ಕರ್ನಾಟಕ

ಮಕ್ಕಳಿಗೆ ಯಾವ ಸಮಯದಲ್ಲಿ ಯಾವ ಲಸಿಕೆ ನೀಡಬೇಕು : ಇಲ್ಲಿದೆ ಸಮಗ್ರ ಮಾಹಿತಿ.

Pinterest LinkedIn Tumblr

vaccinated_baby_1

ಮಂಗಳೂರು: ಹುಟ್ಟಿದ ಮಕ್ಕಳಿಗೆ ಯಾವುದೇ ಮಾರಕ ಕಾಯಿಲೆಗಳು ಬಾರದಂತೆ ರೋಗನಿರೋಧಕ ಶಕ್ತಿ ಹೆಚ್ಚಿಸುವ ಸಲುವಾಗಿ ವಿವಿಧ ಲಸಿಕೆಗಳನ್ನು ಹಾಕಿಸುವುದು ರೂಢಿ. ಆದರೆ ರಾಜ್ಯದಲ್ಲಿ ಶೇ.63ರಷ್ಟು ಮಕ್ಕಳಿಗೆ ಮಾತ್ರ ಲಸಿಕೆ ಹಾಕಿಸುತ್ತಿದ್ದಾರೆ. ಅದು ಹುಟ್ಟಿದ ಮೊದಲ ವರ್ಷದಲ್ಲಿ. ಉಳಿದ ಎಲ್ಲಾ ಮಕ್ಕಳಿಗೂ ಲಸಿಕೆ ಕೊಡಿಸುವಂತಾಗಬೇಕು, ಜನರಲ್ಲಿ ಹರಿವು ಮೂಡಿಸಬೇಕು ಎಂಬ ಧ್ಯೇಯದೊಂದಿಗೆ ವಿಶ್ವ ಲಸಿಕಾ ಸಪ್ತಾಹ ಆಚರಿಸಲಾಗುತ್ತದೆ.

ಮಗು ಹುಟ್ಟಿದ ಎರಡು ವಾರದೊಳಗೆ ಬಿಸಿಜಿ, ಪೋಲಿಯೋ ಲಸಿಕೆ ಹಾಕಲಾಗುತ್ತದೆ. ಯಕೃತ್‌ ಆರೋಗ್ಯಕ್ಕಾಗಿ ಬಿ ವೈರಾಣು ಸೋಂಕು ತಡೆಗಟ್ಟಲು ಹೆಪಟೈಟಿಸ್‌ ಬಿ ಲಸಿಕೆಯನ್ನು ಹೆರಿಗೆಯಾದ 2ರಿಂದ 3 ದಿನಗಳಲ್ಲಿ ಕೊಡಬೇಕಾಗುತ್ತದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಲಸಿಕೆಗಳನ್ನು ಉಚಿತವಾಗಿ ಕೊಡುತ್ತಾರೆ. ಆದರೆ ಮನೆಯಲ್ಲಿ ಹೆರಿಗೆ ಆದರೆ ಶೇ4 ರಷ್ಟು ಮಕ್ಕಳು ಲಸಿಕೆಯಿಂದ ವಂಚಿತರಾಗುತ್ತಾರೆ. ನಂತರ ಟ್ರಿಪಲ್‌ ಆ್ಯಂಟಿಜನ್‌, ನಾಯಿಕೆಮ್ಮು, ಗಂಟಲು ಮಾರಿ ಮತ್ತು ಧನುರ್ವಾಯು ಜೊತೆಗೆ ಪೋಲಿಯೋ ಹನಿ ಹಾಕಲಾಗುತ್ತದೆ.

ಹಿಮಾಫಿಲಸ್‌ ಇನ್‌ಫ್ಲುಯೆನ್ಸಾ ಬಿ ಬ್ಯಾಕ್ಟೀರಿಯಾ ತಡೆಯಲು, ಹೈಪಟೈಟಿಸ್ ಬಿ 2ನೇ ಡೋಸ್‌ ಕೊಡಲಾಗುತ್ತದೆ. ಈ ಎಲ್ಲಾ ಲಸಿಕೆಗಳನ್ನು ಒಂದೇ ಚುಚ್ಚುಮದ್ದಿನ ಮೂಲಕ ಕೊಡಬಹುದು. ಇದಕ್ಕೆ ಪೆಂಟಾವೆಲೆಂಟ್‌ ವ್ಯಾಕ್ಸಿನ್‌ ಎಂದು ಕರೆಯಲಾಗುತ್ತದೆ. ಇದರಿಂದ ಪದೇ ಪದೇ ಲಸಿಕಾ ಕೇಂದ್ರಕ್ಕೆ ಬರುವ ಅಗತ್ಯವಿರುವುದಿಲ್ಲ. ಒಂದೂವರೆ (ಮೊದಲ ಡೋಸ್‌), ಎರಡೂವರೆ, ಮೂರುವರೆ ತಿಂಗಳಿಗೆ ಪೋಲಿಯೋ ಹನಿ ಮತ್ತು ಪೆಂಟಾವೆಲೆಂಟ್‌ ಚುಚ್ಚುಮದ್ದು ಹಾಕಿಸಬೇಕಾಗುತ್ತದೆ.

