ಕರ್ನಾಟಕ

ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮರೆದ ನಾಲ್ಕೂವರೆ ವರ್ಷದ ಬಾಲಕ !

Pinterest LinkedIn Tumblr

jagath

ಬೆಂಗಳೂರು: ಮಿದುಳು ನಿಷ್ಕ್ರಿಯಗೊಂಡಿದ್ದ ಜಗತ್‌ ಎಂಬ ನಾಲ್ಕೂವರೆ ವರ್ಷದ ಬಾಲಕನ ಜೀವಂತ ಹೃದಯವನ್ನು ಮಂಗಳವಾರ ಕೆಂಗೇರಿ– ಉತ್ತರಹಳ್ಳಿ ಸಮೀಪದ ಬಿಜಿಎಸ್‌ ಗ್ಲೋಬಲ್‌ ಆಸ್ಪತ್ರೆಯಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎಎಲ್‌) ಯಶಸ್ವಿಯಾಗಿ ಸಾಗಿಸಲಾಯಿತು.

ಹೃದಯವನ್ನು ಸಾಗಿಸಲು ಕೆಂಗೇರಿಯಿಂದ ವಿಮಾನ ನಿಲ್ದಾಣದವರೆಗೆ ‘ಗ್ರೀನ್‌ ಕಾರಿಡಾರ್‌’ (ಸಿಗ್ನಲ್‌ಮುಕ್ತ ಸಂಚಾರ ವ್ಯವಸ್ಥೆ) ನಿರ್ಮಿಸಲಾಗಿತ್ತು. ಇದರಿಂದ ಸುಮಾರು 48.8 ಕಿ.ಮೀ. ರಸ್ತೆ ಮಾರ್ಗವನ್ನು 44 ನಿಮಿಷಗಳಲ್ಲಿ ಕ್ರಮಿಸಲು ಸಾಧ್ಯವಾಯಿತು.

ಸಂಚಾರ ಪೊಲೀಸರು ನಿಯಂತ್ರಣ ಕೊಠಡಿಯಿಂದಲೇ ಸಿ.ಸಿ.ಟಿ.ವಿ. ಕ್ಯಾಮೆರಾಗಳಲ್ಲಿ ಆಂಬುಲೆನ್ಸ್‌ನ ಸಂಚಾರ ವೀಕ್ಷಿಸುತ್ತಾ ಸೂಚನೆಗಳನ್ನು ನೀಡಿದರು.

‘ಬೆಳಿಗ್ಗೆ 9ಕ್ಕೆ ಬಿಜಿಎಸ್‌ ಆಸ್ಪತ್ರೆಯಿಂದ ಹೊರಟ ಆಂಬುಲೆನ್ಸ್‌ ಕೆಂಗೇರಿ– ಮೈಸೂರು ರಸ್ತೆ– ಹೆಬ್ಬಾಳ ಜಂಕ್ಷನ್‌– ಬಳ್ಳಾರಿ ರಸ್ತೆಯ ಮಾರ್ಗವಾಗಿ 10.30ಕ್ಕೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಿತು’ ಎಂದು ಬಿಜಿಎಸ್‌ ಆಸ್ಪತ್ರೆಯ ವೈದ್ಯರು ತಿಳಿಸಿದರು.

‘ಹೃದಯವನ್ನು ವಿಮಾನದ ಮೂಲಕ ಚೆನ್ನೈನ ಫೋರ್ಟಿಸ್‌ ಮಲಾರ್‌ ಆಸ್ಪತ್ರೆಗೆ ರವಾನಿಸಲಾಗಿದೆ’ ಎಂದರು.

