ಮೈಸೂರು: ಇವತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರ 69ನೇ ಹುಟ್ಟುಹಬ್ಬ. ಆದರೆ ಅವರ ಪುತ್ರ ರಾಕೇಶ್ ಅಕಾಲಿಕ ಸಾವಿಗೀಡಾದ ಹಿನ್ನಲೆಯಲ್ಲಿ ಸಿಎಂ ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಬದಲಾಗಿ ತಮ್ಮ ಬೆಂಬಲಿಗರಿಗೆ ಅಭಿಮಾನಿಗಳಿಗೆ ಒಂದು ಮನವಿ ಮಾಡಿದ್ದಾರೆ.
ತಮ್ಮ ಪುತ್ರ ರಾಕೇಶ್ ಅಕಾಲಿಕ ಮರಣದ ನೋವಿನಿಂದ ಸಿಎಂ ಸಿದ್ದರಾಮಯ್ಯನವರ ಕುಟುಂಬ ಇನ್ನೂ ಹೊರಬಂದಿಲ್ಲ. ಹೀಗಾಗಿ ಈ ಬಾರಿ ಹುಟ್ಟುಹಬ್ಬದ ಆಚರಣೆ ಬೇಡ ಅಂತ ಸ್ವತಃ ಸಿಎಂ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
‘ನನ್ನ ಹುಟ್ಟುಹಬ್ಬ ಆಚರಿಸ್ಬೇಡಿ’
ನನ್ನ ಹಿರಿಯ ಪುತ್ರ ರಾಕೇಶ್ ಸಾವಿನ ಹಿನ್ನೆಲೆಯಲ್ಲಿ, ನಮ್ಮ ಇಡೀ ಕುಟುಂಬವೇ ಶೋಕ ಸಾಗರದಲ್ಲಿ ಮುಳುಗಿದೆ. ನಮಗಿನ್ನೂ ಆತನ ಅಗಲಿಕೆಯ ದುಃಖದಿಂದ ಹೊರಬರಲು ಸಾಧ್ಯವಾಗಿಲ್ಲ. ಇಂತಹ ಸಂದರ್ಭದಲ್ಲಿ ನಮ್ಮ ಮನದಲ್ಲಿ ಸಡಗರ ಹಾಗೂ ಸಂಭ್ರಮ ಮನೆ ಮಾಡಲು ಸಾಧ್ಯವಿಲ್ಲ. ಹುಟ್ಟುಹಬ್ಬದ ಸಂದರ್ಭದಲ್ಲಿ ತಮ್ಮಿಂದ ಹಾರಾ, ತುರಾಯಿ ಸ್ವೀಕರಿಸಲು ಅಥವಾ ತಮ್ಮ ಶುಭ ಹಾರೈಕೆಗಳನ್ನು ಪಡೆಯಲು ನನ್ನ ಮನಸ್ಸು ಒಪ್ಪುತ್ತಿಲ್ಲ. ಆದ ಕಾರಣ, ನನ್ನ ಹುಟ್ಟುಹಬ್ಬದ ಆಚರಣೆ ಬೇಡ. ನನ್ನ ಮೇಲೆ ಅಭಿಮಾನ ಇರುವ ಹಾಗೂ ನನಗೆ ಪ್ರೀತಿ ತೋರುವ ಎಲ್ಲರೂ ನನ್ನ ಈ ಮನವಿಗೆ ಸ್ಪಂದಿಸುವಿರಿ ಎಂದು ನಂಬಿದ್ದೇನೆ.
ಇಂತಿ ತಮ್ಮವ,
ಸಿದ್ದರಾಮಯ್ಯ, ಮುಖ್ಯಮಂತ್ರಿ
ಹೀಗೆ ತಮ್ಮೆಲ್ಲಾ ಅಭಿಮಾನಿಗಳು ಹಾಗೂ ಬೆಂಬಲಿಗರ ಬಳಿ ಸಿಎಂ ಮನವಿ ಮಾಡಿಕೊಂಡಿದ್ದಾರೆ. ಸದ್ಯ ಮೈಸೂರಿನಲ್ಲಿರುವ ಅವರು ಸಂಜೆ ಬೆಂಗಳೂರಿಗೆ ಆಗಮಿಸಿ ಸಭೆಯೊಂದರಲ್ಲಿ ಪಾಲ್ಗೊಳ್ಳಲಿದ್ದಾರೆ.
ಒಟ್ಟಾರೆ ಮಗನ ಬದುಕು ಅಕಾಲಿಕವಾಗಿ ಕೊನೆಗೊಂಡದ್ದು ಸಿದ್ದರಾಮಯ್ಯನವರ ಪಾಲಿಗೆ ನಿತ್ಯನಿರಂತರ ಶೋಕವನ್ನ ತಂದಿಟ್ಟಿದೆ. ಹಿರಿಯರ ಮಾತು ನಿಜ : ಪುತ್ರ ಶೋಕಂ ನಿರಂತರಂ.
Comments are closed.