ಇಂದಿನ ದಿನಗಳಲ್ಲಿ ಮನುಷ್ಯನನ್ನ ಕಂಡರೆ ಮತ್ತೊಬ್ಬ ಮನುಷ್ಯನಿಗೆ ಆಗದ ಸ್ಥಿತಿಯಿದೆ. ಇಂತಹ ಪರಿಸ್ಥಿತಿಯಲ್ಲಿ ನಾಯಿ ಮತ್ತು ಕೋತಿಗಳು ಬದ್ಧ ವೈರಿಗಳು. ಆದರೆ ಇವುಗಳದ್ದು ಎಲ್ಲವನ್ನೂ ಮರೆತು ಬಿಟ್ಟಿರಲಾರದಂತ ಅನುಬಂಧ. ಹೌದು.. ಈ ಸ್ನೇಹಕ್ಕೆ ಸಾಕ್ಷಿಯಾಗಿವೆ ರೆಹಮತ್‌ನಗರದ ನಾಯಿ ಹಾಗೂ ಕೋತಿ.
ನಾಯಿಯನ್ನೇ ತಾಯಿಯೆಂದು ತಿಳಿದು ತಿರುಗುತ್ತಿವ ಕೋತಿ ಮರಿ.. ತನ್ನ ಪ್ರೀತಿಯ ಮಗನಂತೆ ಮಗ್ಗಲಲ್ಲೇ ಇಟ್ಟುಕೊಂಡು ಸುತ್ತಾಡೋ ನಾಯಿ. ಈ ರೀತಿಯ ಅವಿನಾಭಾವ ಸಂಬಂಧ ಇಟ್ಟುಕೊಂಡು ಈ ನಾಯಿ ತಾಯಿಯನ್ನು ಕಳೆದುಕೊಂಡ ಕೋತಿ ಮರಿಗೆ ಅಮ್ಮನ ಸ್ಥಾನ ತುಂಬಿದೆ.
ಇಂತಹ ಅಪರೂಪದ ದೃಶ್ಯ ಕಂಡು ಬಂದಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದ ರೆಹಮತ್‌ನಗರದಲ್ಲಿ. ಇಲ್ಲಿನ ನಿವಾಸಿ ಲಕ್ಷ್ಮೀನಾರಾಯಣ ಎಂಬುವರು ತಿಂಗಳ ಹಿಂದೆ ಅರಣ್ಯ ಪ್ರದೇಶಕ್ಕೆ ಕುರಿ ಮೇಯಿಸಲು ತೆರಳಿದ್ದರು. ಈ ವೇಳೆ ಕೋತಿ ಮರಿಯೊಂದು ತನ್ನ ತಾಯಿ ಕೋತಿಯನ್ನ ಕಳೆದುಕೊಂಡು ಆಹಾರ, ನೀರು ಬಿಟ್ಟು ದುಃಖದಿಂದ ರೋದಿಸುತ್ತಿರುವುದನ್ನು ಕಂಡು ಮನೆಗೆ ತಂದಿದ್ದಾರೆ. ಕೋತಿ ಮರಿಯನ್ನು ತಾನು ಸಾಕಿದ್ದ ನಾಯಿ ಬಳಿ ಬಿಟ್ಟಿದ್ದಾರೆ. ನಾಯಿ ಹಾಗೂ ಕೋತಿ ಬದ್ಧ ವೈರಿಗಳಾದ್ರೂ ಸಹ ತಾಯಿಯಿಲ್ಲದ ತಬ್ಬಲಿ ಕೋತಿ ಮರಿಗೆ ನಾಯಿಯೇ ತಾಯಿಯಾಗಿದೆ. ಈಗ ಇವುಗಳ ಮಧ್ಯೆ ಬಿಟ್ಟಿರಲಾರದಂತಹ ಸ್ನೇಹ ಬೆಸೆದಿದೆ.
ಮೊದಲಿಗೆ ಕೋತಿ ಮರಿಯನ್ನು ನಾಯಿ ಹತ್ತಿರಕ್ಕೆ ಸೇರಿಸುತ್ತಿರಲಿಲ್ಲವಂತೆ. ಕಾಲಕ್ರಮೇಣ ಕೋತಿ ಮತ್ತು ನಾಯಿಯ ನಡುವೆ ಸ್ನೇಹ ಬೆಳೆದು, ಬಳಿಕ ಜೊತೆಯಲ್ಲೇ ಆಟವಾಡಲು ಆರಂಭಿಸಿವೆ. ಎರಡೂ ಸಹ ಪರಸ್ಪರ ಬಿಟ್ಟಿರಲಾರದಷ್ಟು ಸ್ನೇಹ ಬೆಳೆಸಿಕೊಂಡಿವೆ. ಇದಲ್ಲದೆ ನಾಯಿ ಊಟ ಮಾಡಿದರೆ ಕೋತಿ, ಕೋತಿ ಊಟ ಮಾಡಿದರೆ ಮಾತ್ರ ನಾಯಿ ಊಟ ಮಾಡುವುದಂತೆ. ಇವೆರಡು ಮಲಗೋದು ಸಹ ಒಟ್ಟಿಗೆ. ಇನ್ನು ಇವೆರಡರ ಸ್ನೇಹ ನೋಡಿ, ಮನೆ ಮಾಲೀಕ ಲಕ್ಷ್ಮೀನಾರಾಯಣ ದಂಪತಿ ತುಂಬಾ ಖುಷಿಯಾಗಿದ್ದಾರೆ.
ಈ ಸಾಕು ನಾಯಿಯನ್ನು ಹೊರಗೆ ವಾಕಿಂಗ್ ಕರೆದುಕೊಂಡು ಹೋದ್ರೆ, ಕೋತಿ ಮರಿಯನ್ನು ಕರಕೊಂಡು ಹೋಗುತ್ತೆ. ಹೀಗಾಗಿ ಇವರುಗಳ ಸ್ನೇಹ ನೋಡಿ ಪಟ್ಟಣದ ಜನ ಅಚ್ಚರಿ ವ್ಯಕ್ತಪಡಿಸುತ್ತಾರೆ.
Comments are closed.