಕ್ಷೆಯಾಗಿತ್ತು. ಆದರೆ, ರಾಜಸ್ತಾನ ನ್ಯಾಯಾಲಯ ಸಲ್ಮಾನ್ ರನ್ನು ಖುಲಾಸೆಗೊಳಿಸಿತ್ತು. ಇದರ ವಿರುದ್ಧ ರಾಜಸ್ತಾನ ಸರ್ಕಾರ ಸಲ್ಲಿಸಿರುವ ಮೇಲ್ಮನವಿ ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ಬಾಕಿಯಿದೆ.

Comments are closed.