
ಬೆಂಗಳೂರು: ರಾಜ್ಯದ 31 ಸಚಿವರ ಪೈಕಿ 30 ಸಚಿವರು ಕೋಟ್ಯಧಿಪತಿಗಳು. ಅಸೋಸಿಯೇಷನ್ ಫಾರ್ ಡೆಮಕ್ರಾಟಿಕ್ ರಿಫಾರ್ಮ್ (ಎಡಿಆರ್) ರಾಷ್ಟ್ರವ್ಯಾಪಿ ನಡೆಸಿರುವ ಸಮೀಕ್ಷೆ ಪ್ರಕಾರ ರಾಜ್ಯದ ಸಚಿವರು ದೇಶದಲ್ಲೇ ಭಾರಿ ಶ್ರೀಮಂತರು ಎಂಬ ಅಂಶ ಹೊರಬಿದ್ದಿದೆ.
29 ರಾಜ್ಯಗಳ 620 ಸಚಿವರನ್ನು ಎಡಿಆರ್ ಸಮೀಕ್ಷೆಗೆ ಒಳಪಡಿಸಿದ್ದು, ರಾಜ್ಯದ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅತಿ ಶ್ರೀಮಂತ ಸಚಿವರ ಪೈಕಿ ರಾಷ್ಟ್ರದಲ್ಲೇ ಎರಡನೇ ಸ್ಥಾನದಲ್ಲಿದ್ದಾರೆ.
ರಾಜ್ಯದ ಸಚಿವರ ಪೈಕಿ ಅವರಿಗೇ ಅಗ್ರ ಸ್ಥಾನ. ಮತ್ತೊಂದು ವಿಶೇಷ ಎಂದರೆ ಸಾಲದ ಹೊರೆ ಹೊತ್ತ ಸಚಿವರ ಪೈಕಿ ಡಿ.ಕೆ. ಶಿವಕುಮಾರ್ ಅವರಿಗೆ ದೇಶದಲ್ಲೇ ಅಗ್ರ ಸ್ಥಾನ.
ಡಿ.ಕೆ. ಶಿವಕುಮಾರ್ ಅವರ ಒಟ್ಟು ಆಸ್ತಿ 251 ಕೋಟಿ ರೂ. ಅವರ ಜವಾಬ್ದಾರಿ (ಸಾಲ ಮತ್ತಿತರ ಹೊರೆ)105 ಕೋಟಿ ರೂ. ಈ ಅಂಕಿ ಅಂಶಗಳನ್ನು ಲೆಕ್ಕಕ್ಕೆ ತೆಗೆದುಕೊಂಡರೆ ಡಿ.ಕೆ.ಶಿವಕುಮಾರ್ ಒಟ್ಟು ವಾಸ್ತವಿಕ ಆಸ್ತಿ 146 ಕೋಟಿ ರೂ.
ವಿಶೇಷ ಎಂದರೆ 620 ಸಚಿವರ ಪೈಕಿ ಟಾಪ್ 10 ಶ್ರೀಮಂತ ಸಚಿವರ ಪಟ್ಟಿಯಲ್ಲಿ ರಾಜ್ಯದ ಸಚಿವರೇ ಅರ್ಧ ತುಂಬಿ ಹೋಗಿದ್ದಾರೆ. ಸಂತೋಷ್ ಲಾಡ್ಗೆ (186 ಕೋಟಿ ರೂ) 3ನೇಸ್ಥಾನ ಎಂ ಆರ್ ಸೀತಾರಾಮ್ (136 ಕೋಟಿ ರೂ.) 6ನೇ ಸ್ಥಾನ, ಆರ್ ವಿ ದೇಶಪಾಂಡೆ (113 ಕೋಟಿ ರೂ.) 8ನೇ ಸ್ಥಾನ, ಪ್ರಮೋದ್ ಮದ್ವರಾಜ್ಗೆ (105 ಕೋಟಿ) 10ನೇ ಸ್ಥಾನ. 496 ಕೋಟಿ ರೂ.ನೊಂದಿಗೆ ಆಂಧ್ರದ ಪೊಂಗುರು ನಾರಾಯಣ ಅಗ್ರ ಸ್ಥಾನದಲ್ಲಿದ್ದಾರೆ.
ಅತ್ಯಂತ ಕಡಿಮೆ ಆಸ್ತಿ ಹೊಂದಿದ ಹತ್ತು ಸಚಿವರ ಪೈಕಿ ರಾಜ್ಯದವರಿಗೆ ಸ್ಥಾನ ಸಿಕ್ಕಿಲ್ಲ!!
