ಸೂಳಗಿರಿ(ತಮಿಳುನಾಡು): ಕೆಎಸ್ಆರ್ಟಿಸಿ ಬಸ್, ಲಾರಿ ಮತ್ತು ಮಾರುತಿ ಇಕೋ ನಡುವೆ ಸಂಭವಿಸಿದ ಸರಣಿ ಅಪಘಾತದಲ್ಲಿ ಬೆಂಗಳೂರಿನ ಐವರು ದಾರುಣ ಸಾವನ್ನಪ್ಪಿರುವ ಘಟನೆ ಕೃಷ್ಣಗಿರಿಯಲ್ಲಿ ಸಂಭವಿಸಿದೆ.
ಕೃಷ್ಣಗಿರಿ ಜಿಲ್ಲೆಯ ಸೂಳಗಿರಿ ಸಮೀಪದ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಭೀಕರ ಸರಣಿ ಅಪಘಾತ ಸಂಭವಿಸಿದೆ. ಮೃತರನ್ನು ಬೆಂಗಳೂರಿನ ಲಕ್ಷ್ಮೀನಾರಾಯಣಪುರದ ನಿವಾಸಿಗಳು ಎಂದು ಗುರುತಿಸಲಾಗಿದೆ.
ಮೃತರು ಸುಮತಿ(45), ಶಂಕರ್(50), ಸುಮತಿ, ಮಣಿ ಮತ್ತು ಕುಬೇರನ್ ಎಂದು ತಿಳಿದುಬಂದಿದೆ. ಇನ್ನು ಅಪಘಾತದಲ್ಲಿ 45 ವರ್ಷದ ಆನಂದ್ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಕೃಷ್ಣಗಿರಿ ಸರ್ಕಾರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಮೃತರು ಚೆನ್ನೈನ ಸಂಬಂಧಿಕರ ಮನೆಯಿಂದ ಬೆಂಗಳೂರಿಗೆ ವಾಪಸಾಗುತ್ತಿದ್ದಾಗ ಕೆಎಸ್ಆರ್ಟಿಸಿ ಬಸ್ ಮತ್ತು ಮಾರುತಿ ಇಕೋ ಕಾರು ನಡುವೆ ಸರಣಿ ಅಪಘಾತ ಸಂಭವಿಸಿದೆ. ಇನ್ನು ಬಸ್ ನಲ್ಲಿದ್ದ 15 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಸೂಳಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.