ಕರಾವಳಿ

ಕೊಲ್ಲೂರು ಮೂಕಾಂಬಿಕೆ ಸನ್ನಿಧಿಯಲ್ಲಿ ಕೆ.ಜೆ. ಯೇಸುದಾಸ್ 77ನೇ ಜನ್ಮದಿನಾಚರಣೆ

Pinterest LinkedIn Tumblr

ಕುಂದಾಪುರ: ಪ್ರತಿ ವರ್ಷದಂತೆ ಈ ವರ್ಷವೂ ಕೂಡ ದಕ್ಷಿಣ ಭಾರತದ ಖ್ಯಾತ ಹಿನ್ನೆಲೆ ಗಾಯಕ ಪದ್ಮಭೂಷಣ ಡಾ. ಕೆ.ಜೆ. ಯೆಸುದಾಸ್ ಅವರು ತಮ್ಮ 77ನೇ ಹುಟ್ಟುಹಬ್ಬವನ್ನು ಶ್ರೀಕ್ಷೇತ್ರ ಕೊಲ್ಲೂರು ಶ್ರೀಮೂಕಾಂಬಿಕಾ ದೇವಳಕ್ಕೆ ಭೇಟಿ ನೀಡಿ, ಚಂಡಿಕಾ ಹೋಮ ನೆರವೇರಿಸವುದರ ಮೂಲಕ ಅತ್ಯಂತ ಸರಳವಾಗಿ ಆಚರಿಸಿಕೊಂಡರು.

ತನ್ನ ಕುಟುಂಬದವರೊಂದಿಗೆ ಕೊಲ್ಲೂರಿಗೆ ಆಗಮಿಸಿದ ಅವರು ಮಂಗಳವಾರ ಬೆಳಗ್ಗೆ ದೇವರ ದರ್ಶನ ಪಡೆದರು. ಬಳಿಕ ದೇವಸ್ಥಾನದ ಪ್ರಾಂಗಾಣದ ಸ್ವರ್ಣಮುಖಿ ಮಂಟಪದಲ್ಲಿ ನಡೆದ ಭಕ್ತಿ ಸಂಗೀತ ಕಛೇರಿಯಲ್ಲಿ ಗೀತೆಗಳನ್ನು ಹಾಡಿ ಶ್ರೀ ದೇವಿಗೆ ಸಂಗೀತ ಸೇವೆಯನ್ನು ಅರ್ಪಿಸಿದರಲ್ಲದೇ ಸೇರಿದ ಸಹಸ್ರಾರು ಭಕ್ತರಿಗೆ ಭಕ್ತಿಸಾಗರದಲ್ಲಿ ತೇಲಿಸಿದರು.

ತಮ್ಮ ನೆಚ್ಚಿನ ಗಾಯಕ ಜೇಸುದಾಸ್ ಅವರ ಹುಟ್ಟು ಹಬ್ಬದ ಆಚರಣೆಗಾಗಿ ಕೇರಳ ಹಾಗೂ ವಿವಿಧ ಭಾಗಗಳಿಂದ ಬಂದಿದ್ದ ದೊಡ್ಡ ಸಂಖ್ಯೆಯ ಅಭಿಮಾನಿಗಳು, ಸಂಗೀತ ಕಚೇರಿಯ ಮಧುರ ಘಳಿಗೆಗೆ ಸಾಕ್ಷಿಗಳಾಗಿದ್ದರು. ಚಂಡಿಕಾ ಹೋಮ ಹಾಗೂ ವಿವಿಧ ಪೂಜಾ ವಿಧಿಗಳನ್ನು ನೆರವೇರಿಸಿದ ಜೇಸುದಾಸ್ ಕುಟುಂಬಿಕರು ಶ್ರೀದೇವಿಯ ದರ್ಶನ ಪಡೆದರು. ಪತ್ನಿ ಪ್ರಭಾ ಯೇಸುದಾಸ್, ಪುತ್ರರಾದ ವಿಜಯ್ ಯೇಸುದಾಸ್, ವಿನೋದ್ ಯೇಸುದಾಸ್ ಹೋಮದಲ್ಲಿ ಭಾಗಿಯಾಗಿದ್ದರು.

ಹಲವಾರು ವರ್ಷಗಳಿಂದ ಕೊಲ್ಲೂರಿನಲ್ಲಿ ಹುಟ್ಟುಹಬ್ಬ ಆಚರಿಸುತ್ತಿರುವ ಯೇಸುದಾಸ್ ಮಾಧ್ಯಮದ ಜೊತೆ ಮಾತನಾಡಿ, ಸಂಗೀತ ನನ್ನ ಉಸಿರಾಗಿದ್ದು ನಾನು ಹಾಡುವುದನ್ನೂ ಉಸಿರುವವರೆಗೆ ನಿಲ್ಲಿಸುವುದಿಲ್ಲ, ಸಂಗೀತ ನನ್ನ ಪ್ರಾಣಾಯಾಮವಿದ್ದಂತೆ. ಇಂದಿಗೂ ಕೂಡ ನಿತ್ಯವೂ ಸಂಗೀತವನ್ನು ನಾನು ಅಭ್ಯಾಸ ಮಾಡುತ್ತೇನೆ. ನಾನು ಕೊಲ್ಲೂರು ಮೂಕಾಂಬಿಕೆ ದೇವಿ ಆರಾಧಕ. ಆಕೆ ಅನುಗ್ರಹ ನನ್ನ ಮೇಲಿದ್ದು ಮೂಕಾಂಬಿಕೆ ತಾಯಿ ಆಶೀರ್ವಾದಕ್ಕಾಗಿ ಪ್ರತಿವರ್ಷ ಇಲ್ಲಿಗೆ ಬರುತ್ತಿದ್ದೇನೆ. ಅಹಂಕಾರವೆಂಬ ಅಸುರನನ್ನು ದೇವಿ ಹೊಡೆದೋಡಿಸುತ್ತಾಳೆ, ಯಾವುದೇ ಜಾತಿ ಬೇಧವಿಲ್ಲದೇ ದೇವಿ ಎಲ್ಲರನ್ನು ಅನುಗ್ರಹಿಸುತ್ತಾಳೆ. ಮನುಷ್ಯ ಕುಲದ ಅಧಿದೇವತೆ ಮೂಕಾಂಬಿಕೆಯಾಗಿದ್ದಾಳೆ ಎಂದರು.

Comments are closed.