ಅಂತರಾಷ್ಟ್ರೀಯ

ಐಸಿಸ್‌ನೊಂದಿಗೆ ನಂಟು ತಪ್ಪುಗ್ರಹಿಕೆ ಹಿನ್ನೆಲೆಯಲ್ಲಿ ಯುಎಇ ಪ್ರಜೆ ಬಂಧಿಸಿದ ಅಮೆರಿಕದ ಅಧಿಕಾರಿಗಳು; ಬಳಿಕ ಕ್ಷಮಾಪಣೆ ತಿರಸ್ಕರಿಸಿದ ಯುಎಇ ಪ್ರಜೆಯಿಂದ 200 ಮಿಲಿಯ ಡಾಲರ್ ಪರಿಹಾರದ ಬೇಡಿಕೆ

Pinterest LinkedIn Tumblr

32

ದುಬೈ: ಐಸಿಸ್‌ನೊಂದಿಗೆ ನಂಟು ಹೊಂದಿದ ಸುಳ್ಳು ಆರೋಪದಲ್ಲಿ ಅಮೆರಿಕದ ಪೊಲೀಸರಿಂದ ಬಂಧನಕ್ಕೊಳಗಾಗಿರುವ ಯುನೈಟೆಡ್ ಅರಬ್ ಎಮಿರೇಟ್ಸ್‌ನ ವ್ಯಕ್ತಿಯೊಬ್ಬರು, ಬಳಿಕ ಅಮೆರಿಕದ ಅಧಿಕಾರಿಗಳ ಕ್ಷಮಾಪಣೆ ಸ್ವೀಕರಿಸಲು ನಿರಾಕರಿಸಿದ್ದಾರೆ.

 ‘‘ಈ ದಾಳಿ’’ಯಿಂದ ತನಗಾಗಿರುವ ದೈಹಿಕ, ಮಾನಸಿಕ ಮತ್ತು ಆರ್ಥಿಕ ಹಾನಿಗಾಗಿ 200 ಮಿಲಿಯ ಡಾಲರ್ (ಸುಮಾರು 1,358 ಕೋಟಿ ರೂಪಾಯಿ) ಪರಿಹಾರ ಕೋರುವೆ ಎಂದು ಉದ್ಯಮಿ ಹಾಗೂ ಮೂರು ಮಕ್ಕಳ ತಂದೆ ಅಹ್ಮದ್ ಅಲ್ ಮೆನ್ಹಲಿ ‘ಖಲೀಜ್ ಟೈಮ್ಸ್’ಗೆ ತಿಳಿಸಿದರು.

‘‘ನಾನು ಅವರ ಕಣ್ಣುಗಳಲ್ಲಿ ದ್ವೇಷವನ್ನು ನೋಡಿದೆ. ಅವರ ಉದ್ದೇಶ ನನ್ನನ್ನು ಕೊಲ್ಲುವುದಾಗಿತ್ತು’’ ಎಂದು ಅಲ್ ಮೆನ್ಹಲಿ ಹೇಳಿದರು.

ವ್ಯಾಪಾರ ಹಾಗೂ ಆರೋಗ್ಯ ತಪಾಸಣೆಗಾಗಿ ಅವರು ಅಮೆರಿಕದ ಓಹಿಯೊ ರಾಜ್ಯದ ಕ್ಲೀವ್‌ಲ್ಯಾಂಡ್‌ನಲ್ಲಿದ್ದಾಗ ಈ ಘಟನೆ ಸಂಭವಿಸಿದೆ.

