Uncategorized

ಎಸ್‌ಸಿಡಿಸಿಸಿ ಬ್ಯಾಂಕ್‌ನ ಶತಮಾನೋತ್ಸವ ಸವಿನೆನಪಿನ ಅತ್ಯಾಧುನಿಕ ಭವ್ಯ ಕಟ್ಟಡ “ಉತ್ಕೃಷ್ಟ’ ಸಹಕಾರಿ ಸೌಧ ಉದ್ಘಾಟನೆ

Pinterest LinkedIn Tumblr

Scdcc_New_Building_1

ಮಂಗಳೂರು: ಸಹಕಾರಿ ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಹಲವು ಪ್ರಥಮ ಸಾಧನೆಗಳೊಂದಿಗೆ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ (ಎಸ್‌ಸಿಡಿಸಿಸಿ ಬ್ಯಾಂಕ್‌) ಶತಮಾನೋತ್ಸವದ ಸವಿನೆನಪಿಗಾಗಿ ನಗರದ ಕೊಡಿಯಾಲಬೈಲ್‌ನಲ್ಲಿ ಅತ್ಯಾಧುನಿಕ ವಿನ್ಯಾಸದೊಂದಿಗೆ ಸುಸಜ್ಜಿತವಾಗಿ ನಿರ್ಮಿಸಿರುವ 5 ಅಂತಸ್ತಿನ ಭವ್ಯ ಕಟ್ಟಡ “ಉತ್ಕೃಷ್ಟ’ ಸಹಕಾರಿ ಸೌಧದ ಉದ್ಘಾಟನ ಸಮಾರಂಭ ಗುರುವಾರ ನೆರವೇರಿತು.

ನಬಾರ್ಡ್‌ ಅಧ್ಯಕ್ಷ ಹರ್ಷಕುಮಾರ್‌ ಭನ್ವಾಲ ಅವರು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅಧ್ಯಕ್ಷತೆಯಲ್ಲಿ ಹಾಗೂ ರಾಜ್ಯ ಸಹಕಾರಿ ಸಚಿವ ಎಚ್.ಎಸ್.ಮಹಾದೇವ ಪ್ರಸಾದ್ ಉಪಸ್ಥಿತಿಯಲ್ಲಿ ‘ಉತ್ಕೃಷ್ಟ’ ಸಹಕಾರಿ ಸೌಧ ಕಟ್ಟಡವನ್ನು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಹಲವಾರು ಮಾದರಿ ಕಾರ್ಯಕ್ರಮಗಳ ಮೂಲಕ ದೇಶಕ್ಕೆ ಮಾದರಿಯಾದ ಬ್ಯಾಂಕ್ ಆಗಿದೆ. ಉತ್ಕೃಷ್ಟ ನಿರ್ವಹಣೆ, ವ್ಯವಹಾರ ಕುಶಲತೆ, ವಿಶೇಷ ಮಾದರಿಗಳು, ದಕ್ಷ ಆಡಳಿತ ಹಾಗೂ ಸಾಮಾಜಿಕ ಕಾಳಜಿಯ ಮೂಲಕ ಶ್ರೇಷ್ಠ ಸಾಧನೆಗಳನ್ನು ದಾಖಲಿಸುತ್ತಾ ಬಂದಿರುವ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಸಹಕಾರ ಕ್ಷೇತ್ರದಲ್ಲಿ ದೇಶದಲ್ಲೇ ಅತ್ಯುತ್ತಮ ಸಹಕಾರಿ ಬ್ಯಾಂಕ್‌ ಎಂದು ಶ್ಲಾಘಿಸಿದರು.

