ಕುಂದಾಪುರ: ವಿವಾಹಿತ ಯುವತಿಯ ಶವವು ಆಕೆಯ ಗಂಡನ ಮನೆ ಹಿಂಭಾಗದ ಬಾವಿಯಲ್ಲಿ ಪತ್ತೆಯಾಗಿದ್ದು ಆಕೆ ಗಂಡ ಹಾಗೂ ಮನೆಯವರು ಕೊಲೆ ಮಾಡಿ ಬಾವಿಗೆ ಎಸೆದಿದ್ದಾರೆಂದು ಯುವತಿ ಪೋಷಕರು ಆರೋಪಿಸಿದ್ದಾರೆ. ಕುಂದಾಪುರ ತಾಲೂಕಿನ ಸಿದ್ಧಾಪುರದ ಮಂಗನಸಾಲು ಎಂಬಲ್ಲಿ ಈ ಘಟನೆ ನಡೆದಿದೆ.
ಮೂಲತಃ ಬಂಟ್ವಾಡಿ ಕೆಳಾಕಳಿ ನಿವಾಸಿ 21ವರ್ಷ ಪ್ರಾಯದ ಗೌರಿ ದೇವಾಡಿಗ ಶವವಾಗಿ ಪತ್ತೆಯಾದ ಯುವತಿ. ಈಕೆಗೆ 7 ತಿಂಗಳ ಹಿಂದಷ್ಟೇ ಸಿದ್ದಾಪುರದ ರಾಘವೇಂದ್ರ ಎಂಬಾತನ ಜೊತೆ ವಿವಾಹವಾಗಿತ್ತು.
ಗಾರೆ ಕೆಲಸ ಮಾಡಿಕೊಂಡಿದ್ದ ರಾಘವೇಂದ್ರನನ್ನು ಮದುವೆಯಾದ ಗೌರಿ ಸಿದ್ದಾಪುರದ ಮಂಗನಸಾಲು ಎಂಬಲ್ಲಿನ ರಾಘವೇಂದ್ರನ ಮನೆಯಲ್ಲಿ ಅತ್ತೆ ಹಾಗೂ ಮೈದುನನ ಜೊತೆ ವಾಸವಿದ್ದಿದ್ದು ಇತ್ತೀಚೆಗೆ ಕೆಲವು ತಿಂಗಳಿನಿಂದ ಮೂವರು ವಿನಾಕಾರಣ ಸಮಸ್ಯೆ ನೀಡಿದ ಬಗ್ಗೆ ಪೋಷಕರಲ್ಲಿ ದೂರಿಕೊಂಡಿದ್ದರು. ಸೋಮವಾರ ಸಂಜೆ ಗೌರಿ ಪತಿ ಕಡೆಯವರು ಕರೆ ಮಾಡಿ ಆಕೆ ಬಾವಿಗೆ ಬಿದ್ದಿರುವ ಬಗ್ಗೆ ಪೋಷಕರಲ್ಲಿ ತಿಳಿಸಿದ್ದು ಅವರೆಲ್ಲಾ ಸಿದ್ದಾಪುರಕ್ಕೆ ಆಗಮಿಸಿದ್ದರು. ಪೊಲೀಸರ ಸಮಕ್ಷಮ ರಾತ್ರಿ ಹುಡುಕಾಡಿದರೂ ಶವ ಪತ್ತೆಯಾಗದಿದ್ದು ಮಂಗಳವಾರ ಬೆಳಿಗ್ಗೆ ಅಗ್ನಿಶಾಮಕ ದಳ ಹಾಗೂ ಮುಳುಗು ತಜ್ಞರೊಂದಿಗೆ ಕಾರ್ಯಾಚರಣೆ ನಡೆಸಿ ಬಾವಿಯಲ್ಲಿದ್ದ ಶವ ಪತ್ತೆ ಮಾಡಿ ಮೇಲಕ್ಕೆತ್ತಲಾಯಿತು.
ಈ ಸಂದರ್ಭ ತನ್ನ ಮಗಳನ್ನು ಆಕೆ ಗಂಡ ಹಾಗೂ ಆತನ ಮನೆಯವರು ಕೊಲೆ ಮಾಡಿದ್ದಾರೆಂದು ಆರೋಪವನ್ನು ಗೌರಿ ಪೋಷಕರು ಮಾಡಿದ್ದಾರೆ. ಆರೋಪದ ಹಿನ್ನೆಲೆ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಮಣಿಪಾಲ ಆಸ್ಪತ್ರೆಗೆ ರವಾನಿಸಲಾಗಿದೆ.
ಶಂಕರನಾರಾಯಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ತನಿಖೆ ನಡೆಸುತ್ತಿದ್ದಾರೆ.