ಕರ್ನಾಟಕ

ನೋಟಿಗಾಗಿ ಪರದಾಟ: ಎಟಿಎಂಗೆ ಮುಗಿ ಬಿದ್ದ ಜನ

Pinterest LinkedIn Tumblr

bank

ಬೆಂಗಳೂರು: 500 ಮತ್ತು 1000 ನೋಟುಗಳ ರದ್ದು ಮಾಡಿದ ಕೇಂದ್ರ ಸರ್ಕಾರದ ಕ್ರಮದಿಂದ ಸಾರ್ವಜನಿಕರಲ್ಲಿ ಉಂಟಾಗಿರುವ ಗೊಂದಲ ಮುಂದುವರೆದಿರುವ ನಡುವೆಯೇ ಇಂದಿನಿಂದ ಕಾರ್ಯಾರಂಭ ಮಾಡಿರುವ ಎಟಿಎಂಗಳಿಂದ ಹಣ ಪಡೆಯಲು ಸಾರ್ವಜನಿಕರು ಮುಗಿಬಿದ್ದಿದ್ದಾರೆ.

ಬೆಂಗಳೂರು ಸೇರಿದಂತೆ ಇಡೀ ದೇಶದಾದ್ಯಂತ ಎರಡು ದಿನಗಳ ಕಾಲ ಸ್ಥಗಿತಗೊಂಡಿದ್ದ ಎಟಿಎಂಗಳು ಇಂದು ಕಾರ್ಯಾರಂಭ ಮಾಡಲಿವೆ ಎಂಬ ಸೂಚನೆ ಹಿನ್ನೆಲೆಯಲ್ಲಿ ಸಾರ್ವಜನಿಕರು ಬೆಳಿಗ್ಗೆಯಿಂದಲೇ ಎಟಿಎಂಗಳ ಮುಂದೆ ಜಮಾಯಿಸಿ ಸರತಿ ಸಾಲಿನಲ್ಲಿ ನಿಂತಿರುವ ದೃಶ್ಯಗಳು ಸಾಮಾನ್ಯವಾಗಿವೆ.

ಆದರೆ, ಕೆಲವು ಎಟಿಎಂಗಳಲ್ಲಿ ಹಣ ಇಲ್ಲದಿರುವುದು, ಇದ್ದ ಹಣ ಖಾಲಿಯಾಗಿರುವುದರಿಂದ ಸಾರ್ವಜನಿಕರು ತೀವ್ರ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ಡೆಬಿಟ್ ಕಾರ್ಡ್‌ಗಳನ್ನು ಹಿಡಿದು ಎಟಿಎಂಗಳ ಮುಂದೆ ಗಂಟೆ ಗಟ್ಟಲೆ ಸಾರ್ವಜನಿಕರು ಕಾಯುತ್ತಿದ್ದಾರೆ.

ಆಯಾ ಬ್ಯಾಂಕುಗಳ ಎಟಿಎಂಗಳಿಗೆ ಬ್ಯಾಂಕುಗಳು ಸಾಕಷ್ಟು ಹಣ ತುಂಬದಿರುವುದು ಸಮಸ್ಯೆ ಉಲ್ಬಣಕ್ಕೆ ಕಾರಣವಾಗಿದೆ. ಕೆಲವು ಎಟಿಎಂಗಳ ಮುಂದೆ `ಔಟ್ ಆಫ್ ಆರ್ಡರ್’ ಎಂಬ ಫಲಕಗಳನ್ನು ತೂಗು ಹಾಕಿದ್ದರೆ, ಮತ್ತೆ ಕೆಲವು ಎಟಿಎಂಗಳಲ್ಲಿನ ಭದ್ರತಾ ಸಿಬ್ಬಂದಿ ನಗದು ಲಭ್ಯವಿಲ್ಲ ಎಂದು ಹೇಳಿ ಕಳುಹಿಸುತ್ತಿದ್ದದ್ದು ಕಂಡು ಬಂದಿದೆ.

ಬೆಳಿಗ್ಗೆಯಿಂದಲೇ ಎಸ್‌ಬಿಎಂ, ಎಸ್‌ಬಿಐ, ಎಚ್‌ಡಿಎಫ್‌ಸಿ, ಕಾರ್ಪೊರೇಷನ್ ಬ್ಯಾಂಕ್ ಮುಂತಾದ ಬ್ಯಾಂಕುಗಳ ಎಟಿಎಂಗಳ ಮುಂದೆ ಸಾಲುಗಟ್ಟಿ ಸಾರ್ವಜನಿಕರು ನಿಂತಿರುವ ದೃಶ್ಯ ಸಾಮಾನ್ಯವಾಗಿದೆ.

