ಕರಾವಳಿ

ಕಂಬಳ ನಿಷೇಧ ವಿರೋಧಿಸಿ ಹಾಗೂ ಕಂಬಳ ಬೆಂಬಲಿಸಿ ಮಂಗಳೂರಿನಲ್ಲಿ ಬೃಹತ್ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ

Pinterest LinkedIn Tumblr

ಮಂಗಳೂರು, ಜನವರಿ.27: ಸಮಗ್ರ ತುಳುನಾಡಿನ ಸಾಂಪ್ರದಾಯಿಕ ಆಚರಣೆ, ತುಳುನಾಡಿನ ಸಂಸ್ಕೃತಿಯ ಪ್ರತೀಕವಾಗಿರುವ ಜಾನಪದ ಕ್ರೀಡೆ ಕಂಬಳ ನಿಷೇಧವನ್ನು ವಿರೋಧಿಸಿ ‘ಕಂಬಳ ಉಳಿಸಿ ಹೋರಾಟ ಸಮಿತಿ’ ನೇತೃತ್ವದಲ್ಲಿ ಶುಕ್ರವಾರ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.

ಕಂಬಳವನ್ನು ಬೆಂಬಲಿಸಿ ಕಂಬಳ ಅಭಮಾನಿಗಳು, ತುಳು ಚಿತ್ರರಂಗದ ಕಲಾವಿದರು ಹಾಗೂ ವಿದ್ಯಾರ್ಥಿಗಳ ಸಹಭಾಗಿತ್ವದಲ್ಲಿ ಇಂದು ಬೆಳಗ್ಗೆ ನಗರದ ಹಂಪನಕಟ್ಟೆಯ ಜಂಕ್ಸನ್‌ ( ಹಿಂದಿನ ಸಿಗ್ನಲ್ ವೃತ್ತ) ನಲ್ಲಿ ಬೃಹತ್ ಮಾನವ ಸರಪಳಿ ನಿರ್ಮಿಸುವ ಮೂಲಕ ಪ್ರತಿಭಟಿಸಲಾಯಿತು.

ಸಂಸದ ನಳಿನ್ ಕುಮಾ ಕಟೀಲು, ಅವಿಭಜಿತ ದ.ಕ. ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಬಾರ್ಕೂರು ಶಾಂತಾರಾಮ ಶೆಟ್ಟಿ, ಶಾಸಕ ಬಿ.ಎ.ಮೊಯ್ದಿನ್ ಬಾವ, ಬಂಟರ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಬಾಳೆಕೋಡಿ ಮಠದ ಶಶಿಕಾಂತ ಮಣಿ ಸ್ವಾಮೀಜಿ,  ತುಳು ಚಿತ್ರ ನಿರ್ದೇಶಕ ಹಾಗೂ ನಿರ್ಮಾಪರಾದ ದೇವದಾಸ್ ಕಾಪಿಕಾಡ್, ವಿಜಯಕುಮಾರ್ ಕೊಡಿಯಲ್ ಬೈಲ್, ಶರ್ಮಿಳಾ ಕಾಪಿಕಾಡ್, ನಾಯಕ ನಟ ಅರ್ಜುನ್ ಕಾಪಿಕಾಡ್, ಕಲಾವಿದರಾದ ಭೋಜರಾಜ್ ವಾಮಂಜೂರ್, ಸುಂದರ ರೈ ಮಂದಾರ, ಚೇತನ್ ರೈ ಮಾಣಿ, ಉದ್ಯಮಿ ಪಷ್ಪರಾಜ್ ಜೈನ್, ವಕೀಲರ ಸಂಘದ ಮುಖಂಡ ದಿನಕರ ಶೆಟ್ಟಿ, ಕಂಬಳ ಸಮಿತಿಯ ಮುಖಂಡ ಅಶೋಕ್ ರೈ, ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕ ಯೋಗೀಶ್ ಶೆಟ್ಟಿ ಜೆಪ್ಪು, ವಿವಿಧ ಸಂಘಟನೆಗಳಾದ ಮುಖಂಡರಾದ ಪ್ರೊ.ಎಂ.ಬಿ.ಪುರಾಣಿಕ್, ಎಂ.ಜಿ. ಹೆಗ್ಗಡೆ, ಶರಣ್ ಪಂಪ್‌ವೆಲ್, ಜಗದೀಶ್ ಶೇಣವ, ಸತ್ಯಜೀತ್ ಸುರತ್ಕಲ್, ಮತ್ತಿತ್ತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಸಮಗ್ರ ತುಳುನಾಡಿನ ಸಾಂಪ್ರದಾಯಿಕ ಆಚರಣೆ, ಜಾನಪದ ಕ್ರೀಡೆ ಕಂಬಳಕ್ಕೆ ನಿರ್ಭಂಧ ವಿಧಿಸಿರುವ ಕ್ರಮ ಸರಿಯಲ್ಲ. ಕಳೆದ ಕೆಲವು ದಿನಗಳಿಂದ ತಮಿಳುನಾಡಿನಲ್ಲಿ ಜಲ್ಲಿಕಟ್ಟು ಕ್ರೀಡೆಗೆ ನಿಷೇಧದ ವಿರುದ್ಧ ಅಲ್ಲಿನ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದವರು ತಮ್ಮ ನಾಡಿನ ಸಂಪ್ರದಾಯದ ಕ್ರೀಡೆಯ ಉಳಿವಿಗಾಗಿ ಬೀದಿಗಿಳಿದು ಹೋರಾಟ ಮಾಡುವ ಜೊತೆಗೆ ವಿಧಾನ ಸಭೆ, ಲೋಕಸಭೆ ಮತ್ತು ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಅಂಕಿತ ಹಾಕುವವರೆಗೆ ತಮ್ಮ ಇಚ್ಛಾ ಶಕ್ತಿಯನ್ನು ಪ್ರದರ್ಶಿಸಿರುತ್ತಾರೆ.

