ಕರ್ನಾಟಕ

ಬಿಜೆಪಿ-ಜೆಡಿಎಸ್ ವಿರುದ್ಧ ಕಿಡಿಕಾರಿದ ಸಿಎಂ ಸಿದ್ದರಾಮಯ್ಯ -ಪರಮೇಶ್ವರ್; ಏನು ಹೇಳಿದ್ರು ಮುಂದು ಓದಿ…

Pinterest LinkedIn Tumblr

sidd

ಬೆಂಗಳೂರು: ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಎಫ್‍ಐಆರ್ ದಾಖಲಿಸಿದಾಕ್ಷಣ ಆರೋಪಗಳು ಸಾಬೀತಾಗುವುದಿಲ್ಲ. ಹೀಗಾಗಿ ಇಬ್ಬರು ಐಪಿಎಸ್ ಹಿರಿಯ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವ ಅಗತ್ಯ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಲವಾಗಿ ಸಮರ್ಥಿಸಿಕೊಂಡರು.

ಕೆಪಿಸಿಸಿ ಕಚೇರಿಯಲ್ಲಿಂದು ಗೃಹ ಸಚಿವ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಜತೆಯಲ್ಲಿ ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಎಫ್‍ಐಆರ್ ದಾಖಲಿಸಿದಾಕ್ಷಣ ಮಾಜಿ ಸಚಿವ ಕೆ.ಜೆ.ಜಾರ್ಜ್ ಅವರನ್ನು ಬಂಧಿಸಬೇಕು ಎಂಬ ಒತ್ತಾಯ ಸರಿಯಲ್ಲ. ಈ ಮೊದಲು ಹೈದರಾಬಾದ್ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲ ಆತ್ಮಹತ್ಯೆ ಪ್ರಕರಣದಲ್ಲಿ ಕೇಂದ್ರ ಸಚಿವ ಬಂಡಾರು ದತ್ತಾತ್ರೆಯ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಐಪಿಸಿ ಸೆಕ್ಷನ್ 306ರ ಅಡಿ ಪ್ರಕರಣ ದಾಖಲಾಗಿದೆ.

ಹಾಗೆಂದ ಮಾತ್ರಕ್ಕೆ ಬಂಡಾರು ದತ್ತಾತ್ರೆಯ ರಾಜೀನಾಮೆ ನೀಡಿಲ್ಲ, ಅವರನ್ನು ಬಂಧಿಸಿಯೂ ಇಲ್ಲ ಎಂದು ಹೇಳುವ ಮೂಲಕ ಮುಂದಿನ ದಿನಗಳಲ್ಲಿ ಜಾರ್ಜ್ ಅವರ ಬಂಧನವನ್ನು ಮುಖ್ಯಮಂತ್ರಿ ತಳ್ಳಿ ಹಾಕಿದ್ದಾರೆ.

ಮಡಿಕೇರಿಯ ಜಿಲ್ಲಾ ನ್ಯಾಯಾಲಯದ ಆದೇಶವನ್ನು ನಾವು ಪಾಲಿಸುತ್ತೇವೆ. ನಮಗೆ ನ್ಯಾಯಾಂಗದ ಮೇಲೆ ನಂಬಿಕೆ ಇದೆ. ಎಫ್‍ಐಆರ್ ದಾಖಲಿಸಿದಾಕ್ಷಣ ಅಧಿಕಾರಿಗಳನ್ನು ಅಮಾನತು ಮಾಡಬೇಕು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ವಾದ ಸರಿಯಲ್ಲ. ಅಧಿಕಾರಿಗಳನ್ನು ದೀರ್ಘ ರಜೆ ಮೇಲೆ ತೆರಳುವಂತೆ ನಾನು ಸೂಚನೆಯನ್ನೂ ನೀಡಿಲ್ಲ. ಇದೆಲ್ಲ ಮಾಧ್ಯಮಗಳ ಕಪೋಕಲ್ಪಿತ ವರದಿ ಎಂದು ಹೇಳಿದರು.

ಮತ್ತೊಬ್ಬ ಡಿವೈಎಸ್‍ಪಿ ಕಲ್ಲಪ್ಪ ಹಂಡಿಭಾಗ್ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಸಿಎಂ, ಕಲ್ಲಪ್ಪ ಅವರನ್ನು ಅಮಾನತು ಮಾಡಿರಲಿಲ್ಲ ಎಂದು ಸ್ಪಷ್ಟಪಡಿಸಿದರು.

