ಕರ್ನಾಟಕ

ಅಮಿತ್ ಶಾ ಸೂಚನೆಯನ್ನು ಪ್ರತಾಪ್ ಸಿಂಹ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ: ಬಿಎಸ್ ಯಡಿಯೂರಪ್ಪ

Pinterest LinkedIn Tumblr

ಬೆಂಗಳೂರು: ಮೈಸೂರಿನಲ್ಲಿ ಪೊಲೀಸ್ ಬ್ಯಾರಿಕೇಡ್ ಗೆ ಕಾರು ನುಗ್ಗಿಸಿಕೊಂಡು ಹೋಗಿ ವಿವಾದ ಎಳೆದು ಹಾಕಿಕೊಂಡ ನಂತರ ಇದೀಗ ಮೈಸೂರು-ಕೊಡಗು ಕ್ಷೇತ್ರದ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರು ಬಿಜೆಪಿ ಯುವ ಮೋರ್ಚಾದ ಪ್ರತಿಭಟನೆ ಬಗ್ಗೆ ಹೇಳಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಂಸದ ಪ್ರತಾಪ್ ಸಿಂಹ ಅವರ ಹೇಳಿಕೆಗೆ ಕಾಂಗ್ರೆಸ್, ಜೆಡಿಎಸ್ ನಿಂದ ತೀವ್ರ ವಿರೋಧ ಕೇಳಿಬರುತ್ತಿದ್ದು ಇದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಕಸಿವಿಸಿ, ಸಿಟ್ಟು ತರಿಸಿದೆ ಎಂದು ಹೇಳಬಹುದು.

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು, ಪ್ರತಿಭಟನೆ ಸಂದರ್ಭದಲ್ಲಿ ಟಿಯರ್ ಗ್ಯಾಸ್ ಹೊಡೆಯುವ, ಪೊಲೀಸ್ ಲಾಠಿ ಚಾರ್ಚ್ ಮಾಡಿದ ಯಾವುದಾದರೂ ಘಟನೆ ಬಿಜೆಪಿ ಯುವ ಮೋರ್ಚಾದಿಂದ ನಡೆದಿದೆಯಾ ಎಂದು ಕೇಳಿದರು. ಅದಕ್ಕೆ ನಾನು ಅಂತಹ ಯಾವುದೇ ಹೋರಾಟ ನಡೆದಿಲ್ಲ ಎಂದು ಹೇಳಿದ್ದೆ. ಆಗ ಅವರು ಇಂತಹ ಉಗ್ರ ಹೋರಾಟ ಮಾಡಬೇಕೆಂದು ಹೇಳಿದ್ದರು. ಅದಕ್ಕೆ ಮುಂದಿನ ದಿನಗಳಲ್ಲಿ ಅಂತಹ ಅತ್ಯುಗ್ರ ಹೋರಾಟ ನಡೆಸುವುದಾಗಿ ಮಾತು ಕೊಟ್ಟಿದ್ದೇನೆ ಎಂದು ವಿಡಿಯೊದಲ್ಲಿ ಹೇಳಿದ್ದಾರೆ.

37 ಸೆಕೆಂಡಿನ ವಿಡಿಯೊದಲ್ಲಿ ಬಿಜೆಪಿ ಯುವ ಮೋರ್ಚಾಕ್ಕೆ ಅಮಿತ್ ಶಾ ಏನೇನು ಆದೇಶ ನೀಡಿದ್ದಾರೆ ಎಂಬುದನ್ನು ಪ್ರತಾಪ್ ಸಿಂಹ ವಿವರಿಸಿದ್ದಾರೆ.

ಅಮಿತ್ ಶಾ ಅವರ ಆದೇಶ ಮತ್ತು ಪ್ರತಾಪ್ ಸಿಂಹ ಅವರ ವಿಡಿಯೊ ಬಗ್ಗೆ ಪ್ರತಿಕ್ರಿಯಿಸಿರುವ ಬಿ.ಎಸ್.ಯಡಿಯೂರಪ್ಪ, ಶಾ ಅವರು ನೀಡಿರುವ ಸೂಚನೆಯನ್ನು ಪ್ರತಾಪ್ ಸಿಂಹ ತಪ್ಪಾಗಿ ಅರ್ಥೈಸಿರಬೇಕು.ಸಾರ್ವಜನಿಕ ಹಿತಾಸಕ್ತಿ ವಿಷಯಗಳನ್ನು ಮತ್ತು ಸರ್ಕಾರ ಮಾಡದಿರುವ ಕೆಲಸಗಳನ್ನು ಜನತೆಯ ಗಮನಕ್ಕೆ ಪ್ರತಿಭಟನೆಗಳ ಮೂಲಕ ತರಬೇಕೆಂದು ಅಮಿತ್ ಶಾ ಸೂಚನೆ ನೀಡಿದ್ದಾರಷ್ಟೆ ಎಂದಿದ್ದಾರೆ.

ಹನುಮ ಜಯಂತಿ ಮೆರವಣಿಗೆ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಪೊಲೀಸರು ಅನುಮತಿ ನೀಡಿದ್ದ ರಸ್ತೆಯನ್ನು ಉಲ್ಲಂಘಿಸಿ ಹೋಗಿದ್ದಕ್ಕಾಗಿ ತಮ್ಮ ಬೆಂಬಲಿಗರೊಂದಿಗೆ ಪ್ರತಾಪ್ ಸಿಂಹ ಬಂಧಿಸಲ್ಪಟ್ಟಿದ್ದರು. ಅಲ್ಲಿ ಸೇರಿದ್ದ ಅಪಾರ ಸಂಖ್ಯೆಯ ಜನರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಬೇಕಾಯಿತು.

ಮೂಲಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ, ಮೈಸೂರಿನ ಹುಣಸೂರು ವಿಧಾನಸಭಾ ಕ್ಷೇತ್ರದಿಂದ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ಹೊಂದಿದ್ದಾರೆ. ಯುವ ವಲಯದಲ್ಲಿ ಪ್ರಭಾವಿ ನಾಯಕನಾಗಿ ಗುರುತಿಸಿಕೊಂಡಿದ್ದಾರೆ.

ಮೈಸೂರಿನಲ್ಲಿ ಹನುಮ ಜಯಂತಿ ಸಂದರ್ಭದಲ್ಲಿ ಪ್ರತಾಪ್ ಸಿಂಹ ನಡವಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಓರ್ವ ಸಂಸದನಾಗಿ ಅವರಿಗೆ ಸಾಮಾನ್ಯ ತಿಳುವಳಿಕೆಯೆಂಬುದಿಲ್ಲ ಎಂದು ಆರೋಪಿಸಿದ್ದಾರೆ.

ಸಮಾಜದಲ್ಲಿ ಶಾಂತಿ ಕದಡಲು ಪ್ರಯತ್ನಿಸುತ್ತಿರುವ ಅಮಿತ್ ಶಾ ಹಾಗೂ ಪ್ರತಾಪ್ ಸಿಂಹ ವಿರುದ್ಧ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

Comments are closed.