ಪ್ರಮುಖ ವರದಿಗಳು

ತವರು ನೆಲದಲ್ಲಿ ಎಡವಿದ ಕೊಹ್ಲಿ ಬಳಗ; ಅಬ್ಬರಿಸಿದ ಡೇವಿಡ್‌ ವಾರ್ನರ್‌: ಸನ್‌ರೈಸರ್ಸ್‌ಗೆ ತಲೆಬಾಗಿದ ಆರ್‌ಸಿಬಿ

Pinterest LinkedIn Tumblr

14xwarner

ಬೆಂಗಳೂರು: ಕ್ರಿಸ್‌ ಗೇಲ್‌ ಅಬ್ಬರಿಸಲಿಲ್ಲ. ಇತರ ಬ್ಯಾಟ್ಸ್‌ಮನ್‌ಗಳಿಂದಲೂ ತಕ್ಕ ಆಟ ಮೂಡಿಬರಲಿಲ್ಲ. ಬೌಲರ್‌ಗಳೂ ಕೈಕೊಟ್ಟರು. ತವರು ನೆಲದಲ್ಲಿ ಗೆಲುವು ಪಡೆಯಬೇಕೆಂಬ ರಾಯಲ್‌ ಚಾಲೆಂಜರ್ಸ್‌ ತಂಡದ ಕನಸು ಕೈಗೂಡಲಿಲ್ಲ.

ಆಟದ ಎಲ್ಲ ವಿಭಾಗಗಳಲ್ಲೂ ಆರ್‌ಸಿಬಿ ತಂಡವನ್ನು ಹಿಮ್ಮೆಟ್ಟಿಸಿದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ಐಪಿಎಲ್‌ ಟೂರ್ನಿಯ ಪಂದ್ಯದಲ್ಲಿ 8 ವಿಕೆಟ್‌ಗಳ ಸುಲಭ ಗೆಲುವು ಪಡೆಯಿತು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ವಿರಾಟ್‌ ಕೊಹ್ಲಿ ಬಳಗ 19.5 ಓವರ್‌ಗಳಲ್ಲಿ 166 ರನ್‌ಗಳಿಗೆ ಆಲೌಟಾಯಿತು. ಸನ್‌ರೈಸರ್ಸ್‌ 17.2 ಓವರ್‌ಗಳಲ್ಲಿ 172 ರನ್‌ ಗಳಿಸಿ ಜಯ ಸಾಧಿಸಿತು.  ವಾರ್ನರ್‌ (57, 27 ಎಸೆತ, 6 ಬೌಂ, 4 ಸಿ.) ಗಳಿಸಿದ ಬಿರುಸಿನ ಅರ್ಧಶತಕ, ಶಿಖರ್‌ ಧವನ್‌ (50, 42 ಎಸೆತ, 4 ಬೌಂ, 2 ಸಿ.) ಮತ್ತು ಕೆ.ಎಲ್‌. ರಾಹುಲ್‌ (44, 28 ಎಸೆತ, 4 ಬೌಂ, 1 ಸಿ.) ಅವರ ಅಜೇಯ ಆಟ ಸನ್‌ರೈಸರ್ಸ್‌ ಗೆಲುವಿಗೆ ಕಾರಣ.

ಶಿಸ್ತಿನ ಬೌಲಿಂಗ್‌:  ಟಾಸ್‌ ಗೆದ್ದ ಸನ್‌ರೈಸರ್ಸ್‌ ನಾಯಕ ಡೇವಿಡ್‌ ವಾರ್ನರ್‌ ಎದುರಾಳಿ ತಂಡವನ್ನು ಬ್ಯಾಟಿಂಗ್‌ಗೆ ಕಳುಹಿಸಿದರು. ತವರು ನೆಲದಲ್ಲಿ ಆರ್‌ಸಿಬಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿತು. ಎಬಿ ಡಿವಿಲಿಯರ್ಸ್‌ (46, 28 ಎಸೆತ, 5 ಬೌಂ, 2 ಸಿ.) ಮತ್ತು ವಿರಾಟ್‌ ಕೊಹ್ಲಿ (41, 37 ಎಸೆತ, 4 ಬೌಂ, 2 ಸಿಕ್ಸರ್‌) ಅವರನ್ನು ಹೊರತುಪಡಿಸಿ ಇತರ ಯಾರಿಂದಲೂ ಉತ್ತಮ ಆಟ ಮೂಡಿಬರಲಿಲ್ಲ.