Scdcc_New_Building_2 Scdcc_New_Building_3

ಶತಮಾನೋತ್ಸವದ ಸಂದರ್ಭದಲ್ಲಿರುವ ಬ್ಯಾಂಕ್ 97 ಶಾಖೆಗಳೊಂದಿಗೆ 4,600 ಕೋ.ರೂ.ಗೂ ಅಧಿಕ ಆರ್ಥಿಕ ವ್ಯವಹಾರ ನಡೆಸುತ್ತಿರುವುದು, ಸುಸಜ್ಜಿತ ತರಬೇತಿ ಕೇಂದ್ರವನ್ನು ನಿರ್ಮಿಸಿರುವುದು, ಗ್ರಾಮೀಣ ಪ್ರದೇಶದ ರೈತರಿಗೆ ಕೃಷಿ ಸಾಲ ನೀಡಿ ಪ್ರಗತಿ ಸಾಧಿಸಿರುವುದು ಬ್ಯಾಂಕಿನ ಸಾಧನೆಯಾಗಿದೆ. ಈ ರೀತಿಯ ಮಹತ್ವದ ಸಾಧನೆ ಮಾಡಿದ ಬ್ಯಾಂಕಿಗೆ ಕೌಶಲ ಕೇಂದ್ರವನ್ನು ಸ್ಥಾಪಿಸಲು ನಬಾರ್ಡ್ ಪ್ರೋತ್ಸಾಹ ನೀಡಲಿದೆ ಮತ್ತು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ವತಿಯಿಂದ ಮೊಬೈಲ್ ಬ್ಯಾಂಕ್ ಸೇವೆಯನ್ನು ಗ್ರಾಮೀಣ ಪ್ರದೇಶಕ್ಕೂ ವಿಸ್ತರಿ ಸುವಂತಾಗಬೇಕು ಎಂದು ಭನ್ವಾಲಾ ತಿಳಿಸಿದರು.

ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಅವರ ನೇತೃತೃದಲ್ಲಿ ಮಾಡುತ್ತಿರುವ ಸಾಧನೆಗಳನ್ನು ಕಳೆದ ಹಲವಾರು ವರ್ಷಗಳಿಂದ ನಬಾರ್ಡ್‌ ಬ್ಯಾಂಕ್‌ ಗಮನಿಸುತ್ತಾ ಬಂದಿದೆ. ಸಹಕಾರ ಕ್ಷೇತ್ರದಲ್ಲಿ ದೇಶದಲ್ಲೇ ಅತ್ಯುತ್ತಮ ಆಡಳಿತ ಹಾಗೂ ಅತ್ಯಂತ ಉತ್ಸಾಹಿ ಹಾಗೂ ಕ್ರಿಯಾಶೀಲ ಅಧ್ಯಕ್ಷರನ್ನು ಈ ಬ್ಯಾಂಕ್‌ ಹೊಂದಿದೆ ಎಂದು ಬಣ್ಣಿಸಿ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಅವರನ್ನು ಅಭಿನಂದಿಸಿದರು.

ಮೊಬೈಲ್‌ ಬ್ಯಾಂಕಿಂಗ್‌ ಸೇವೆಯನ್ನು ಆರಂಭಿಸಲು ಪೂರಕವಾದ ಎಲ್ಲ ಅರ್ಹತೆ ಹಾಗೂ ಸೌಲಭ್ಯಗಳನ್ನು ಎಸ್‌ಸಿಡಿಸಿಸಿ ಬ್ಯಾಂಕ್‌ ಹೊಂದಿದ್ದು ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿ ಸಹಕಾರ ಕ್ಷೇತ್ರದಲ್ಲಿ ಈ ರೀತಿಯ ಸೌಲಭ್ಯ ಹೊಂದಿರುವ ದೇಶದ 2ನೇ ಬ್ಯಾಂಕ್‌ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿ ಎಂದವರು ಹಾರೈಸಿದರು.

ಎಸ್‌ಸಿಡಿಸಿಸಿ ಬ್ಯಾಂಕ್‌ ಶತಮಾನೋತ್ಸವದ ಸವಿನೆನಪಿಗಾಗಿ ಸುಸಜ್ಜಿತ, ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಭವ್ಯ ಕಟ್ಟಡವನ್ನು ನಿರ್ಮಿಸಿದೆ. ಉತ್ತಮ ತರಬೇತಿ ಕೇಂದ್ರವನ್ನು ರೂಪಿಸಿದೆ. ರೈತರ ಮಕ್ಕಳಿಗೆ ಕೌಶಲ ತರಬೇತಿ ನೀಡುವ ಉದ್ದೇಶಕ್ಕಾಗಿ ಕರ್ನಾಟಕ ರಾಜ್ಯದಲ್ಲೇ ಮೊದಲ ಬಾರಿಗೆ ನಬಾರ್ಡ್‌ ವತಿಯಿಂದ ಕೇಂದ್ರವೊಂದನ್ನು ಇಲ್ಲಿ ವ್ಯವಸ್ಥೆಗೊಳಿಸಲು ಉದ್ದೇಶಿಸಿದ್ದು ಇದರ ಎಲ್ಲ ವೆಚ್ಚವನ್ನು ಭರಿಸಲಾಗುವುದು ಎಂದು ಭನ್ವಾಲ ಹೇಳಿದರು.

