ಕೇರಳ ಬಯಲು ಶೌಚಮುಕ್ತ ರಾಜ್ಯವಾಗಿ ಹೊರಹೊಮ್ಮಲಿದೆ. ಈ ನಿಟ್ಟಿನಲ್ಲಿ ಅಗತ್ಯವಿರುವ ಎಲ್ಲ ಸಿದ್ಧತೆಗಳನ್ನು ಕೈಗೊಂಡಿರುವ ಕೇರಳ ಸರ್ಕಾರ, ರಾಜ್ಯೋತ್ಸವ ದಿನದಂದು ಈ ವಿಷಯವನ್ನು ಬಹಿರಂಗಪಡಿಸಿದೆ.
ಸರ್ಕಾರ ಈಗಾಗಲೇ 941 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 2 ಲಕ್ಷ ಶೌಚಾಲಯ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸಿದೆ. ರಾಷ್ಟ್ರದಲ್ಲಿ ಭೌಗೋಳಿಕವಾಗಿ ಚಿಕ್ಕದಾಗಿದ್ದರೂ ಅತಿಹೆಚ್ಚು ಜನಸಾಂಧ್ರತೆಯುಳ್ಳ ಕೇರಳ ರಾಜ್ಯ ಈ ವಿಷಯವನ್ನು ಸವಾಲಾಗಿ ಪರಿಗಣಿಸಿದ್ದು, ಜನಸಂಖ್ಯೆಗೆ ಅನುಗುಣವಾಗಿ ಶೌಚಾಲಯ ನಿರ್ಮಾಣಕ್ಕೆ ಮುಂದಾಗಿದೆ.
ಕೇರಳದ ಅಟ್ಟಿಪ್ಪಾಡಿ ಜಿಲ್ಲಾ ವ್ಯಾಪ್ತಿಯ ಕುಗ್ರಾಮಗಳು ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಇನ್ನುಳಿದಂತೆ ತೀರ ಪ್ರದೇಶಗಳಾದ ಆಝಪ್ಪುಝ ಜಿಲ್ಲೆಯಲ್ಲಿ ಶೌಚಾಲಯ ನಿರ್ಮಾಣವನ್ನು ಸವಾಲಾಗಿ ಪರಿಗಣಿಸಿರುವ ಸರ್ಕಾರ ಶೌಚಾಲಯ ನಿರ್ಮಾಣಕ್ಕೆ ಹೆಚ್ಚುವರಿ ಹಣ ವ್ಯಯಿಸಿದೆ.
ರಾಜ್ಯದ ಗ್ರಾಮ ಪಂಚಾಯತ್‍ಗಳು ಶೌಚಾಲಯ ನಿರ್ಮಾಣ ಕಾಮಗಾರಿಯಲ್ಲಿ ಪ್ರಮುಖ ಪಾತ್ರವಹಿಸಿದ್ದು, ಸ್ಥಳೀಯ ಸಂಘ ಸಂಸ್ಥೆಗಳು ಸ್ವಸಹಾಯ ಗುಂಪುಗಳ ಸಹಕಾರದೊಂದಿಗೆ ಶೌಚಾಲಯ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಸ್ಥಳೀಯ ಸಂಸ್ಥೆಗಳ ಸಚಿವ ಕೆ.ಟಿ. ಜಲೀಲ್ ಹೇಳುತ್ತಾರೆ.
ಕೇರಳ ಸರ್ಕಾರ ಈ ಸಂಬಂಧ ಪೂರ್ವಭಾವಿಯಾಗಿ ಎಲ್ಲಾ ಯೋಜನೆಗಳನ್ನು ಸಿದ್ಧಪಡಿಸಿಕೊಂಡಿದ್ದು, ಸ್ವಚ್ಛ ಭಾರತ ಮಿಷನ್ ಸರ್ಕಾರದ ಯೋಜನೆಗೆ ಪೂರಕವಾಗಿ ಅಗತ್ಯ ಅನುದಾನವನ್ನು ಸಹ ಬಿಡುಗಡೆ ಮಾಡಿತ್ತು. ಅನುದಾನ ವರ್ಗಾವಣೆಗೆ ಸ್ವಲ್ಪ ಕಾಲಾವಕಾಶ ತಗುಲಲಿದ್ದು, ಗ್ರಾಮ ಪಂಚಾಯತ್‍ಗಳು ಸ್ಥಳೀಯ ಜನರಿಗೆ ತಮ್ಮ ಸ್ವಂತ ಹಣದಲ್ಲಿ ಶೌಚಾಲಯ ನಿರ್ಮಾಣ ಪೂರ್ಣಗೊಳಿಸಲು ಸೂಚಿಸಿದ್ದು, ಅನುದಾನ ಬಿಡುಗಡೆಯಾದ ನಂತರ ಶೌಚಾಲಯ ನಿರ್ಮಾಣಕ್ಕೆ ತಗುಲಿದ ಹಣವನ್ನು ಫಲಾನುಭವಿಗಳಿಗೆ ಬಿಡುಗಡೆ ಮಾಡಲಾಗುವುದು ಎಂದು ಸ್ವಚ್ಛ ಭಾರತದ ರಾಜ್ಯ ನೋಡೆಲ್ ಹಾಗೂ ಯೋಜನೆ ನಿರ್ವಹಣಾಧಿಕಾರಿ ಎಲ್.ಪಿ.ಚಿತ್ತರ್ ತಿಳಿಸಿದ್ದಾರೆ.
