ಕರಾವಳಿ

ಮಂಗಳೂರಿನಲ್ಲಿ ಚಲನಚಿತ್ರೋತ್ಸವ ಸಪ್ತಾಹಕ್ಕೆ ಚಾಲನೆ

Pinterest LinkedIn Tumblr

ಮಗಳೂರು ಜನವರಿ. 27: ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ಪಡೆದ ಕನ್ನಡ ಚಲನಚಿತ್ರಗಳನ್ನು ಪ್ರದರ್ಶಿಸುವ ಸಲುವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಏರ್ಪಡಿಸಲಾಗಿರುವ ಚಲನಚಿತ್ರೋತ್ಸವ ಸಪ್ತಾಹಕ್ಕೆ ಶುಕ್ರವಾರ ಮಂಗಳೂರಿನಲ್ಲಿ ಚಾಲನೆ ನೀಡಲಾಯಿತು. 

ನಗರದ ನ್ಯೂಚಿತ್ರಾ ಚಿತ್ರಮಂದಿರದಲ್ಲಿ ನಡೆಯುತ್ತಿರುವ ಸಪ್ತಾಹವನ್ನು ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾರ್‍ಸ್ಟ್ರೀಟ್ ಇಲ್ಲಿನ ಪ್ರಾಂಶುಪಾಲ ಡಾ. ರಾಜಶೇಖರ ಹೆಬ್ಬಾರ್ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಾಮಾಜಿಕ ಆಧಾರಿತ ಸದಭಿರುಚಿಯ ಚಲನಚಿತ್ರಗಳನ್ನು ವೀಕ್ಷಿಸುವ ಅವಕಾಶ ಇತ್ತೀಚಿನ ದಿನಗಳಲ್ಲಿ ಅಪರೂಪವಾಗಿದೆ. ಮನೋರಂಜನೆಯೊಂದಿಗೆ ಕಲಾಧಾರಿತ ಚಲನಚಿತ್ರಗಳು ಇಂದು ಹೆಚ್ಚು ಮೂಡಿಬರಬೇಕಿದೆ. ಭಾರತದಲ್ಲಿ ಇತಿಹಾಸದಲ್ಲಿ ಚಲನಚಿತ್ರಗಳು ಹಲವಾರು ಸಾಮಾಜಿಕ ಮತ್ತು ರಾಜಕೀಯ ಬದಲಾವಣೆಗೆ ಕಾರಣವಾಗಿದೆ. ಚಲನಚಿತ್ರಗಳು ಜನಜಾಗೃತಿ ಮೂಡಿಸುವ ಮಾಧ್ಯಮವಾಗಿದೆ ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಚಿತ್ರಮಂದಿರಗಳು ವಾಣಿಜ್ಯ ಸಂಕೀರ್ಣಗಳಾಗಿ ಬದಲಾಗುತ್ತಿರುವುದು ಕಳವಳಕಾರಿಯಾಗಿದೆ. ಚಲನಚಿತ್ರೋತ್ಸವ ಸಪ್ತಾಹ ಆಯೋಜಿಸುವ ಮೂಲಕ ಸದಭಿರುಚಿಯ ಕಲಾಚಿತ್ರಗಳನ್ನು ವೀಕ್ಷಿಸುವ ಅವಕಾಶವನ್ನು ವಾರ್ತಾ ಇಲಾಖೆಯು ಒದಗಿಸಿರುವುದು ಶ್ಲಾಘನೀಯವಾಗಿದೆ ಎಂದು ರಾಜಶೇಖರ ಹೆಬ್ಬಾರ್ ಹೇಳಿದರು.

ಜಿಲ್ಲಾ ವಾರ್ತಾಧಿಕಾರಿ ಬಿ.ಎ.ಖಾದರ್ ಶಾ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಚಲನಚಿತ್ರೋತ್ಸವ ಸಪ್ತಾಹ ಜನವರಿ 27ರಿಂದ ಫೆಬ್ರವರಿ 2ರವರೆಗೆ ನಡೆಯಲಿದ್ದು, ನ್ಯೂಚಿತ್ರಾ ಚಿತ್ರಮಂದಿರದಲ್ಲಿ ಪ್ರತೀದಿನ ಬೆಳಿಗ್ಗೆ 10 ಗಂಟೆಗೆ ಚಿತ್ರ ಪ್ರದರ್ಶನವಾಗಲಿದೆ. ಸಾರ್ವಜನಿಕರಿಗೆ ಪ್ರವೇಶ ಶುಲ್ಕ ಉಚಿತವಾಗಿದೆ. ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಪ್ರಶಸ್ತಿಗಳನ್ನು ಪಡೆದ ಅಪರೂಪದ ಕನ್ನಡ ಚಲನಚಿತ್ರಗಳನ್ನು ಪ್ರದರ್ಶಿಸಲಾಗುವುದು ಎಂದು ಹೇಳಿದರು.

ದ.ಕ. ಜಿಲ್ಲಾ ಚಿತ್ರಮಂದಿರಗಳ ಮಾಲೀಕರ ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ಶಂಕರ ಪೈ ಉಪಸ್ಥಿತರಿದ್ದರು. ವಾರ್ತಾ ಇಲಾಖೆಯ ಫ್ರಾನ್ಸಿಸ್ ಲೂಯಿಸ್ ಕಾರ್ಯಕ್ರಮ ನಿರೂಪಿಸಿದರು.

ಉದ್ಘಾಟನಾ ಕಾರ್ಯಕ್ರಮದ ಬಳಿಕ ‘ಮೈತ್ರಿ’ ಚಿತ್ರ ಪ್ರದರ್ಶನಗೊಂಡಿತು. ಜ.28ರಂದು ಶಿವಯೋಗಿ ಶ್ರೀ ಪುಟ್ಟಯ್ಯಜ್ಜ, 29ರಂದು ತಿಥಿ, 30ರಂದು ಕೃಷ್ಣಲೀಲಾ, 31ರಂದು ರಂಗಿತರಂಗ, ಫೆ.1ರಂದು ತಿಥಿ, ಹಾಗೂ ಫೆ.2ರಂದು ಮೈತ್ರಿ ಚಲನಚಿತ್ರಗಳು ಪ್ರದರ್ಶನಗೊಳ್ಳಲಿದೆ.

Comments are closed.