ಕರಾವಳಿ

ಇವಿಎಂ ಮತದಾನದ ಬಗ್ಗೆ ಸಂಶಯ ಬೇಡ : ಇವಿಎಂ ಹಾಗೂ ವಿವಿಪ್ಯಾಟ್ ಯಂತ್ರದ ಪ್ರಾತ್ಯಕ್ಷಿಕೆಯಲ್ಲಿ ಡಿ.ಸಿ ಸಸಿಕಾಂತ್ ಸೆಂಥಿಲ್

Pinterest LinkedIn Tumblr

ಮಂಗಳೂರು,ಎಪ್ರಿಲ್.4: ರಾಜ್ಯ ವಿಧಾನಸಭೆಗೆ ಮೇ 12ರಂದು ನಡೆಯುವ ಚುನಾವಣೆಯಲ್ಲಿ ಮತ ಚಲಾಯಿಸುವ ಮತದಾರರೇ ಇವಿಎಂ ಮತದಾನದ ಬಗ್ಗೆ ಸಂಶಯಬೇಡ. ನೀವು ಮತ ಚಲಾಯಿಸಿದ ತಕ್ಷಣ ಇವಿಎಂ ಪಕ್ಕದಲ್ಲೇ ಇರುವ ‘ವಿವಿಪ್ಯಾಟ್’ ಯಂತ್ರ ಗಮನಿಸಿ. ಅಲ್ಲಿ ಸುಮಾರು 7 ಸೆಕೆಂಡುಗಳ ಕಾಲ ನೀವು ಚಲಾಯಿಸಿದ ಮತದ ಚೀಟಿ ಪ್ರದರ್ಶನಗೊಳ್ಳಲಿದೆ.

ನೀವು ಚಲಾಯಿಸಿದ ಮತ ಅದಲು ಬದಲಾಗಿಲ್ಲ ಎಂಬುದನ್ನು ಈ ‘ವಿವಿಪ್ಯಾಟ್’ನಿಂದ ಖಾತ್ರಿ ಪಡಿಸಿಕೊಳ್ಳಬಹುದು. ನೀವು ಚಲಾಯಿಸಿದ ಮತದ ಮುದ್ರಿತ ಪ್ರತಿಯು ಕೂಡ ಈ ‘ವಿವಿಪ್ಯಾಟ್’ನಲ್ಲೇ ಶೇಖರಣೆಗೊಳ್ಳಲಿದೆ. ಹಾಗಾಗಿ ಯಾವುದೇ ಅಳುಕು, ಸಂಶಯ, ಭೀತಿಯಿಲ್ಲದೆ ಮತ ಚಲಾಯಿಸಿ. ವಿಧಾನಸಭಾ ಚುನಾವಣೆಗೆ ಸಂಬಂಧಿಸಿ ಇವಿಎಂ ಹಾಗೂ ವಿವಿಪ್ಯಾಟ್ ಯಂತ್ರದ ಕಾರ್ಯನಿರ್ವಹಣೆಯ ಕುರಿತು ದ.ಕ.ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಪ್ರಾತ್ಯಕ್ಷಿಕೆಯ ಬಳಿಕ ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಮತದಾರರಿಗೆ ಕರೆ ನೀಡಿದರು.

ಮತದಾರರು ತಾವು ಮಾಡಿರುವ ಮತದಾನದ ಬಗ್ಗೆ ಖಾತ್ರಿಪಡಿಸಲು ವಿವಿಪ್ಯಾಟ್ ಮೂಲಕ ಸಾಧ್ಯವಾಗಲಿದೆ. ಇದು ಈ ಬಾರಿಯ ಚುನಾವಣೆಯ ವಿಶೇಷತೆಯಾಗಿದೆ. ಮತದಾರರ, ರಾಜಕೀಯ ಪಕ್ಷಗಳ ಮುಖಂಡರ ಆಗ್ರಹದ ಮೇರೆಗೆ ಚುನಾವಣಾ ಆಯೋಗ ಈ ವಿಶೇಷ ವ್ಯವಸ್ಥೆಯನ್ನು ಕಲ್ಪಿಸಿದೆ. ಇವಿಎಂ ಯಂತ್ರದ ಬಗ್ಗೆ ಇರುವ ತಪ್ಪು ಕಲ್ಪನೆಯನ್ನು ‘ವಿವಿಪ್ಯಾಟ್’ ವೀಕ್ಷಣೆಯ ಮೂಲಕ ದೂರ ಮಾಡಬಹುದು ಎಂದರು.

