ಕರ್ನಾಟಕ

ಮುನಿಸಿಕೊಂಡಿರುವ ಈಶ್ವರಪ್ಪರಿಗೆ ಯಡಿಯೂರಪ್ಪ ನೀಡಿರುವ ಖಡಕ್ ಎಚ್ಚರಿಕೆ ಏನು ಗೊತ್ತಾ..? ಬಿಜೆಪಿಯೊಳಗೆ ಮುಂದೆ ಏನು ನಡೆಯುತ್ತೆ….?

Pinterest LinkedIn Tumblr

Eshwarappa-&-B-S-Yeddyu

ಬೆಂಗಳೂರು: ಯಾರೇ ಆಗಲಿ ಪಕ್ಷದ ಬ್ಯಾನರ್ ಅಡಿಯೇ ಸಭೆ- ಸಮಾರಂಭಗಳನ್ನು ನಡೆಸಬೇಕು. ಯಾವುದೇ ಕಾರಣಕ್ಕೂ ವೈಯಕ್ತಿಯವಾಗಿ ಕಾರ್ಯಕ್ರಮಗಳನ್ನು ಆಯೋಜಿಸುವಂತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಿರಿಯ ಮುಖಂಡ ಕೆ.ಎಸ್.ಈಶ್ವರಪ್ಪ ಅವರಿಗೆ ನೇರವಾಗಿಯೇ ಎಚ್ಚರಿಕೆ ಕೊಟ್ಟಿದ್ದಾರೆ.

ಹಿಂದುಳಿದ ದಲಿತ ಸಮಾವೇಶ ನಡೆಸಲು ಕೆ.ಎಸ್.ಈಶ್ವರಪ್ಪ ಸಿದ್ಧತೆ ನಡೆಸಿರುವ ಬೆನ್ನಲ್ಲೇ ಯಡಿಯೂರಪ್ಪನವರ ಈ ಹೇಳಿಕೆ ಬಿಜೆಪಿಯಲ್ಲಿ ಎಲ್ಲವೂ ನೆಟ್ಟಗಿಲ್ಲ ಎಂಬುದನ್ನು ಮತ್ತೆ ಸಾಬೀತು ಮಾಡಿದೆ.

ಯಡಿಯೂರಪ್ಪ ರಾಜ್ಯಾಧ್ಯಕ್ಷರಾದ ನಂತರ ಇಂದು ಪಕ್ಷದ ಕಚೇರಿಯಲ್ಲಿ ಮೊದಲ ಕೋರ್‍ಕಮಿಟಿ ಸಭೆ ನಡೆಯಿತು. ಸಭೆಯ ಬಳಿಕ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಯಡಿಯೂರಪ್ಪ, ನಮ್ಮಲ್ಲಿ ಎಸ್ಸಿ, ಎಸ್ಟಿ , ರೈತ ಮೋರ್ಚ, ಯುವ ಮೋರ್ಚ ಸೇರಿದಂತೆ ವಿವಿಧ ಮೋರ್ಚಗಳಿವೆ. ಯಾರೇ ಆಗಲಿ ಪಕ್ಷದ ಬ್ಯಾನರ್ ಅಡಿಯೇ ಕಾರ್ಯಕ್ರಮಗಳನ್ನು ನಡೆಸಬೇಕು. ವೈಯಕ್ತಿಕವಾಗಿ, ಇಲ್ಲವೇ ಪ್ರತ್ಯೇಕವಾಗಿ ನಡೆಸುವಂತಿಲ್ಲ ಎಂದು ಯಡಿಯೂರಪ್ಪ ಖಡಕ್ ಸಂದೇಶ ರವಾನಿಸಿದರು.