‘ದಡಾರದಂಥ ಮಾರಕ ಕಾಯಿಲೆ ಬಾರದಂತೆ 9ನೇ ತಿಂಗಳಲ್ಲಿ ಒಂದು ಲಸಿಕೆ ಹಾಕಿಸಬೇಕಾಗುತ್ತದೆ. ರಾಜ್ಯದಲ್ಲಿ 100 ಮಕ್ಕಳಲ್ಲಿ 77 ಮಕ್ಕಳಿಗೆ ಈ ಲಸಿಕೆ ಸಿಗುತ್ತಿದೆ. ಪೆಂಟಾವೆಲೆಂಟ್‌ ಲಸಿಕೆಯು ಶೇ83ರಷ್ಟು ಮಕ್ಕಳಿಗೆ ಸಿಗುತ್ತಿದೆ. ಅಗತ್ಯವಾಗಿ ಹಾಕಿಸಲೇಬೇಕಾದ ಬಿಸಿಜಿ, ಪೆಂಟಾವೆಲೆಂಟ್‌ ಹಾಗೂ ಮೀಸಲ್ಸ್ ಲಸಿಕೆಯನ್ನೂ ಹಾಕಿಸದ ಮಕ್ಕಳಿದ್ದಾರೆ. ಈ ಬಗ್ಗೆ ಜನರಲ್ಲಿ ಹರಿವು ಮೂಡಿಸಬೇಕಿದೆ. ನ್ಯುಮೋನಿಯಾ, ರೋಟಾ ವೈರಸ್‌, ಹೈಪಟೈಟಿಸ್‌ ಎ, ಚಿಕನ್‌ಪಾಕ್ಸ್‌, ಕಾಯಿಲೆಗಳಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ಸೌಲಭ್ಯವಿಲ್ಲ, ಇದಕ್ಕಾಗಿ ಖಾಸಗಿ ಆಸ್ಪತ್ರೆಗಳ ಅಥವಾ ವೈದ್ಯರ ಮೊರೆ ಹೋಗಬೇಕಾಗುತ್ತಿದೆ.

ನ್ಯೂಮೋಕಾಕಲ್‌ ಲಸಿಕೆ; ಇದು ಸಹ ಒಂದೂವರೆ ತಿಂಗಳಿನಿಂದ ಮೂರುವರೆ ತಿಂಗಳವರೆಗೆ ಮೂರು ಡೋಸ್‌ಗಳಲ್ಲಿ ಕೊಡಲಾಗುತ್ತದೆ. ನ್ಯುಮೋನಿಯಾ ಮತ್ತು ಮೆದುಳು ಜ್ವರ ತಡೆಗಟ್ಟಲು. ಒಂದೂವರೆ ವರ್ಷದ ನಂತರ ವರ್ಧಕ ಲಸಿಕೆಯಾಗಿ ಮುಂದುವರೆಸಲಾಗುತ್ತದೆ. ಹುಟ್ಟಿದ ಮಗುವಿನಿಂದ 20 ವರ್ಷಗಳ ವರೆಗೂ ಕೊಡುವ ಲಸಿಕೆಗಳಿವೆ. ಈ ಬಗ್ಗೆ ಜನರಲ್ಲಿ ಹರಿವು ಮೂಡಬೇಕು’

ಮಕ್ಕಳಿಗೆ ಗಂಟಲುಮಾರಿ, ನಾಯಿಕೆಮ್ಮು, ಧನುರ್ವಾಯು, ಪೋಲಿಯೋ, ಬಾಲಕ್ಷಯ, ದಡಾರ, ಹೆಪಟೈಟೀಸ್‌-ಬಿ, ಮೆದುಳುಜ್ವರ ಹಾಗೂ ನ್ಯುಮೋನಿಯಾ, ಉಂಟುಮಾಡುವ ಹಿಮಾಫಿಲಸ್‌ ಇನ್‌ಫ್ಲುಯೆನ್ಸಾ ಬಿ (ಹಿಬ್‌) ಬ್ಯಾಕ್ಟೀರಿಯಾ ವಿರುದ್ಧ ಹಾಗೂ ಗರ್ಭಿಣಿಯರಿಗೆ ಧನುರ್ವಾಯು ವಿರುದ್ಧ ಲಸಿಕೆ ನೀಡಲಾಗುತ್ತದೆ.