ತಮಿಳುನಾಡಿನ ಜಲ್ಲಿಕಟ್ಟು ಮತ್ತು ಕಂಬಳ ಆಚರಣೆಯ ನಡುವೆ ಬಹಳಷ್ಟು ವ್ಯತ್ಯಾಸವಿದೆ.ಕಂಬಳದಲ್ಲಿ ಹಿಂಸೆ ಇಲ್ಲವೇ ಇಲ್ಲ. ಹಾಗಾಗಿ ಕಂಬಳವನ್ನು ಉಳಿಸಲು ಜಾತಿ, ಧರ್ಮವನ್ನು ಮರೆತು ಹೋರಾಟಕ್ಕೆ ಮುಂದಾಗಿದ್ದೇವೆ. ಕಂಬಳದ ವಾಸ್ತವವನ್ನು ಅರಿತು ಸರಕಾರ ಇದನ್ನು ಉಲಿಸಲು ಸುಗ್ರೀವಾಜ್ಞೆ ಹೊರಡಿಸಲು ಮುಂದಾಗಬೇಕು ಎಂದು ಆಗ್ರಹಿಸಿದ ಪ್ರತಿಭಟನಕಾರರು ಕಂಬಳದ ಉಳಿವಿಗೆ ಒಕ್ಕೊರಳಿನಿಂದ ಒತ್ತಾಯಿಸಿದರು.

ಕಂಬಳದ ಸೊಗಡನ್ನು ಅರಿಯದೆ ಕಂಬಳದ ಬಗ್ಗೆ ವಿರೋಧಿಸುವುದರಲ್ಲಿ ಅರ್ಥವಿಲ್ಲ. ನಮಗಾಗಿ, ಎತ್ತುಗಳ ಉಳಿವಿಗಾಗಿ, ಸಂಸ್ಕೃತಿಯ ವೃದ್ಧಿಗಾಗಿ ಕಂಬಳ ಬೇಕು , ಹಾಗೂ ಇದು ಸಾಂಕೇತಿಕ ಹೋರಾಟವಾಗಿದ್ದು ಶಾಶ್ವತ ನ್ಯಾಯ ದೊರಕದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವ ಅನಿವಾರ್ಯತೆ ಇದೆ. ಅದ್ದರಿಂದ ತುಳುನಾಡಿನ ಜಾನಪದ ಕ್ರೀಡೆ ಕಂಬಳ ನಿಷೇಧವನ್ನು ಕೂಡಲೇ ತೆರವುಗೊಳಿಸ ಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.

ಪ್ರತಿಭಟನ ಸಭೆಗೂ ಮೊದಲು ನಗರದ ಜ್ಯೋತಿ ಟಾಕೀಸ್ ಸಮೀಪದ ಅಂಬೇಡ್ಕರ್ ವೃತ್ತದಿಂದ ಹಂಪನಕಟ್ಟೆಯ ( ಹಿಂದಿನ ಸಿಗ್ನಲ್ ವೃತ್ತ) ಜಂಕ್ಸನ್‌ವರೆಗೆ ಕಂಬಳಾಭಿಮಾನಿಗಳು ಹಾಗೂ ವಿವಿಧ ಶಾಲಾ ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳು ಕಾಲ್ನಡಿಗೆ ಮೂಲಕ ಆಗಮಿಸಿ ಹಂಪನಕಟ್ಟೆಯ ವೃತ್ತದಲ್ಲಿ ಮಾನವ ಸರಪಳಿ ನಡೆಸಿ ಕಂಬಳಕ್ಕೆ ಬೆಂಬಲ ಸೂಚಿಸಿದರು.

Comments are closed.