ರಾಜ್ಯ ಸರ್ಕಾರದ ಸ್ವಚ್ಛ ಭಾರತ ಅಭಿಯಾನ, ಸ್ವಚ್ಛ ಮಿಷನ್ ಯೋಜನೆಯನ್ನು ಅನುಷ್ಠಾನಗೊಳಿಸಿದ್ದು, ಅನುದಾನವನ್ನು ಸ್ಥಳೀಯ ಸಂಸ್ಥೆಗಳ ಮೂಲಕ ಹಂಚುವುದಾಗಿ ತಿಳಿಸಿದೆ. ಕುಟುಂಬಶ್ರೀ ಯೋಜನೆಯ ಕಾರ್ಯಕರ್ತರು ಸ್ಥಳೀಯ ಸರ್ಕಾರದೊಂದಿಗೆ ಈ ನಿಟ್ಟಿನಲ್ಲಿ ಕೈಜೋಡಿಸಿ, ಬಡತನವನ್ನು ಬೇರುಸಹಿತ ಕಿತ್ತುಹಾಕುವುದರೊಂದಿಗೆ ಮಹಿಳೆಯರಿಗೆ ಉದ್ಯೋಗ ಕಲ್ಪಿಸಲು ಮುಂದಾಗಿದ್ದು, ಶೌಚಾಲಯ ನಿರ್ಮಾಣ ಕಾಮಗಾರಿ ಕುರಿತು ಮಹಿಳೆಯರಿಗೂ ಸಹ ತರಬೇತಿ ನೀಡುತ್ತಿದೆ.
ಕುಟುಂಬಶ್ರೀ ಈ ನಿಟ್ಟಿನಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದು, ಶೌಚಾಲಯ ನಿರ್ಮಾಣ ಕಾಮಗಾರಿಯ ಕಾರ್ಯಚಟುವಟಿಕೆಗಳಲ್ಲಿ ಬಹು ಸಹಕಾರಿಯಾಗಿ ಕೆಲಸ ನಿರ್ವಹಿಸುತ್ತಿದೆ. ಕಡಿಮೆ ಆದಾಯ ಗುಂಪಿಗೆ ಸೇರಿರುವ ಮಹಿಳೆಯರೇ ಕುಟುಂಬ ಶ್ರೀ ಯೋಜನೆಯ ಪ್ರಮುಖ ಫಲಾನುಭವಿಗಳಾಗಿದ್ದು, ಅವರನ್ನು ತಲುಪುವ ಮೂಲಕ ಈ ಯೋಜನೆಯ ಯಶಸ್ವಿಗೆ ಎಲ್ಲ ಕ್ರಮಕೈಗೊಳ್ಳಲಾಗಿದೆ ಎಂದು ಸ್ವಚ್ಛ ಮಿಷನ್‍ನ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಕೆ.ವಾಸುಕಿ ತಿಳಿಸಿದ್ದಾರೆ.
