ಕರ್ನಾಟಕ

ಐಟಿ ದಾಳಿ ವೇಳೆ ಸಿಕ್ಕಿಬಿದ್ದ ಭ್ರಷ್ಟ ಇಬ್ಬರು ಅಧಿಕಾರಿಗಳ ಅಮಾನತು

Pinterest LinkedIn Tumblr

jaya-chikkarayappa

ಬೆಳಗಾವಿ: ಆದಾಯ ತೆರಿಗೆ ಅಧಿಕಾರಿಗಳ ದಾಳಿ ವೇಳೆ ಸಿಕ್ಕಿಬಿದ್ದಿದ್ದ ಸರ್ಕಾರಿ ಅಧಿಕಾರಿಗಳನ್ನು ಅಮಾನುತು ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಆದಾಯ ತೆರಿಗೆ ದಾಳಿ ಸಂದರ್ಭದಲ್ಲಿ ಅಪಾರ ಸಂಪತ್ತು ಸಿಕ್ಕಿದ್ದ ಇಬ್ಬರು ಅಧಿಕಾರಿಗಳನ್ನು ಅಮಾನತ್ತು ಮಾಡಬೇಕು ಎಂಬ ವಿಪಕ್ಷಗಳ ಆಗ್ರಹಕ್ಕೆ ಸರ್ಕಾರ ಮಣಿದಿದ್ದು, ಈ ಅಧಿಕಾರಿಗಳನ್ನು ಅಮಾನತ್ತು ಮಾಡಲಾಗಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ವಿಧಾನ ಪರಿಷತ್ತಿನಲ್ಲಿಂದು ಪ್ರಕಟಿಸಿದರು.

ಆದಾಯ ತೆರಿಗೆ ದಾಳಿ ಸಂದರ್ಭದಲ್ಲಿ ಕೋಟ್ಯಾಂತರ ರೂ. ನಗದು ಹಣ ಹಾಗೂ ಚಿನ್ನಾಭರಣಗಳು ದೊರೆತ ಹಿನ್ನೆಲೆಯಲ್ಲಿ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಚಿಕ್ಕರಾಯಪ್ಪ ಹಾಗೂ ಲೋಕೋಪಯೋಗಿ ಇಲಾಖೆಯ ಹೆದ್ದಾರಿ ಯೋಜನೆಯ ಮುಖ್ಯ ಯೋಜನಾ ಅಧಿಕಾರಿ ಎಸ್.ಸಿ. ಜಯಚಂದ್ರ ಅವರನ್ನು ಸೇವೆಯಿಂದ ಅಮಾನತ್ತು ಮಾಡಲಾಗಿದೆ.

ವಿಧಾನ ಪರಿಷತ್ತಿನಲ್ಲಿಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್, ಈ ಇಬ್ಬರು ಅಧಿಕಾರಿಗಳನ್ನು ಅಮಾನತ್ತು ಮಾಡಿರುವುದಾಗಿ ಪ್ರಕಟಿಸಿದರು. ಇದಕ್ಕೂ ಮೊ‌ದಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಲೋಕೋಪಯೋಗಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಅವರ ಆಪ್ತವಲಯದ ಅಧಿಕಾರಿಗಳಾದ ಚಿಕ್ಕರಾಯಪ್ಪ ಹಾಗೂ ಜಯಚಂದ್ರ ಅವರ ನಿವಾಸದ ಮೇಲೆ ನಡೆದಿರುವ ಆದಾಯ ತೆರಿಗೆ ದಾಳಿ ಪ್ರಕರಣ ವಿಧಾನ ಪರಿಷತ್ತಿನಲ್ಲಿಂದು ಪ್ರತಿಧ್ವನಿಸಿದ್ದು, ಈ ಅಧಿಕಾರಿಗಳನ್ನು ಅಮಾನತ್ತು ಮಾಡುವಂತೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಆಗ್ರಹಿಸಿದವು.

