
ಮುಂಬೈ: ದೇಹವನ್ನು ತನಗೆ ಬೇಕಾದ ರೀತಿಯಲ್ಲಿ ರೂಪಿಸಿಕೊಳ್ಳುವಲ್ಲಿ ಆಮೀರ್ ನಿಸ್ಸೀಮ. ಇದಕ್ಕಾಗಿ ಆತನಲ್ಲಿರುವ ಶಿಸ್ತುಬದ್ಧತೆ ನನ್ನಿಂದ ಸಾಧ್ಯವಾಗುವುದಿಲ್ಲ ಎಂದು ಹೇಳುವ ಮೂಲಕ ಪರೋಕ್ಷವಾಗಿ ಸಹ ನಟನನ್ನು ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಹೊಗಳಿದ್ದಾರೆ.
ದಂಗಾಲ್ ಚಿತ್ರಕ್ಕಾಗಿ ಆಮೀರ್ ರೂಪಿಸಿಕೊಂಡ ಕಟ್ಟುಮಸ್ತಾದ ಶರೀರ ನೋಡಿ ಸ್ವತಃ ಶಾರುಖ್ ದಂಗಾಗಿ ಹೋಗಿದ್ದಾರೆ. ಈ ವಿಚಾರವಾಗಿ ಮಾಧ್ಯಮದ ಮುಂದೆ ಮಾತನಾಡಿದ ದಿಲ್ ವಾಲೆ ನಟ, ಎರಡು ವರ್ಷದ ಹಿಂದೆ ಸಮಾರಂಭವೊಂದರಲ್ಲಿ ಆಮೀರ್ನನ್ನು ಭೇಟಿಯಾಗಿದ್ದೆ. ಆಗ ಆಮೀರ್ ನನಗಿಂತಲು ಕಡಿಮೆ ತೂಕ ಹೊಂದಿದ್ದ. ಆದರೆ ಇದೀಗ ನೋಡಿದರೆ ನಿಜಕ್ಕೂ ಆಶ್ಚರ್ಯ ಹಾಗೂ ಹೆಮ್ಮೆ ಅನಿಸುತ್ತದೆ. ಈ ರೀತಿ ಕಟ್ಟುಮಸ್ತಾದ ದೈಹಿಕ ಸೌಂದರ್ಯ ಪಡೆಯಲು ಆತನ ಸಮರ್ಪಣಾ ಮನೋಭಾವವೇ ಕಾರಣ ಎಂದು ತಿಳಿಸಿದ್ದಾರೆ.
ಓಂ ಶಾಂತಿ ಓಂ ಚಿತ್ರದಲ್ಲಿ ಶಾರುಖ್ ಖಾನ್ ಸಿಕ್ಸ್ ಪ್ಯಾಕ್ ರೂಪಿಸಿಕೊಂಡು ತಮ್ಮ ಅಭಿಮಾನಿಗಳಿಂದ ಚಪ್ಪಾಳೆಗಿಟ್ಟಿಸಿಕೊಂಡಿದ್ದರು. ಆದರೆ ಆಮೀರ್ ಖಾನ್ ಘಜನಿ ಚಿತ್ರದಲ್ಲಿ ಏಟ್ ಪ್ಯಾಕ್ ನಿರ್ವಿುಸಿಕೊಂಡು ಬಾಲಿವುಡ್ ಮಂದಿ ಹುಬ್ಬೇರಿಸುವಂತೆ ಮಾಡಿದ್ದರು. ನಿತೇಶ್ ತಿವಾರಿ ನಿರ್ದೇಶನ ದಂಗಾಲ್ ಚಿತ್ರಕ್ಕಾಗಿ ಹಲವು ತಿಂಗಳಿಂದ ಸಿದ್ಧತೆ ಮಾಡಿಕೊಂಡಿದ್ದ ಆಮೀರ್ ಮತ್ತೊಮ್ಮೆ ಮೋಡಿ ಮಾಡಲು ಕಾತರರಾಗಿದ್ದಾರೆ.
Comments are closed.