ಹೆಣ್ಣು ಮಕ್ಕಳಿಗೆ ಎಚ್‌ಪಿವಿ: 
‘ಸಾಮಾನ್ಯವಾಗಿ ಹೆಣ್ಣುಮಕ್ಕಳಿಗೆ ಎಂಟು ವರ್ಷ ತುಂಬಿದ ಮೇಲೆ ಕೊಡುವ ಲಸಿಕೆ ಹ್ಯುಮನ್‌ ಪ್ಯಾಪಿಲೋಮಾ ವೈರಸ್‌ (ಎಚ್‌ಪಿವಿ). ಗರ್ಭಕೋಶ ಕ್ಯಾನ್ಸರ್‌ ಬಾರದಂತೆ ತಡೆಗಟ್ಟಲು ಕೊಡುವ ಲಸಿಕೆ ಇದು. ಮೂರು ಡೋಸ್‌ಗಳಲ್ಲಿ ಕೊಡಲಾಗುತ್ತದೆ. ಈ ಲಸಿಕೆ ಸಹ ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿಲ್ಲ. ನ್ಯಾಷನಲ್‌ ಹೆಲ್ತ್‌ ಸರ್ವೆ (ಎನ್‌ಎಫ್‌ಎಚ್‌ಎಸ್‌ 4) ಪ್ರಕಾರ ರಾಜ್ಯದಲ್ಲಿ ಶೇ63 ರಿಂದ 77ರಷ್ಟು ಮಕ್ಕಳಿಗೆ ಮಾತ್ರ ಹುಟ್ಟಿದ ಮೊದಲ ವರ್ಷ ವಿವಿಧ ಕಾಯಿಲೆಗಳ ಲಸಿಕೆ ಹಾಕಿಸುತ್ತಿದ್ದಾರೆ.

ಬಿಸಿಜಿಯನ್ನು ಶೇ80 ರಷ್ಟು ಮಕ್ಕಳಿಗೆ ಹಾಕಿಸುತ್ತಿದ್ದಾರೆ. ಕೇಂದ್ರ ಸರ್ಕಾರದ ‘ಇಂದ್ರಧನುಷ್‌’ ಅಭಿಯಾನದ ಮೂಲಕ 77ಲಕ್ಷ ಮಕ್ಕಳಿಗೆ ಲಸಿಕೆ ಹಾಕಲಾಗಿದೆ. ಇದು ಹೈ ರಿಸ್ಕ್‌ ಡಿಸ್ಟ್ರಿಕ್ಟ್‌(ಶೇ50) ಎಂದು ಗುರ್ತಿಸಿರುವರ ಜಿಲ್ಲೆಗಳ ಪ್ರದೇಶಗಳಲ್ಲಿ. ಜೊತೆಗೆ 21 ಲಕ್ಷ ಗರ್ಭಿಣಿಯರಿಗೆ ಲಸಿಕೆ ಹಾಕಲಾಗಿದೆ. ಒಟ್ಟಾರೆ 2 ಕೋಟಿ ವ್ಯಾಕ್ಸಿನ್‌ ಕೊಟ್ಟಿದ್ದಾರೆ. ಒಂದನೇ ಹಂತ ಪೂರ್ಣಗೊಂಡಿದೆ.

2ನೇ ಹಂತ ಮುಗಿಯುವ ವೇಳೆಗೆ ಶೇ90 ರಷ್ಟು ಮಕ್ಕಳಿಗೆ ಉಪಯೋಗ ಆಗಬೇಕೆಂಬ ಗುರಿ ಹೊಂದಿದ್ದಾರೆ. ಮುಖ್ಯವಾಗಿ ಹಳ್ಳಿಗಳಲ್ಲಿನ, ವಲಸಿಗರ ಮಕ್ಕಳಿಗೆ ಲಸಿಕೆ ಸೌಲಭ್ಯ ಸಿಗಬೇಕಿದೆ. ಪೋಲಿಯೋ ಈಗಾಗಲೇ ನಿರ್ಮೂಲವಾಗಿದೆ, ಅದರಂತೆ ಇತರೆ ಕಾಯಿಲೆಗಳು ಕಣ್ಮರೆಯಾಗಬೇಕು,

ಮೊಬೈಲ್‌ ಸೇವೆ ಬಳಸಿಕೊಳ್ಳಿ: 
ಮಕ್ಕಳಿಗೆ ಸರಿಯಾದ ಸಮಯಕ್ಕೆ, ಯಾವ ವ್ಯಾಕ್ಸಿನ್‌, ಯಾವಾಗ ಕೊಡಿಸಬೇಕು ಎಂಬ ಬಗ್ಗೆ ಪೋಷಕರನ್ನು ನೆನಪಿಸಲು ಅನುಕೂಲವಾಗುವಂಥ ‘ಐಎಪಿ–ಇಮ್ಯುನೈಸ್‌ ಇಂಡಿಯಾ’ ಎಂಬ ಮೊಬೈಲ್‌ ಸೇವೆಯನ್ನು ಭಾರತೀಯ ಮಕ್ಕಳ ತಜ್ಞರ ಅಕಾಡೆಮಿ ಸಿದ್ಧಪಡಿಸಿದೆ. ಈ ಸೇವೆಯನ್ನು ಸದ್ಯ ಭಾರತ ಸರ್ಕಾರ ವಹಿಸಿಕೊಂಡಿದ್ದು, ಪೋಷಕರು ಇದರ ಸದುಪಯೋಗಪಡಿಸಿಕೊಳ್ಳಬಹುದು.

Comments are closed.