ಅಂತರಾಷ್ಟ್ರೀಯ

ಜರ್ಮನಿಯ ಪ್ರಸಿದ್ಧ ಬರಹಗಾರ, ನೊಬೆಲ್‌ ಪ್ರಶಸ್ತಿ ಪುರಸ್ಕೃತ ಲೇಖಕ ಗುಂಟರ್‌ ಗ್ರಾಸ್‌ ನಿಧನ

Pinterest LinkedIn Tumblr

14apr15rjGRASS

ಬರ್ಲಿನ್‌ :  ಜರ್ಮನಿಯ ಪ್ರಸಿದ್ಧ  ಬರಹಗಾರ, ನೊಬೆಲ್‌ ಪ್ರಶಸ್ತಿ ಪುರಸ್ಕೃತ ಗುಂಟರ್‌ ಗ್ರಾಸ್‌ ಅವರು  ಇಲ್ಲಿನ ಲ್ಯುಬೆಕ್‌ ಆಸ್ಪತ್ರೆಯಲ್ಲಿ ಸೋಮವಾರ ಬೆಳಿಗ್ಗೆ ನಿಧನರಾದರು. ಶ್ವಾಸಕೋಶ ಸೋಂಕಿನಿಂದ ಬಳಲುತ್ತಿದ್ದ ಅವರಿಗೆ 87 ವರ್ಷ ವಯಸ್ಸಾಗಿತ್ತು.

ತಮ್ಮ 17ನೇ ವಯಸ್ಸಿನಲ್ಲಿಯೇ ಅವರು ಎರಡನೇ ಮಹಾಯುದ್ಧದ ಭೀಕರತೆಯನ್ನು ನೋಡಿದ್ದರು. ಆಗ ಅವರು ಹಿಟ್ಲರ್‌ನ ಯುವ ಪಡೆಯ ಸದಸ್ಯರಾಗಿದ್ದರು. ನಂತರದಲ್ಲಿ ನಾಜಿ ವಿಶೇಷ ಪಡೆಗಳ ಘಟಕ (ವಾಫೆನ್‌–ಎಸ್‌ಎಸ್‌)ಸೇರಿದ್ದರು. ಅವರ ಸಾಹಿತ್ಯ  ಕೃಷಿ ಶುರುವಾಗಿದ್ದು ೧೯೫೨ರಲ್ಲಿ.

೨೦೦೬ರಲ್ಲಿ ಪ್ರಕಟಗೊಂಡ ಅವರ ಆತ್ಮಕಥೆ ‘ ಸ್ಕಿನಿಂಗ್‌ ದಿ ಆನಿಯನ್‌’ ದೊಡ್ಡ ವಿವಾದ ಸೃಷ್ಟಿಸಿತ್ತು. ತಾನು ವಾಫೆನ್‌್‍–ಎಸ್‌ಎಸ್‌್ ಸದಸ್ಯನಾಗಿದ್ದೆ ಎಂದು ಅವರು ಅದರಲ್ಲಿ  ಬರೆದುಕೊಂಡಿದ್ದಾರೆ.  ಈ ಅಂಶ ಗೊತ್ತಾಗಿದ್ದೇ ತಡ ಇಡೀ ಯುರೋಪ್‌ ದಂಗಾಗಿತ್ತು.

2012ರಲ್ಲಿ ಪ್ರಕಟಗೊಂಡ ಅವರ ಕವನ ‘ವಾಟ್‌  ಮಸ್ಟ್‌ ಬಿ ಸೆಡ್‌’ ಕೂಡ ಜರ್ಮನಿ ಹಾಗೂ ಇಸ್ರೇಲ್‌ನಲ್ಲಿ ಟೀಕೆಗೆ ಕಾರಣವಾಗಿತ್ತು.  ಇರಾನ್‌ ಪರಮಾಣು ಕಾರ್ಯಕ್ರಮ ಕುರಿತಂತೆ ಇರಾಕ್‌ ತಳೆದ ನಿಲುವನ್ನು ಅವರು ಇದರಲ್ಲಿ ಟೀಕಿಸಿದ್ದರು. ಅಲ್ಲದೇ  ಇರಾನ್‌್ ಪರಮಾಣು ಕಾರ್ಯಕ್ರಮದ ಕುರಿತಂತೆ ಪಾಶ್ಚಿಮಾತ್ಯ ದೇಶಗಳ ಆಷಾಢಭೂತಿತನವನ್ನು ಲೇವಡಿ ಮಾಡಿದ್ದರು.

