ಕರ್ನಾಟಕ

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಶ್ರೀನಿವಾಸ ಪ್ರಸಾದ್‌

Pinterest LinkedIn Tumblr

srinivas_prasad

ಬೆಂಗಳೂರು: ಸಚಿವ ಸಂಪುಟ ಪುನರ್‌ರಚನೆಯಿಂದ ಅಸಮಾಧಾನಗೊಂಡಿದ್ದ ಶ್ರೀನಿವಾಸ ಪ್ರಸಾದ್‌ ತಮ್ಮ ಶಾಸಕ ಸ್ಥಾನಕ್ಕೆ, ಕಾಂಗ್ರೆಸ್ ಪಕ್ಷಕ್ಕೂ ರಾಜಿನಾಮೆ ನೀಡಿದ್ದಾರೆ.

ವಿಧಾನಸಭೆಯ ಸ್ಪೀಕರ್ ಕೋಳಿವಾಡ ಅವರಿಗೆ ಶ್ರೀನಿವಾಸ ಪ್ರಸಾದ್ ರಾಜಿನಾಮೆ ಸಲ್ಲಿಸಿದರು. ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾವು ಕೇವಲ ಶಾಸಕ ಸ್ಥಾನಕ್ಕೆ ಮಾತ್ರವಲ್ಲ ಕಾಂಗ್ರೆಸ್ ಪಕ್ಷಕ್ಕೂ ರಾಜಿನಾಮೆ ಸಲ್ಲಿಸಿದ್ದೇನೆ. ಆದರೆ ಸಕ್ರಿಯ ರಾಜಕಾರಣದಲ್ಲಿ ಮುಂದುವರೆಯುತ್ತೇನೆ. ರಾಜಕೀಯದಲ್ಲಿ ನಾನು ಗೌರವಯುತ ನಿವೃತ್ತಿ ಬಯಸುತ್ತೇನೆ, ಹೀಗಾಗಿ ನನ್ನ ಮುಂದಿನ ನಡೆಯನ್ನು ತೀರಾ ಎಚ್ಚರಿಕೆ ಇಡುತ್ತೇನೆ. ನನ್ನ ಬೆಂಬಲಿಗರು ಹಾಗೂ ಹಿತೈಷಿಗಳೊಂದಿಗೆ ಚರ್ಚಿಸಿ ನನ್ನ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಹೇಳಿದ್ದಾರೆ.

ಇದೇ ವೇಳೆ ಸಿಎಂ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ನಾನು ಸಹಾಯ ಮಾಡಿದ ವ್ಯಕ್ತಿಯೇ ನನಗೆ ದ್ರೋಹ ಬಗೆದರು. ನಾನು ಮತ್ತು ಸಿದ್ದರಾಮಯ್ಯನವರು ತುಂಬಾ ಒಳ್ಳೆಯ ಸಂಬಂಧ ಹೊಂದಿದ್ದೆವು. ಸಿದ್ದರಾಮ್ಯಯ ಅವರು ನಮ್ಮ ಪಕ್ಕದ ಜಿಲ್ಲೆಯವರಾಗಿದ್ದು, ನನಗೆ ವೈಯಕ್ತಿಕವಾಗಿ ಆಪ್ತರಾಗಿದ್ದರು. ಆದರೆ ಸಂಪುಟ ಪುನಾರಚನೆಗೆ ಸಂಬಂಧಿಸಿದಂತೆ ಒಮ್ಮೆಯೂ ತಮ್ಮೊಂದಿಗೆ ಚರ್ಚೆ ಮಾಡಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ತಾವು ಸಚಿವರಾಗಿದ್ದಾಗ ಸಾಕಷ್ಟು ಉತ್ತಮ ಕಾರ್ಯಗಳನ್ನು ಮಾಡಿದ್ದೆವು. ನಾವು ಮಾಡಿದ ಕಾರ್ಯಗಳಿಂದಾಗಿ ಸರ್ಕಾರಕ್ಕೆ ಸಾಕಷ್ಚು ಒಳ್ಳೆಯ ಹೆಸರು ಕೂಡ ಬಂದಿತ್ತು. ಹೀಗಿದ್ದೂ ನನ್ನನ್ನು ಸಂಪುಟದಿಂದ ಕೈಬಿಟ್ಟ ರೀತಿ ನಿಜಕ್ಕೂ ನನಗೆ ತೀರಾ ನೋವು ತಂದಿತ್ತು. ನಾನೆಂದೂ ಅಧಿಕಾರಕ್ಕೆ ಅಂಟಿಕೊಂಡವನಲ್ಲ. ಆದರೆ ಸಂಪುಟದಿಂದ ಕೈಬಿಡುವ ಕುರಿತು ನನಗೆ ಮಾಹಿತಿಯನ್ನಾದರೂ ನೀಡಬಹುದಿತ್ತು ಅಥವಾ ನನ್ನ ಖಾತೆಯಲ್ಲಾಗಿರುವ ಲೋಪದೋಷಗಳನ್ನು ತಿಳಿಸಿಕೊಡಬಹುದಿತ್ತು ಎಂದು ಶ್ರೀನಿವಾಸ ಪ್ರಸಾದ್ ಹೇಳಿದ್ದಾರೆ.

‘ದಿಗ್ವಿಜಯ ಸಿಂಗ್, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಜಿ. ಪರಮೇಶ್ವರ, ಕೆ.ಜೆ. ಜಾರ್ಜ್, ಡಿ.ಕೆ. ಶಿವಕುಮಾರ್‌ ಕೂಟದ ಕಪಿಮುಷ್ಠಿಯಲ್ಲಿ ಕಾಂಗ್ರೆಸ್ ಸಿಲುಕಿದೆ’ ಎಂದು ಕಿಡಿಕಾರಿದರು.

‘ಹೈಕಮಾಂಡ್‌ಗೆ ಕಪ್ಪಕಾಣಿಕೆ ನೀಡುವುದೂ ಸೇರಿ ಎಲ್ಲಾ ಕೆಲಸವನ್ನು ಈ ದುಷ್ಟಕೂಟ ಮಾಡುತ್ತಿದೆ. ಸಿದ್ದರಾಮಯ್ಯ ಬ್ರೂಟಸ್‌. ಮಹದೇವಪ್ಪ ಸಿದ್ದರಾಮಯ್ಯನ ನಂಬರ್‌ ಒನ್‌ ಕಾರ್ಬನ್ ಕಾಪಿ ಇದ್ದಂತೆ’ ಎಂದು ಅವರು ಹೇಳಿದರು.

ರಾಜಿನಾಮೆ ನೀಡುವ ಮುನ್ನಾ ಶ್ರೀನಿವಾಸ ಪ್ರಸಾದ್ ಅವರಿಗೆ ದೂರವಾಣಿ ಕರೆ ಮಾಡಿದ ಕಾಂಗ್ರೆಸ್‌ ಮುಖಂಡ ಎ.ಕೆ. ಆಂಟನಿ ಅವರು ಪಕ್ಷ ತೊರೆಯದಂತೆ ಮನವೊಲಿಸಲು ಯತ್ನಿಸಿದರು ಎನ್ನಲಾಗಿದೆ.

Comments are closed.