ಕರಾವಳಿ

ಮೌಢ್ಯ ಪ್ರತಿಬಂಧಕ ಕಾನೂನು ಜಾರಿಗೆ ಒತ್ತಾಯಿಸಿ ಆ. 28ರಂದು ರಾಜ್ಯಮಟ್ಟದ ಸಮಾವೇಶ, ಸಹಿ ಸಂಗ್ರಹ ಅಭಿಯಾನ

Pinterest LinkedIn Tumblr

Nidumamidi Math Seer Veerbhadra Channamalla Swamiji speaking at the meeting called to discuss and demand for the Karnataka Anti Superstitious Bill, organised at the Math in Bengaluru on Sunday. Prof. N V Narasimhaiah, writer Prof. Chandrashekhar Patil, MLA Puttannaiah and writer K Maralusiddappa are seen. -Photo/ AB

ಬೆಂಗಳೂರು: ಮೌಢ್ಯಾಚರಣೆ ಪ್ರತಿಬಂಧಕ ಕಾನೂನಿಗೆ ಒತ್ತಾಯಿಸಿ ಆ. 28ರಂದು ರಾಜ್ಯಮಟ್ಟದ ಸಮಾವೇಶ, ಸಹಿ ಸಂಗ್ರಹ ಅಭಿಯಾನ ನಡೆಸಲು, ಕರ್ನಾಟಕ ಮೌಢ್ಯಾಚಾರಣೆ ಪ್ರತಿಬಂಧ ಕಾನೂನು ಜಾರಿಗಾಗಿ ಒತ್ತಾಯಿಸುವ ಕ್ರಿಯಾಸಮಿತಿ ನಿರ್ಣಯ ಕೈಗೊಂಡಿದೆ.

ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲಸ್ವಾಮೀಜಿ ಭಾನುವಾರ ನಡೆದ ಸಮಾಲೋಚನಾ ಸಭೆಯಲ್ಲಿ ವಿಮರ್ಶಕ ಡಾ.ಕೆ. ಮರುಳಸಿದ್ದಪ್ಪ ನಿರ್ಣಯಗಳನ್ನು ಮಂಡಿಸಿ, ಒಪ್ಪಿಗೆ ಪಡೆದರು.

ಉದ್ದೇಶಿತ ಮಸೂದೆ ಬಗ್ಗೆ ಸಮಗ್ರವಾಗಿ ಚರ್ಚಿಸಿ ವರದಿ ನೀಡಲು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಉಪಸಮಿತಿ ರಚಿಸಿರುವುದು ಸ್ವಾಗತಾರ್ಹ. ಸಮಾಜವಾದಿ ಚಳವಳಿಯಿಂದ ಬಂದಿರುವ ಅವರು ಎಲ್ಲರ ಸಲಹೆ ಪಡೆದು ಮಸೂದೆ ಜಾರಿಗೆ ಬರುವಂತೆ ವರದಿ ನೀಡುವರು ಎಂಬ ನಂಬಿಕೆ ಇದೆ ಎಂದು ಕೆ. ಮರುಳಸಿದ್ದಪ್ಪ ಹೇಳಿದರು.

ಎಲ್ಲ ಪಕ್ಷಗಳ ಮುಖಂಡರು, ಜನಪ್ರತಿನಿಧಿಗಳು ಹಾಗೂ ಪ್ರಮುಖ ಮಠಾಧೀಶರನ್ನು ಭೇಟಿ ಮಾಡಿ ಮಸೂದೆ ಜಾರಿಗೆ ಸಹಕರಿಸುವಂತೆ ಮನವಿ ಮಾಡಬೇಕು. ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಸಮಾವೇಶ ಮತ್ತು ಮಾಧ್ಯಮಗೋಷ್ಠಿ ನಡೆಸಿ ಸ್ಥಳೀಯ ಶಾಸಕರು ಮಸೂದೆ ಬೆಂಬಲಿಸುವಂತೆ ಮನವಿ ಸಲ್ಲಿಸಬೇಕು. ಎಲ್ಲೆಡೆ ಸಹಿ ಸಂಗ್ರಹ ಅಭಿಯಾನ ನಡೆಸಿ ಮಸೂದೆ ಜಾರಿಗೆ ಒತ್ತಾಯಿಸಬೇಕು ಎಂಬ ನಿರ್ಣಯಗಳನ್ನು ಕೈಗೊಳ್ಳಲಾಗಿದೆ ಎಂದು ವಿವರಿಸಿದರು.