ಬಹುಮುಖ ಪ್ರತಿಭೆಯ ಗ್ರಾಸ್‌, ‘ ದಿ ಟಿನ್‌ ಡ್ರಮ್‌’ ಕಾದಂಬರಿಯ ಮೂಲಕ ಸಾಹಿತ್ಯ ಲೋಕದಲ್ಲಿ ಸಂಚಲನ ಮೂಡಿಸಿದ್ದರು. ಈ ಕಾದಂಬರಿಯು ೧೯೫೯ ಪ್ರಕಟಗೊಂಡಿತ್ತು.  ೧೯೭೯ರಲ್ಲಿ ಇದು ಸಿನಿಮಾ  ಆಯಿತು. ಇದಕ್ಕೆ  ಆಸ್ಕರ್‌್ ಪ್ರಶಸ್ತಿ ಕೂಡ ಬಂದಿದೆ.  ಈ ಕಾದಂಬರಿಯ ಬಳಿಕ ‘  ಕ್ಯಾಟ್‌್ ಆಂಡ್‌ ಮೌಸ್‌’ ಮತ್ತು ‘ ಡಾಗ್‌ ಇಯರ್ಸ್‌’ ಕಾದಂಬರಿಗಳು ಬಂದವು.  ಇವು   ‘ಡ್ಯಾನ್‌ಜಿಗ್‌ ಕೃತಿತ್ರಯಗಳು’ (Danzig Trilogy) ಎಂದೇ ಖ್ಯಾತಿ ಪಡೆದಿವೆ. ಡ್ಯಾನ್‌ಜಿಗ್‌, ಗ್ರಾಸ್‌ ಹುಟ್ಟಿದ ಸ್ಥಳ. ಈಗ ಇದು ಪೋಲೆಂಡ್‌ಗೆ ಸೇರಿದೆ.  ನಾಜಿವಾದಕ್ಕೆ ಜರ್ಮನ್‌ ಜನರ ಪ್ರತಿಕ್ರಿಯೆ, ಯುದ್ಧದ ಭೀಕರತೆ ಹಾಗೂ ಹಿಟ್ಲರ್‌ ಅಂತ್ಯದ ಬಳಿಕ  ಕಾಡಿದ ಅಪರಾಧಿ ಭಾವ…ಇತ್ಯಾದಿ ಅಂಶಗಳನ್ನು ಈ ಕೃತಿ ಒಳಗೊಂಡಿದೆ.

ನಾಜಿ ಯುಗದ ಬಳಿಕ ಜರ್ಮನ್‌ ಸಾಹಿತ್ಯದ ಪುನರುಜ್ಜೀವನಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ೧೯೯೯ರಲ್ಲಿ ಗ್ರಾಸ್‌್ ಅವರಿಗೆ ನೊಬೆಲ್‌್ ಸಾಹಿತ್ಯ ‍ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

ಬಾಲ್ಯ:  ಗ್ರಾಸ್‌, ೧೯೨೭ರ ಅಕ್ಟೋಬರ್‌ ೧೬ರಂದು ಡ್ಯಾನ್‌ಜಿಗ್‌ ನಗರದಲ್ಲಿ ಜನಿಸಿದರು. ತಂದೆ ಜರ್ಮನಿ ಮೂಲದ  ವಿಲ್‌ಹೆಲ್ಮ್‌ ಗ್ರಾಸ್‌, ತಾಯಿ ಹೆಲೆನ್‌ ಪೋಲೆಂಡ್‌ ಮೂಲದವರು. ಗ್ರಾಸ್‌, ೧೯೫೪ರಲ್ಲಿ ಸ್ವಿಟ್ಜರ್ಲೆಂಡ್‌ನ  ನೃತ್ಯಗಾತಿ ಮಾರ್ಗರೆಟಾ ಶ್ವಾಜ್‌ ಅವರನ್ನು ಮದುವೆಯಾಗಿದ್ದರು.  ಆದರೆ  ೧೯೭೮ ರಲ್ಲಿ ಈ ದಾಂಪತ್ಯ ಮುರಿದುಬಿತ್ತು. ನಂತರ ಅವರು ಸಂಗೀತಗಾರ್ತಿ ಉಟೆ ಗ್ರನರ್ಟ್‌ ಅವರನ್ನು ಮದುವೆಯಾದರು.  ಮೊದಲ ಮದುವೆಯಿಂದ ನಾಲ್ಕು, 2ನೇ ಮದುವೆಯಿಂದ ಇಬ್ಬರು ಮಕ್ಕಳು ಇದ್ದಾರೆ. ೧೮ ಮೊಮ್ಮಕ್ಕಳು ಇದ್ದಾರೆ.

Write A Comment