ಮುಂಬೈ: 26/11 ಮುಂಬೈ ಭಯೋತ್ಪಾದಕ ದಾಳಿ ವೇಳೆ ತನ್ನ ಪ್ರಾಣದ ಹಂಗು ತೊರೆದು ಉಗ್ರರು ಅಡಗಿಸಿದ್ದ ಬಾಂಬ್ ಅನ್ನು ಹುಡಿಕಿದ್ದ ಪೊಲೀಸ್ ನಾಯಿ “ಟೈಗರ್” ಶನಿವಾರ ತಡರಾತ್ರಿ ಮುಂಬೈನಲ್ಲಿ ಕೊನೆಯುಸಿರೆಳೆದಿದೆ.
ಮೂಲಗಳ ಪ್ರಕಾರ ಟೈಗರ್ ನಾಯಿ ವಯೋ ಸಹಜ ಸಾವಿಗೀಡಾಗಿದೆ ಎಂದು ತಿಳಿದುಬಂದಿದೆ. ಈ ಹಿಂದೆ ಮುಂಬೈ ಭಯೋತ್ಪಾದಕ ದಾಳಿ ಪ್ರಕರಣ ಬಳಿಕ ಕೊಲಾಬಾದಲ್ಲಿರುವ ತಾಜ್ ಹೊಟೆಲ್ ನಲ್ಲಿ ಒಂದಷ್ಚು ದಿನಗಳ ಕಾಲ ಭದ್ರತಾ ಸೇವೆಗೆ ನಿಯೋಜನೆಯಾಗಿದ್ದ “ಟೈಗರ್” ನಾಯಿ ಬಳಿಕ ನಿವೃತ್ತಿಯಾಗಿತ್ತು. ಟೈಗರ್ ನಿವೃತ್ತಿ ಬಳಿಕ ಮುಂಬೈನ ಪ್ರಾಣಿ ಸಂಘಟನಾ ಸದಸ್ಯ ಫಿಝಾ ಶಾ ಎಂಬುವವರು ಟೈಗರ್ ನಾಯಿ ಸೇರಿದಂತೆ ಇತರೆ ಮ್ಯಾಕ್ಸ್, ಸುಲ್ತಾನ್, ಸೀಸರ್ ಎಂಬ ನಾಲ್ಕು ನಿವೃತ್ತ ನಾಯಿಗಳನ್ನು ಸಾಕುವ ಜವಾಬ್ದಾರಿ ತೆಗೆದುಕೊಂಡಿದ್ದರು.
ಆದರೆ ನಿನ್ನೆ ಫಿಝಾ ಶಾ ಅವರ ವಿರಾರ್ ನಲ್ಲಿರುವ ನಿವಾಸದಲ್ಲಿ ಟೈಗರ್ ನಾಯಿ ಸಾವನ್ನಪ್ಪಿದೆ. ಕಳೆದ ಹಲವು ದಿನಗಳಿಂದ ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದ “ಟೈಗರ್” ಆರೋಗ್ಯ ಸ್ಥಿತಿ ಶುಕ್ರವಾರ ತೀರಾ ಗಂಭೀರವಾಗಿತ್ತು. ಈ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತಾದರೂ ಶನಿವಾರ ರಾತ್ರಿ ನಾಯಿ ತನ್ನ ಕೊನೆಯುಸೆರೆಳಿದಿದೆ.
ಮುಂಬೈ ದಾಳಿ ಪ್ರಕರಣದ ಬಳಿಕ ಪೊಲೀಸ್ ಇಲಾಖೆಯಲ್ಲಿ ಖ್ಯಾತಿ ಪಡೆದಿದ್ದ ಟೈಗರ್ ಗೆ ಇದೀಗ ಖ್ಯಾತನಾಮರು ಅಂತಿಮ ಗೌರವ ಸಲ್ಲಿಸಿದ್ದಾರೆ.
Comments are closed.