ಕಲ್ಲಪ್ಪ ಆತ್ಮಹತ್ಯೆ ಮಾಡಿಕೊಂಡ ಮರು ದಿನವೇ ಮಾಧ್ಯಮಗಳೊಂದಿಗೆ ಮಾತನಾಡಿದ ಪರಮೇಶ್ವರ್ ಅವರು, ಅಪಹರಣ ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ ಡಿವೈಎಸ್‍ಪಿ ಕಲ್ಲಪ್ಪ ಅವರನ್ನು ಅಮಾನತು ಮಾಡಲಾಗಿತ್ತು ಎಂದಿದ್ದರು. ಆದರೆ, ಮುಖ್ಯಮಂತ್ರಿ ಅವರು ಗೃಹ ಸಚಿವರು ಆ ರೀತಿ ಹೇಳಿಕೆ ನೀಡಿಲ್ಲ ಎಂದು ಸಮರ್ಥಿಸಿಕೊಂಡಿದ್ದಲ್ಲದೆ, ಕಲ್ಲಪ್ಪ ಅವರನ್ನು ಸರ್ಕಾರ ಅಮಾನತು ಮಾಡಿರಲಿಲ್ಲ ಎಂದು ಸ್ಪಷ್ಟಪಡಿಸಿದರು.

ಬಿಜೆಪಿ ನಾಯಕರಿಗೆ ಗಣಪತಿ ಮತ್ತು ಕಲ್ಲಪ್ಪ ಅವರಂತಹ ಪ್ರಕರಣಗಳಲ್ಲಿ ಕಾಂಗ್ರೆಸಿಗರ ರಾಜೀನಾಮೆ ಕೇಳುವ ನೈತಿಕತೆ ಇಲ್ಲ. ಯಡಿಯೂರಪ್ಪ ಅವರ ಮೇಲೆ 30 ಕ್ರಿಮಿನಲ್ ಪ್ರಕರಣಗಳಿವೆ. ಜಗದೀಶ್ ಶೆಟ್ಟರ್, ಈಶ್ವರಪ್ಪ ಅವರ ಮೇಲೂ ಕ್ರಿಮಿನಲ್ ಪ್ರಕರಣಗಳಿವೆ. ಜೆಡಿಎಸ್‍ನ ಎಚ್.ಡಿ.ಕುಮಾರಸ್ವಾಮಿ, ಎಚ್.ಡಿ.ರೇವಣ್ಣ ಹಾಗೂ ಅನಿತಾ ಕುಮಾರಸ್ವಾಮಿ ಅವರ ಮೇಲೂ ಕ್ರಿಮಿನಲ್ ಪ್ರಕರಣಗಳಿವೆ ಎಂದು ವಾಗ್ದಾಳಿ ನಡೆಸಿದರು.

ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿರುವ 13 ಜನರ ಮೇಲೆ ಕ್ರಿಮಿನಲ್ ಪ್ರಕರಣಗಳಿವೆ. ಸ್ಮೃತಿ ಇರಾನಿ ಮೇಲೆ ರಸ್ತೆ ಅಪಘಾತದಿಂದ ವ್ಯಕ್ತಿಯೊಬ್ಬರ ಸಾವಿಗೆ ಕಾರಣರಾದ ಆರೋಪವಿದೆ. ಉಮಾಭಾರತಿ ಅವರ ಮೇಲೆ ಎರಡು ಕೊಲೆ, 6 ಡಕಾಯಿತಿ, 13 ಕ್ರಿಮಿನಲ್ ಪ್ರಕರಣಗಳಿವೆ, ಹೊಸದಾಗಿ ಸಂಪುಟಕ್ಕೆ ಸೇರ್ಪಡೆಯಾದ 19 ಜನರ ಪೈಕಿ 7ಜನರ ಮೇಲೆ ಕ್ರಿಮಿನಲ್ ಪ್ರಕರಣಗಳಿವೆ. ಶವದ ಮುಂದೆ ರಾಜಕೀಯ ಮಾಡಬಾರದು ಎಂದು ಇಷ್ಟು ದಿನ ನಾವು ಇದನ್ನು ಪ್ರಶ್ನಿಸಲಿಲ್ಲ. ಬಿಜೆಪಿಯವರಿಗೆ ಜಾರ್ಜ್ ಅವರ ರಾಜೀನಾಮೆ ಕೇಳುವ ನೈತಿಕತೆ ಇಲ್ಲ. ನ್ಯಾಯಾಲಯದ ಆದೇಶಕ್ಕೆ ತಲೆಬಾಗಿ, ಪಕ್ಷದ ಶಿಸ್ತಿನ ಸಿಪಾಯಿ ಆಗಿ ಜಾರ್ಜ್ ಸ್ವಯಂಪ್ರೇರಿತ ರಾಜೀನಾಮೆ ನೀಡಿದ್ದು, ಅದನ್ನು ಅಂಗೀಕರಿಸುವಂತೆ ನನ್ನ ಮೇಲೆ ಒತ್ತಡ ಹೇರಿದ್ದರು ಎಂದರು.

