ನವದೆಹಲಿ: ಮೂರು ಕೋಟಿ ಮನೆಯಲ್ಲಿ ವಾಸ, ಎಸ್ಯುುವಿ ಕಾರಿನಲ್ಲಿ ಓಡಾಟ, ಪತಿ ಪ್ರತಿಷ್ಠಿತ ಕಂಪನಿಯಲ್ಲಿ ಉದ್ಯೋಗ, ಸುಖ ಜೀವನಕ್ಕೆ ಇನ್ನೇನು ಬೇಕು? ಆದರೆ 34 ವರ್ಷದ ಮಾಜಿ ಶಾಲಾ ಶಿಕ್ಷಕಿ ಭವಿಷ್ಯದ ದೃಷ್ಟಿಯಿಂದ ಗುರಗಾಂವ್ನ ಬೀದಿಬದಿ ಫಾಸ್ಟ್ ಪುಡ್ ಮಾರಾಟ ಮಾಡುತ್ತಿದ್ದಾರೆ.
ಹೌದು, ಸುಖ ಸಂಸಾರಕ್ಕೆ ಬೇಕಾದ ಎಲ್ಲಾ ಸೌಕರ್ಯಗಳಿದ್ದರು ಉರ್ವಶಿ ಯಾದವ್ ರಸ್ತೆ ಪಕ್ಕದಲ್ಲಿ ನಿಂತು ಮರದ ತಳ್ಳುಗಾಡಿಯಲ್ಲಿ ಫಾಸ್ಟ್ ಪುಡ್ ಮಾರಾಟಮಾಡುತ್ತಿದ್ದಾರೆ. ಬೆಳಗಿನಿಂದ ಸಂಜೆವರೆಗೆ ಬೆವರು ಹರಿಸುತ್ತಾ ಒಂದೇ ಸಮನೆ ದುಡಿಯುತ್ತಿದ್ದಾರೆ. ಈ ಮಹಿಳೆ ಇಷ್ಟೊಂದು ಕಷ್ಟ ಪಡಲು ಒಂದು ಕಹಾನಿ ಇದೆ. ಉದ್ಯೋಗದ ನಿಮಿತ್ತ ಪತಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವರ್ಗಾವಣೆಗೊಂಡ ಸಂದರ್ಭದಲ್ಲಿ ಅಪಘಾತವೊಂದು ಸಂಭವಿಸಿತು. ಈ ಘಟನೆಯಲ್ಲಿ ಪತಿಯ ಸೊಂಟದ ಭಾಗಕ್ಕೆ ಬಲವಾದ ಏಟು ಬಿದ್ದ ಪರಿಣಾಮ ಶಸ್ತ್ರ ಚಿಕಿತ್ಸೆಗೆ ಅಪಾರವಾದ ಹಣ ಖರ್ಚಾಯಿತು. ಇದರಿಂದಾಗಿ ತಾನು ಮನೆಯಲ್ಲಿ ಕೂತು ತಿನ್ನುವ ಬದಲು ಕುಟುಂಬಕ್ಕೆ ನೆರವಾಗಬೇಕೆಂದು ಆ ಕ್ಷಣದಲ್ಲೇ ಉರ್ವಶಿ ದಿಟ್ಟ ನಿರ್ಧಾರಕೈಗೊಂಡರು. ಇದರಿಂದಾಗಿ ಉರ್ವಶಿ ಮರದ ತಳ್ಳುಗಾಡಿ ಖರೀದಿಸಿ ರಸ್ತೆ ಬದಿ ಮಾರಾಟ ಆರಂಭಿಸಿದರು. ಅಷ್ಟೇ ಅಲ್ಲ ನರ್ಸರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೂಡ ಸೇರಿಕೊಂಡರು.
ಈ ಕುರಿತು ಸ್ವತಃ ಉರ್ವಶಿ ಪ್ರತಿಕ್ರಿಯಿಸಿದ್ದು, ನನ್ನ ಕುಟುಂಬಕ್ಕೆ ಯಾವುದೇ ರೀತಿಯ ಹಣಕಾಸಿನ ತೊಂದರೆಯಿಲ್ಲ. ಆದರೆ ಭವಿಷ್ಯದ ದೃಷ್ಟಿಯಿಂದ ನಾನು ಈ ಕೆಲಸ ಮಾಡುತ್ತಿದ್ದೇನೆ. ಕೇವಲ ಶಿಕ್ಷಕ ವೃತ್ತಿಯಿಂದ ಅಧಿಕ ಹಣಗಳಿಸಲು ಸಾಧ್ಯವಾಗುವುದಿಲ್ಲ ಎಂದು ಅರಿತು ಈ ವೃತ್ತಿಯನ್ನು ಆಯ್ದುಕೊಂಡೆ. ಅಷ್ಟಕ್ಕೂ ನನಗೆ ಮೊದಲಿನಿಂದಲೂ ಅಡುಗೆಯಲ್ಲಿ ಆಸಕ್ತಿ ಇತ್ತು. ಇದೀಗ ಈ ವ್ಯಾಪಾರದಿಂದ ಪ್ರತಿನಿತ್ಯ 2,500 ರೂಪಾಯಿಯಿಂದ 3,000 ರೂ ಆದಾಯ ಬರುತ್ತಿದೆ ಎಂದು ತಿಳಿಸಿದ್ದಾರೆ.
ಉರ್ವಶಿ ಅವರಿಗೆ ಇಬ್ಬರು ಮಕ್ಕಳಿದ್ದು, ಮಗಳಿಗೆ ಹನ್ನೆರಡು ವರ್ಷ ಹಾಗೂ ಮಗನಿಗೆ ಏಳು ವರ್ಷ. ಇನ್ನು ಮಾವ ನಿವೃತ ಭಾರತೀಯ ವಾಯುದಳದ ಕಮಾಂಡರ್ ಆಗಿದ್ದಾರೆ.
Comments are closed.