Scdcc_New_Building_4

ಸಹಕಾರ ಸಚಿವರಿಂದ ಸಹಕಾರಿ ಬ್ಯಾಂಕ್‌ ಶಾಖೆ ಉದ್ಘಾಟನೆ

ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡಿರುವ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಶಾಖೆಯನ್ನು ಸಹಕಾರ ಸಚಿವ ಎಚ್‌.ಎಸ್‌. ಮಹಾದೇವ ಪ್ರಸಾದ್‌ ಉದ್ಘಾಟಿಸಿದರು. ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಸಹಕಾರ ಕ್ಷೇತ್ರದಲ್ಲಿ ದೇಶಕ್ಕೆ ಮಾದರಿಯಾಗಿದೆ. ಕಳೆದ ಹಲವಾರು ವರ್ಷಗಳಿಂದ ಸಾಲ ವಸೂಲಾತಿಯಲ್ಲಿ ಶೇ. 100 ಸಾಧನೆ, ಅತ್ಯಾಧುನಿಕ ತಂತ್ರಜ್ಞಾನಗಳ ಅಳವಡಿಕೆಯಲ್ಲಿ ರಾಜ್ಯದಲ್ಲೇ ಮುಂಚೂಣಿ ಸೇರಿದಂತೆ ಹಲವಾರು ಸಾಧನೆಗಳನ್ನು ಮಾಡುತ್ತಾ, ಯಾವುದೇ ಪ್ರಮುಖ ವಾಣಿಜ್ಯ ಬ್ಯಾಂಕ್‌ಗಳಿಗೆ ಕಮ್ಮಿ ಇಲ್ಲದಂತೆ ಕಾರ್ಯನಿರ್ವಹಿಸುತ್ತಿದೆ. ಬ್ಯಾಂಕನ್ನು ಕಳೆದ 21 ವರ್ಷಗಳಿಂದ ಹಲವಾರು ವಿಶಿಷ್ಟ ಯೋಜನೆಗಳೊಂದಿಗೆ ಸಮರ್ಥವಾಗಿ ಮುನ್ನಡೆಸುತ್ತಿರುವ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಅವರನ್ನು ಅಭಿನಂದಿಸುತ್ತಿದ್ದೇನೆ ಎಂದರು.

ದೇಶದಲ್ಲಿಯೇ ಸುಂದರವಾದ ಸಹಕಾರಿ ಬ್ಯಾಂಕ್ ಕಟ್ಟಡ : ರೈ

Scdcc_New_Building_5

ರಾಜೇಂದ್ರ ಕುಮಾರ್‌ರ ಸಮರ್ಥ ನಾಯತ್ವದಿಂದ ಹಾಗೂ ಸಂಸ್ಥೆಯ ಆಡಳಿತ ಮಂಡಳಿಯ ಸಹಕಾರ ಹಾಗೂ ಗ್ರಾಹಕರ ಬೆಂಬಲದಿಂದ ಬ್ಯಾಂಕ್‌ಎತ್ತರಕ್ಕೆ ಬೆಳೆ ಯುತ್ತಾ ಬಂದಿದೆ. ಪ್ರಸಕ್ತ ಶತಮಾನದ ಸಂಭ್ರಮದ ಸಂದರ್ಭದಲ್ಲಿ ದೇಶದಲ್ಲಿಯೇ ಸುಂದರವಾದ ಸಹ ಕಾರಿ ರಂಗದ ಕಟ್ಟಡವನ್ನು ಲೋಕಾರ್ಪಣೆ ಮಾಡಿ ದಂತಾಗಿದೆ ಎಂದು ಅಧ್ಯಕ್ಷತೆ ವಹಿಸಿದ್ದ ರಾಜ್ಯ ಅರಣ್ಯ ಹಾಗೂ ಪರಿಸರ ಖಾತೆ ಸಚಿವ ಬಿ. ಸಚಿವ ರಮಾನಾಥ ರೈ ಶುಭ ಹಾರೈಸಿದರು. ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಅವರ ನೇತೃತ್ವದಲ್ಲಿ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ರಾಷ್ಟ್ರದಲ್ಲೇ ಅತ್ಯುತ್ತಮ ಜಿಲ್ಲಾ ಸಹಕಾರಿ ಬ್ಯಾಂಕ್‌ ಆಗಿ ಮೂಡಿಬಂದಿದೆ ಎಂದು ಅಭಿನಂದಿಸಿದರು.