ಇದಕ್ಕೂ ಮುನ್ನ ಮಾತನಾಡಿದ ವೀರಭದ್ರ ಚನ್ನಮಲ್ಲಸ್ವಾಮೀಜಿ, ಸಚಿವ ಸಂಪುಟ ಉಪ ಸಮಿತಿ ಕಾಲಮಿತಿಯಲ್ಲಿ ವರದಿ ನೀಡಬೇಕು. ಕರಡು ಪ್ರತಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಿ ಜನಾಭಿಪ್ರಾಯ ಸಂಗ್ರಹಿಸಬೇಕು. ವಾಸ್ತು ಮತ್ತು ಜ್ಯೋತಿಷ್ಯಕ್ಕೆ ಅಧಿಕೃತ ಮನ್ನಣೆ ಸಿಗದಂತೆ ಸರ್ಕಾರ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಕವಿ ಪ್ರೊ.ಚಂದ್ರಶೇಖರ ಪಾಟೀಲ ಮಾತನಾಡಿ, ‘ಮಸೂದೆ ಬಗ್ಗೆ ಆಕ್ಷೇಪ ಎತ್ತಿರುವ ಸಚಿವ ಕಾಗೋಡು ತಿಮ್ಮಪ್ಪ ಅವರನ್ನು ಉಪಸಮಿತಿ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಅವರನ್ನು ಬದಲಾಯಿಸಲು ಸರ್ಕಾರದ ಮೇಲೆ ಒತ್ತಡ ಹೇರೋಣ’ ಎಂದರು.

ಕವಿ ಪ್ರೊ.ಎಸ್‌.ಜಿ. ಸಿದ್ದರಾಮಯ್ಯ ಮಾತನಾಡಿ, ಕಾಗೋಡು ತಿಮ್ಮಪ್ಪ ಅವರ ಹೊರತಾಗಿ ಬೇರಾರಿಗೂ ವರದಿ ಮಂಡಿಸುವ ಗಟ್ಟಿತನ ಇಲ್ಲ. ಯಾವ ಕಾರಣಕ್ಕೆ ಮಸೂದೆಗೆ ವಿರುದ್ಧವಾಗಿ ಮಾತನಾಡಿದ್ದಾರೊ ಗೊತ್ತಿಲ್ಲ. ಅವರನ್ನು ಭೇಟಿ ಮಾಡಿ ಮನವೊಲಿಸುವುದು ಸೂಕ್ತ ಎಂದು ಸಲಹೆ ನೀಡಿದರು.

‘ಕಾಂಗ್ರೆಸ್‌ ಬುದ್ಧಿಜೀವಿಗಳು’
‘ಡಾ.ಕೆ. ಮರುಳಸಿದ್ದಪ್ಪ ಮತ್ತು ಪ್ರೊ.ಎಸ್.ಜಿ. ಸಿದ್ದರಾಮಯ್ಯ ಅವರು ಕಾಂಗ್ರೆಸ್‌ ಬುದ್ಧಿಜೀವಿಗಳು’ ಎಂದು ಪ್ರೊ.ಚಂದ್ರಶೇಖರ ಪಾಟೀಲ ಅವರು ಮಾಡಿದ ಬಣ್ಣನೆ, ಸಭೆಯಲ್ಲಿ ವಾದ–ಪ್ರತಿವಾದಕ್ಕೆ ಕಾರಣವಾಯಿತು.

