ಹೊಸದಿಲ್ಲಿ/ಬೆಂಗಳೂರು ಎ.30: ಕೇಂದ್ರ ಸರಕಾರದ ಪ್ರಸ್ತಾವಿತ ರಸ್ತೆ ಸಾರಿಗೆ ಮತ್ತು ಸುರಕ್ಷತಾ ಮಸೂದೆಯನ್ನು (2015) ವಿರೋಧಿಸಿ ಕರೆ ನೀಡಲಾಗಿದ್ದ ಸಾರಿಗೆ ಮುಷ್ಕರ ಬಹುತೇಕ ಯಶಸ್ವಿಯಾಗಿದ್ದು, ಕರ್ನಾಟಕವೂ ಸೇರಿದಂತೆ ದೇಶಾದ್ಯಂತ ಜನಜೀವನ ಅಸ್ತವ್ಯಸ್ತಗೊಂಡಿತ್ತು. ರಾಜ್ಯದಲ್ಲಿ ಕೆಎಸ್ಸಾರ್ಟಿಸಿ, ಬಿಎಂಟಿಸಿ ಬಸ್ಸುಗಳು ರಸ್ತೆಗೆ ಇಳಿಯದ ಹಿನ್ನೆಲೆಯಲ್ಲಿ ಸಾರ್ವಜನಿಕ ಪ್ರಯಾಣಿಕರು, ಕಚೇರಿಗೆ ತೆರಳಬೇಕಿದ್ದ ಸಿಬ್ಬಂದಿ, ಕೂಲಿ ಕಾರ್ಮಿಕರು ಅಕ್ಷರಶಃ ಪರದಾಡಬೇಕಾಯಿತು. ಹೊರ ಊರುಗಳಿಂದ ಬೆಂಗಳೂರಿಗೆ ಬಂದಿದ್ದ ಪ್ರಯಾಣಿಕರು ತಮ್ಮ ತಮ್ಮ ಸ್ಥಳಗಳಿಗೆ ತೆರಳಲು ಸಂಕಷ್ಟಪಡಬೇಕಾಯಿತು.
ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ ಸೇರಿದಂತೆ ರಾಜ್ಯದ ಬಹುತೇಕ ಬಸ್ ನಿಲ್ದಾಣಗಳು ವಾಹನ ಸಂಚಾರವಿಲ್ಲದೆ ಬಿಕೋ ಎನ್ನುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಬೆಳಗ್ಗೆ 6ಗಂಟೆಯಿಂದಲೇ ಸಾರಿಗೆ ನೌಕರರು ಮುಷ್ಕರ ಆರಂಭಿಸಿದ ಹಿನ್ನೆಲೆಯಲ್ಲಿ ಸಾರಿಗೆ ಬಸ್ಸುಗಳನ್ನೇ ಆಶ್ರಯಿಸಿದ್ದ ಸಾರ್ವಜನಿಕರು ಸಂಕಷ್ಟಕ್ಕೆ ಸಿಲುಕಿದರು.
ಬೆಂಗಳೂರು ಸೇರಿ ರಾಜ್ಯದ ಕೆಲ ಭಾಗಗಳಲ್ಲಿ ಮುಷ್ಕರದ ಮಧ್ಯೆಯೇ ಸಾರಿಗೆ ಬಸ್ಸುಗಳನ್ನು ರಸ್ತೆಗಿಳಿಸಿದ ಹಿನ್ನೆಲೆಯಲ್ಲಿ ಕುಪಿತಗೊಂಡ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿ, ನೂರಕ್ಕೂ ಹೆಚ್ಚು ಬಸ್ಸುಗಳ ಗಾಜುಗಳನ್ನು ಪುಡಿಗೈದ ಘಟನೆಗಳು ನಡೆದಿವೆ. ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಆಟೊ ರಿಕ್ಷಾಗಳ ಸಂಚಾರವಿತ್ತಾದರೂ, ಪ್ರಯಾಣಿಕರಿಂದ ಹೆಚ್ಚಿನ ಹಣ ವಸೂಲಿ ಆರೋಪಗಳು ಕೇಳಿಬಂದಿವೆ.