ಸಹಕಾರ ಕ್ಷೇತ್ರದ ಪಿತಾಮಹ, ಬ್ಯಾಂಕಿನ ನಿರ್ಮಾಣ ಶಿಲ್ಪಿ ದಿ| ಮೊಳಹಳ್ಳಿ ಶಿವರಾವ್‌ ಅವರ ಸ್ಮರಣೆಗಾಗಿ ನಿರ್ಮಿಸಿರುವ ಸಭಾಭವನವನ್ನು ರಾಜ್ಯ ಆರೋಗ್ಯ ಸಚಿವ ಯು.ಟಿ. ಖಾದರ್‌, ಕಾರ್ನಾಡು ಸದಾಶಿವ ರಾವ್‌ ತರಬೇತಿ ಕೇಂದ್ರವನ್ನು ರಾಜ್ಯ ಯುವಸಬಲೀಕರಣ ಹಾಗೂ ಕ್ರೀಡಾಸಚಿವ ಅಭಯಚಂದ್ರ ಜೈನ್‌, ಸಾಲ ವಿಭಾಗವನ್ನು ಶಾಸಕ ಜೆ.ಆರ್‌. ಲೋಬೋ, ಬ್ಯಾಂಕಿನ ಯೋಜನೆಗಳಿಗೆ ಪೂರಕವಾಗಿ, ವ್ಯವಸ್ಥಿತ ರೀತಿಯಲ್ಲಿ ನಿರ್ಮಿಸಲಾಗಿರುವ ಐ.ಟಿ. ಸೆಂಟರನ್ನು ಶಾಸಕ ಮೊದಿನ್‌ ಬಾವಾ ಉದ್ಘಾಟಿಸಿದರು. ಬ್ಯಾಂಕಿನ ಇತಿಹಾಸ ಪುಸ್ತಕವನ್ನು ಬೆಂಗಳೂರು ನಬಾರ್ಡ್‌ ಕರ್ನಾಟಕ ಪ್ರಾದೇಶಿಕ ಕಚೇರಿ ಮುಖ್ಯ ಮಹಾ ಪ್ರಬಂಧಕ ಎಂ.ಐ. ಗಣಗಿ ಬಿಡುಗಡೆಗೊಳಿಸಿದರು.

ಬ್ಯಾಂಕಿನ ಶತಮಾನೋತ್ಸವದ ಕೊಡುಗೆ

Scdcc_New_Building_6

ಬ್ಯಾಂಕಿನ ಅಧ್ಯಕ್ಷ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಅವರು ಸ್ವಾಗತಿಸಿ, ಸಹಕಾರ ಕ್ಷೇತ್ರದಲ್ಲಿ ಹಲವು ಪ್ರಥಮ ಸಾಧನೆಗಳೊಂದಿಗೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ರಾಷ್ಟ್ರದಲ್ಲೇ ಗುರುತಿಸಿಕೊಂಡಿದೆ. ಇದೀಗ ಶತಮಾನೋತ್ಸವದ ಸವಿನೆನಪಿಗಾಗಿ ಅತ್ಯಾಧುನಿಕ ವಿನ್ಯಾಸದೊಂದಿಗೆ ಸುಸಜ್ಜಿತವಾಗಿ ನಿರ್ಮಾಣಗೊಂಡಿರುವ ಉತ್ಕೃಷ್ಟ ಸಹಕಾರ ಸೌಧ ಲೋಕಾರ್ಪಣೆಗೊಂಡಿದೆ ಎಂದರು.

