ಕರಾವಳಿ

ಮನೆ ಕಳ್ಳತನ ಮಾಡಿದ ಖತರ್ನಾಕ್ ಬಂಧನ: ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಕುಂದಾಪುರ ಪೊಲೀಸರು

Pinterest LinkedIn Tumblr

ಕುಂದಾಪುರ: ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಮನೆಗೆ ನುಗ್ಗಿದ ಕಳ್ಳನೋರ್ವ ಚಿನ್ನದ ಆಭರಣಗಳನ್ನು ಕದ್ದು ಪರಾರಿಯಾಗಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಕುಂದಾಪುರ ಪೊಲೀಸರು ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕುಂಭಾಸಿ ಮೂಲದ ಹರೀಶ್ ಆಚಾರ್ (52) ಬಂಧಿತ ಆರೋಪಿಯಾಗಿದ್ದಾನೆ.

ಘಟನೆ ವಿವರ: ಕುಂದಾಪುರದ ವಡೇರಹೋಬಳಿಯ ಜೆ.ಎಲ್.ಬಿ ರಸ್ತೆಯಲ್ಲಿನ ಪಿಡಬ್ಲ್ಯೂಡಿ ಕ್ವಾಟ್ರಸ್ ನಿವಾಸಿಯಾದ ಪ್ರೇಮಾ ಎನ್ನುವವರು ತಮ್ಮ ಮನೆಯಿಂದ ಬೆಳಿಗ್ಗೆ ಆಸ್ಪತ್ರೆಗೆ ತೆರಳಿದ್ದು ಮಧ್ಯಾಹ್ನ 12.30ಕ್ಕೆ ಮರಳಿ ಮನೆಗೆ ಬಂದಾಗ ಮನೆ ಎದುರಿನ ಬೀಗ ಇರಲಿಲ್ಲ. ಗಾಬರಿಯಿಂದ ಬಾಗಿಲು ತಳ್ಳಿ ಒಳ ಪ್ರವೇಶಿಸಿದಾಗ ವ್ಯಕ್ತಿಯೋರ್ವ ಮನೆ ಹಿಂಬಾಗಿಲಿನಿಂದ ಒಡಿ ತಪ್ಪಿಸಿಕೊಂಡಿದ್ದ. ಕೋಣೆ ಪರಿಶೀಲಿಸುವಾಗ ಕಪಾಟಿನ ಸೆಂಟರ್ ಲಾಕ್ ಒಳಗಿದ್ದ 12 ಗ್ರಾಂ ತೂಕದ 3 ಜೊತೆ ಚಿನ್ನದ ಕಿವಿಯೋಲೆ, 3 ಗ್ರಾಂ ತೂಕದ ಚಿನ್ನದ ಉಂಗುರ ಕಳವಾಗಿರುವುದು ಕಂಡುಬಂದಿದ್ದು ಕಳವಾದ ಸೊತ್ತಿನ ಮೌಲ್ಯ 37500 ಆಗಿತ್ತು.

ಪೊಲೀಸರ ಕ್ಷಿಪ್ರ ಕಾರ್ಯಾರಣೆ..
ಕೂಡಲೇ ಪ್ರೇಮಾ ಅವರು ಕುಂದಾಪುರ ಪೊಲೀಸ್ ಠಾಣೆಗೆ ದೌಡಾಯಿಸಿ ಕಳ್ಳತನದ ಬಗ್ಗೆ ಪ್ರಕರಣ ದಾಖಲು ಮಾಡುತ್ತಾರೆ. ಪ್ರಕರಣ ಗಂಭೀರವಾಗಿ ಪರಿಗಣಿಸಿದ ಪೊಲೀಸರು ತಂಡಗಳನ್ನು ರಚಿಸಿ ಕಾರ್ಯಾಚರಣಗೆ ಇಳಿಯುತ್ತಾರೆ. ಪ್ರೇಮಾ ನೀಡಿದ ದೂರಿನಲ್ಲಿ ಅವರ ಮನೆಯಿಂದ ಪರಾರಿಯಾದ 50 ವರ್ಷ ಆಸುಪಾಸಿನ ವ್ಯಕ್ತಿಯಾಗಿದ್ದು ಕಪ್ಪು ಬಣ್ಣದ ಪ್ಯಾಂಟ್ ಹಾಗೂ ನೀಲಿ, ಬಿಳಿ ಮಿಶ್ರಿತ ಗೆರೆಯುಳ್ಳ ಟೀ ಶರ್ಟ್ ಧರಿಸಿರುವುದು ಉಲ್ಲೇಖಿಸಿದ್ದರು. ಆ ಮಾಹಿತಿಯನ್ನು ಆಧರಿಸಿ ಪತ್ತೆ ಕಾರ್ಯಕ್ಕೆ ಮುಂದಾದ ಸಂದರ್ಭ ಆರೋಪಿ ಹರೀಶ್ ಆಚಾರ್ಯ ಅನುಮಾನಾಸ್ಪದವಾಗಿ ಕುಂದಾಪುರದಲ್ಲಿ ತಿರುಗಾಡುತ್ತಿರುವುದು ಕಂಡು ಬಂದಿದ್ದು ದೂರಿನಲ್ಲಿರುವ ಮಾಹಿತಿ ಈತನಿಗೆ ಸಾಮ್ಯತೆಯಾಗುತ್ತದೆ. ಪೊಲೀಸರು ಆ ಕೂಡಲೇ ಆತನನ್ನು ವಶಕ್ಕೆ ಪಡೆಯುತ್ತಾರೆ. ತನಿಖೆ ವೇಳೆ ಈತ ಈ ಹಿಂದೆಯೂ ಹಲವು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವ ಕುಖ್ಯಾತಿಯುಳ್ಳವನು ಎಂದು ತಿಳಿದುಬಂದಿದೆ.

ಕುಂದಾಪುರ ಸಿಪಿಐ ಮಂಜಪ್ಪ ಡಿ.ಆರ್, ಕುಂದಾಪುರ ಪಿಎಸ್ಐ ಹರೀಶ್ ಆರ್., ಕ್ರೈಮ್ ವಿಭಾಗದ ಎಸ್ಐ ದೇವರಾಜ್ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.