ಗುಡ್ಡಗಾಡುಪ್ರದೇಶಗಳು ನಗರ ಪ್ರದೇಶಗಳಿಗಿಂತ ಸಾಕಷ್ಟು ಅಂತರದಲ್ಲಿದ್ದು, ಈ ಯೋಜನೆಯನ್ನು ಅವರಿಗೂ ತಲುಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಾಗುತ್ತಿದೆ. ಆ ಪ್ರದೇಶಗಳಲ್ಲಿ ನೀರಿನ ಅಭಾವ ಇರುವ ಹಿನ್ನೆಲೆಯಲ್ಲಿ ಸ್ಥಳೀಯ ಮಹಿಳೆಯರು ತಮ್ಮ ದಿನನಿತ್ಯದ ಚಟುವಟಿಕೆಗಳಿಗಾಗಿ ನೀರನ್ನು ದೂರದಿಂದ ಕೊಂಡು ತಂದು ಶೌಚಾಲಯ ಹಾಗೂ ಇನ್ನಿತರ ಕುಟುಂಬದ ಅಗತ್ಯತೆಗಳನ್ನು ಪೂರೈಸಿಕೊಳ್ಳಬೇಕಾದ ಪರಿಸ್ಥಿತಿ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೆಲವು ಪ್ರದೇಶಗಳಲ್ಲಿ ಶೌಚಾಲಯಗಳನ್ನು ನಿರ್ಮಾಣ ಮಾಡಿದ್ದರೂ ಅವುಗಳ ನಿರಂತರ ಬಳಕೆಯ ಕೊರತೆಯಿಂದಾಗಿ ಅವುಗಳು ಹಾಳಾಗಿವೆ. ಇದಕ್ಕೆ ಪ್ರಮುಖ ಕಾರಣವೆಂದರೆ, ಗ್ರಾಮದ ಹಿರಿಯ ತಲೆಮಾರಿನ ಜನರು ಬಯಲು ಶೌಚಾಲಯವನ್ನೇ ಇಷ್ಟಪಡುವುದರಿಂದ ನಿರ್ಮಾಣ ಮಾಡಿರುವ ಶೌಚಾಲಯಗಳು ಉಪಯೋಗಿಸಲು ಸಾಧ್ಯವಿಲ್ಲದಂತಾಗಿದೆ. ಅಲ್ಲದೆ ಗಿಡಗಂಟಿಗಳು ನಾಶವಾಗಿರುವ ಹಿನ್ನೆಲೆಯಲ್ಲಿಬಯಲು ಶೌಚಾಲಯ ಮಹಿಳೆಯರಿಗೆ ಕಷ್ಟಕರವಾಗಿ ಪರಿಣಮಿಸಿದೆ.
ಈ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಯೋಜನಾಧಿಕಾರಿ ಡಾ.ಸೀಮಾ ಭಾಸ್ಕರನ್, 2014ರಲ್ಲಿ ರಾಜ್ಯದಲ್ಲಿ ಅಪೌಷ್ಟಿಕತೆ ಪರಿಸ್ಥಿತಿ ನಿರ್ಮಾಣವಾಗಿದ್ದು, ಈ ಸಮಸ್ಯೆ ಪರಿಹಾರಕ್ಕಾಗಿ ಅಟ್ಟಪ್ಪಡಿ ಬ್ಲಾಕ್‍ನಲ್ಲಿ ಸಮುದಾಯ ಅಡುಗೆ ಮನೆಗಳನ್ನು ನಿರ್ಮಿಸಿ ಗಿರಿಜನರಿಗಾಗಿ ವಸತಿ ಹಾಗೂ ಊಟದ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ. ಅದೇ ಸಮಯದಲ್ಲಿ ಬಯಲು ಶೌಚಾಲಯದಿಂದ ಆಗುವ ಗಂಭೀರ ಆರೋಗ್ಯ ಸಮಸ್ಯೆಗಳ ಕುರಿತು ಜನತೆಗೆ ಮಾಹಿತಿ ನೀಡಲಾಯಿತೆಂದು ತಿಳಿಸಿದ್ದಾರೆ.
ಗುಡ್ಡಗಾಡು ಪ್ರದೇಶಗಳಲ್ಲಿ ಜನರು ಪರಿವರ್ತನೆ ಹೊಂದುತ್ತಿರುವುದನ್ನು ಸೂಕ್ಷ್ಮವಾಗಿ ಪರಿಗಣಿಸಿರುವ ಸರ್ಕಾರ, ಬಯಲು ಶೌಚದಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಿದೆ ಎಂದು ತಿಳಿಸಿರುವ ಡಾ.ಭಾಸ್ಕರನ್ ಗಿರಿಜನಪ್ರದೇಶಗಳಲ್ಲಿರುವ ಯುವಕರು ಜೀವನೋಪಾಯಕ್ಕಾಗಿ ಅನ್ಯ ಮಾರ್ಗವಿಲ್ಲದೆ ಪರದಾಡುತ್ತಿರುವ ಹಿನ್ನೆಲೆಯಲ್ಲಿ ಶೌಚಾಲಯ ನಿರ್ಮಾಣ ಕಾಮಗಾರಿಗೆ ಅವರನ್ನು ಬಳಸಿಕೊಳ್ಳಲಾಗಿದೆ ಈ ನಿಟ್ಟಿನಲ್ಲಿ ಅವರಿಗೆ ಅಗತ್ಯ ತರಬೇತಿಯನ್ನು ನೀಡಿರುವುದಾಗಿ ಅವರು ತಿಳಿಸಿದ್ದಾರೆ.