ಟ್ರೆಂಟ್‌ ಬೌಲ್ಟ್‌ ಬೌಲ್‌ ಮಾಡಿದ ಮೊದಲ ಓವರ್‌ನ ಮೂರನೇ ಎಸೆತವನ್ನು ಸಿಕ್ಸರ್‌ಗಟ್ಟಿದ ಕ್ರಿಸ್‌ ಗೇಲ್‌ ಅಪಾಯಕಾರಿಯಾಗುವ ಸೂಚನೆ ನೀಡಿದ್ದರು. ಆದರೆ ಪ್ರವೀಣ್‌ ಕುಮಾರ್‌ ಎಸೆತದಲ್ಲಿ ಆಶೀಶ್‌ ರೆಡ್ಡಿಗೆ ಕ್ಯಾಚ್ ನೀಡಿ ಔಟಾದರು. ಗೇಲ್‌ ಗಳಿಸಿದ್ದು 21ರನ್‌. 16 ಎಸೆತಗಳನ್ನು ಎದುರಿಸಿದ ಅವರು ಮೂರು ಬೌಂಡರಿ ಮತ್ತು ಒಂದು ಸಿಕ್ಸರ್‌ ಗಳಿಸಿದರು. ಕೊಹ್ಲಿ ಮತ್ತು ಗೇಲ್‌ ಮೊದಲ ವಿಕೆಟ್‌ಗೆ 33 ಎಸೆತಗಳಲ್ಲಿ 43 ರನ್‌ ಸೇರಿಸಿದರು,

ಎರಡನೇ ವಿಕೆಟ್‌ಗೆ ಜತೆಯಾದ ದಿನೇಶ್ ಕಾರ್ತಿಕ್‌ ಮತ್ತು ಕೊಹ್ಲಿ ತಂಡದ ಇನಿಂಗ್ಸ್‌ಗೆ ಬಲ ತುಂಬಲು ಪ್ರಯತ್ನಿಸಿದರು. ಎದುರಾಳಿ ಬೌಲರ್‌ಗಳು ನಿಖರ ಲೈನ್‌ ಮತ್ತು ಲೆನ್ತ್‌ ಕಾಪಾಡಿಕೊಂಡದ್ದರಿಂದ ಇವರಿಗೆ ಲೀಲಾಜಾಲವಾಗಿ ರನ್‌ ಗಳಿಸಲು ಆಗಲಿಲ್ಲ. 10 ಓವರ್‌ಗಳು ಕೊನೆಗೊಂಡಾಗ ತಂಡ ಒಂದು ವಿಕೆಟ್‌ಗೆ 77 ಗಳಿಸಿತ್ತು.

11ನೇ ಓವರ್‌ನ ಮೊದಲ ಎಸೆತದಲ್ಲಿ ದಿನೇಶ್‌ ಕಾರ್ತಿಕ್‌ (9, 11 ಎಸೆತ) ಔಟಾದರು. ಆ ಬಳಿಕ ಕ್ರೀಸ್‌ಗೆ ಬಂದದ್ದು ಎಬಿ ಡಿವಿಲಿಯರ್ಸ್‌. ಕ್ರೀಡಾಂಗಣದಲ್ಲಿ ನೆರೆದ ಸುಮಾರು 25 ಸಾವಿರದಷ್ಟು ಪ್ರೇಕ್ಷಕರು ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್‌ಅನ್ನು ಚಪ್ಪಾಳೆಯ ಮೂಲಕ ಕ್ರೀಸ್‌ಗೆ ಸ್ವಾಗತಿಸಿದರು. ಬಿರುಸಿನ ಆಟವಾಡಿದ ಡಿವಿಲಿಯರ್ಸ್‌ ಎದುರಾಳಿ ಬೌಲರ್‌ಗಳ ದಿಕ್ಕು ತಪ್ಪಿಸಲು ಪ್ರಯತ್ನಿಸಿದರು,

ರವಿ ಬೋಪಾರ 12ನೇ ಓವರ್‌ನಲ್ಲಿ ಆರ್‌ಸಿಬಿಗೆ ಅವಳಿ ಆಘಾತ ನೀಡಿದರು. ವಿರಾಟ್‌ ಕೊಹ್ಲಿ ಮತ್ತು ಮನ್‌ದೀಪ್‌ ಸಿಂಗ್‌ ಅವರನ್ನು ಸತತ ಎರಡು ಎಸೆತಗಳಲ್ಲಿ ಔಟ್‌ ಮಾಡಿದರು. ಕೊಹ್ಲಿ ಬೌಲ್ಡ್‌ ಆದರೆ, ಮನ್‌ದೀಪ್‌ ಅವರು ಡೇವಿಡ್‌ ವಾರ್ನರ್‌ ಅವರ ಅತ್ಯುತ್ತಮ ಕ್ಯಾಚ್‌ಗೆ ಔಟಾದರು.

