ಕರಾವಳಿ

ಕೋಟ ಅಪಘಾತದ ಮಹಿಳೆ ಮಿದುಳು ನಿಷ್ಕ್ರೀಯ; ಅಂಗಾಂಗ ದಾನ, 6 ಮಂದಿಗೆ ಜೀವದಾನ

Pinterest LinkedIn Tumblr

ಉಡುಪಿ: ಎರಡು ದಿನಗಳ ಹಿಂದೆ ಜಿಲ್ಲೆಯ ಕೋಟದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗಾಯಗೊಂಡು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯ ಮೆದುಳು ನಿಷ್ಕ್ರಿಯಗೊಂಡ ಪರಿಣಾಮ ಅವರ ಬಹು ಅಂಗಾಂಗಗಳನ್ನು ದಾನ ಮಾಡಲಾಗಿದೆ.

ಕೋಟದಲ್ಲಿ ಎರಡು ದಿನಗಳ ಹಿಂದೆ ಕಾರು ಮತ್ತು ಲಾರಿ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿತ್ತು. ಪರಿಣಾಮವಾಗಿ ಸ್ಥಳದಲ್ಲೇ ತಾಯಿ-ಮಗ ಮೃತಪಟ್ಟಿದ್ದರು. ಅಲ್ಲದೇ ಭಾಸ್ಕರ್ ಮತ್ತು ಕಸ್ತೂರಿ ಎಂಬವರು ಗಂಭೀರ ಗಾಯಗೊಂಡು ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ದಾಖಲಾಗಿದ್ದರು. ಆದರೆ ಕಳೆದ ರಾತ್ರಿ ಕಸ್ತೂರಿಯವರ ಮೆದುಳು ನಿಷ್ಕ್ರಿಯವಾಗಿರುವುದಾಗಿ ವೈದ್ಯರು ದೃಢಪಡಿಸಿದ್ದರು.

ಇದರಿಂದ ಕಸ್ತೂರಿ ಅವರ ಇಬ್ಬರು ಸಹೋದರರು ಅಂಗಾಂಗ ದಾನ ಮಾಡುವ ಬಗ್ಗೆ ನಿರ್ಧರಿಸಿ ವೈದ್ಯರಿಗೆ ತಿಳಿಸಿದ್ದಾರೆ. ಕುಟುಂಬದವರ ನಿರ್ಧಾರದ ಮೇರೆಗೆ ಕೆಎಂಸಿ ವೈದ್ಯರು ಬೆಂಗಳೂರಿನ ತಜ್ಞರನ್ನು ಸಂಪರ್ಕಿಸಿ ಅಂಗಾಂಗ ದಾನ ಪಡೆಯಲು ಬೇಕಾದ ಸಿದ್ಧತೆ ನಡೆಸಿ, ಇಂದು ಬೆಳಗ್ಗೆ ಎಂಟು ಗಂಟೆಗೆ ಎರಡು ಕಿಡ್ನಿ, ಕಣ್ಣುಗಳು, ಯಕೃತ್, ಹೃದಯ ಕವಾಟವನ್ನು ದಾನ ಪಡೆದಿದ್ದಾರೆ.

ಕಸ್ತೂರಿ ಅವರಿಂದ ಪಡೆದ ಅಂಗಾಂಗಗಳನ್ನು ಮಂಗಳೂರಿನ ಎಜೆ ಆಸ್ಪತ್ರೆ, ಫಾದರ್ ಮುಲ್ಲರ್ಸ್ ಆಸ್ಪತ್ರೆ, ಹೃದಯ ಕವಾಟವನ್ನು ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ರವಾನೆ ಮಾಡಲಾಗಿದೆ. ಮಣಿಪಾಲ ಕೆಎಂಸಿಯ ಇಬ್ಬರು ರೋಗಿಗಳಿಗೆ ಎರಡು ಕಣ್ಣುಗಳು ಮತ್ತು ಒಬ್ಬರಿಗೆ ಕಿಡ್ನಿಯನ್ನು ಅಳವಡಿಸಲಾಗುವುದು ಎಂದು ಕೆಎಂಸಿ ಮೂಲಗಳು ಮಾಹಿತಿ ನೀಡಿದೆ.

ಈ ವೇಳೆ ಮಣಿಪಾಲದಿಂದ ಮಂಗಳೂರಿನವರೆಗೆ ಟ್ರಾಫಿಕ್ ಜಾಮ್ ಆಗದಂತೆ ಉಡುಪಿಯ ಪೊಲೀಸರು ಬಂದೋಬಸ್ತ್ ಮಾಡಿದರು. ಆರು ಮಂದಿ ರೋಗಿಗಳು ಆರೋಗ್ಯವಂತರಾಗಿ ಭಾಸ್ಕರ ಮತ್ತು ಕಸ್ತೂರಿಯ ಮಕ್ಕಳಿಗೆ ಹರಸಿದರೆ ಅದೇ ನಮಗೆ ದೊಡ್ಡ ಆಶೀರ್ವಾದ ಎಂದು ಕುಟುಂಬಸ್ಥರು ಹೇಳಿದ್ದಾರೆ. ತೀವ್ರ ದುಖಃದ ಸಮಯದಲ್ಲೂ ಅಂಗಾಂಗ ದಾನ ಮಾಡುವ ನಿರ್ಧಾರ ತೆಗೆದುಕೊಂಡು ಆರು ಜನರ ಪ್ರಾಣ ಉಳಿಯಲು ಕಾರಣರಾದ ಕಸ್ತೂರಿ ಅವರ ಕುಟುಂಬದ ನಿರ್ಧಾರ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

Comments are closed.