
ಇಂದಿನ ಜೀವನಕ್ರಮ ನಮ್ಮ ಮೇಲೆ ಅದೆಷ್ಟು ಒತ್ತಡ ಬೀರುತ್ತದೆ ಎಂದರೆ ಇದರ ಪರಿಣಾಮವಾಗಿ ನಾವು ಸಿಟ್ಟಿನ ದಾಸರಾಗುತ್ತೇವೆ. ಪ್ರತಿಯೊಂದು ವಿಚಾರದಲ್ಲೂ ಸಿಡುಕು ಭಾವ ಸಾಮಾನ್ಯವಾಗಿದೆ. ಪ್ರತಿದಿನದ ಆಗುಹೋಗುಗಳಲ್ಲಿ, ಮನಸ್ಸಿನ ಒತ್ತಡದಿಂದ ನಮಗರಿವಿಲ್ಲದಂತೆ ತಪ್ಪಿಲ್ಲದ ಅಮಾಯಕರು ನಮ್ಮ ಈ ಸಿಟ್ಟಿಗೆ ಗುರಿಯಾಗುತ್ತಾರೆ. ಬೈಸಿಕೊಂಡರು ತಮ್ಮ ತಪ್ಪೇನು ಎಂಬುವುದನ್ನು ಯೋಚಿಸುವುದರಲ್ಲೇ ಮಗ್ನರಾಗಿರುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ನಮ್ಮನ್ನು ನಾವು ಕಂಟ್ರೋಲ್ ಮಾಡಿಕೊಳ್ಳುವುದು ಹೇಗೆ ಎಂಬುವುದನ್ನು ತಿಳಿದುಕೊಳ್ಳುವುದು ಅತೀ ಅಗತ್ಯ. ಸಿಟ್ಟು ಬಂದ ವೇಳೆ, ನಮ್ಮ ಕೋಪವನ್ನು ತಡೆಯುವುದು ಹೇಗೆ? ಇದಕ್ಕೆ ಸಿಂಪಲ್ ಆದ ಟಿಪ್ಸ್ ಇಲ್ಲವೆ ನೋಡಿ
ನಿಮಗೆ ಸಿಟ್ಟು ಬಂದ ವೇಳೆ ಎಣಿಕೆ ಆರಂಭಿಸಿ. ಪ್ರತಿ ಒಂದು ಕೌಂಟ್ ಬಂದಾಗ ಹಾಸ್ಯಾಸ್ಪದ ವಿಚಾರಗಳನ್ನು ಸಾದ್ಯವಾದಷ್ಟು ನೆನಪಿಸಿಕೊಳ್ಲಿ. ಹೀಗೆ ಮಾಡುವುದರಿಂದ ನಗು ಬರುವುದರಲ್ಲಿ ಯಾವುದೇ ಸಂಶಯವಿಲ್ಲ. ಇದನ್ನು ರೂಡಿಸಿಕೊಳ್ಳುವುದರಿಂದ ನೀವು ಕೋಪಗೊಂಡ ಕ್ಷಣವನ್ನು ಮರೆಯಲು ಸಾಧ್ಯವಾಗುತ್ತದೆ.
ವಿನಾ ಕಾರಣ ನಿಮ್ಮ ಗೆಳೆಯರ, ಕುಟುಂಬದ ಸದಸ್ಯರ ಮೇಲೆ ರೇಗಾಡುವುದರಿಂದ, ಕೋಪದಿಂದ ಬಾಗಿಲನ್ನು ಬಡಿಯುವುದರಿಂದ ಯಾವುದೇ ಸಮಸ್ಯೆಗೆ ಪರಿಹಾರ ದೊರಕುವುದಿಲ್ಲ. ಒಂದು ವೇಳೆ ಈ ರೀತಿಯ ವರ್ತನೆ ನೀವು ತೋರುವುರಾದರೆ ಇದು ಇತರರ ಕೋಪಕ್ಕೂ ಕಾರಣವಾಗುವ ಸಾಧ್ಯತೆಗಳಿವೆ. ಹೀಗಾಗಿ ಸಿಟ್ಟು ಬಂದ ವೇಳೆ ಏಕಾಂತವಿರುವ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಿ, ಿಲ್ಲಿ ನೀವು ಅದೆಷ್ಟು ಬೇಕಾದರೂ ಕೋಪಿಸಿಕೊಳ್ಳಬಹುದು ಇಲ್ಲವೇ ಅಳುವಿನ ರೂಪದಲ್ಲಿ ಹೊರಹಾಕಬಹುದು. ಮನೆಯ ಮಹಡಿ ಇದಕ್ಕೆ ಸೂಕ್ತ ಸ್ಥಳವೆನ್ನಬಹುದು.