ಆಗಿಂದಾಗ್ಗೆ ವಿಕೆಟ್‌ ಬಿದ್ದದ್ದರಿಂದ ಆರ್‌ಸಿಬಿಯ ರನ್‌ರೇಟ್‌ ಕೂಡಾ ಕುಸಿತ ಕಂಡಿತು. 16 ಓವರ್‌ ಕೊನೆಗೊಂಡಾಗ ತಂಡ ಐದು ವಿಕೆಟ್‌ಗೆ 125 ರನ್‌ ಗಳಿಸಿತ್ತು. ಡಿವಿಲಿಯರ್ಸ್‌ ಇದ್ದ ಕಾರಣ ಕೊನೆಯಲ್ಲಿ ಸ್ಫೋಟಕ ಆಟ ನಿರೀಕ್ಷಿಸಲಾಗಿತ್ತು. ಆದರೆ 19ನೇ ಓವರ್‌ನ ಎರಡನೇ ಎಸೆತದಲ್ಲಿ ಅವರು ಬೌಲ್ಟ್‌ಗೆ ವಿಕೆಟ್‌ ಒಪ್ಪಿಸಿದರು. ಆ ಓವರ್‌ನಲ್ಲಿ ಮತ್ತೆರಡು ವಿಕೆಟ್‌ಗಳು ಬಿದ್ದವು. ಸನ್‌ರೈಸರ್ಸ್‌ ತಂಡದಲ್ಲಿ ಬೌಲ್‌ ಮಾಡಿದ ಎಲ್ಲರೂ ವಿಕೆಟ್‌ ಪಡೆದರು. ಬೌಲ್ಟ್‌ (36ಕ್ಕೆ 3) ಯಶಸ್ವಿ ಬೌಲರ್‌ ಎನಿಸಿಕೊಂಡರು.

ವಾರ್ನರ್‌ ಅಬ್ಬರ:
ಸಾಧಾರಣ ಗುರಿ ಬೆನ್ನಟ್ಟಿದ ಸನ್‌ರೈಸರ್ಸ್‌ಗೆ ಸ್ಫೋಟಕ ಆರಂಭ ದೊರೆಯಿತು. ವಾರ್ನರ್‌ ಮತ್ತು ಧವನ್‌ ಮೊದಲ ಓವರ್‌ನಿಂದಲೇ ಅಬ್ಬರಿಸಲು ಶುರು ಮಾಡಿದರು. ಸೀನ್‌ ಅಬಾಟ್ ಮೊದಲ ಓವರ್‌ನಲ್ಲಿ 16 ರನ್‌ ಬಿಟ್ಟುಕೊಟ್ಟರೆ, ಹರ್ಷಲ್‌ ಪಟೇಲ್‌ ಬೌಲ್‌ ಮಾಡಿದ ಎರಡನೇ ಓವರ್‌ನಲ್ಲಿ 20 ರನ್‌ಗಳು ಬಂದವು. ವಾರ್ನರ್‌ ಈ ಓವರ್‌ನಲ್ಲಿ ಮೂರು ಬೌಂಡರಿ ಮತ್ತು ಒಂದು ಸಿಕ್ಸರ್‌ ಸಿಡಿಸಿದರು.

ಐದು ಓವರ್‌ ಕೊನೆಗೊಂಡಾಗ ತಂಡದ ಮೊತ್ತ 58. ವಾರ್ನರ್‌ಗೆ ಕಡಿವಾಣ ತೊಡಿಸಲು ಆರ್‌ಸಿಬಿ ನಾಯಕ ಕೊಹ್ಲಿ ಹರಸಾಹಸ ಪಟ್ಟರು. ಮೊದಲ ಎಂಟು ಓವರ್‌ ಆಗುವಾಗಲೇ ಆರು ಬೌಲರ್‌ಗಳನ್ನು ಕಣಕ್ಕಿಳಿಸಬೇಕಾಯಿತು.

ಎಂಟನೇ ಓವರ್‌ನಲ್ಲಿ ಯಜುವೇಂದ್ರ ಚಾಹಲ್‌ ಅವರಿಗೆ ಚೆಂಡು ನೀಡಿದ್ದು ಫಲ ನೀಡಿತು. ಈ ಯುವ ಸ್ಪಿನ್ನರ್‌ ವಾರ್ನರ್‌ ಅವರನ್ನು ಎಲ್‌ಬಿ ಬಲೆಯಲ್ಲಿ ಬೀಳಿಸಿದರು. ಆದರೆ ವಾರ್ನರ್‌ ಆ ವೇಳೆಗಾಗಲೇ ಆರ್‌ಸಿಬಿಯ ಸೋಲು ಬರೆದಿಟ್ಟಿದ್ದರು.

