ಕರ್ನಾಟಕ

ದಿಡ್ಡಳ್ಳಿ ಆದಿವಾಸಿಗಳ ಜೊತೆ ಮಾತುಕತೆಗೆ ಮುಂದಾದ ನಟ ಚೇತನ್’ರನ್ನು ತಡೆದ ಪೊಲೀಸರು..! ಮುಂದೆ ಏನಾಯಿತು..?

Pinterest LinkedIn Tumblr

chethan

ಮಡಿಕೇರಿ: ತಮ್ಮ ಛಲಬಿಡದ ಹೋರಾಟದಿಂದ ಸರ್ಕಾರವನ್ನೇ ಮಣಿಸಿದ್ದ ದಿಡ್ಡಳ್ಳಿ ಆದಿವಾಸಿಗಳು ಇದೀಗ ತಮ್ಮ ನಾಯಕರನ್ನೇ ಭೇಟಿಮಾಡದಂತಹ ಸ್ಥಿತಿಗೆ ತಲುಪಿದ್ದಾರೆ. ವಿರಾಜಪೇಟೆ ತಾಲೂಕಿನ ದಿಡ್ಡಳ್ಳಿ ಇದೀಗ ಪ್ರಜಾಪ್ರಭುತ್ವ ವಿರೋಧಿ ನೀತಿಯಿಂದಲೂ ಸದ್ದುಮಾಡುತ್ತಿದೆ. ಶಾಂತಿಯುತ ಹೋರಾಟದ ಮೂಲಕ ಸರ್ಕಾರವನ್ನೇ ಮಣಿಸಿದ್ದ ಕಾಡಿನ ಮಕ್ಕಳನ್ನು ಯಾರೂ ಭೇಟಿ ಮಾಡಕೂಡದೆಂದು ಜಿಲ್ಲಾಡಳಿತ ವಿಧಿಸಿರುವ ನಿಷೇಧಾಜ್ಞೆಯ ಫಲವಾಗಿ ಆದಿವಾಸಿಗಳು ಅಕ್ಷರಶಃ ಕಂಗಾಲಾಗಿದ್ದಾರೆ.

ನಿಷೇಧಾಜ್ಞೆಯಿಂದಾಗಿ ಹೋರಾಟಕ್ಕೆ ನೇತೃತ್ವಕೊಟ್ಟಿದ್ದ ನಟ ಚೇತನ್ ರನ್ನು ತಡೆದ ಪೊಲೀಸರು ದಿಡ್ಡಳ್ಳಿಯಿಂದ ಹೊರಹಾಕಿದ್ದಾರೆ. ಪೊಲೀಸರ ಕ್ರಮ ಖಂಡಿಸಿದ ಪೊಲೀಸರು ಹಾಗು ಆದಿವಾಸಿಗಳ ನಡುವೆ ಮಾತಿನ ಚಕಮಕಿ ನಡೆದಿದ್ದು, ನಮ್ಮ ಬಗ್ಗೆ ಕಾಳಜಿಯಿ ಇರುವ ನಾಯಕರಿಗೆ ನಿರ್ಬಂಧ ಎಂದ ಮೇಲೆ ನಮ್ಮ ಮೇಲೆ ಪ್ರೀತಿಯಿಲ್ಲದ ಅಧಿಕಾರಿಗಳೂ ಬರುವುದು ಬೇಡ ಎಂದು ಆದಿವಾಸಿಗಳು ಆಗ್ರಹಿಸಿದ್ದಾರೆ.

ಹೋರಾಟ ನಿಂತು ಆರು ದಿನಗಳ ಬಳಿಕ ಗಿರಿಜನರ ಭೇಟಿಯಾಗಲು ಇಂದು ಬೆಳಗ್ಗೆ ಚೇತನ್ ಬಂದಿದ್ದರು. ಜಿಲ್ಲಾಡಳಿತ ನೀಡಿದ ಭರವಸೆ ಮೇಲೆ ನಡೆದಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಆದಿವಾಸಿಗಳಿಂದ ಮಾಹಿತಿ ಪಡೆದ ಚೇತನ್ ಅವರೊಂದಿಗೆ ತಿಂಡಿ ತಿಂದು ಕುಶಲೋಪರಿ ವಿಚಾರಿಸಿ ಮುಂದಿನ ಹೋರಾಟಗಳ ಬಗ್ಗೆ ಚರ್ಚೆ ನಡೆಸುತ್ತಿದ್ದರು.

ಈ ವೇಳೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ನಿಷೇಧಾಜ್ಞೆ ಇದೆ ಇಲ್ಲಿಂದ ಹೊರಡಿ ಎಂದು ಮನವಿಮಾಡಿದರು. ಇದಕ್ಕೆ ಚೇತನ್, ನಾನು ಸಮಾಜ ಕಲ್ಯಾಣ ಇಲಾಖೆ ಸಚಿವರೊಂದಿಗೆ ಮಾತನಾಡಿ ಬಂದಿದ್ದೇನೆ ಎಂದು ತಿಳಿಸಿದರು. ಅದಕ್ಕೆ ಪೊಲೀಸರು ಒಪ್ಪದೇ ಇದ್ದಾಗ ಚೇತನ್ ಒತ್ತಾಯಪೂರ್ವಕವಾಗಿ ಅಲ್ಲಿಂದ ತೆರಳಬೇಕಾಯಿತು.

ನಂತರ ಪ್ರತಿಕ್ರಿಯಿಸಿದ ಚೇತನ್, ನಾನು ಕಾನೂನನ್ನು ಗೌರವಿಸುತ್ತೇನೆ. ಹೀಗಾಗಿ ಇಲ್ಲಿಂದ ಹೋಗುತ್ತೇನೆ. ಆದರೆ ಇದು ಸರಿಯಾದ ಕ್ರಮವಲ್ಲ. ಗಿರಿಜನರು ತಮ್ಮ ಹಕ್ಕುಗಳ ಬಗ್ಗೆ ಜಾಗೃತರಾಗುವುದನ್ನು ತಡೆಯಲು ಹೀಗೆ ಮಾಡಲಾಗುತ್ತಿದೆ. ಈ ಬಗ್ಗೆ ಸಚಿವರೊಂದಿಗೆ ಮಾತನಾಡುತ್ತೇನೆ. ಸರ್ಕಾರ ತಾನುಕೊಟ್ಟ ಭರವಸೆಯಂತೆ ಕೂಡಲೆ ಇವರಿಗೆ ಶಾಶ್ವತ ಪುನರ್ವಸತಿ ಕಲ್ಪಿಸಲಿ ಎಂದು ಆಗ್ರಹಿಸಿದರು.

ನಮ್ಮಬಗ್ಗೆ ಕಾಳಜಿಯಿಟ್ಟು ಅವರು ಇಲ್ಲಿಗೆ ಬಂದಿದ್ದಾರೆ. ಆದರೆ ನಮ್ಮ ಬಗ್ಗೆ ಕಾಳಜಿಯಿಲ್ಲದವರನ್ನು ಭೇಟಿ ಮಾಡಲು ಅವಕಾಶ ನೀಡುತ್ತಾರೆ. ಇವರನ್ನು ಯಾಕೆ ಬಿಡಲಿಲ್ಲ ಎಂದು ಆದಿವಾಸಿ ಮುಖಂಡರಾದ ಸ್ವಾಮಿ ಪ್ರಶ್ನಿಸಿದ್ದಾರೆ.

Comments are closed.