ಇಂದು ಸದನ ಆರಂಭವಾಗುತ್ತಿದ್ದಂತೆಯೇ ಸರ್ಕಾರದ ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳ ಮೇಲೆ ನಡೆದಿರುವ ಆದಾಯ ತೆರಿಗೆ ದಾಳಿಯನ್ನು ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಅವರು, ಐಟಿ ಅಧಿಕಾರಿಗಳು ಚಿಕ್ಕರಾಯಪ್ಪ ಹಾಗೂ ಜಯಚಂದ್ರ ಅವರ ನಿವಾಸದ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ 6 ಕೋಟಿ ರೂ. ನಗದು ಹಣ ಸಿಕ್ಕಿದೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಸಿಕ್ಕಿರುವ ಹಣ ಯಾರದ್ದು. ಕೂಡಲೇ ಈ ಇಬ್ಬರು ಅಧಿಕಾರಿಗಳನ್ನು ಅಮಾನತ್ತು ಮಾಡಿ ಎಂದು ಆಗ್ರಹಿಸಿದರು.

ವಿಪಕ್ಷ ನಾಯಕ ಈಶ್ವರಪ್ಪ ಅವರ ಮಾತಿಗೆ ಧ್ವನಿಗೂಡಿಸಿದ ಜೆಡಿಎಸ್‌ನ ಬಸವರಾಜ ಹೊರಟ್ಟಿ ಅವರು, ನಿಮ್ಮದೇ ಸರ್ಕಾರ ಅಧಿಕಾರದಲ್ಲಿದೆ. ಭ್ರಷ್ಟರನ್ನು ಅಮಾನತ್ತು ಮಾಡಲು ತೊಂದರೆ ಏನು ಎಂದು ಸಭಾನಾಯಕ ಡಾ. ಜಿ. ಪರಮೇಶ್ವರ್ ಅವರನ್ನು ಪ್ರಶ್ನಿಸಿದರು.

ಕ್ರಮ ಕೈಗೊಳ್ಳಲು ಆಗಲ್ಲ ಎಂದು ನಾವು ಹೇಳಿಲ್ಲ. ವಿವರವಾದ ಮಾಹಿತಿಯನ್ನು ಕೇಳಿದ್ದೇವೆ. ಮಾಹಿತಿ ಬಂದ ಮೇಲೆ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಡಾ. ಜಿ. ಪರಮೇಶ್ವರ್ ಹೇಳಿದರು.

ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಕಾಂಗ್ರೆಸ್‌ನ ವಿ.ಎಸ್. ಉಗ್ರಪ್ಪ ಈ ದಾಳಿಯ ಬಗ್ಗೆ ಮಾತನಾಡಲು ಮುಂದಾದಾಗ ಅದಕ್ಕೆ ಸಭಾಪತಿ ಡಿ.ಎಚ್. ಶಂಕರಮೂರ್ತಿ ಅವರು ಅವಕಾಶ ನೀಡದಿದ್ದುದು ಉಗ್ರಪ್ಪನವರ ಸಿಟ್ಟಿಗೆ ಕಾರಣವಾಗಿ ಸಭಾಪತಿಯವರು ಏಕಪಕ್ಷೀಯವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಈ ಹಂತದಲ್ಲಿ ಆಡಳಿತ ಹಾಗೂ ವಿರೋಧ ಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಒಂದು ಹಂತದಲ್ಲಿ ಪ್ರತಿಪಕ್ಷ ನಾಯಕ ಈಶ್ವರಪ್ಪ ಅವರು ಆದಾಯ ತೆರಿಗೆ ದಾಳಿಗೆ ಸಂಬಂಧಿಸಿದಂತೆ ಪತ್ರಿಕಾ ವರದಿಗಳನ್ನು ಸದನದಲ್ಲಿ ಪ್ರದರ್ಶಿಸಿ ಅಧಿಕಾರಿಗಳ ಅಮಾನತ್ತಿಗೆ ಒತ್ತಾಯಿಸಿದರು. ಸರ್ಕಾರ ಕಾನೂನಿನಂತೆ ಕ್ರಮ ಕೈಗೊಳ್ಳಲಿದೆ. ಸಂಜೆಯ ಒಳಗೆ ಏನು ಕ್ರಮ ಎನ್ನುವುದನ್ನು ಮಾಹಿತಿ ನೀಡುತ್ತೇನೆ ಎಂದು ಗೃಹಸಚಿವ ಡಾ. ಜಿ. ಪರಮೇಶ್ವರ್ ಭರವಸೆ ನೀಡಿದ ನಂತರ ಈ ಗದ್ದಲ ತಣ್ಣಗಾಯಿತು.

Comments are closed.