ಸಾಲದ ಹೊರೆ ಅತಿ ಹೆಚ್ಚು ಇರುವವರ ಟಾಪ್ ಟೆನ್ ಪಟ್ಟಿಯಲ್ಲಿ ರಾಜ್ಯದ ೪ ಸಚಿವರಿಗೆ ಸ್ಥಾನವಿದೆ. ಮೊದಲ ಸ್ಥಾನ ಡಿ.ಕೆ.ಶಿವಕುಮಾರ್ (105 ಕೋಟಿ ರೂ.) ಎಂ ಆರ್ ಸೀತಾರಾಮ್ (53 ಕೋಟಿ ರೂ.) 3ನೇ ಸ್ಥಾನ, ಪ್ರಮೋದ್ ಮದ್ವರಾಜ್ (44 ಕೋಟಿ ರೂ.) 4ನೇ ಸ್ಥಾನ, ಎಂ ಬಿ ಪಾಟೀಲ್ (19 ಕೋಟಿ ರೂ.)10ನೇ ಸ್ಥಾನ ಪಡೆದಿದ್ದಾರೆ.
ಆಂದ್ರಪ್ರದೇಶದ ಪೊಂಗುರು ನಾರಾಯಣ 496 ಕೋಟಿ ರೂ.ಗಳೊಂದಿಗೆ ದೇಶದಲ್ಲೇ ಅತಿ ಶ್ರೀಮಂತ ಸಚಿವರಾಗಿದ್ದಾರೆ. ಅವರ ಮೇಲಿರುವ ಸಾಲದ ಹೊರೆ 34 ಕೋಟಿ ರೂ.ಮಾತ್ರ.
ಅರುಣಾಚಲ ಪ್ರದೇಶ, ಪಂಜಾಬ್ ಮತ್ತು ಪುದುಚೇರಿಯಲ್ಲಿ ಸಚಿವರಾಗಿರುವರೆಲ್ಲರೂ ಕೋಟ್ಯಧಿಪತಿಗಳೇ. ನಂತರದ ಸ್ಥಾನ ಕರ್ನಾಟಕದ್ದು. ಶೇ.97ರಷ್ಟು ಸಚಿವರು ಕೋಟ್ಯಧಿಪತಿಗಳು. ರಾಜಾಸ್ತಾನ, ಗೋವಾ, ಮೇಘಾಲಯ, ಛತ್ತಿಸ್ಗಡದ ಶೇ.92ರಷ್ಟು ಸಚಿವರು ಕೋಟ್ಯಧಿಪತಿಗಳಾಗಿದ್ದಾರೆ.
12 ಸಚಿವರಿರುವ ತ್ರಿಪುರ ರಾಜ್ಯದ ಸಚಿವರ ಸರಾಸರಿ ಆಸ್ತಿ ಅತ್ಯಂತ ಕಡಿಮೆ ಇದೆ. 31.37 ಲಕ್ಷ ರೂ. ಈ ಸಚಿವರ ಸರಾಸರಿ ಆಸ್ತಿ.
ಕೇಂದ್ರ ಸಚಿವರ ಆಸ್ತಿಗಳಿಗೆ ಹೋಲಿಸಿದರೆ ರಾಜ್ಯ ಸಚಿವರ ಆಸ್ತಿ ಕಡಮೆಯೇ. ಎಡಿಆರ್ ನಡೆಸಿರುವ ಸಮೀಕ್ಷೆ ಪ್ರಕಾರ ಕೇಂದ್ರ ಸರ್ಕಾರದಲ್ಲಿ ಸಚಿವರಾಗಿರುವವರ ಸರಾಸರಿ ಆಸ್ತಿ 12.94 ಕೋಟಿ ರೂ. ಇದ್ದರೆ, ರಾಜ್ಯಗಳಲ್ಲಿ ಸಚಿವರಾಗಿರುವವರ ಸರಾಸರಿ ಆಸ್ತಿ 8.59 ಕೋಟಿ ರೂ.
ದೇಶದಲ್ಲೇ ಸಿರಿವಂತ ಸಚಿವರು
1)ಪೊಂಗುರು ನಾರಾಯಣ (ಆಂಧ್ರ) – 496 ಕೋಟಿ ರೂ.
2)ಡಿ. ಕೆ. ಶಿವಕುಮಾರ್(ಕರ್ನಾಟಕ) – 251 ಕೋಟಿ ರೂ.
3)ಎಂ ಆರ್ ಸೀತಾರಾಮ್(ಕರ್ನಾಟಕ) 136 ಕೋಟಿ ರೂ.
ಸಾಲಗಾರರಲ್ಲಿ ಅಗ್ರರು
1)ಡಿ ಕೆ. ಶಿವಕುಮಾರ್(ಕರ್ನಾಟಕ) – 105 ಕೋಟಿ ರೂ.
2)ಸಂಜಯ್ ಪಾಠಕ್(ಮಧ್ಯಪ್ರದೇಶ)- 58 ಕೋಟಿ ರೂ.
3)ಎಂ ಆರ್ ಶಿವರಾಮ್(ಕರ್ನಾಟಕ) – 53 ಕೋಟಿ ರೂ.
Comments are closed.