ಆಫೀಸ್’ನಲ್ಲಿ ನಿಮ್ಮ ಇಂದಿನ ದಿನ ಚೆನ್ನಾಗಿರಲಿಲ್ಲ ಎಂಬ ಕಾರಣಕ್ಕೆ ನಿಮಗೆ ಕೋಪ ಬರುವ ಸಾಧ್ಯತೆಗಳಿವೆ. ಇಂತಹ ಸಂದರ್ಭಗಳಲ್ಲಿ ನಿಮ್ಮ ಆಫೀಸ್’ನ ಟೆನ್ಶನ್’ನ್ನು ಸಾಧ್ಯವಾದಷ್ಟು ನಿಮ್ಮ ಮನೆಯಿಂದ ದೂರವಿಡಲು ಪ್ರಯತ್ನಿಸಿ. ಕೆಲ ಸಮಯ ನಿಮ್ಮೊಂದಿಗೆ ನೀವು ಕಳೆದು, ನಿಮ್ಮನ್ನು ನೀವೇ ಸಂತೈಸಿಕೊಳ್ಳಿ. ಇಲ್ಲವಾದರೆ ಮಸಾಜ್ ಮಾಡಿಸಿಕೊಳ್ಳಿ, ಶಾಪಿಂಗ್’ಗೆ ತೆರಳಲೂಬಹುದು.ಇದೆಲ್ಲವೂ ನಿಮಗೆ ಉತ್ತಮ ಭಾವನೆ ಮೂಡಿಸುವುದರೊಂದಿಗೆ, ಆಫೀಸ್ ಟೆನ್ಶನ್ ಮರೆಯಲು ಸಹಾಯ ಮಾಡುತ್ತದೆ.
ದೈಹಿಕ ವ್ಯಾಯಾಮದಿಂದ ನಮ್ಮ ಮೆದುಳಿನಿಂದ ಎಂಡೋರ್ಫಿನ್ ಬಿಡುಗಡೆಯಾಗುತ್ತದೆ. ಇದು ನಮ್ಮ ಬಗ್ಗೆ ನಾವು ಒಲವು ಮೂಡಿಸಲು ಸಹಾಯ ಮಾಡುತ್ತದೆ. ನಮ್ಮ ಜೀವನ ಕ್ರಮದಲ್ಲಿ ಪ್ರತಿದಿನ ಯೋಗ, ಧ್ಯಾನ ಮಾಡುವುದನ್ನು ರೂಡಿಸಿಕೊಳ್ಳುವುದರಿಂದ ಕೋಪವನ್ನು ತಡೆಗಟ್ಟುವುದರೊಂದಿಗೆ, ಅದನ್ನು ಎದುರಿಸುವ ಸಾಮರ್ಥ್ಯ ನಮ್ಮಲ್ಲಿ ಹೆಚ್ಚಾಗುತ್ತದೆ.
ನಮ್ಮ ಕೋಪವನ್ನು ಇತರರ ಮೇಲೆ ತೋರಿಸುವುದು ಬಹಳ ಸುಲಭ. ಆದರೆ ಈ ರೀತಿ ನಡೆದುಕೊಳ್ಳುವ ಬದಲು ಆ ಕ್ಷಣ ನೀವಿದ್ದ ಸ್ಥಳದಿಂದ ಎದ್ದು, ಸ್ವಲ್ಪ ಹೊತ್ತು ಹೊರಗಡೆ ತಿರುಗಾಡಿ ಶಾಂತ ಮನಸ್ಸಿನಿಂದ ನಿಮ್ಮ ಸಮಸ್ಯೆಗೆ ಪರಿಹಾರ ಹುಡುಕಿಕೊಳ್ಳಿ.
ನಿಮ್ಮ ಕೋಪ ಕಂಟ್ರೋಲ್ ಮಾಡಲು ಸಾಧ್ಯವಿಲ್ಲ ಹಾಗೂ ಈ ಕೋಪ ನಿಮ್ಮ ಸಂಬಂಧಗಳ ಮೇಲೆ ಅಡ್ಡ ಪರಿಣಾಮ ಬೀರುತ್ತದೆ ಎಂದಾದರೆ ಕೌನ್ಸಲರ್’ನ ಸಹಾಯ ಪಡೆದುಕೊಳ್ಳಿ. ಈ ಕೌನ್ಸಲರ್ ವೃತ್ತಿಪರರೇ ಆಗಿರಬೇಕೆಂದಿಲ್ಲ. ಬದಲಾಗಿ ನಿಮ್ಮ ತಂದೆ-ತಾಯಿ, ಅಣ್ಣ- ಅಕ್ಕ ಇಲ್ಲವೇ ನಿಮ್ಮ ಗೆಳೆಯರೂ ಆಗಿರಬಹುದು. ಆದರೆ ನಿಮಗೆ ಅವರ ಮೇಲೆ ವಿಶ್ವಾಸವಿರಬೇಕಷ್ಟೇ.
ಇವೆಲ್ಲವೂ ನಿಮಗೆ ಬರುವ ಕೋಪವನ್ನು ತಡೆಗಟ್ಟಲು ಸಹಾಯಕವಾಗುವಂತಹ ಕೆವು ಸರಳವಾದ ಟಿಪ್ಸ್, ಇದನ್ನು ಅನುಸರಿಸುವುದರಿಂದ ನಿಮ್ಮ ಸಿಟ್ಟನ್ನು ಕಡಿಮೆಗೊಳಿಸಬಹುದಾಗಿದೆ.
Comments are closed.