ಕರಾವಳಿ

ಕೋಟೇಶ್ವರದಲ್ಲಿ ಸಂಭ್ರಮದ ‘ಕೊಡಿ ಹಬ್ಬ’ಕ್ಕೆ ಸಾವಿರಾರು ಭಕ್ತರು ಸಾಕ್ಷಿ

Pinterest LinkedIn Tumblr

ಕುಂದಾಪುರ: ಇಲ್ಲಿಗೆ ಸಮೀಪದ ಕೋಟೇಶ್ವರದಲ್ಲಿ ಭಾನುವಾರ ನಡೆದ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ವೈಭವದ ಬ್ರಹ್ಮ ರಥೋತ್ಸವ ಕ್ಕೆ ಊರ ಹಾಗೂ ಪರವೂರಿನಿಂದ ಬಂದ ಸಾವಿರಾರು ಮಂದಿ ಸಾಕ್ಷಿಯಾದರು.
ವೃಶ್ಚಿಕ ಮಾಸದಂದು ನಡೆಯುವ ಶ್ರೀ ಮಹಾತೋಭಾರ ಕೋಟಿಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಬ್ರಹ್ಮ ರಥೋತ್ಸವವನ್ನು ಈ ಭಾಗದ ಆಸು ಪಾಸಿನ ಗ್ರಾಮಸ್ಥರು ವಾಡಿಕೆಯಲ್ಲಿ ’ಕೊಡಿ ಹಬ್ಬ’ ಎಂದು ಕರೆಯುತ್ತಾರೆ.

ಈ ಬಾರಿಯ ಕೊಡಿ ಹಬ್ಬಕ್ಕಾಗಿ ಭಾನುವಾರ ನಸುಕಿನಿಂದಲೆ ಧಾರ್ಮಿಕ ಆಚರಣೆಗೆ ತೊಡಗಿದ ಭಕ್ತರು ಮಧ್ಯಾಹ್ನ 12.46 ಕ್ಕೆ ನಡೆದ ವೈಭವದ ರಥೋತ್ಸವದ ಆರೋಹಣವನ್ನು ಕಣ್ಮನ ತುಂಬಿಕೊಂಡರು.
ಮುಂಜಾನೆ ಸೂರ್ಯ ಉದಯಕ್ಕೆ ಮುಂಚೆ ಇತಿಹಾಸ ಪ್ರಸಿದ್ದ ಕೋಟಿ ತೀರ್ಥ ಸರೋವರದಲ್ಲಿ ಶುಚಿಭೂತರಾಗಿ ದೇವಸ್ಥಾನಕ್ಕೆ ಬರುವ ಭಕ್ತರು ಸರೋವರದ ಸುತ್ತ ಅಪೇಕ್ಷಿತರು ಹಾಸಿದ ಬಿಳಿ ಬಟ್ಟೆಯ ಮೇಲೆ ಮುಡಿ ಅಕ್ಕಿ ಚಲ್ಲುವ ಪಾರಂಪರಿಕ ಸುತ್ತಕ್ಕಿ ಸೇವೆಯಲ್ಲಿ ಪಾಲ್ಗೊಂಡ ಬಳಿಕ ದೇವರ ದರ್ಶನ ಪಡೆದು ಸಂಪ್ರದಾಯಬದ್ದ ಪೂಜೆ ಸಲ್ಲಿಸಿದ್ದರು.

ಬೆಳಿಗ್ಗೆ 12.15 ಕ್ಕೆ ದೇವಸ್ಥಾನದಿಂದ ವೈಭವದ ಮೆರವಣಿಗೆಯಲ್ಲಿ ಬಂದ ಕೋಟಿಲಿಂಗೇಶ್ವರ ಹಾಗೂ ಪರಿವಾರ ದೇವತೆಗಳನ್ನು ರಥದಲ್ಲಿ ಕುಳ್ಳಿರಿಸಿದ ಬಳಿಕ ಮಂಗಳರಾತಿ, ಹಣಕಾಯಿ ಹಾಗೂ ಕಾಯಿ ಒಡೆಯುವ ಸೇವೆಗಳನ್ನು ಮುಗಿಸಿದ ಬಳಿಕ ರಥ ಬೀದಿಯಲ್ಲಿ ರಥವನ್ನು ಎಳೆಯುವ ಮೂಲಕ ರಥೋತ್ಸವವನ್ನು ಆಚರಿಸಲಾಯಿತು. ದೇವಸ್ಥಾನ ತಂತ್ರಿ ಪ್ರಸನ್ನ ಐತಾಳ್ ನೇತ್ರತ್ವದಲ್ಲಿ ಧಾರ್ಮಿಕ ವಿಧಿಯನ್ನು ಆಚರಿಸಲಾಯಿತು.

ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮಾರ್ಕೋಡು ಗೋಪಾಲಕೃಷ್ಣ ಶೆಟ್ಟಿ, ಮೀನುಗಾರಿಕಾ ನಿಗಮದ ಮಾಜಿ ಅಧ್ಯಕ್ಷ ಬಿ.ಹಿರಿಯಣ್ಣ, ಜಿಲ್ಲಾ ಗೃಹ ರಕ್ಷಕ ದಳ ಸೆಕಂಡ್ ಇನ್ ಕಮಾಂಡ್ ರಾಜೇಶ್ ಕೆ.ಸಿ, ಸ್ಥಳೀಯ ಪ್ರಮುಖರಾದ ಎಂ.ಸುಧೀರ್‌ಕುಮಾರ ಶೆಟ್ಟಿ, ದಿನೇಶ್ ಕಾಮತ್, ಕೃಷ್ಣದೇವ ಕಾರಂತ್ ಕೋಣಿ, ನಾಗರಾಜ್ ಕಾಮಧೇನು, ರಾಜೇಶ್ ಕಾವೇರಿ, ಮಹೇಶ್ ಪೂಜಾರಿ ಕೋಡಿ, ನಿರಂಜನ ಕಾಮತ್, ರಮೇಶ್ ಭಟ್, ಗುರುರಾಜ್ ರಾವ್, ಪ್ರಭಾಕರ ಶೆಟ್ಟಿ ವಕ್ವಾಡಿ, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಎನ್.ರಾಘವೇಂದ್ರ ನೇರಂಬಳ್ಳಿ, ವಿ.ರಾಜೀವ್ ಶೆಟ್ಟಿ, ಶಂಕರ ಚಾತ್ರ ಬೆಟ್ಟು, ಅಶೋಕ ಪೂಜಾರಿ, ಭಾರತಿ ಆನಂದ ದೇವಾಡಿಗ, ಸುಶೀಲ ಶೇಟ್, ಜ್ಯೋತಿ ಎಸ್.ನಾಯಕ್, ಸರ್ಕಲ್ ಇನ್ಸ್‌ಪೆಕ್ಟರ್ ಮಂಜಪ್ಪ, ಉಪನಿರೀಕ್ಷಕರುಗಳಾದ ಸಂತೋಷ್ ಕಾಯ್ಕಿಣಿ, ಹರೀಶ್, ಶೇಖರ ಉಪಸ್ಥಿತರಿದ್ದರು.

ಚಿತ್ರ, ವರದಿ- ಯೋಗೀಶ್ ಕುಂಭಾಸಿ

Comments are closed.