ಅಂತರಾಷ್ಟ್ರೀಯ

ನಿಮಗೆ ‘ಬಿಪಿ’ ಇದ್ದರೆ ದಾಳಿಂಬೆ ತಿನ್ನಿ….ಏನೆಲ್ಲ ದಾಳಿಂಬೆಯಲ್ಲಿದೆ ಎಂಬುದನ್ನು ತಿಳಿದುಕೊಳ್ಳಲು ಮುಂದೆ ಓದಿ…

Pinterest LinkedIn Tumblr

dali

ಸ್ಪರ್ಧಾತ್ಮಕ ಯುಗದಲ್ಲಿ ಬದುಕು ಸಾಗಿಸುತ್ತಿರುವ ಅನೇಕ ಮಂದಿ ಮಾನಸಿಕ ಒತ್ತಡಕ್ಕೆ ಸಿಲುಕಿರುತ್ತಾರೆ. ಇದು ನಾನಾ ಬಗೆಯ ರೋಗ ರುಜಿನಗಳಿಗೆ ಕಾರಣವಾಗುತ್ತದೆ. ಮಾನಸಿಕ ಒತ್ತಡ, ರಕ್ತದೊತ್ತಡಕ್ಕೂ ದಾರಿ ಮಾಡಿಕೊಡಲಿದೆ.

ಮಾನಸಿಕ ಒತ್ತಡದ ಕಾರಣದಿಂದ ಎದುರಾಗುವ ಅಧಿಕ ರಕ್ತದೊತ್ತಡ ಇಂದು ಸಾಮಾನ್ಯವಾಗಿದ್ದು, ಇತ್ತೀಚೆಗೆ ಯುವ ಜನಾಂಗದಲ್ಲಿಯೂ ಕಂಡುಬರುತ್ತಿದೆ. ಸ್ಪರ್ಧಾತ್ಮಕ ಬದುಕೇ ಇದಕ್ಕೆ ಕಾರಣವಾಗಿದೆ.

ಇಂತಹ ಪರಿಸ್ಥಿತಿಯನ್ನು ನಿಭಾಯಿಸಲು ಸುಲಭ ಮಾರ್ಗಗಳೂ ಇಲ್ಲದಿಲ್ಲ. ಮಾನಸಿಕ ಒತ್ತಡಕ್ಕೆ ಒಳಗಾಗದೇ ಇರಲು ವ್ಯಾಯಾಮ, ಧ್ಯಾನ, ವಾಯುವಿಹಾರ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳುವುದು ಒಳ್ಳೆಯದು.

ಮಾನಸಿಕ ಒತ್ತಡದ ಮೂಲಕ ಹೆಚ್ಚಾಗುವ ರಕ್ತದೊತ್ತಡವನ್ನು ಕಡಿಮೆ ಮಾಡುವಲ್ಲಿ ಕೆಲವು ಹಣ್ಣಿನ ರಸಗಳೂ ಸಹಕಾರಿಯಾಗುತ್ತವೆ. ಇಂತಹ ಹಣ್ಣಿನ ರಸಗಳ ಸಾಲಿನಲ್ಲಿ `ದಾಳಿಂಬೆ’ ಹಣ್ಣಿನ ರಸವೂ ಪ್ರಮುಖವಾಗಿದೆ.

`ದಾಳಿಂಬೆ’ ಹಣ್ಣಿನಲ್ಲಿ ಅಧಿಕ ಪ್ರಮಾಣದಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳು ಮತ್ತು ಪಾಲಿಫೆನಾಲುಗಳಿಂದ ರಕ್ತದೊತ್ತಡ ನಿಯಂತ್ರಿಸಲು ಸಹಾಯವಾಗುತ್ತದೆ. ಅಲ್ಲದೆ ಕ್ಯಾನ್ಸರ್‌ಗೆ ಕಾರಣವಾಗುವ ಫ್ರೀ ಱ್ಯಾಡಿಕಲ್ ಎಂಬ ಕಣಗಳ ಪ್ರಭಾವವನ್ನು ತಗ್ಗಿಸಿ ಹಲವು ಬಗೆಯ ಕ್ಯಾನ್ಸರ್‌ನಿಂದ ರಕ್ಷಿಸುತ್ತವೆ.

