ಪ್ರಮುಖ ವರದಿಗಳು

ವಿಶ್ವಕಪ್: ಭಾರತಕ್ಕೆ ಸೋಲು: ಆಸ್ಟ್ರೇಲಿಯ ಫೈನಲ್ ಗೆ

Pinterest LinkedIn Tumblr

smi_

ಸಿಡ್ನಿ, ಮಾ.26: ಕುತೂಹಲ ಕೆರಳಿಸಿದ್ದ ಹನ್ನೊಂದನೆ ಆವೃತ್ತಿಯ ಎರಡನೆ ಸೆಮಿಫೈನಲ್‌ನಲ್ಲಿ ಗುರುವಾರ ಮಾಜಿ ಚಾಂಪಿಯನ್ ಆಸ್ಟ್ರೇಲಿಯ ತಂಡ ಹಾಲಿ ಚಾಂಪಿಯನ್ ಭಾರತದ ವಿರುದ್ಧ 95 ರನ್‌ಗಳ ಭರ್ಜರಿ ಜಯ ಗಳಿಸಿ ಫೈನಲ್ ಪ್ರವೇಶಿಸಿದೆ.

ಮಾ.29ರಂದು ಮೆಲ್ಬೋರ್ನ್‌ನಲ್ಲಿ ನಡೆಯಲಿರುವ ಫೈನಲ್‌ನಲ್ಲಿ ಜಂಟಿ ಆತಿಥ್ಯ ವಹಿಸಿಕೊಂಡಿರುವ ಆಸ್ಟ್ರೇಲಿಯ ಮತ್ತು ನ್ಯೂಝಿಲೆಂಡ್ ಪ್ರಶಸ್ತಿಗಾಗಿ ಹಣಾಹಣಿ ನಡೆಸಲಿದೆ. ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆದ ಸೆಮಿಫೈನಲ್‌ನಲ್ಲಿ ಭಾರತದ ಬ್ಯಾಟಿಂಗ್ ಮತ್ತು ಬೌಲಿಂಗ್ ವೈಫಲ್ಯ ಸೋಲಿಗೆ ಕಾರಣವಾಯಿತು. ಆಸ್ಟ್ರೇಲಿಯದ ಸ್ಟೀವನ್ ಸ್ಮಿತ್(105) ಮತ್ತು ಆ್ಯರೊನ್ ಫಿಂಚ್ (81) ತಂಡದ ಗೆಲುವಿನಲ್ಲಿ ದೊಡ್ಡ ಕೊಡುಗೆ ನೀಡಿದರು.

ಗೆಲುವಿಗೆ 329 ರನ್‌ಗಳ ಕಠಿಣ ಸವಾಲನ್ನು ಪಡೆದ ಭಾರತ 46.5 ಓವರ್‌ಗಳಲ್ಲಿ 233 ರನ್‌ಗಳಿಗೆ ಆಲೌಟಾಗುವುದರೊಂದಿಗೆ ವಿಶ್ವಕಪ್‌ನಲ್ಲಿ ಧೋನಿ ಪಡೆಯ ಗೆಲುವಿನ ಅಜೇಯ ಓಟ ಕೊನೆಗೊಂಡಿತು. ತಂಡ ಸಂಕಷ್ಟಕ್ಕೆ ಸಿಲುಕಿದಾಗ ಏಕಾಂಗಿ ಹೋರಾಟ ನಡೆಸುವ ನಾಯಕ ಮಹೇಂದ್ರ ಸಿಂಗ್ ಧೋನಿ(65) ತಂಡದ ಖಾತೆಗೆ ದೊಡ್ಡ ಕೊಡುಗೆ ನೀಡಿ ತಂಡದ ಸೋಲು ತಪ್ಪಿಸಲು ತನ್ನಿಂದ ಸಾಧ್ಯವಿರುವ ಪ್ರಯತ್ನ ನಡೆಸಿದರು. ಆದರೆ ಧೋನಿ ಹೋರಾಟ ಫಲ ನೀಡಲಿಲ್ಲ. ಸತತ ಏಳು ಪಂದ್ಯಗಳಲ್ಲಿ ಎದುರಾಳಿ ತಂಡಗಳನ್ನು ಆಲೌಟ್ ಮಾಡಿದ್ದ ಟೀಮ್ ಇಂಡಿಯಾ ಕೊನೆಗೊ ಆಸ್ಟ್ರೇಲಿಯದ ವಿರುದ್ಧದ ಪಂದ್ಯದಲ್ಲಿ ಆಲೌಟಾಯಿತು. ವಿಶ್ವಕಪ್‌ನ ಆರಂಭಕ್ಕೂ ಮುನ್ನ ಟೆಸ್ಟ್ ಹಾಗೂ ತ್ರಿಕೋನ ಸರಣಿಯಲ್ಲಿ ಆಸ್ಟ್ರೇಲಿಯ ವಿರುದ್ಧ ಸೋತು ಬಸವಳಿದಿದ್ದ ಟೀಮ್ ಇಂಡಿಯಾ ಬಳಿಕ ಚೇತರಿಸಿಕೊಂಡು ಚೆನ್ನಾಗಿ ಆಡಿ ಸೆಮಿಫೈನಲ್ ತಲುಪಿದ್ದರೂ, ಅಂತಿಮವಾಗಿ ಆಸ್ಟ್ರೇಲಿಯದ ಕೈಯಿಂದ ಧೋನಿ ಪಡೆಗೆ ವಿಜಯದ ಮಾಲೆಯನ್ನು ಕಿತ್ತುಕೊಳ್ಳಲು ಸಾಧ್ಯವಾಗಲೇ ಇಲ್ಲ. ಅಂತಿಮವಾಗಿ ಉಮೇಶ್ ಯಾದವ್ ಮಿಚೆಲ್ ಸ್ಟಾರ್ಕ್ ಎಸೆತದಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರುವುದರೊಂದಿಗೆ ಮತ್ತೊಮ್ಮೆ ವಿಶ್ವಕಪ್ ಗೆಲ್ಲುವ ಟೀಮ್ ಇಂಡಿಯಾದ ಪ್ರಯತ್ನ ಸೆಮಿಫೈನಲ್‌ನಲ್ಲೇ ಕೊನೆಗೊಂಡಿತು.
ಆರಂಭ ಚೆನ್ನಾಗಿತ್ತು: ಭಾರತಕ್ಕೆ ಸವಾಲು ಕಠಿಣವಾಗಿದ್ದರೂ ಆರಂಭಿಕ ದಾಂಡಿಗರಾದ ರೋಹಿತ್ ಶರ್ಮ ಮತ್ತು ಶಿಖರ್ ಧವನ್ ಮೊದಲ ವಿಕೆಟ್‌ಗೆ 76 ರನ್‌ಗಳ ಜೊತೆಯಾಟ ನೀಡಿದ್ದ ರು. ಧವನ್ 45 ರನ್(41ಎ, 6ಬೌ, 1ಸಿ) ಕಾಣಿಕೆ ನೀಡಿದ್ದರು.

ಧವನ್ ಔಟಾದ ಬಳಿಕ ಕ್ರೀಸ್‌ಗೆ ಆಗಮಿಸಿದ ವಿರಾಟ್ ಕೊಹ್ಲಿ 13 ಎಸೆತಗಳಲ್ಲಿ ಕೇವಲ 1 ರನ್ ಗಳಿಸಿ, ಜಾನ್ಸನ್‌ರ ಶಾರ್ಟ್‌ಬಾಲ್‌ನ್ನು ಕೆಣಕಲು ಹೋಗಿ ವಿಕೆಟ್ ಕೈಚೆಲ್ಲಿದರು. ರೋಹಿತ್ ಶರ್ಮ 34 ರನ್ ಗಳಿಸಿ ಜಾನ್ಸನ್‌ಗೆ ಬೌಲ್ಡ್ ಆಗಿ ಪೆವಿಲಿಯನ್‌ಗೆ ಸೇರಿದರು. ಸುರೇಶ್ ರೈನಾ(7) ವಿಫಲರಾದರು. ಧೋನಿ ಕ್ರೀಸ್‌ಗೆ ಆಗಮಿಸಿದಾಗ ಭಾರತದ ಸ್ಕೋರ್ 23 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 108 ಆಗಿತ್ತು. ಭಾರತ ಗೆಲುವಿಗೆ 27 ಓವರ್‌ಗಳಲ್ಲಿ 8.18 ಸರಾಸರಿಯಂತೆ 221 ರನ್ ಮಾಡಬೇಕಾದ ಒತ್ತಡಕ್ಕೆ ಸಿಲುಕಿತ್ತು. ಧೋನಿ ಮತ್ತು ಅಜಿಂಕ್ಯ ರಹಾನೆ ಐದನೆ ವಿಕೆಟ್‌ಗೆ 13.2 ಓವರ್‌ಗಳಲ್ಲಿ 70 ರನ್ ಸೇರಿಸಿದರು. ಅಜಿಂಕ್ಯ ರಹಾನೆ 44 ರನ್(68ಎ, 2ಬೌ) ಗಳಿಸಿದರು. ರವೀಂದ್ರ ಜಡೇಜ(16) ಮತ್ತು ಆರ್.