ಬೆಂಗಳೂರು: ನಾಡು-ನುಡಿ, ನೆಲ-ಜಲ ವಿಚಾರದಲ್ಲಿ ರಾಜಕೀಯ ಒಗ್ಗಟ್ಟು ಪ್ರದರ್ಶಿಸಲು ಇಂದು ನಡೆದ ಸರ್ವಪಕ್ಷದ ಸಭೆಯಲ್ಲಿ ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ತಿಳಿಸಿದರು. ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹದಾಯಿ ನದಿ ನೀರು ಹಂಚಿಕೆ ವಿವಾದ ಕುರಿತಂತೆ ಇದೇ 16ರಂದು ರಾಜ್ಯಪರ ವಕೀಲ ನಾರಿಮನ್ ಅವರೊಂದಿಗೆ ಚರ್ಚಿಸಿದ ನಂತರ ಮುಂದಿನ ಹೋರಾಟದ ರೂಪುರೇಷೆ ನಿರ್ಧರಿಸಲಾಗುವುದು ಎಂದರು. ಸಭೆಯಲ್ಲಿ ಪ್ರತಿಪಕ್ಷದ ಮುಖಂಡರಾದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿ ಡಿ.ವಿ.ಸದಾನಂದಗೌಡ, ಬಿ.ಎಸ್. ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಈಶ್ವರಪ್ಪ ಮತ್ತಿತರರು ನದಿ ನೀರು ಹಂಚಿಕೆ ವಿವಾದದಲ್ಲಿ ನ್ಯಾಯಾಧೀಕರಣದ ಮುಂದೆ ಸ್ಪಷ್ಟೀಕರಣ ಸಲ್ಲಿಸುವ ಬಗ್ಗೆ ಇಲ್ಲವೇ ಸರ್ವೋಚ್ಛ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸುವ ಬಗ್ಗೆ ಸಲಹೆ ನೀಡಿದ್ದಾರೆ.
ಅವರ ಎಲ್ಲ ಸಲಹೆಸೂಚನೆಗಳನ್ನು ಪಾಲಿಸಲು ನಾವು ಸಿದ್ದರಿದ್ದೇವೆ. ನೆಲ-ಜಲ, ನಾಡು-ನುಡಿ ಬಗ್ಗೆ ರಾಜಕೀಯ ಮರೆತು ಒಗ್ಗಟ್ಟು ಪ್ರದರ್ಶಿಸಲು ತೀರ್ಮಾನಿಸಿದ್ದೇವೆ ಎಂದರು. ಕರ್ನಾಟಕದ ಪರ ವಾದ ಮಂಡಿಸುತ್ತಿರುವ ನಾರಿಮನ್ ಅವರ ಬಗ್ಗೆ ನಮಗೆ ವಿಶ್ವಾಸವಿದೆ. ಹೀಗಾಗಿ ಇದೇ 16ರಂದು ಮಹದಾಯಿ ನದಿ ನೀರು ಹಂಚಿಕೆ ವಿವಾದ ಕುರಿತಂತೆ ಅವರೊಂದಿಗೆ ಮತ್ತೊಂದು ಸುತ್ತಿನ ಮಾತುಕತೆ ಇದೆ. ಈ ಸಂದರ್ಭದಲ್ಲಿ ನ್ಯಾಯಾಧೀಕರಣದ ಮುಂದೆ ಅಂತಾರಾಜ್ಯ ನದಿನೀರು ವಿವಾದ ಕುರಿತಂತೆ ಸ್ಪಷ್ಟೀಕರಣ ಸಲ್ಲಿಸುವುದೇ ಅಥವಾ ಸರ್ವೋಚ್ಛ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸುವ ಬಗ್ಗೆ ನಾರಿಮನ್ ಅವರಿಗೆ ಮನವರಿಕೆ ಮಾಡಿಕೊಡಲಾಗುವುದು. ಮುಂದೆ ಅವರು ನೀಡುವ ಸಲಹೆ ಮೇರೆಗೆ ಮುಂದಿನ ಕಾನೂನು ಹೋರಾಟ ನಡೆಸಲಾಗುವುದು ಎಂದು ಅವರು ಹೇಳಿದರು.
ಬಿಜೆಪಿ-ಜೆಡಿಎಸ್ ಬೆಂಬಲ:
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್, ನದಿನೀರು ಹಂಚಿಕೆ ವಿವಾದದಲ್ಲಿ ರಾಜ್ಯಕ್ಕೆ ಅನ್ಯಾಯವಾಗದಂತೆ ಎಲ್ಲ ರೀತಿಯ ಕ್ರಮ ಕೈಗೊಳ್ಳುವುದಾಗಿ ಸಿಎಂ ಭರವಸೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ಕೈಗೊಳ್ಳುವ ಕ್ರಮಗಳಿಗೆ ರಾಜಕೀಯ ಮರೆತು ಬೆಂಬಲ ನೀಡುವುದಾಗಿ ಭರವಸೆ ನೀಡಿದರು.