ನನ್ನ ಮೇಲೆ ಯಾವ ಕ್ರಿಮಿನಲ್ ಪ್ರಕರಣಗಳೂ ಇಲ್ಲ:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ 10 ಕ್ರಿಮಿನಲ್ ಪ್ರಕರಣಗಳು ಬಾಕಿ ಇವೆ ಎಂದು ಕುಮಾರಸ್ವಾಮಿ ನಿನ್ನೆ ವಿಧಾನಸಭೆಯಲ್ಲಿ ಹೇಳಿದ್ದರು. ಸುಳ್ಳು ಹೇಳುವುದರಲ್ಲಿ ಅವರು ನಿಸ್ಸೀಮರು. 2007ರಲ್ಲಿ ಸಾರ್ವಜನಿಕ ಹಿತಾಸಕ್ತಿಗಾಗಿ ಪ್ರತಿಭಟನೆ ನಡೆಸಿದಾಗ ನನ್ನ ವಿರುದ್ಧ 10 ಪ್ರಕರಣಗಳು ದಾಖಲಾಗಿದ್ದವು. ಅವುಗಳಲ್ಲಿ ಒಂದನ್ನು ಹಿಂಪಡೆದುಕೊಳ್ಳಲಾಗಿದೆ. ಉಳಿದ 4 ಪ್ರಕರಣಗಳಲ್ಲಿ ಸಿಐಡಿ ಬಿ ರಿಪೋರ್ಟ್ ಹಾಕಿದೆ. 2008ರ ವೇಳೆಗೆ ಈ ಎಲ್ಲಾ ಪ್ರಕರಣಗಳು ಮುಕ್ತಾಗೊಂಡಿದ್ದವು. 2013ರ ಚುನಾವಣೆ ನಾಮಪತ್ರ ಸಲ್ಲಿಕೆ ವೇಳೆ ನಾನು ಕ್ರಿಮಿನಲ್ ಪ್ರಕರಣಗಳನ್ನು ಮುಚ್ಚಿಟ್ಟಿದ್ದೆ ಎಂಬುದು ಸುಳ್ಳು ಎಂದು ಹೇಳಿದರು.

ಸಿಬಿಐ ವಿಷಯವಾಗಿ ಬಿಜೆಪಿ ಮತ್ತು ಜೆಡಿಎಸ್‍ನವರು ಕಾಂಗ್ರೆಸ್ ಬಚಾವೋ ಸಂಸ್ಥೆ, ಚೋರ್ ಬಚಾವೋ ಸಂಸ್ಥೆ ಎಂಬೆಲ್ಲಾ ಟೀಕೆ ಮಾಡಿದ್ದರು. ಬಿಜೆಪಿಯ ಐದು ವರ್ಷದ ಆಡಳಿತದಲ್ಲಿ 13 ಪ್ರಕರಣಗಳನ್ನು ಸಿಬಿಐ ಕೊಡುವಂತೆ ಒತ್ತಾಯಿಸಿದ್ದೆ. ಆದರೆ, ಒಂದೂ ಪ್ರಕರಣವನ್ನು ಕೊಟ್ಟಿರಲಿಲ್ಲ.

ನಮ್ಮ ಸರ್ಕಾರ ಬಂದ ಮೇಲೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದ್ದರೂ 8 ಪ್ರಕರಣವನ್ನು ಸಿಬಿಐಗೆ ಕೊಟ್ಟಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಸಚಿವರಾದ ಡಾ.ಜಿ.ಪರಮೇಶ್ವರ್, ಎಚ್.ಆಂಜನೇಯ, ಎ.ಮಂಜು, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‍ಗುಂಡೂರಾವ್, ಮುಖಂಡರಾದ ಎನ್.ಎಸ್.ಬೋಸ್‍ರಾಜ್. ವಿ.ಆರ್.ಸುದರ್ಶನ್, ಗೋವಿಂದರಾಜ್ ಮತ್ತಿತರರಿದ್ದರು.

Comments are closed.