ಕೆಲವು ಎಟಿಎಂಗಳಲ್ಲಿ ಹೊಸ ವಿನ್ಯಾಸದ ನೋಟುಗಳ ಲಭ್ಯತೆ ಇಲ್ಲವಾಗಿದೆ ಎಂಬ ಮಾತುಗಳು ಕೇಳಿಬಂದಿವೆ. ಉಳಿದ ಎಟಿಎಂಗಳಲ್ಲಿ 100 ರೂ.ಗಳ ನೋಟುಗಳು ಲಭ್ಯವಾಗುತ್ತಿವೆ.

500 ಮತ್ತು 1000 ನೋಟುಗಳ ಚಲಾವಣೆ ರದ್ದು ಮಾಡಿ ಮೂರು ದಿನಗಳಾದರೂ ದಿನ ನಿತ್ಯದ ಖರ್ಚುಗಳಿಗೆ ಹಣ ಇಲ್ಲದೆ ಪರದಾಡುತ್ತಿರುವ ಜನರು ಎಟಿಎಂಗಳ ಮೊರೆ ಹೋಗಿದ್ದರು. ಅಲ್ಲೂ ಹಣ ಸಿಗದಿದ್ದರಿಂದ `ಸಪ್ಪೆ ಮೋರೆ’ ಹಾಕ್ಕೊಂಡು ನಿಂತಿರುವ ಸ್ಥಿತಿ ಎದುರಾಗಿದೆ.

ಮತ್ತೊಂದೆಡೆ ಹಳೇ ನೋಟುಗಳ ಬದಲಾವಣೆಗೆ ಸಾರ್ವಜನಿಕರು ಬ್ಯಾಂಕುಗಳಿಗೆ ಮುಗಿ ಬಿದ್ದಿದ್ದಾರೆ. ನೂರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿರುವುದರಿಂದ ನೂಕು ನುಗ್ಗಲು ಉಂಟಾಗಿದೆ. ಇದನ್ನು ನಿಭಾಯಿಸಲು ಭದ್ರತಾ ಸಿಬ್ಬಂದಿ ಹರ ಸಾಹಸ ಮಾಡುತ್ತಿದ್ದಾರೆ.

ತಮ್ಮಲ್ಲಿನ ನಗದು ಹಣವನ್ನು ಬ್ಯಾಂಕುಗಳಿಗೆ ಜಮಾ ಮಾಡಲು ಗ್ರಾಹಕರು ಇಂದೂ ಕೂಡ ಬ್ಯಾಂಕುಗಳಲ್ಲಿ ಜಮಾಯಿಸಿದ್ದು ಕಂಡು ಬಂತು.

ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ದೇಶದೆಲ್ಲೆಡೆ ಇಂತಹ ವಾತಾವರಣ ನಿರ್ಮಾಣವಾಗಿದೆ. ದೆಹಲಿಯ ಹಲವು ಭಾಗಗಳಲ್ಲಿ ಎಸ್‌ಬಿಐ, ಹೆಚ್‌ಡಿಎಫ್‌ಸಿ, ಬ್ಯಾಂಕ್ ಆಫ್ ಬರೋಡ, ಎಸ್ ಬ್ಯಾಂಕ್, ದೇನಾ ಬ್ಯಾಂಕ್ ಮುಂತಾದ ಎಟಿಎಂಗಳ ಬಾಗಿಲುಗಳು ಮುಚ್ಚಿವೆ. ಕಾರಣ ಹಣ ತುಂಬದೇ ಇರುವುದು ಇದಕ್ಕೆ ಕಾರಣ ಎಂದು ಹೇಳಲಾಗಿದೆ.

ಎಟಿಎಂಗಳಿಂದ ಇಂದಿನಿಂದವಲೇ ದಿನಕ್ಕೆ 2 ಸಾವಿರ ರೂ. ಹಣ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಬ್ಯಾಂಕುಗಳಲ್ಲಿ ನೋಟುಗಳ ಬದಲಾವಣೆ ಮಾಡಿಕೊಂಡವರ ಮೊತ್ತ ಎಷ್ಟೇ ಇದ್ದರೂ 4 ಸಾವಿರ ರೂ.ಗಳನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ.

Comments are closed.