ಕರ್ನಾಟಕ

ಕಂಬಳ ನಮ್ಮ ಕ್ರೀಡೆ…ಕಂಬಳ ಕ್ರೀಡೆ ರಕ್ಷಿಸುವ ಕುರಿತು ಕಾನೂನು ರಚನೆಗೂ ಸಿದ್ದ: ಸಿಎಂ ಸಿದ್ದರಾಮಯ್ಯ

Pinterest LinkedIn Tumblr

ಬೆಂಗಳೂರು: ಕಂಬಳ ಕರ್ನಾಟಕದ ಗ್ರಾಮೀಣ ಸಾಂಸ್ಕೃತಿಕ ಕ್ರೀಡೆಯಾಗಿದ್ದು, ಸರ್ಕಾರ ಅದರ ವಿರುದ್ಧವಾಗಿಲ್ಲ. ಅಗತ್ಯ ಬಿದ್ದರೆ ಕಂಬಳ ಕ್ರೀಡೆ ರಕ್ಷಿಸುವ ಕುರಿತು ಕಾನೂನು ರಚನೆಗೂ ಸಿದ್ದ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ಸಶಸ್ತ್ರ ಮೀಸಲು ಪಡೆಗೆ ಹೊಸದಾಗಿ ಸೇರ್ಪಡೆಯಾಗಿರುವ, ಆಧುನಿಕ ತಂತ್ರಜ್ಞಾನ, ಸೌಲಭ್ಯ ಹೊಂದಿರುವ 102 ಬಸ್ ಗಳಿಗೆ ಹಸಿರು ನಿಶಾನೆ ತೋರಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ರಾಜ್ಯ ಸರ್ಕಾರ ಎಂದಿಗೂ ಕಂಬಳದ ವಿರುದ್ಧವಾಗಿಲ್ಲ. ಕರ್ನಾಟಕದ ಗ್ರಾಮೀಣ ಸಾಂಸ್ಕೃತಿಕ ಕ್ರೀಡೆಯಾಗಿರುವ ಕಂಬಳದ ಮೇಲಿನ ನಿಷೇಧ ತೆರವಿಗೆ ಕೇಂದ್ರ ಸರ್ಕಾರದೊಂದಿಗೆ ಚರ್ಚೆ ನಡೆಸುತ್ತಿದ್ದೇವೆ. ಒಂದು ವೇಳೆ ಅಗತ್ಯ ಬಿದ್ದರೆ ಕಾನೂನು ರಚನೆಗೂ ರಾಜ್ಯ ಸರ್ಕಾರ ಸಿದ್ಧವಿದೆ ಎಂದು ಹೇಳಿದರು.

ಇನ್ನು ಕಂಬಳ ಮೇಲಿನ ನಿಷೇಧ ತೆರವುಗೊಳಿಸುವಂತೆ ಆಗ್ರಹಿ ನಡೆಯುತ್ತಿರುವ ಪ್ರತಿಭಟನೆ ಶುಕ್ರವಾರವೂ ಮುಂದುವರೆದಿದ್ದು, ವಿವಿಧ ಕನ್ನಡಪರ ಸಂಘಟನೆಗಳು ಹಾಗೂ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿ ಸಂಘಟನೆಗಳು ಹಾಗೂ ವಿವಿಧ ರೈತಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದು, ಸಾಂಸ್ಕೃತಿಕ ಕ್ರೀಡೆಯಾಗಿರುವ ಕಂಬಳ ಮೇಲಿನ ನಿಷೇಧವನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿವೆ.

ಅಂತೆಯೇ ಕೇಂದ್ರ ಸರ್ಕಾರದ ವಿರುದ್ಧವೂ ಕಿಡಿಕಾರಿದ ಪ್ರತಿಭಟನಾಕಾರರು ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಸಂಬಂಧಿಸಿದಂತೆ ಮಲತಾಯಿ ಧೋರಣೆ ಅನುಸರಿಸುತ್ತಿದ್ದು, ತಮಿಳುನಾಡಿನ ಜಲ್ಲಿಕಟ್ಟು ಆಚರಣೆ ಸಂಬಂಧ ಕೇಂದ್ರ ಕೈಗೊಂಡಿದ್ದ ನಿರ್ಣಯವನ್ನೇ ಕರ್ನಾಟಕದ ಪರವಾಗಿಯೂ ಅನುಸರಿಸಬೇಕು ಎಂದು ಆಗ್ರಹಿಸಿದ್ದಾರೆ.

Comments are closed.