ಈ ಘಟನೆಯು ಒಂದು ವರ್ಷದಿಂದ ಸ್ಯಾನ್ ಡೀಗೊದ ಔಷಧ ತಯಾರಿಕಾ ಕಂಪೆನಿಯೊಂದರ ಜೊತೆಗೆ ತಾನು ನಡೆಸುತ್ತಿದ್ದ 70 ಮಿಲಿಯ ಡಾಲರ್ (ಸುಮಾರು 475 ಕೋಟಿ ರೂಪಾಯಿ) ವ್ಯಾಪಾರ ಒಪ್ಪಂದ ಹಾಗೂ ಆರೋಗ್ಯ ಉದ್ದಿಮೆಯ ಇತ್ತೀಚಿನ ಸಂಶೋಧನೆಗಳ ಕುರಿತ ಚರ್ಚೆಯನ್ನು ಹಾಳುಗೆಡವಿದೆ ಎಂದು ಮೆನ್ಹಲಿ ಆರೋಪಿಸಿದ್ದಾರೆ.

ಜಿಸಿಸಿ ದೇಶಗಳಿಗೆ ಆದಾಯ ತರಬಲ್ಲ ವ್ಯವಹಾರಗಳನ್ನು ಹಾಳುಗೆಡವಲು ಮಾಡಿದ ಯತ್ನ ಅದಾಗಿತ್ತು ಎಂಬುದಾಗಿಯೂ ಅವರು ಅಭಿಪ್ರಾಯಪಟ್ಟಿದ್ದಾರೆ.

 ‘‘ಔಷಧ ಉದ್ಯಮ ಮತ್ತು ತೈಲ ನಿಕ್ಷೇಪಗಳಿಂದ ಯುಎಇ ಹೆಚ್ಚಿನ ಲಾಭ ಪಡೆಯುತ್ತಿದೆ. ನನ್ನ ಬಂಧನದಲ್ಲಿ ಶಾಮೀಲಾದ ವ್ಯಕ್ತಿಗಳು ಅರಬ್ ದೇಶಗಳು ವೈದ್ಯಕೀಯ ಕ್ಷೇತ್ರದಲ್ಲಿ ಅಭಿವೃದ್ದಿ ಹೊಂದುವುದನ್ನು ಬಯಸುವುದಿಲ್ಲ’’ ಎಂದು ಆರೋಪಿಸಿದರು.

ವಿಷಾದನೀಯ: ಅಮೆರಿಕ

ಅಬುಧಾಬಿಯಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ಅಧಿಕೃತ ಫೇಸ್‌ಬುಕ್ ಪುಟದಲ್ಲಿ, ರಾಯಭಾರಿ ಬಾರ್ಬರಾ ಲೀಫ್ ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ.

‘‘ನಗರ ಮೇಯರ್ ಮತ್ತು ಪೊಲೀಸ್ ಮುಖ್ಯಸ್ಥರು ಅಲ್ ಮೆನ್ಹಲಿಯನ್ನು ಭೇಟಿಯಾಗಿ ಕ್ಷಮೆ ಯಾಚಿಸಿರುವುದನ್ನು ನೋಡಿ ನಮಗೆ ತೃಪ್ತಿಯಾಗಿದೆ. ಅವರಿಗೆ ಅವಮಾನ ಮಾಡುವ ಉದ್ದೇಶ ಇರಲಿಲ್ಲ. ತಪ್ಪು ಆರೋಪದ ಕಾರಣದಿಂದ ಅವರಿಗೆ ಒದಗಿದ ಪರಿಸ್ಥಿತಿಯು ವಿಷಾದನೀಯವಾಗಿದೆ’’ ಎಂದು ಹೇಳಿಕೆ ತಿಳಿಸಿದೆ.

ಪ್ರಕರಣಕ್ಕೆ ಸಂಬಂಧಿಸಿ ವಿದೇಶ ವ್ಯವಹಾರಗಳು ಮತ್ತು ಅಂತಾರಾಷ್ಟ್ರೀಯ ಸಹಕಾರ ಸಚಿವಾಲಯವು ಅಮೆರಿಕದ ರಾಯಭಾರ ಕಚೇರಿಯ ಉಪ ಮುಖ್ಯಸ್ಥ ಎತನ್ ಗೋಲ್ಡ್‌ರಿಚ್‌ರನ್ನು ಕಚೇರಿಗೆ ಕರೆಸಿಕೊಂಡಿತ್ತು.

Comments are closed.