ಅಶ್ವಿನ್(5) ಜೊತೆ ಧೋನಿ ಹೋರಾಟ ಮುಂದುವರಿಸಿದರು. ಆದರೆ 44.3ನೆ ಓವರ್‌ನಲ್ಲಿ ಸ್ಟಾರ್ಕ್ ಎಸೆತವನ್ನು ತಳ್ಳಿ ಧೋನಿ 1 ರನ್ ರನ್ ಕದಿಯುವ ಪ್ರಯತ್ನ ನಡೆಸಿದರು. ಆದರೆ ಅವರು ಕ್ರೀಸ್ ತಲುಪುವ ಮೊದಲೇ ಮ್ಯಾಕ್ಸ್ ವೆಲ್ ಸ್ಟಂಪ್‌ಗೆ ಗುರಿಯಿಟ್ಟು ಹೊಡೆದರು. ಧೋನಿ ರನೌಟಾದರು. 65 ರನ್(65ಎ, 3ಬೌ,2ಸಿ) ಗಳಿಸಿ ಧೋನಿ ಔಟಾದ ಬಳಿಕ ತಂಡದ ಹೋರಾಟ ಬಹುತೇಕ ಮುಕ್ತಾಯಗೊಂಡಿತು. ಮೋಹಿತ್ ಶರ್ಮ(0) ಮತ್ತು ಉಮೇಶ್ ಯಾದವ್(0) ಬಂದ ದಾರಿಯಲ್ಲೇ ಹಿಂದಕ್ಕೆ ತೆರಳಿದರು.
ಫಾಕ್ನರ್ 59ಕ್ಕೆ 3, ಜಾನ್ಸನ್ ಮತ್ತು ಸ್ಟಾರ್ಕ್ ತಲಾ 2 ವಿಕೆಟ್ ಹಂಚಿಕೊಂಡರು.
ಸ್ಮಿತ್ ಶತಕದ ವೈಭವ: ನಾಲ್ಕು ತಿಂಗಳ ಹಿಂದೆ ಟೀಮ್ ಇಂಡಿಯಾ ವಿಶ್ವ ಚಾಂಪಿಯನ್ ಹಾಗೂ ಬಾರ್ಡರ್-ಗವಾಸ್ಕರ್ ಟ್ರೋಫಿ ಗೆದ್ದಿರುವ ಖುಷಿಯಲ್ಲಿ ಆಸ್ಟ್ರೇಲಿಯಕ್ಕೆ ಕಾಲಿರಿಸಿತ್ತು. ಸ್ಟೀವನ್ ಸ್ಮಿತ್ ಪ್ರತಿಯೊಂದು ಪಂದ್ಯದಲ್ಲೂ ಶತಕ ಸಿಡಿಸಿ ಭಾರತದ ಕೈಯಲ್ಲಿದ್ದ ಬಾರ್ಡರ್-ಗವಾಸ್ಕರ್ ಟ್ರೋಫಿ ಕಿತ್ತುಕೊಳ್ಳಲು ಆಸ್ಟ್ರೇಲಿಯಕ್ಕೆ ನೆರವಾಗಿದ್ದರು. ಇದೀಗ ವಿಶ್ವಕಪ್‌ನಲ್ಲಿ ಸ್ಮಿತ್ ಸಿಡಿಸಿದ ಶತಕ ಆಸ್ಟ್ರೇಲಿಯಕ್ಕೆ ಏಳನೆ ಬಾರಿ ಫೈನಲ್‌ಗೆ ತಲುಪಲು ನೆರವಾಯಿತು. ಇದರೊಂದಿಗೆ ವಿಶ್ವಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳಲು ಭಾರತ ನಡೆಸುತ್ತಿದ್ದ ಪ್ರಯತ್ನ ಸೆಮಿಫೈನಲ್‌ನಲ್ಲಿ ಕೊನೆಗೊಂಡಿತು.