ಯಜುವೇಂದ್ರ ಮುಂದಿನ ಓವರ್‌ನಲ್ಲಿ ಕೇನ್‌ ವಿಲಿಯಮ್ಸನ್‌ ಅವರನ್ನೂ ಪೆವಿಲಿಯನ್‌ಗಟ್ಟಿದರು. 10 ಓವರ್‌ ಆದಾಗ ಸನ್‌ರೈಸರ್ಸ್‌
ಎರಡು ವಿಕೆಟ್‌ ನಷ್ಟಕ್ಕೆ 95 ರನ್‌ ಗಳಿಸಿತ್ತು. ಆಗಲೇ ಫಲಿತಾಂಶ ಹೆಚ್ಚುಕಡಿಮೆ ಸ್ಪಷ್ಟವಾಗಿತ್ತು.

ಧವನ್‌ ಅವರನ್ನು ಕೂಡಿಕೊಂಡ ಕೆ.ಎಲ್‌. ರಾಹುಲ್‌ ಯಾವುದೇ ಒತ್ತಡವಿಲ್ಲದೆ ಆಡಿದರು. ಈ ಜೋಡಿ ಮುರಿಯದ ಮೂರನೇ 46 ಎಸೆತಗಳಲ್ಲಿ 78 ರನ್‌ ಗಳಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿತು.

ಗೇಲ್‌ 200 ಸಿಕ್ಸರ್‌
ಐಪಿಎಲ್‌ನಲ್ಲಿ 200 ಸಿಕ್ಸರ್‌ ಗಳಿಸಿದ ಸಾಧನೆಯನ್ನು ಗೇಲ್‌ ಮಾಡಿದರು. ಈ ಮೈಲಿಗಲ್ಲು ನೆಟ್ಟ ಮೊದಲ ಆಟಗಾರ ಎಂಬ ಗೌರವ ಅವರಿಗೆ ಒಲಿಯಿತು. ವಿಂಡೀಸ್‌ನ ಬ್ಯಾಟ್ಸ್‌ಮನ್‌ ಈ ಪಂದ್ಯಕ್ಕೆ ಮುನ್ನ 199 ಸಿಕ್ಸರ್‌ಗಳನ್ನು ಗಳಿಸಿದ್ದರು. ಗೇಲ್‌ಗೆ ಇದು 70ನೇ ಐಪಿಎಲ್‌ ಪಂದ್ಯವಾಗಿತ್ತು.

ಸುರೇಶ್‌ ರೈನಾ (134) ಮತ್ತು ರೋಹಿತ್‌ ಶರ್ಮ (130) ಅವರು ಅತಿಹೆಚ್ಚು ಸಿಕ್ಸರ್‌ಗಳನ್ನು ಗಳಿಸಿದ ಆಟಗಾರರ ಪಟ್ಟಿಯಲ್ಲಿ ಬಳಿಕದ ಸ್ಥಾನಗಳಲ್ಲಿದ್ದಾರೆ.

ಸ್ಕೋರ್ ಕಾರ್ಡ್

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು 166 (19.5 ಓವರ್‌)

ಕ್ರಿಸ್‌ ಗೇಲ್‌ ಸಿ ಆಶೀಶ್‌ ರೆಡ್ಡಿ ಬಿ ಪ್ರವೀಣ್‌ ಕುಮಾರ್‌  21
ವಿರಾಟ್‌ ಕೊಹ್ಲಿ ಬಿ ರವಿ ಬೋಪಾರ  41
ದಿನೇಶ್‌ ಕಾರ್ತಿಕ್‌ ಸಿ ವಿಲಿಯಮ್ಸನ್‌ ಬಿ ಕರಣ್‌ ಶರ್ಮ  09
ಎಬಿ ಡಿವಿಲಿಯರ್ಸ್‌ ಸಿ ಧವನ್‌ ಬಿ ಟ್ರೆಂಟ್‌ ಬೌಲ್ಟ್‌  46
ಮನ್‌ದೀಪ್‌ ಸಿಂಗ್‌ ಸಿ ವಾರ್ನರ್‌ ಬಿ ರವಿ ಬೋಪಾರ  00
ಡರೆನ್‌ ಸಮಿ ಬಿ ಆಶೀಶ್‌ ರೆಡ್ಡಿ  06
ಸೀನ್‌ ಅಬಾಟ್‌ ಸಿ ಕರಣ್‌ ಬಿ ಟ್ರೆಂಟ್‌ ಬೌಲ್ಟ್‌  14
ಹರ್ಷಲ್‌ ಪಟೇಲ್‌ ಸಿ ವಿಲಿಯಮ್ಸನ್‌ ಬಿ ಟ್ರೆಂಟ್‌ ಬೌಲ್ಟ್‌  02
ಅಬು ನೆಚೀಮ್‌ ಅಹ್ಮದ್‌ ಬಿ ಭುವನೇಶ್ವರ್‌ ಕುಮಾರ್‌  04
ವರುಣ್‌ ಆ್ಯರನ್‌ ಬಿ ಭುವನೇಶ್ವರ್‌ ಕುಮಾರ್‌  06
ಯಜುವೇಂದ್ರ ಚಾಹಲ್‌ ಔಟಾಗದೆ  01