ರಾಜ್ಯದಲ್ಲಿ ಕಾಂಗ್ರೆಸ್‌ ಆಡಳಿತದಲ್ಲಿದ್ದು, ಮುಖ್ಯಮಂತ್ರಿ ಮತ್ತು ಸಚಿವರನ್ನು ಕ್ರಿಯಾ ಸಮಿತಿಯಲ್ಲಿನ ಕೆಲವರು ಸುಲಭವಾಗಿ ಸಂಪರ್ಕಿಸಬಹುದು. ಹೇಗಿದ್ದರೂ ಕೆ.ಮರುಳಸಿದ್ದಪ್ಪ ಮತ್ತು ಎಸ್.ಜಿ. ಸಿದ್ದರಾಮಯ್ಯ ಕಾಂಗ್ರೆಸ್‌ ಬುದ್ದಿ ಜೀವಿಗಳಾಗಿ ಗುರುತಿಸಿಕೊಂಡಿದ್ದಾರೆ. ಅವರು ಇಬ್ಬರೂ ಸರ್ಕಾರದ ಮನವೊಲಿಸಬಹುದು ಎಂದು ನಗುತ್ತಲೆ ಹೇಳಿದರು.

ಇದರಿಂದ ಸಿಟ್ಟಾದ ಡಾ.ಕೆ. ಮರುಳಸಿದ್ದಪ್ಪ, ‘ಕಾಂಗ್ರೆಸ್‌ ಬುದ್ದಿಜೀವಿಗಳು ಎಂಬ ಮಾತು ವಾಪಸ್‌ ಪಡೆಯಿರಿ’ ಎಂದರು.

ಪ್ರೊ. ಜಿ.ಎಸ್‌.ಸಿದ್ದರಾಮಯ್ಯ ಮಾತನಾಡಿ, ‘ಕೋಮುವಾದಿ ಬಿಜೆಪಿ ಆಡಳಿತ ಹಿಡಿದಿದ್ದ ಕಾರಣ ಪರ್ಯಾಯವಾಗಿ ಕಂಡ ಕಾಂಗ್ರೆಸ್‌ ಬೆಂಬಲಿಸಿ ಬೀದಿಗೆ ಇಳಿದಿದ್ದೆವು. ಆದರೆ ಅಂತರ ಕಾಯ್ದುಕೊಂಡಿದ್ದೇವೆ’ ಎಂದು ಸಮಜಾಯಿಷಿ ನೀಡಿದರು.

ಈ ನಡುವೆ ಮುಖ್ಯಮಂತ್ರಿ ಕಾರಿನ ಮೇಲೆ ಕಾಗೆ ಕುಳಿತಿದ್ದ ವಿಚಾರ ಪ್ರಸ್ತಾಪವಾದಾಗ ಶಾಸಕ ಕೆ.ಎಸ್‌. ಪುಟ್ಟಣ್ಣಯ್ಯ ಮಾತನಾಡಿ, ‘ಕಾಗೆ ಕುಳಿತ ಕಾರಣಕ್ಕೆ ಕಾರು ಬದಲಿಸಿದರು ಎಂದು ಮಾಧ್ಯಮಗಳು ಬಿಂಬಿಸಿವೆ. ಈ ಅಪವಾದದಿಂದ ಹೊರಬರಲು ಮುಖ್ಯಮಂತ್ರಿ ಅವರು ಕಾರಿನಲ್ಲಿ ಕಾಗೆಯೊಂದನ್ನು ಕಾಯಂ ಕೂರಿಸಿಕೊಳ್ಳುವುದು ಒಳ್ಳೆಯದು’ ಎಂದು ಸಲಹೆ ನೀಡಿ ಹಾಸ್ಯ ಚಟಾಕಿ ಹಾರಿಸಿದರು.

Comments are closed.