ಇಂದು ನಡೆದ ಕೋರ್‍ಕಮಿಟಿ ಸಭೆಯಲ್ಲಿ ಅನೇಕ ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಇದೇ 21ರಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ಮಂಗಳೂರಿಗೆ ಆಗಮಿಸಿ ತಿರಂಗ ಯಾತ್ರೆಯಲ್ಲಿ ಪಾಲ್ಗೊಳ್ಳುವರು. ಇದನ್ನು ಯಶಸ್ವಿಗೊಳಿಸುವ ಬಗ್ಗೆಯೂ ಚರ್ಚೆ ನಡೆದಿದೆ ಎಂದರು. ಇದೇ 31ರಂದು ದೆಹಲಿಯಲ್ಲಿ ರಾಜ್ಯಸಭೆ ಸದಸ್ಯರ ಸಭೆ ಕರೆಯಲಾಗಿದೆ. ಆ ಸಭೆಗೆ ರಾಜ್ಯದಿಂದ ಯಾರನ್ನು ಕಳುಹಿಸುವುದು ಎಂಬ ಬಗ್ಗೆ ಚರ್ಚಿಸಿದ್ದೇವೆ, ಸೆ.24, 25ರಂದು ಕಲ್ಲಿಕೋಟೆಯಲ್ಲಿ ಪಕ್ಷದ ಸಮಾವೇಶ ನಡೆಯಲಿದೆ ಎಂದು ತಿಳಿಸಿದರು. ಅ.21, 22ಮತ್ತು 23ರಂದು ಬೆಂಗಳೂರಿನ ವಿಮಾನ ನಿಲ್ದಾಣ ಸಮೀಪ ಬಿಜೆಪಿಯ ಪ್ರಶಿಕ್ಷಣ ಸಭೆ ಆಯೋಜಿಸಲಾಗಿದೆ. ಪಕ್ಷದ ಸಂಘಟನೆ ಮತ್ತು ಸದಸ್ಯರ ನೋಂದಾವಣಿ ಬಗ್ಗೆ ಪದಾಧಿಕಾರಿಗಳಿಗೆ ಮಾರ್ಗದರ್ಶನ ನೀಡಲಾಗುವುದು. ಅ.3 ಮತ್ತು 4ರಂದು ಬೆಳಗಾವಿಯಲ್ಲಿ ರಾಜ್ಯಕಾರ್ಯಕಾರಣಿ ಸಭೆ ನಡೆಯಲಿದೆ ಎಂದು ಯಡಿಯೂರಪ್ಪ ಮಾಹಿತಿ ನೀಡಿದರು.

ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ರಾಮ್‍ಲಾಲ್ ಅವರು ಪಕ್ಷದ ಸಂಘಟನೆ ಕುರಿತಂತೆ ಮಾರ್ಗದರ್ಶನ ನೀಡಲು ಮೂರು ದಿನ ಕಾಲಾವಕಾಶ ನೀಡಿದ್ದಾರೆ. ಪಕ್ಷದ ಮುಖಂಡರೊಂದಿಗೆ ಚರ್ಚಿಸಿ ಶೀಘ್ರದಲ್ಲೇ ದಿನಾಂಕವನ್ನು ನಿಗದಿ ಪಡಿಸಲಾಗುವುದು ಎಂದರು. ತಿರಂಗಯಾತ್ರೆಗೆ ರಾಜ್ಯದೆಲ್ಲೆಡೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಕಂಡು ಬರುತ್ತಿದೆ. ಈಗಾಗಲೇ 206 ಕಡೆ ಯಾತ್ರೆ ನಡೆದಿದೆ. ಇದೇ 23ರವರೆಗೆ ಇದು ನಡೆಯಲಿದ್ದು, ಸುಮಾರು ಒಂದು ಸಾವಿರ ಸ್ಥಳಗಳಲ್ಲಿ ನಡೆಸಲು ಪಕ್ಷ ಉದ್ದೇಶಿಸಿದೆ ಎಂದು ತಿಳಿಸಿದರು. ಕಾರ್ಯಕಾರಿಣಿ ಸಭೆಯಲ್ಲಿ ಕೇಂದ್ರ ಸಚಿವ ಅನಂತ್‍ಕುಮಾರ್, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಸಂಸದರಾದ ಪ್ರಹ್ಲಾದ್‍ಜೋಷಿ, ನಳೀನ್‍ಕುಮಾರ್ ಕಟೀಲ್, ಮಾಜಿ ಸಚಿವರಾದ ಗೋವಿಂದ ಕಾರಜೋಳ, ಸಿ.ಟಿ.ರವಿ, ಸಿ.ಎಂ.ಉದಾಸಿ ಮತ್ತಿತರರು ಭಾಗವಹಿಸಿದ್ದರು.

Comments are closed.