
ಊಟ ಮಾಡುವ ವೇಳೆ ಶೌಚದ ವಿಚಾರ ಎತ್ತಿದರೆ ಅನೇಕರು ಅರ್ಧದಲ್ಲಿ ಆಹಾರ ಸೇವಿಸುವುದನ್ನು ಬಿಟ್ಟು ತೆರಳುತ್ತಾರೆ. ಆದರೆ ಇಂಡೋನೇಷ್ಯಾದ ಜಾಂಬನ್ ಕೆಫೆಗೆ ತೆರಳಿ ‘ಬಾಕ್ಸೋ’ಗೆ ಅರ್ಡರ್ ಮಾಡಿದರೆ, ನೀವು ಒಂದುಕ್ಷಣ ಅಚ್ಚರಿಗೆ ಒಳಗಾಗುತ್ತೀರಿ! ಏಕೆಂದರೆ ನಿಮ್ಮ ಮುಂದೆ ತಂದಿಡುವ ಫುಡ್ಗಿಂತಲೂ ಪಾತ್ರೆ ನೋಡಿ ಒಂದು ಕ್ಷಣ ಮುಜುಗರಕ್ಕೆ ಒಳಗಾಗುವ ಸಾಧ್ಯತೆಯೇ ಹೆಚ್ಚು. ದೇಶದ ಸಾಂಪ್ರದಾಯಕ ಆಹಾರವನ್ನು ಟಾಯ್ಲೆಟ್ ಕಮೋಡ್ ಮಾದರಿ ತಟ್ಟೆಯಲ್ಲಿ ವಿತರಿಸಲಾಗುತ್ತದೆ.
ಜಾಂಬನ್ ಎಂದರೆ ಇಂಡೋನೇಷ್ಯಾ ಭಾಷೆಯಲ್ಲಿ ಶೌಚಗೃಹ ಎಂದರ್ಥ. ಕಳೆದ ಏಪ್ರಿಲ್ನಿಂದಲೂ ಈ ಪದ್ಧತಿ ಅನುಸರಿಸಲಾಗುತ್ತಿದ್ದು, ಆರಂಭದಲ್ಲಿ ಬಳಸಲು ಹಿಂದೇಟು ಹಾಕಿದವರು ಈಗ ಮುಕ್ತವಾಗಿ ಸ್ವಾಗತಿಸುತ್ತಿದ್ದಾರೆ. ಹಾಗೆಂದ ಮಾತ್ರಕ್ಕೆ ಇಂತಹ ಕಲ್ಪನೆ ಮೊದಲೇನಲ್ಲ. ರಷ್ಯಾ ಹಾಗೂ ತೈವಾನ್ನಲ್ಲೂ ಶೌಚಗೃಹ ಮಾದರಿ ರೆಸ್ಟೋರೆಂಟ್ಗಳನ್ನು ಹೊಂದಿವೆ. ಇಂಡೋನೇಷ್ಯಾದಲ್ಲಿ ಮಾತ್ರ ಕಮೋಡ್ ಮಾದರಿ ತಟ್ಟೆಯಲ್ಲೇ ಆಹಾರ ನೀಡಲಾಗುತ್ತಿದೆ.
ಇಂಡೋನೇಷ್ಯಾದಲ್ಲಿ ಈಗಲೂ ಕೂಡ ಕೋಟಿಗೂ ಅಧಿಕ ಮಂದಿ ಬಡತನರೇಖೆಗಿಂತ ಕೆಳಗಿದ್ದು, ಬಯಲಿನಲ್ಲಿ ನಿತ್ಯಕರ್ಮಗಳನ್ನು ಪೂರೈಸುತ್ತಿದ್ದಾರೆ. ಜನರಲ್ಲಿ ಶೌಚಗೃಹದ ಕುರಿತಂತೆ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಇಂತಹ ಪ್ರಯತ್ನ ಮಾಡಿರುವುದಾಗಿ ರೆಸ್ಟೋರೆಂಟ್ನ ಮಾಲೀಕ ಬುಡಿ ಲಕ್ಕಾನೋ ತಿಳಿಸಿದ್ದಾರೆ. ಇವರ ನಿರ್ಧಾರಕ್ಕೆ ಸ್ಥಳೀಯಾಡಳಿತ ಮತ್ತು ಅನೇಕ ಸಂಘಸಂಸ್ಥೆಗಳು ಬೆಂಬಲ ವ್ಯಕ್ತಪಡಿಸಿವೆ.
Comments are closed.