ಮತದಾರರಲ್ಲಿ ವಿಶ್ವಾಸ ತುಂಬುವುದೇ ಇದರ ಮುಖ್ಯ ಉದ್ದೇಶವಾಗಿದೆ. ಚುನಾವಣೆಯ ದಿನದಂದು ಮತದಾನಕ್ಕೆ ಮುನ್ನ ರಾಜಕೀಯ ಪಕ್ಷಗಳ ಏಜೆಂಟರ ಸಮ್ಮುಖವೇ ಪ್ರಾತ್ಯಕ್ಷಿಕೆ ನಡೆಯಲಿದೆ. ನೀವು ಚಲಾಯಿಸಿದ ಮತವು ಇವಿಎಂ ಯಂತ್ರ ಮತ್ತು ವಿವಿಪ್ಯಾಟ್ ಮಧ್ಯೆ ತಾಳೆಯಾಗದಿದ್ದರೆ ತಕ್ಷಣ ಮತಗಟ್ಟೆ ಅಧಿಕಾರಿಗಳ ಗಮನ ಸೆಳೆಯಬಹುದು. ಅವರು ಮೇಲಧಿಕಾರಿಗಳಿಗೆ ಮಾಹಿತಿ ನೀಡಿ ಮುಂದಿನ ಕ್ರಮ ಜರಗಿಸಲಿದ್ದಾರೆ ಎಂದು ಸಸಿಕಾಂತ್ ಸೆಂಥಿಲ್ ನುಡಿದರು.

ಮಿಂಚಿನ ಅಭಿಯಾನ: ವಿಧಾನಸಭಾ ಚುನಾವಣೆಯಲ್ಲಿ ಎಲ್ಲ ಮತದಾರರನ್ನು ಪಾಲ್ಗೊಳ್ಳುವಂತೆ ಮಾಡುವ ಸಲುವಾಗಿ ಎ.8ರಂದು ಜಿಲ್ಲಾದ್ಯಂತ ಮತದಾರರ ನೋಂದಣಿಗೆ ಮಿಂಚಿನ ಅಭಿಯಾನ ನಡೆಸಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದರು.

ಅಂದು ಜಿಲ್ಲೆಯ ಎಲ್ಲ 1858 ಮತಗಟ್ಟೆಗಳಲ್ಲಿ ಬೂತ್ ಮಟ್ಟದ ಅಧಿಕಾರಿಗಳು ಹಾಜರಿದ್ದು, ಮತದಾರರ ಹೆಸರು ನೋಂದಣಿ ಮಾಡಿಸಲಿದ್ದಾರೆ. ಮತದಾರರ ಪಟ್ಟಿಯಲ್ಲಿ ಹೆಸರು ಬಿಟ್ಟು ಹೋಗಿರುವ ಮತದಾರರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಮತದಾರರ ಅಂತಿಮ ಪಟ್ಟಿ ಈಗಾಗಲೇ ಪ್ರಕಟಗೊಂಡಿದ್ದರೂ ನೋಂದಣಿ ಮಾಡಿಸಿಕೊಳ್ಳಲು ಎ.14ರವರೆಗೂ ಅವಕಾಶವಿದೆ ಎಂದರು.

ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವವರೆಗೂ ಪ್ರಚಾರಕ್ಕಾಗಿ ವ್ಯಯಿಸಿದ ಖರ್ಚನ್ನು ಪಕ್ಷದ ಖರ್ಚಿಗೆ ಸೇರಿಸಲಾಗುವುದು. ಪಕ್ಷದ ಖರ್ಚು ವೆಚ್ಚಗಳಿಗೆ ಮಿತಿ ಇಲ್ಲ. ಆದರೆ ನಾಮಪತ್ರ ಸಲ್ಲಿಕೆಯಾದ ಬಳಿಕ ನಡೆಸುವ ಖರ್ಚುಗಳು ಅಭ್ಯರ್ಥಿಯ ಖಾತೆಗೆ ಜಮೆಯಾಗುತ್ತವೆ. ನಾಮಪತ್ರ ಸಲ್ಲಿಕೆಗೂ ಮೊದಲೇ ಸಂಭಾವ್ಯ ಅಭ್ಯರ್ಥಿಗಳು ತಮ್ಮ ಹೆಸರಿನಲ್ಲಿ ಮತಪ್ರಚಾರ ನಡೆಸಿದ್ದರೆ ಆ ಕುರಿತೂ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದರು.

ಅಭ್ಯರ್ಥಿಗಳು ಕಾನೂನಾತ್ಮಕವಾಗಿ ಖರ್ಚು ಮಾಡುವ ಮೊತ್ತವನ್ನು ಪರಿಶೀಲಿಸಿ ಖಚಿತಗೊಳಿಸಲು ತಂಡವನ್ನೇ ನೇಮಕ ಮಾಡಲಾಗಿದೆ. ಪಕ್ಷಾಧಾರಿತ ಯಾವುದೇ ಕಾರ್ಯಕ್ರಮಗಳು ಎಲ್ಲೇ ನಡೆಯಲಿ. ಅವುಗಳ ಸಂಪೂರ್ಣ ವೀಡಿಯೊ ಚಿತ್ರೀಕರಣ ದಾಖಲು ಮಾಡಲಾಗುವುದು. ಬಳಿಕ ಅಲ್ಲಿ ಬಳಕೆಯಾದ ವಸ್ತುಗಳ ಆಧಾರದಲ್ಲಿ ವೆಚ್ಚವನ್ನು ಅಂದಾಜಿಸಿ ವರದಿ ತಯಾರಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಎಸ್ಸೆಮ್ಮೆಸ್ ಮೂಲಕ ಮಾಹಿತಿ ಪಡೆಯಿರಿ: ಮತದಾರರು ತಮ್ಮ ಮತದಾನ ಕೇಂದ್ರ ಮತ್ತಿತ್ಯಾದಿ ವಿವರದ ಬಗ್ಗೆ ಮಾಹಿತಿ ಪಡೆಯಲು ಎಸ್ಸೆಮ್ಮೆಸ್ ಮೂಲಕ ಮಾಹಿತಿ ಪಡೆಯುವ ವ್ಯವಸ್ಥೆಯನ್ನೂ ಸಿದ್ಧಪಡಿಸಲಾಗಿದೆ. ಫೇಸ್‌ಬುಕ್ ಖಾತೆಯೊಂದನ್ನು ತೆರೆದು ಮಾಹಿತಿ ರವಾನಿಸಲಾಗುತ್ತದೆ. ಶೀಘ್ರ ವಾಟ್ಸ್‌ಆಯಪ್ ಗ್ರೂಪ್ ತೆರೆಯಲಾಗುವುದು. ಕಾರ್ಯಕ್ರಮದಲ್ಲಿ ದ.ಕ. ಜಿಪಂ ಸಿಇಒ ಡಾ.ಎಂ.ಆರ್.ರವಿ, ಅಪರ ಜಿಲ್ಲಾಧಿಕಾರಿ ವೈಶಾಲಿ ಮತ್ತಿತರರು ಉಪಸ್ಥಿತರಿದ್ದರು.

__ವಾಭಾ

Comments are closed.