
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹಾಗೂ ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಕೆಎಸ್ ಈಶ್ವರಪ್ಪ ನಡುವಿನ ಭಿನ್ನಮತ ಮತ್ತಷ್ಟು ತೀವ್ರಗೊಂಡ ಹಿನ್ನೆಲೆಯಲ್ಲಿ ಈ ಇಬ್ಬರು ನಾಯಕರು ಸೇರಿದಂತೆ ಇತರೆ ಕೆಲವು ಮುಖಂಡರಿಗೆ ದೆಹಲಿಗೆ ಆಗಮಿಸುವಂತೆ ಬಿಜೆಪಿ ಹೈಕಮಾಂಡ್ ಸೂಚಿಸಿದೆ.
ಕೆ.ಎಸ್. ಈಶ್ವರಪ್ಪ ಅವರ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸ್ಥಾಪನೆ ವಿವಾದ ಮತ್ತೆ ಬಿಜೆಪಿ ಹೈಕಮಾಂಡ್ ಅಂಗಳಕ್ಕೆ ತಲುಪಿದ್ದು, ಯಡಿಯೂರಪ್ಪ ಹಾಗೂ ಹೈಕಮಾಂಡ್ ಸೂಚನೆಯನ್ನು ಧಿಕ್ಕರಿಸಿ ಈಶ್ವರಪ್ಪ ಅವರು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಅನ್ನು ಸ್ಥಾಪಿಸಿದ್ದಾರೆ. ಅಲ್ಲದೇ ಹಾವೇರಿಯಲ್ಲಿ ಸಮಾವೇಶ ನಡೆಸಲೂ ತೀರ್ಮಾನಿಸಿದ್ದಾರೆ.
ಯಾವುದೇ ಹಿಂದುಳಿದ ಸಭೆ ಅಥವಾ ಸಮಾವೇಶ ನಡೆಸುವುದಿದ್ದರೂ ಅದು ಪಕ್ಷದ ವೇದಿಕೆಯಡಿಯಲ್ಲೇ ನಡೆಸಬೇಕೆಂಬ ಸೂಚನೆಗೆ ಈಶ್ವರಪ್ಪ ಸೆಡ್ಡು ಹೊಡೆದಿದ್ದು, ಆ ನಿಟ್ಟಿನಲ್ಲಿ ರಾಜ್ಯ ಬಿಜೆಪಿ ನಾಯಕರಲ್ಲಿ ಮುಸುಕಿನ ಗುದ್ದಾಟ ಮುಂದುವರಿದಿದೆ. ಈ ಜಟಾಪಟಿ ಕುರಿತಂತೆ ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ್ ರಾವ್ ಅವರು ಹೈಕಮಾಂಡ್ ಗೆ ವಿವರ ನೀಡಿದ್ದಾರೆ ಎನ್ನಲಾಗಿದೆ.
ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ರಾಮ್ ಲಾಲ್ ಅವರು ರಾಜ್ಯ ಬಿಜೆಪಿ ಮುಖಂಡರಿಗೆ ದೆಹಲಿಗೆ ಬುಲಾವ್ ನೀಡಿದ್ದಾರೆ. ಆ.22ರಂದು ದೆಹಲಿಯಲ್ಲಿ ನಡೆಯಲಿರುವ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಲಿದೆ ಎಂದು ವರದಿ ವಿವರಿಸಿದೆ.
Comments are closed.