92,000 ಚದರ ಅಡಿ ವಿಸ್ತೀರ್ಣವನ್ನು ಹೊಂದಿರುವ ಐದು ಅಂತಸ್ತಿನ ಭವ್ಯ ಉತ್ಕೃಷ್ಟ ಸಹಕಾರ ಸೌಧ ಸುಮಾರು 28 ಕೋ.ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು ಬಹಳ ವರ್ಷಗಳ ಕನಸು ನನಸಾಗಿದೆ. ಇದೊಂದು ಆವಿಸ್ಮರಣೀಯ ಸಂಭ್ರಮ. ಬ್ಯಾಂಕಿನ ಯೋಜನೆಗಳಿಗೆ ಪೂರಕವಾದ ಐಟಿ ಸೆಂಟರ್‌, ದಿ| ಮೊಳಹಳ್ಳಿ ಶಿವರಾವ್‌ ಸ್ಮಾರಕ ಸಭಾಭವನ, ಆಡಳಿತ ಮಂಡಳಿ ಸಭಾಂಗಣ, ಸಾಲದ ವಿಭಾಗ, ಅತಿಥಿಗೃಹ, ಕಾರ್ನಾಡ್‌ ಸದಾಶಿವ ರಾವ್‌ ತರಬೇತಿ ಕೇಂದ್ರ, ಎಟಿಎಂ ಅನ್ನು ಹೊಂದಿದೆ. ಈ ರೀತಿಯ ಸುಸಜ್ಜಿತ ಹಾಗೂ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಕಟ್ಟಡವನ್ನು ಜಿಲ್ಲಾ ಸಹಕಾರಿ ಬ್ಯಾಂಕ್‌ ಹೊಂದಿರುವುದು ರಾಜ್ಯದಲ್ಲೇ ಪ್ರಥಮವಾಗಿದೆ ಎಂದು ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಹೇಳಿದರು.

Scdcc_New_Building_7 Scdcc_New_Building_8 Scdcc_New_Building_9

ಎಲ್ಲರೂ ಮನೆ ಹೊಂದುವ ಕನಸು ಸಾಕಾರಕ್ಕೆ ಪೂರಕವಾಗಿ ಶತಮಾನೋತ್ಸವದ ಹಾಲಿ ವರ್ಷದಲ್ಲಿ ಗೃಹ ಸಾಲದ ಮೇಲಿನ ಬಡ್ಡಿಯ ದರವನ್ನು ಶೇ.14ರಿಂದ ಶೇ.9.50 ಮತ್ತು 10.50ಕ್ಕೆ ನಾಳೆಯಿಂದಲೇ ಇಳಿಸಲಾಗುವುದು ಹಾಗೂ 2014-15ನೆ ಸಾಲಿನಲ್ಲಿ ಬ್ಯಾಂಕಿನಿಂದ ಒಂದು ಲಕ್ಷದವರೆಗೆ ಸಾಲ ಪಡೆದು ಮೃತರಾದ ರೈತರ ಸಾಲದಲ್ಲಿ ಅರ್ಧದಷ್ಟು ಮೊತ್ತವನ್ನು ಬ್ಯಾಂಕ್ ಮನ್ನಾ ಮಾಡಲಿದೆ.ಇದರಿಂದ 583 ರೈತರ ಸುಮಾರು 3.5 ಕೋ.ರೂ. ಸಾಲದ ಮೊತ್ತವನ್ನು ಬ್ಯಾಂಕ್ ಭರಿಸಲಿದೆ. ಇದು ಶತಮಾನೋತ್ಸವದ ಸಂದರ್ಭದಲ್ಲಿ ಬ್ಯಾಂಕಿನ ವಿಶೇಷ ಕೊಡುಗೆಯಾಗಿದೆ ಎಂದು ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಘೋಷಿಸಿದರು.

ನೇಪಾಲ ಭೂಕಂಪ ಸಂತ್ರಸ್ತರಿಗೆ ಪರಿಹಾರಕ್ಕೆ ಬ್ಯಾಂಕ್‌ ವತಿಯಿಂದ 10 ಲಕ್ಷ ರೂ., ನವೋದಯ ಸ್ವಸಹಾಯ ಸಂಘಗಳಿಂದ 5 ಲಕ್ಷ ರೂ. ಹಾಗೂ ಬ್ಯಾಂಕಿನ ಸಿಬಂದಿಗಳ 1 ದಿನದ ವೇತನವನ್ನು ನೀಡಲಾಗುವುದು. ಈಗಾಗಲೇ ಫೆಡರೇಶನ್‌ ಕಪ್‌ ಕ್ರೀಡಾಕೂಟಕ್ಕೆ 5 ಲಕ್ಷ ರೂ. ದೇಣಿಗೆ ನೀಡಿದೆ ಎಂದವರು ತಿಳಿಸಿದರು.