184 ರನ್ ಜೊತೆಯಾಟ: ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯ ತಂಡ ಮೊದಲ ವಿಕೆಟ್‌ನ್ನು ಬೇಗನೆ ಕಳೆದುಕೊಂಡಿತ್ತು.ಆರಂಭಿಕ ದಾಂಡಿಗ ಡೇವಿಡ್ ವಾರ್ನರ್ 4ನೆ ಓವರ್‌ನ ಮೊದಲ ಎಸೆತದಲ್ಲಿ ಉಮೇಶ್ ಯಾದವ್‌ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು.
ಎರಡನೆ ವಿಕೆಟ್‌ಗೆ ಆ್ಯರೊನ್ ಫಿಂಚ್‌ಗೆ ಸ್ಟೀವನ್ ಸ್ಮಿತ್ ಜೊತೆಯಾದರು. ಇವರು ಭಾರತದ ಮೂವರು ವೇಗದ ಬೌಲರ್‌ಗಳಾದ ಮುಹಮ್ಮದ್ ಶಮಿ, ಉಮೇಶ್ ಯಾದವ್ ಮತ್ತು ಮೋಹಿತ್ ಶರ್ಮ ದಾಳಿಯನ್ನು ಚೆನ್ನಾಗಿ ದಂಡಿಸಿದರು. ಎರಡನೆ ವಿಕೆಟ್‌ಗೆ 184 ರನ್‌ಗಳ ಜೊತೆಯಾಟ ನೀಡಿದರು. ನಿಗದಿತ 50 ಓವರ್‌ಗಳಲ್ಲಿ ಆಸ್ಟ್ರೇಲಿಯಕ್ಕೆ 7 ವಿಕೆಟ್ ನಷ್ಟದಲ್ಲಿ 328ರನ್‌ಗಳ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ನೆರವಾದರು.

ಸ್ಮಿತ್ 89 ಎಸೆತಗಳಲ್ಲಿ 10 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಲ್ಲಿ ಶತಕ ಪೂರ್ಣಗೊಳಿಸಿದರು. ಇದು ಏಕದಿನ ಕ್ರಿಕೆಟ್‌ನಲ್ಲಿ ದಾಖಲಿಸಿದ ನಾಲ್ಕನೆ ಶತಕ. ಈ ವರ್ಷದ ವಿಶ್ವಕಪ್‌ನಲ್ಲಿ ಅವರ ಮೊದಲ ಶತಕ. ಮೊದಲು ಸ್ಮಿತ್ ನಿಧಾನವಾಗಿ ಬ್ಯಾಟಿಂಗ್ ಆರಂಭಿಸಿದ್ದರು. 20 ಎಸೆತಗಳಲ್ಲಿ 1 ಬೌಂಡರಿ ನೆರವಿನಲ್ಲಿ 14 ರನ್ ಮಾಡಿದ್ದರು. 10ನೆ ಓವರ್‌ನಲ್ಲಿ ಉಮೇಶ್ ಓವರ್‌ನ 4 ಎಸೆತಗಳಲ್ಲಿ ಚೆಂಡನ್ನು ಸತತ ಬೌಂಡರಿ ಗೆರೆ ದಾಟಿಸಿ 16 ರನ್ ಕಬಳಿಸಿದ್ದರು. ಬಳಿಕ ಶಮಿ ಅವರ 33ನೆ ಓವರ್‌ನಲ್ಲಿ 1 ಸಿಕ್ಸರ್ ಹಾಗೂ 2 ಬೌಂಡರಿ ಇರುವ 14 ರನ್ ಗಳಿಸಿ ಶತಕ ಪೂರೈಸಿದರು. ಅಷ್ಟರ ವೇಳೆ ಸ್ಮಿತ್‌ಗೆ ಸಾಥ್ ನೀಡುತ್ತಿದ್ದ ಫಿಂಚ್ ಸ್ಕೋರ್ 62ಕ್ಕೆ ತಲುಪಿತ್ತು. 