ಪ್ರತಿ ದಿನ ಒಂದು ಲೋಟ `ದಾಳಿಂಬೆ’ ರಸವನ್ನು ಕುಡಿಯುವ ಮೂಲಕ ವಿಶೇಷವಾಗಿ ಅಧಿಕ ರಕ್ತದೊತ್ತಡವನ್ನು ಸಮಸ್ಥಿತಿಯಲ್ಲಿರಿಸಲು ಸಾಧ್ಯವಾಗುತ್ತದೆ.

ಅದೇ ರೀತಿ ದಿನಕ್ಕೊಂದು ಲೋಟ `ದಾಳಿಂಬೆ’ ರಸವನ್ನು ಕುಡಿದರೆ, ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುತ್ತದೆ. ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚು ಮಾಡುವ ಮೂಲಕ ಆರೋಗ್ಯದಲ್ಲಿ ಸುಧಾರಣೆ ತರಲು ನೆರವಾಗುತ್ತದೆ.

ಮಧುಮೇಹ ಇದ್ದವರಿಗೆ ಹೃದಯದ ತೊಂದರೆಯೂ ಇರುತ್ತದೆ. ಆದರೆ ಪ್ರತಿದಿನ `ದಾಳಿಂಬೆ’ ರಸವನ್ನು ಕುಡಿಯುವುದರಿಂದ ಮಧುಮೇಹವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಆ ಮೂಲಕ ಹೃದಯದ ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದು.

`ದಾಳಿಂಬೆ’ಯಲ್ಲಿ ಕಡಿಮೆ ಪ್ರಮಾಣದ ಸಕ್ಕರೆ ಅಂಶ ಇರುವುದು ಹಾಗೂ ಅಧಿಕ ಪ್ರಮಾಣದಲ್ಲಿ ಆಂಟಿ ಆಕ್ಸಿಡೆಂಟ್‌ಗಳು ಇರುವುದರಿಂದ ಮಧುಮೇಹಿಗಳು `ದಾಳಿಂಬೆ’ ರಸವನ್ನು ಸೇವಿಸಬಹುದು. ಅಲ್ಲದೆ, ದಿನವಿಡೀ ಅತಿಯಾದ ಬಾಯಾರಿಕೆಯಾಗದಂತೆ ನೋಡಿಕೊಳ್ಳಬಹುದು.

`ದಾಳಿಂಬೆ’ ಆರೋಗ್ಯಕ್ಕೆ ಮಾತ್ರವಲ್ಲ. ಸೌಂದರ್ಯವೃದ್ಧಿಗೂ ಸಹಕಾರಿ. ಅಪಧಮನಿ ಕಾಠಿಣ್ಯವನ್ನೂ ಕಡಿಮೆ ಮಾಡುತ್ತದಂತೆ.

ಅಪಧಮನಿ ಕಾಠಿಣ್ಯ ಅಥವಾ ಆರ್ಥೆಲೊಸ್ಲೆರೋಸಿಸಿ ಎಂಬ ಸಮಸ್ಯೆ ಇರುವ ರೋಗಿಗಳ ರಕ್ತನಾಳಗಳ ಒಳಗೆ ಬಹುಕಾಲದಿಂದ ಜಿಡ್ಡು ಅಂಟಿಕೊಂಡು ಗಟ್ಟಿಯಾಗಿ ನರಗಳೆಲ್ಲಾ ಗಟ್ಟಿಯಾಗಿರುತ್ತವೆ. ಇಂತಹ ರೋಗಿಗಳಿಗೆ `ದಾಳಿಂಬೆ’ ರಸ ಕುಡಿಸಿದ ನಂತರ ಸುಧಾರಣೆ ಕಂಡಿರುವುದು ಸಂಶೋಧನೆಗಳಿಂದ ತಿಳಿದುಬಂದಿದೆ.

ಈ ಎಲ್ಲ ಉತ್ತಮ ಗುಣಗಳನ್ನು ಹೊಂದಿರುವ `ದಾಳಿಂಬೆ’ ಹಣ್ಣಿನಿಂದ ರಸ ಮಾಡಿಕೊಂಡು ಸೇವಿಸುವ ಮೂಲಕ ಆರೋಗ್ಯ ಸುಧಾರಣೆ ಮಾಡಿಕೊಳ್ಳಲು ಪ್ರಯತ್ನಿಸಬಹುದಲ್ಲವೆ?

Comments are closed.