ಇತರೆ: (ಲೆಗ್‌ಬೈ-4, ವೈಡ್‌-12)   16

ವಿಕೆಟ್‌ ಪತನ: 1-43 (ಗೇಲ್‌; 5.3), 2-77 (ಕಾರ್ತಿಕ್‌; 10.1), 3-93 (ಕೊಹ್ಲಿ; 11.5), 4-93 (ಮನ್‌ದೀಪ್‌; 11.6), 5-125 (ಸಮಿ; 15.6), 6-152 (ಡಿವಿಲಿಯರ್ಸ್‌; 18.2), 7-152 (ಅಬಾಟ್‌; 18.3), 8-155 (ಪಟೇಲ್‌; 18.5), 9-165 (ಆ್ಯರನ್‌; 19.3), 10-166 (ಅಹ್ಮದ್‌; 19.5)

ಬೌಲಿಂಗ್‌: ಟ್ರೆಂಟ್‌ ಬೌಲ್ಟ್‌ 4-0-36-3, ಭುವನೇಶ್ವರ್‌ ಕುಮಾರ್‌ 3.5-0-30-2, ಪ್ರವೀಣ್‌ ಕುಮಾರ್‌ 4-0-34-1, ರವಿ ಬೋಪಾರ 3-0-31-2, ಕರಣ್‌ ಶರ್ಮ 4-0-20-1, ಆಶೀಶ್‌ ರೆಡ್ಡಿ 1-0-11-1

ಸನ್‌ರೈಸರ್ಸ್‌ ಹೈದರಾಬಾದ್‌ 2 ಕ್ಕೆ 172  (17.2 ಓವರ್‌)

ಡೇವಿಡ್‌ ವಾರ್ನರ್‌ ಎಲ್‌ಬಿಡಬ್ಲ್ಯು ಬಿ ಯಜುವೇಂದ್ರ ಚಾಹಲ್‌  57
ಶಿಖರ್‌ ಧವನ್‌ ಔಟಾಗದೆ  50
ಕೇನ್‌ ವಿಲಿಯಮ್ಸನ್‌ ಸ್ಟಂಪ್‌ ಕಾರ್ತಿಕ್‌ ಬಿ ಯಜುವೇಂದ್ರ ಚಾಹಲ್‌  05
ಕೆ.ಎಲ್‌. ರಾಹುಲ್‌ ಔಟಾಗದೆ  44
ಇತರೆ: (ಲೆಗ್‌ಬೈ-5, ವೈಡ್‌-9, ನೋಬಾಲ್-2)  16

ವಿಕೆಟ್‌ ಪತನ:  1-82 (ವಾರ್ನರ್; 7.5), 2-94 (ವಿಲಿಯಮ್ಸನ್‌; 9.5)

ಬೌಲಿಂಗ್‌:  ಸೀನ್‌ ಅಬಾಟ್‌ 2-0-21-0, ಹರ್ಷಲ್‌ ಪಟೇಲ್‌ 2-0-23-0, ವರುಣ್‌ ಆ್ಯರನ್‌ 3.2-0-36-0, ಅಬು ನೆಚೀಮ್‌ ಅಹ್ಮದ್‌ 4-0-41-0, ಡರೆನ್ ಸಮಿ 2-0-18-0, ಯಜುವೇಂದ್ರ ಚಾಹಲ್‌ 4-0-28-2

ಫಲಿತಾಂಶ:  ಸನ್‌ರೈಸರ್ಸ್‌ ಹೈದರಾಬಾದ್‌ಗೆ 8 ವಿಕೆಟ್‌ ಜಯ

ಪಂದ್ಯ ಶ್ರೇಷ್ಠ: ಡೇವಿಡ್‌ ವಾರ್ನರ್‌

Write A Comment