34ನೆ ಓವರ್‌ನಲ್ಲಿ ಸ್ಮಿತ್ ಮತ್ತು ಫಿಂಚ್ ಜೊತೆಯಾಗಿ ಮೋಹಿತ್ ಶರ್ಮ ಓವರ್‌ನಲ್ಲಿ 16 ರನ್ ಕಬಳಿಸಿದರು. ತಂಡದ ಸ್ಕೋರ್‌ನ್ನು 34 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 197ಕ್ಕೆ ಏರಿಸಿದ್ದರು. 34.1ನೆ ಓವರ್‌ನಲ್ಲಿ ಯಾದವ್‌ರ ಬೌನ್ಸರ್ ಎಸೆತದಲ್ಲಿ ಚೆಂಡು ಅವರ ಬ್ಯಾಟ್‌ನ್ನು ಸ್ಪರ್ಶಿಸಿ ಡೀಪ್ ಸ್ಕ್ವಾರ್ ಲೆಗ್ ಕಡೆಗೆ ಹಾರಿತು. ರೋಹಿತ್ ಶರ್ಮ ಕ್ಯಾಚ್ ತೆಗೆದುಕೊಳ್ಳುವುದರೊಂದಿಗೆ 105 ರನ್ ಗಳಿಸಿದ ಸ್ಮಿತ್ ಪೆವಿಲಿಯನ್ ಸೇರಿದರು. ಆಲ್‌ರೌಂಡರ್ ಗ್ಲೆನ್ ಮಾಕ್ಸ್‌ವೆಲ್ 23 ರನ್ (14ಎ,3ಬೌ,1ಸಿ) ಗಳಿಸಿ ಅಶ್ವಿನ್‌ಗೆ ವಿಕೆಟ್ ಒಪ್ಪಿಸಿದರು. ಮ್ಯಾಕ್ಸ್‌ವೆಲ್ ಔಟಾದ ಬೆನ್ನಲ್ಲೆ ಫಿಂಚ್ ಔಟಾದರು. ಫಿಂಚ್ 81 ರನ್(116ಎ, 7ಬೌ,1ಸಿ) ಸೇರಿಸಿದರು.
38.2 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 233 ರನ್ ಮಾಡಿದ್ದ ಆಸ್ಟ್ರೇಲಿಯದ ಖಾತೆಗೆ ಶೇನ್ ವ್ಯಾಟ್ಸನ್(28), ಮೈಕಲ್ ಕ್ಲಾರ್ಕ್(10), ಜೇಮ್ಸ್ ಫಾಕ್ನರ್(21), ಮಿಚೆಲ್ ಜಾನ್ಸನ್ (ಔಟಾಗದೆ 27) ಎರಡಂಕೆಯ ಸ್ಕೋರ್ ದಾಖಲಿಸಿ ತಂಡದ ಸ್ಕೋರ್ 325ರ ಗಡಿ ದಾಟಿಸಲು ನೆರವಾದರು.
ಬೌಲರ್‌ಗಳಾದ ಮುಹಮ್ಮದ್ ಶಮಿ 10 ಓವರ್‌ಗಳಲ್ಲಿ 68 ರನ್ ಮತ್ತು ರವೀಂದ್ರ ಜಡೇಜ 10 ಓವರ್‌ಗಳಲ್ಲಿ 56 ರನ್ ನೀಡಿದ್ದರೂ ವಿಕೆಟ್ ದಕ್ಕಲಿಲ್ಲ. ಉಮೇಶ್ ಯಾದವ್ 72ಕ್ಕೆ 4 ವಿಕೆಟ್ ಪಡೆದರೂ ದುಬಾರಿ ಎನಿಸಿಕೊಂಡರು. ಮೋಹಿತ್ ಶರ್ಮ 75ಕ್ಕೆ 2 ವಿಕೆಟ್ ಪಡೆದರು. ರವಿಚಂದ್ರನ್ ಅಶ್ವಿನ್ 10 ಓವರ್‌ಗಳಲ್ಲಿ 42ಕ್ಕೆ 1 ವಿಕೆಟ್ ಪಡೆದು ಆಸ್ಟ್ರೇಲಿಯದ ರನ್ ಪ್ರವಾಹವನ್ನು ಸ್ವಲ್ಪ ಮಟ್ಟಿಗೆ ತಡೆಯುವಲ್ಲಿ ಯಶಸ್ವಿಯಾಗಿದ್ದರು.
