
ತೋವಿನಕೆರೆ (ತುಮಕೂರು ಜಿಲ್ಲೆ): ಇಲ್ಲಿಗೆ ಸಮೀಪದ ಉಪ್ಪಾರಪಾಳ್ಯದ ಶ್ರೀಕಂಠಪ್ರಸಾದ್ ಅವರ ತೋಟದಲ್ಲಿ ಗುರುವಾರ ಎಲ್ಲಿಲ್ಲದ ಕುತೂಹಲ, ಸಂಭ್ರಮ. ಹಳ್ಳಿ ಜನರಿಗೆ ಸಂತೋಷಕ್ಕೆ ಪಾರವೇ ಇರಲಿಲ್ಲ. ಊರಿಗೇ ಊರೇ ಆ ತೋಟದಲ್ಲಿ ಸೇರಿತ್ತು.
ಇದಕ್ಕೆಲ್ಲ ಕಾರಣ ಅಮೆರಿಕದ ಹುಡುಗಿಯೊಂದಿಗೆ ಕರ್ನಾಟಕದ ಹುಡುಗನ ಮದುವೆ. ಹಳ್ಳಿಯ ಪ್ರಕೃತಿ ಮಡಿಲಲ್ಲಿ ಭಾರತೀಯ ಸಂಪ್ರದಾಯದ ಪ್ರಕಾರ ಬೆಂಗಳೂರಿನ ಡಾ.ನಾಗೇಶ್ ಬಸವನಹಳ್ಳಿ ಅವರ ಮಗ ಡಾ.ಅಜಯ್ ಮತ್ತು ಅಮೆರಿಕದ ನ್ಯೂಜೆರ್ಸಿಯಲ್ಲಿ ವಿಜ್ಞಾನಿಯಾಗಿರುವ ಟಾರಾ ದಾಂಪತ್ಯಕ್ಕೆ ಕಾಲಿರಿಸಿದರು.
’ವಧು– ವರರು ಪ್ರಕೃತಿ ಮಡಿಲಲ್ಲಿ ಮದುವೆಯಾಗಬೇಕೆಂಬ ಆಸೆ ವ್ಯಕ್ತಪಡಿಸಿದ್ದರು. ಹೀಗಾಗಿ ನನ್ನ ಸಂಬಂಧಿಕರ ತೋಟದಲ್ಲಿ ಮದುವೆ ಸಮಾರಂಭ ಆಯೋಜಿಸಬೇಕಾಯಿತು’ ಎಂದು ನಾಗೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.
ಟಾರಾ ಮೊದಲಿಗೆ ಗೋಪೂಜೆ ನೆರವೇರಿಸಿದರು. ಪೂಜೆ, ಅರತಿ ಬೆಳಗಿದರು. ಬಳೆಪೂಜೆಗೆ (ಮಲ್ಹಾರಕ್ಕೆ) ನಮಸ್ಕರಿಸಿ ಕೈಯೊಡ್ಡಿ ಬಳೆ ತೊಡಿಸಿಕೊಂಡರು.
ಹೂ-ವೀಳ್ಯೆ ಶಾಸ್ತ್ರ, ಗೌರಿ ಪೂಜೆ, ಮರದ ಬಾಗಿನ, ಮದರಂಗಿ ಲೇಪನ, ಅರಿಷಿಣ ಕುಟ್ಟುವ, ಬೀಸುವ ಕಲ್ಲು ಶಾಸ್ತ್ರ ಎಲ್ಲವನ್ನೂ ಚಾಚೂ ತಪ್ಪದಂತೆ ಮಾಡಿಸಲಾಯಿತು.
ಮಹಿಳೆಯರಿಗೆ ಮಡಿಲಕ್ಕಿ ಬಾಗಿನ, ಸಿಹಿ ಪಾನಕವನ್ನು ಟಾರಾ ಅವರಿಂದ ಕೊಡಿಸಲಾಯಿತು. ನಂತರ ಬೆಂಗಳೂರು ಇಂದಿರಾನಗರದಿಂದ ಬಂದಿದ್ದ ಆರ್ಯ ಸಮಾಜದವರು ಅವರ ಸಂಪ್ರದಾಯದಂತೆ ಮದುವೆ ನಡೆಸಿಕೊಟ್ಟರು. ಹೀಗೆ ಹಿಂದೂ ಮತ್ತು ಆರ್ಯ ಸಮಾಜ ಎರಡೂ ಪದ್ಧತಿಯಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತು.
(ಪ್ರಜಾವಾಣಿ)
Comments are closed.