1.20 ಲಕ್ಷ ಸಿಬ್ಬಂದಿ ಬೆಂಬಲ: ಬಿಎಂಟಿಸಿ, ಕೆಎಸ್ಸಾರ್ಟಿಸಿ, ಈಶಾನ್ಯ ಸಾರಿಗೆ ಸಂಸ್ಥೆಯ 1.20 ಲಕ್ಷ ಸಿಬ್ಬಂದಿ ಮುಷ್ಕರದಲ್ಲಿ ಪಾಲ್ಗೊಂಡಿದ್ದರಿಂದ ಬಸ್ ಸೇವೆಯಲ್ಲಿ ವ್ಯತ್ಯಯ ಕಂಡು ಬಂತು. ಬಹುತೇಕ ರಾಜ್ಯಗಳಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ನೌಕಕರು ಹಾಗೂ ಕೆಲವೆಡೆಗಳಲ್ಲಿ ಖಾಸಗಿ ಸಾರಿಗೆ ಸಂಸ್ಥೆಗಳ ಉದ್ಯೋಗಿಗಳು 24 ಗಂಟೆಗಳ ಮುಷ್ಕರದಲ್ಲಿ ಪಾಲ್ಗೊಂಡಿದ್ದರು. ಕೇರಳದಲ್ಲಿ ಬಸ್‌ಗಳು, ಟ್ಯಾಕ್ಸಿಗಳು ಮತ್ತು ಆಟೋರಿಕ್ಷಾಗಳು ರಸ್ತೆಗೆ ಇಳಿಯಲಿಲ್ಲ. ಇದರಿಂದಾಗಿ ಜನಸಾಮಾನ್ಯರು ಪರದಾಡುವಂತಾಯಿತು.
ಕರ್ನಾಟಕ, ಪಂಜಾಬ್, ಗುಜರಾತ್, ಅಸ್ಸಾಂ ಮತ್ತು ಹರ್ಯಾಣಗಳಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಬಸ್ಸುಗಳ ಸೇವೆ ಇರಲಿಲ್ಲ. ಕೆಲವೆಡೆಗಳಲ್ಲಿ ಖಾಸಗಿ ಬಸ್ಸುಗಳು ಲಭ್ಯವಿರಲಿಲ್ಲ. ಕೇರಳ, ಕರ್ನಾಟಕ, ದಿಲ್ಲಿ, ಪಂಜಾಬ್, ಹರ್ಯಾಣ, ಗುಜರಾತ್, ಪಶ್ಚಿಮ ಬಂಗಾಳ, ಅಸ್ಸಾಂಗಳಲ್ಲಿ ಸಾರಿಗೆ ಮುಷ್ಕರ ಬಹುತೇಕ ಯಶಸ್ವಿಯಾಗಿದೆ ಎಂದು ವರದಿಗಳು ತಿಳಿಸಿವೆ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿಯವರ ಮನವಿಯ ನಡುವೆಯೂ ಸಾರಿಗೆ ಸಂಸ್ಥೆಗಳ ನೌಕರರು ಹಾಗೂ ಕಾರ್ಮಿಕರ ಒಕ್ಕೂಟಗಳ ಸದಸ್ಯರು ಮುಷ್ಕರ ಕೈಗೊಂಡಿದ್ದರು. ಎಐಟಿಯುಸಿ, ಬಿಎಂಎಸ್, ಇಂಟಕ್, ಎಚ್‌ಎಂಎಸ್, ಎಐಸಿಸಿಟಿಯು, ಎಲ್‌ಪಿಎಫ್ ಮತ್ತು ಇತರ ಕೆಲವು ರಾಜ್ಯಮಟ್ಟದ ಕಾರ್ಮಿಕ ಸಂಘಟನೆಗಳಿಗೆ ಸೇರಿದ ಸರಕಾರಿ ಹಾಗೂ ಖಾಸಗಿ ಸಾರಿಗೆ ಸಂಸ್ಥೆಗಳ ನೌಕರರು ಮುಷ್ಕರದಲ್ಲಿ ಪಾಲ್ಗೊಂಡಿದ್ದರು.