ವಿಧಾನ ಪರಿಷತ್‌ ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿ, ಐವನ್‌ ಡಿ’ಸೋಜಾ, ಮೇಯರ್‌ ಜೆಸಿಂತಾ ಆಲ್ಫ್ರೆಡ್‌, ಕಾರ್ಪೊರೇಟರ್‌ ಎ.ಸಿ. ವಿನಯರಾಜ್‌, ಎಸ್‌ಸಿಡಿಸಿಸಿ ಬ್ಯಾಂಕಿನ ಮಾಜಿ ಅಧ್ಯಕ್ಷ ಹಾಗೂ ಹಿರಿಯ ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ ಅತಿಥಿಗಳಾಗಿದ್ದರು.

Scdcc_New_Building_10 Scdcc_New_Building_11 Scdcc_New_Building_13 Scdcc_New_Building_14Scdcc_New_Building_15 Scdcc_New_Building_16 Scdcc_New_Building_17 Scdcc_New_Building_18 Scdcc_New_Building_19 Scdcc_New_Building_20 Scdcc_New_Building_21 Scdcc_New_Building_22 Scdcc_New_Building_23 Scdcc_New_Building_24 Scdcc_New_Building_25 Scdcc_New_Building_26 Scdcc_New_Building_27 Scdcc_New_Building_28 Scdcc_New_Building_29 Scdcc_New_Building_30

ದ.ಕ. ಹಾಲು ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ, ಮೀನು ಮಾರಾಟ ಫೆಡರೇಶನ್‌ ಅಧ್ಯಕ್ಷ ಯಶ್‌ಪಾಲ ಸುವರ್ಣ, ಸ್ಕೇಡ್ಸ್‌ ಅಧ್ಯಕ್ಷ ರವೀಂದ್ರ ಕಂಬಳಿ, ಹಿರಿಯ ಸಹಕಾರಿಗಳಾದ ಎಸ್‌.ಆರ್‌. ಸತೀಶ್ಚಂದ್ರ, ಹರೀಶ್‌ ಆಚಾರ್‌, ಎಸ್‌ಸಿಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ವಿನಯ ಕುಮಾರ್‌ ಸೂರಿಂಜೆ, ನಿರ್ದೇಶಕರಾದ ಬಿ. ನಿರಂಜನ್‌, ಭಾಸ್ಕರ್‌ ಎಸ್‌. ಕೋಟ್ಯಾನ್‌, ಬಿ. ರಘರಾಮ ಶೆಟ್ಟಿ , ಎಂ. ವಾದಿರಾಜ ಶೆಟ್ಟಿ , ಕೆ.ಎಸ್‌. ದೇವರಾಜ್‌, ಕಿಶನ್‌ ಹೆಗ್ಡೆ ಕೊಳ್ಕೆಬೈಲ್‌, ಸದಾಶಿವ ಉಳ್ಳಾಲ, ಎಸ್‌. ರಾಜು ಪೂಜಾರಿ, ಶಶಿಕುಮಾರ್‌ ರೈ, ರಾಜೇಶ್‌ ರಾವ್‌, ಎಸ್‌.ಬಿ. ಜಯರಾಮ ರೈ, ಸಹಕಾರ ಸಂಘಗಳ ಉಪನಿಬಂಧಕ ಬಿ.ಕೆ. ಸಲೀಂ, ನಬಾರ್ಡ್‌ ಡಿಜಿಎಂ ಪ್ರಸಾದ್‌ ರಾವ್‌, ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಪ್ರಭಾರ) ಜಿ. ಬಾಬು ಬಿಲ್ಲವ ಉಪಸ್ಥಿತರಿದ್ದರು.

ನಿರ್ದೇಶಕ ಟಿ.ಜಿ. ರಾಜಾರಾಮ ಭಟ್‌ ವಂದಿಸಿದರು. ಮನೋಹರ ಪ್ರಸಾದ್‌ ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಸಂಯೋಜನೆಯೊಂದಿಗೆ ದೇಶ-ವಿದೇಶ ಕಲಾ ತಂಡದವರಿಂದ ವೈವಿಧ್ಯ ಕಾರ್ಯಕ್ರಮ ಜರಗಿತು.

Write A Comment