ಸೊ್ಕೀರ್ ವಿವರ
ಆಸ್ಟ್ರೇಲಿಯ: 50 ಓವರ್‌ಗಳಲ್ಲಿ 328/7
ಆ್ಯರೊನ್ ಫಿಂಚ್ ಸಿ ಧವನ್ ಬಿ ಯಾದವ್ 81
ಡೇವಿಡ್ ವಾರ್ನರ್ ಸಿ ಕೊಹ್ಲಿ ಬಿ ಯಾದವ್ 12
ಸ್ಟೀವನ್ ಸ್ಮಿತ್ ಸಿ ರೋಹಿತ್ ಬಿ ಯಾದವ್ 105
ಮ್ಯಾಕ್ಸ್‌ವೆಲ್ ಸಿ ರಹಾನೆ ಬಿ ಅಶ್ವಿನ್ 23
ವ್ಯಾಟ್ಸನ್ ಸಿ ರಹಾನೆ ಬಿ ಮೋಹಿತ್ ಶರ್ಮ 28
ಕ್ಲಾರ್ಕ್ ಸಿ ರೋಹಿತ್ ಬಿ ಮೋಹಿತ್ 10
ಫಾಕ್ನೆರ್ ಬಿ ಯಾದವ್ 21
ಹಡಿನ್ ಅಜೇಯ 7
ಜಾನ್ಸನ್ ಅಜೇಯ 27
ಇತರ 14
ವಿಕೆಟ್ ಪತನ: 1-15, 2-197, 3-232, 4-233, 5-248, 6-284, 7-298
ಬೌಲಿಂಗ್ ವಿವರ:
ಮುಹಮ್ಮದ್ ಶಮಿ 10-0-68-0
ಉಮೇಶ್ ಯಾದವ್ 9-0-72-4
ಮೋಹಿತ್ ಶರ್ಮ 10-0-75-2
ವಿರಾಟ್ ಕೊಹ್ಲಿ 1-0-7-0
ರವೀಂದ್ರ ಜಡೇಜ 10-0-56-0
ಅಶ್ವಿನ್ 10-0-42-1
ಭಾರತ: 46.5 ಓವರ್‌ಗಳಲ್ಲಿ 233/10
ರೋಹಿತ್ ಶರ್ಮ ಬಿ ಜಾನ್ಸನ್ 34
ಧವನ್ ಸಿ ಮ್ಯಾಕ್ಸ್‌ವೆಲ್ ಬಿ ಹೇಝಲ್‌ವುಡ್ 45
ಕೊಹ್ಲಿ ಸಿ ಹಡಿನ್ ಬಿ ಜಾನ್ಸನ್1
ರಹಾನೆ ಸಿ ಹಡಿನ್ ಬಿ ಸ್ಟಾರ್ಕ್ 44
ರೈನಾ ಸಿ ಹಡಿನ್ ಬಿ ಫಾಕ್ನೆರ್ 7
ಎಂಎಸ್ ಧೋನಿ ರನೌಟ್(ಮ್ಯಾಕ್ಸ್‌ವೆಲ್) 65
ಜಡೇಜ ರನೌಟ್(ಸ್ಮಿತ್) 16
ಅಶ್ವಿನ್ ಬಿ ಫಾಕ್ನೆರ್ 5
ಶಮಿ ಅಜೇಯ 1
ಮೋಹಿತ್ ಬಿ ಫಾಕ್ನರ್ 0
ಯಾದವ್ ಬಿ ಸ್ಟಾರ್ಕ್ 0
ಇತರ 15
ವಿಕೆಟ್ ಪತನ: 1-76, 2-78, 3-91, 4-108, 5-178, 6-208, 7-231, 8-232, 9-232, 10-233.
ಬೌಲಿಂಗ್ ವಿವರ:
ಸ್ಟಾರ್ಕ್ 8.5-0-28-2
ಹೇಝಲ್‌ವುಡ್ 10-1-41-1
ಜಾನ್ಸನ್ 10-0-50-2
ಫಾಕ್ನೆರ್ 9-1-59-3

ಮ್ಯಾಕ್ಸ್‌ವೆಲ್ 5-0-18-0 ವ್ಯಾಟ್ಸನ್ 4-0-29-0.

Write A Comment