ಚಾಲನಾ ಅಪರಾಧಗಳಿಗೆ ಕಠಿಣ ಶಿಕ್ಷೆ ಮತ್ತು ದಂಡ ಹಾಗೂ ಲಘು ವಾಹನಗಳು ಸೇರಿದಂತೆ ಎಲ್ಲ ಬಗೆಯ ವಾಹನಗಳು ಕಾಲಕಾಲಕ್ಕೆ ಅರ್ಹತಾ ಪ್ರಮಾಣಪತ್ರಗಳನ್ನು ಹೊಂದಿರಬೇಕೆಂಬ ಮಸೂದೆಯ ನಿಯಮಾವಳಿಗಳ ವಿರುದ್ಧ ಸಾರಿಗೆ ನೌಕರರು ಪ್ರತಿಭಟಿಸಿದ್ದಾರೆ.
ಸಾರಿಗೆ ಕಾರ್ಮಿಕರ ಭೀತಿಯನ್ನು ತಳ್ಳಿ ಹಾಕಿರುವ ಗಡ್ಕರಿ, ಮಸೂದೆಯನ್ನು ಅಂಗೀಕರಿಸುವ ಮೊದಲು ಸಂಬಂಧಪಟ್ಟ ಎಲ್ಲರೊಂದಿಗೆ ಸಮಾಲೋಚನೆ ನಡೆಸುವುದಾಗಿ ಆಶ್ವಾಸನೆ ನೀಡಿದ್ದಾರೆ.
ಪಂಜಾಬ್, ಹರ್ಯಾಣ ಮತ್ತು ಚಂಡಿಗಡಗಳಲ್ಲಿ ಗುರುವಾರ ಬೆಳಗ್ಗೆಯಿಂದ ಖಾಸಗಿ ಮತ್ತು ಸರಕಾರಿ ಬಸ್‌ಗಳು ರಸ್ತೆಗೆ ಇಳಿಯಲಿಲ್ಲ. ಜಿಲ್ಲಾ ಕೇಂದ್ರಗಳಲ್ಲೂ ಸಾರಿಗೆ ನೌಕರರು ಮುಷ್ಕರದಲ್ಲಿ ಪಾಲ್ಗೊಂಡಿದ್ದರು. ಆಟೊರಿಕ್ಷಾಗಳ ಚಾಲಕರು ಕೂಡ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿದ್ದರು ಎಂದು ಪಂಜಾಬ್‌ನ ಅಮೃತಸರ ಮತ್ತು ಭಿವಾನಿಯಿಂದ ಬಂದಿರುವ ವರದಿಗಳು ತಿಳಿಸಿವೆ. ಪಠಾಣ ಕೋಟ್‌ನಲ್ಲಿ ಸುಮಾರು 3,000 ಬಸ್, ಲಾರಿಗಳು ಸೇವೆಗೆ ಲಭ್ಯವಿರಲಿಲ್ಲ.
ಕೇರಳದ ರಾಜಧಾನಿ ತಿರುವನಂತಪುರದಲ್ಲಿ ರಾಜ್ಯ ರಸ್ತೆ ಸಾರಿಗೆ ಬಸ್‌ಗಳು, ಆಟೊರಿಕ್ಷಾಗಳ ಸೇವೆ ಇರಲಿಲ್ಲ. ಇದರಿಂದಾಗಿ ಜನಸಾಮಾನ್ಯರು ಬಹಳ ತೊಂದರೆ ಅನುಭವಿಸಿದರು. ಸಾರಿಗೆ ಮುಷ್ಕರದ ಹಿನ್ನೆಲೆಯಲ್ಲಿ ಕೆಲವು ರಾಜ್ಯಗಳಲ್ಲಿ ವಿಶ್ವವಿದ್ಯಾನಿಲಯದ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಬಹುತೇಕ ರಾಜ್ಯಗಳಲ್ಲಿ ಬಂದ್ ಶಾಂತಿಯುತವಾಗಿತ್ತು. ಕಲ್ಲು ತೂರಾಟದ ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿ ಯಾವುದೇ ಹಿಂಸಾಚಾರ, ಗಲಾಟೆಗಳು ನಡೆದಿಲ್ಲ.
-ಕೃಪೆ: ವಾತಾಱಭಾರತಿ