ಮಂಡ್ಯ ಮೂಲದ ನಿತ್ಯಾನಂದ ಅವರ ಪುತ್ರ ಜಗತ್‌. ನಿತ್ಯಾನಂದ ಅವರು ತಮಿಳುನಾಡಿನ ಕೊಯಮತ್ತೂರಿನಲ್ಲಿ ನೆಲೆಸಿದ್ದರು. ಕ್ರಿಸ್‌ಮಸ್‌ ಹಬ್ಬಕ್ಕೆ ರಜೆ ನೀಡಿದ್ದರಿಂದ ಚನ್ನಪಟ್ಟಣದ ಸಂಬಂಧಿಕರ ಮನೆಗೆ ಬಂದಿದ್ದರು. ಈ ವೇಳೆ ಎರಡನೇ ಮಹಡಿಯಲ್ಲಿ ಆಟವಾಡುತ್ತಿದ್ದ ಜಗತ್‌ ಆಯತಪ್ಪಿ ಕೆಳಗೆ ಬಿದ್ದಿದ್ದ. ತೀವ್ರವಾಗಿ ಗಾಯಗೊಂಡಿದ್ದ ಆತನನ್ನು ಬಿಜಿಎಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಮಂಗಳವಾರ ಬೆಳಿಗ್ಗೆ ಆತನ ಮಿದುಳು ನಿಷ್ಕ್ರಿಯಗೊಂಡಿತ್ತು. ಆತನ ಅಂಗಾಂಗ ದಾನಕ್ಕೆ ಪೋಷಕರು ಒಪ್ಪಿಗೆ ನೀಡಿದ್ದರು. ಜಗತ್‌ನ ಯಕೃತ್‌ (ಲಿವರ್‌) ಅನ್ನು ನಾರಾಯಣ ಹೃದಯಾಲಯ ಹಾಗೂ ಕಣ್ಣುಗಳನ್ನು ನಾರಾಯಣ  ನೇತ್ರಾಲಯಕ್ಕೆ ಕಳುಹಿಸಲಾಗಿದೆ. ಎರಡು ಮೂತ್ರಪಿಂಡಗಳನ್ನು ಬಿಜಿಎಸ್‌ ಗ್ಲೋಬಲ್‌ ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳಿಗೆ ಕಸಿ ಮಾಡಲಾಗಿದೆ.

‘ಏರ್‌ ಆಂಬುಲೆನ್ಸ್‌ ಏಕೆ ಬಳಸಲಿಲ್ಲ?’
ಗ್ರೀನ್‌ ಕಾರಿಡಾರ್‌ ಮೂಲಕ ಜೀವಂತ ಹೃದಯ ರವಾನೆ ಮಾಡಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಅದೇ ರೀತಿ ಏರ್‌ ಆಂಬುಲೆನ್ಸ್‌ ಬಳಕೆ ಮಾಡುವಂತೆಯೂ ಕೆಲವರು ಸಲಹೆ ನೀಡಿದ್ದಾರೆ.

‘ಇತ್ತೀಚೆಗೆ ಚಾಲನೆಗೊಂಡ ಏರ್‌ ಆಂಬುಲೆನ್ಸ್‌ ಅನ್ನು ಏಕೆ ಬಳಸಲಿಲ್ಲ? ಇದರಿಂದ ಬೇಗ ವಿಮಾನ ನಿಲ್ದಾಣ ತಲುಪಬಹುದಿತ್ತಲ್ಲವೇ’ ಎಂದು ಅಜಯ್‌ ವರದರಾಜನ್‌ ಪ್ರಶ್ನಿಸಿದ್ದಾರೆ.

‘ಸಂಚಾರಮುಕ್ತ ವ್ಯವಸ್ಥೆ ಕಲ್ಪಿಸುವುದು ನಮ್ಮ ಕೆಲಸ. ಏರ್ ಆಂಬುಲೆನ್ಸ್ ಬಳಕೆ ಮಾಡುವುದು ರೋಗಿಯ ಪೋಷಕರಿಗೆ ಬಿಟ್ಟ ವಿಷಯ’ ಎಂದು ಸಂಚಾರ ಪೊಲೀಸರು ಫೇಸ್‌ಬುಕ್‌ ಖಾತೆಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

‘ನಿಮ್ಮ ಸೇವೆ ಶ್ಲಾಘನಾರ್ಹ. ಆದರೆ, ಏರ್‌ ಆಂಬುಲೆನ್ಸ್‌ ಸೇವೆಯನ್ನು ಬಳಸಿಕೊಳ್ಳುವಂತೆ ನೀವು ಉತ್ತೇಜನ ನೀಡಬೇಕು. ಹೃದಯ ರವಾನೆಗೆಂದು ಎರಡು ಆಂಬುಲೆನ್ಸ್‌, ಎರಡು ಪೊಲೀಸ್‌ ಜೀಪ್‌ಗಳನ್ನು ಬಳಕೆ ಮಾಡಲಾಗಿದೆ. ಈ ವೆಚ್ಚಕ್ಕಿಂತ ಏರ್‌ ಆಂಬುಲೆನ್ಸ್‌ ಶುಲ್ಕವೇ ಕಡಿಮೆ ಅಲ್ಲವೇ’ ಎಂದು ಕಾರ್ತಿಕ್‌ ಮಕಂ ಪ್ರಶ್ನಿಸಿದ್ದಾರೆ.

Comments are closed.