ಸರ್ವಪಕ್ಷ ಸಭೆಯಲ್ಲಿ ವಾಕ್ಸಮರ
ಮಹದಾಯಿ ನ್ಯಾಯ ಮಂಡಳಿ ಮಧ್ಯಂತರ ತೀರ್ಪುಕುರಿತಂತೆ ಇಂದು ವಿಧಾನಸಭೆಯಲ್ಲಿ ನಡೆದ ಸರ್ವಪಕ್ಷ ಸಭೆ ಸರ್ಕಾರ ಹಾಗೂ ವಿಪಕ್ಷಗಳ ನಡುವೆ ಭಾರೀ ಮಾತಿನ ಚಕಮಕಿಗೆ ಎಡೆ ಮಾಡಿಕೊಟ್ಟಿತು.
ಪ್ರಧಾನಿ ಮಧ್ಯಸ್ಥಿಕೆಗೆ ಸರ್ಕಾರ ಮುಂದಾಗಬೇಕೆಂದು ಪ್ರತಿಪಕ್ಷ ನಾಯಕರಾದ ಜಗದೀಶ ಶೆಟ್ಟರ್, ಈಶ್ವರಪ್ಪ ಒತ್ತಾಯಿಸಿ ನಿಮ್ಮ ನಿರ್ಲಕ್ಷದಿಂದಲೇ ಇಂತಹ ಪರಿಸ್ಥಿತಿ ಉದ್ಭವವಾಗಿದೆ. ಮೊದಲೆ ಗೋವಾದ ಕಾಂಗ್ರೆಸ್ ನಾಯಕರ ವಿಶ್ವಾಸ ಪಡೆದು ಅವರ ಮನವೊಲಿಸಿದ್ದರೆ ಒಂದು ವೇದಿಕೆ ರೂಪಿಸಿ ಚರ್ಚೆ ಮಾಡಬಹುದಾಗಿತ್ತು. ಆದರೆ ನೀವು ಕಾನೂನು ಹೋರಾಟದ ಪ್ರತಿಷ್ಠೆಗೆ ಬಿದ್ದು ಜನರ ಭಾವನೆಗೆ ವಿರುದ್ದ ವಾಗಿ ನಡೆದುಕೊಳ್ಳುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ತಿರುಗೇಟು ನೀಡಿದ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಹಾಗೂ ಕಾನೂನು ಸಂಸದೀಯ ಸಚಿವ ಟಿ.ಬಿ.ಜಯಚಂದ್ರ ಮತ್ತಿತರರು ನೀವು ರಾಜಕೀಯ ಮಾಡುತ್ತೀದ್ದೀರಿ ಪ್ರಧಾನಿ ಮಧ್ಯಸ್ಥಿಕೆ ವಹಿಸಿದರೆ ಒಂದೇ ಸಭೆಯಲ್ಲಿ ಎಲ್ಲವೂ ನಿರ್ಧಾರವಾಗುತ್ತದೆ. ಆದರೆ ನಿಮಗಾಗಲಿ, ಕೇಂದ್ರ ಸರ್ಕಾರಕ್ಕಾಗಲಿ ಇದರ ಬಗ್ಗೆ ಆಸಕ್ತಿ ಇಲ್ಲ. ರಾಜ್ಯ ಸರ್ಕಾರದ ಮೇಲೆ ವೃಥಾ ದೂರುವುದು ಸರಿಯಲ್ಲ ಎಂದು ತಿರುಗೇಟು ನೀಡಿದರು.
ಕಾನೂನು ಹೋರಾಟ ಕುರಿತಂತೆ ಪ್ರತಿಪಕ್ಷದ ನಾಯಕರ ವಿಶ್ವಾಸವನ್ನು ಪಡೆದು ಉತ್ತರ ಕರ್ನಾಟಕ ಜನರ ಆಶೋತ್ತರಗಳಿಗೆ ಸ್ಪಂದಿಸಬೇಕು ಎಂದು ಒತ್ತಾಯಿಸಲಾಯಿತು. ಮಹದಾಯಿ ಹೋರಾಟದ ವೇಳೆ, ರೈತರು ಮತ್ತು ಅಮಾಯಕರ ಮೇಲೆ ನಡೆದ ಪೆÇಲೀಸರ ಅಮಾನವೀಯ ಲಾಠಿ ಚಾರ್ಜ್ ಹಾಗೂ ದೌರ್ಜನ್ಯದ ವಿರುದ್ಧವೂ ಪ್ರತಿಪಕ್ಷದ ನಾಯಕರು, ಬಿಜೆಪಿ ಸಂಸದರು ಟೀಕಾಪ್ರಹಾರ ನಡೆಸಿದರು.
ಸಭೆ ಆರಂಭವಾದ ಕೆಲವೇ ನಿಮಿಷಗಳಲ್ಲಿ ಕಾವೇರಿದ ವಾತಾವರಣ ಸೃಷ್ಟಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಧ್ಯಪ್ರವೇಶಿಸಿ ಎಲ್ಲರೂ ಒಗ್ಗಟ್ಟಾಗಿ ನಮ್ಮ ಹಕ್ಕಿಗಾಗಿ ಹೋರಾಟ ನಡೆಸೋಣ ನ್ಯಾಯಯುತವಾಗಿ ನಮಗೆ ದಕ್ಕ ಬೇಕಾದ ನೀರನ್ನು ಪಡೆಯಲು ಎಲ್ಲ ರೀತಿಯ ಪ್ರಯತ್ನ ಪಡೋಣ ಎಂದು ಸಲಹೆ ನೀಡಿದರು.
ಬಿಡುಗಡೆಗೆ ಆಗ್ರಹ:
ನಂತರ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಮಾತನಾಡಿ, ಮಹದಾಯಿ ಹೋರಾಟದಲ್ಲಿ ಬಂಧಿಸಲಾಗಿರುವ 189 ಮಂದಿಯನ್ನು ಕೂಡಲೇ ರಾಜ್ಯ ಸರ್ಕಾರ ಬಿಡುಗಡೆ ಮಾಡಬೇಕು, ಸರ್ವಪಕ್ಷ ಸಭೆ ನಡೆಸಿ ಗಿಳಿಪಾಠ ಮಾಡುವುದು ಬೇಡ ಎಂದು ಸರ್ಕಾರದ ನಿಲುವನ್ನು ತರಾಟೆಗೆ ತೆಗೆದುಕೊಂಡರು. ಮಹದಾಯಿ ವಿವಾದ ಸಂಬಂಧಿಸಿದಂತೆ ಲಾಯರ್‍ಗಳನ್ನು ಕೂರಿಸಿಕೊಂಡು ಸರ್ಕಾರ ಪಾಠ ಹೇಳುವ ಅಗತ್ಯ ಏನಿದೆ. ಇಂತಹ ಸಭೆಯ ಹಣೆಬರಹ ಏನೆಂಬುದು ಎಲ್ಲರಿಗೂ ಗೊತ್ತಿದೆ. ಮೊದಲು ಬಂಧಿಸಿರುವವರನ್ನು ಬಿಡುಗಡೆ ಮಾಡಿ ಎಂದು ಒತ್ತಾಯಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ನೀವು ಕೂಡ ಈ ಹಿಂದೆ ಹಲವು ಹೋರಾಟ ನಡೆಸುವಾಗ ವಾಹನಗಳನ್ನು ಜಖಂಗೊಳಿಸಿ ಬೆಂಕಿ ಹಚ್ಚಿದ ಪ್ರಕರಣಗಳು ಕೂಡ ಇವೆ. ಆಗ ನೀವು ಸೇರಿದಂತೆ ನಿಮ್ಮ ಜೊತೆಗಿದ್ದ ಹೋರಾಟಗಾರರನ್ನು ಜೈಲಿಗೆ ಹಾಕಲಾಗಿತ್ತಾ ಎಂದು ಖಾರವಾಗಿ ಪ್ರಶ್ನಿಸಿದರು.
ಸರ್ವ ಪಕ್ಷ ಸಭೆ ನಡೆಸಿ ನೀರು ಕೊಡಿಸಲು ಸಾಧ್ಯವಿಲ್ಲ. ಇಂತಹ ಸರ್ಕಸ್ ಬಿಟ್ಟು ಕೂಡಲೇ ಆ ಭಾಗದ ಜನರ ದನಿಗೆ ಕಿವಿಗೊಡಿ. ನಿಮಗೆ ಕಾಳಜಿ ಇದ್ದರೆ , ಇಚ್ಛಾಶಕ್ತಿ ಇದ್ದರೆ ನಾಳೆಯೇ ಸಂಪುಟ ಸಭೆ ಕರೆದು ಬಂಧಿಸಿರುವವ ಮೇಲೆ ಹೂಡಿರುವ ಪ್ರಕರಣಗಳನ್ನು ಹಿಂಪಡೆಯುವ ಬಗ್ಗೆ ದಿಟ್ಟ ತೀರ್ಮಾನ ಕೈಗೊಳ್ಳಿ ಎಂದು ಸಿಎಂ ಸಿದ್ದರಾಮಯ್ಯನವರನ್ನು ಒತ್ತಾಯಿಸಿದರು. ಸಭೆಯಲ್ಲಿ ರಾಜ್ಯದ ಬಹುತೇಕ ಸಂಸದರು, ಪೆÇಲೀಸ್ ಮಹಾನಿರ್ದೇಶಕ ಓಂಪ್ರಕಾಶ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಅರವಿಂದ್ ಜಾದವ್ ಸೇರಿದಂತೆ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.
Comments are closed.