ಕರ್ನಾಟಕ

ಯಡಿಯೂರಪ್ಪ ವಿರುದ್ಧ ತಿರುಗಿಬಿದ್ದ ಈಶ್ವರಪ್ಪ; ಯಡಿಯೂರಪ್ಪರನ್ನು ಸಿಎಂ ಮಾಡುವ ಉದ್ದೇಶ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ಗೆ ಇಲ್ಲವೇ ಇಲ್ಲ…

Pinterest LinkedIn Tumblr

ಕಲಬುರಗಿ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವ ಉದ್ದೇಶ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ಗೆ ಇಲ್ಲವೇ ಇಲ್ಲ ಎಂದು ಹೇಳುವ ಮೂಲಕ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಬಿಎಸ್‌ವೈ ವಿರುದ್ಧ ಮತ್ತೆ ತಿರುಗಿಬಿದ್ದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪನವರೇ ತಮಗೆ ಯಾವುದೇ ಬ್ರಿಗೇಡ್ ಬೆಂಬಲದ ಅಗತ್ಯವಿಲ್ಲ. ಜನಬೆಂಬಲದಿಂದಲೇ ಮುಖ್ಯಮಂತ್ರಿಯಾಗುತ್ತೇನೆ ಎಂದು ಹೇಳಿರುವುದಾಗಿ ತಿಳಿಸಿದರು.

ಬ್ರಿಗೇಡ್‌ನಲ್ಲಿ ಎಲ್ಲಾ ರಾಜಕೀಯ ಪಕ್ಷಗಳ ನಾಯಕರಿದ್ದಾರೆ. ಇದೊಂದು ರಾಜಕೀಯೇತರ ಸಂಘಟನೆಯಾಗಿದೆ. ಈ ಮೊದಲು ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿಸುವ ಉದ್ದೇಶ ಬ್ರಿಗೇಡಿಗಿತ್ತು, ಆದರೆ ಈಗಿಲ್ಲ ಎಂದರು.

ಬಿಜೆಪಿಯಲ್ಲಿ ಆಂತರಿಕ ಭಿನ್ನಮತ ಇರುವುದು ಸತ್ಯ. ಶೀಘ್ರದಲ್ಲಿಯೇ ಭಿನ್ನಮತ ಶಮನಗೊಳ್ಳುವ ವಿಶ್ವಾಸ ವ್ಯಕ್ತಪಡಿಸಿದ ಈಶ್ವರಪ್ಪ, ಜ.೨೬ರಂದು ಕೂಡಲ ಸಂಗಮದಲ್ಲಿ ನಡೆಯಲಿರುವ ಉತ್ತರ ಕರ್ನಾಟಕ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಬೃಹತ್ ವಿಭಾಗಮಟ್ಟದ ಸಮಾವೇಶದಲ್ಲಿ ರಾಷ್ಟ್ರ ರಕ್ಷಣೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗುವುದು ಎಂದರು.

ಮಠಾಧೀಶರ ಸಲಹೆಯಂತೆ ಬ್ರಿಗೇಡ್ ಯಾವುದೇ ರಾಜಕೀಯ ಪಕ್ಷವನ್ನು ಬೆಂಬಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

Comments are closed.