ಬೆಂಗಳೂರು, ಮಾ. 16: ಪ್ರಾಮಾಣಿಕ ಅಧಿಕಾರಿಯೆಂದು ಖ್ಯಾತಿಗಳಿಸಿದ್ದ ಐಎಎಸ್ ಅಧಿಕಾರಿ, ವಾಣಿಜ್ಯ ತೆರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ಸೋಮವಾರ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ ಘಟನೆ ಇಲ್ಲಿನ ಕೋರಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.
ತುಮಕೂರು ಜಿಲ್ಲೆ ಕುಣಿಗಲ್ ಮೂಲದ ಡಿ.ಕೆ.ರವಿ(36) ಮೃತ ಅಧಿಕಾರಿ. ಇಲ್ಲಿನ ಕೋರಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ತಾವರೆಕೆರೆಯ ಸೇಂಟ್ ಜಾನ್ಸ್ ವುಡ್ ಅರ್ಪಾಟ್‌ಮೆಂಟ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ
1979ರ ಜೂನ್ 10ರಂದು ಹುಟ್ಟಿದ ರವಿ, 2009ರ ಬ್ಯಾಚ್‌ನಲ್ಲಿ ಐಎಎಸ್ ಅಧಿಕಾರಿಯಾಗಿ ಆಯ್ಕೆಯಾಗಿದ್ದರು. ಮೊಟ್ಟ ಮೊದಲ ಬಾರಿಗೆ ಕೋಲಾರ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದು, ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಯೆಂದು ಖ್ಯಾತಿ ಗಳಿಸಿದ್ದರು. ಗ್ರಾಮ ವಾಸ್ತವ್ಯ, ದಲಿತರ ಮನೆಯಲ್ಲಿ ಭೋಜನ ಜೊತೆಗೆ ಬಡ ವಿದ್ಯಾರ್ಥಿಗಳಿಗೆ ಹಣಕಾಸಿನ ನೆರವನ್ನು ನೀಡುತ್ತಿದ್ದರು. ಪ್ರತಿ ರವಿವಾರ ಉನ್ನತ ವ್ಯಾಸಂಗ ಮಾಡಲು ಇಚ್ಛಿಸುವವರಿಗೆ ಸಲಹೆ ಸೂಚನೆಗಳನ್ನು ನೀಡುತ್ತಿದ್ದರು. ಇದರಿಂದ ಕೋಲಾರದ ಜನರ ಅನನ್ಯ ಪ್ರೀತಿ, ವಿಶ್ವಾಸ ಗಳಿಸಿದ್ದರು. ಜನಾನುರಾಗಿ ಅಧಿಕಾರಿಯಾಗಿದ್ದರು. ಜನರ ಮೆಚ್ಚುಗೆಗೆ ಪಾತ್ರರಾಗಿ ಜನರೇ ಅವರನ್ನು ಹೊತ್ತು ಮೆರೆದಿದ್ದರು.
ಕಂದಾಯ ಅದಾಲತ್, ಪೋಡಿ ಅದಾಲತ್, ಕೆರೆ ಹಾಗೂ ಸರಕಾರಿ ಭೂಮಿ ಒತ್ತುವರಿ ತೆರವುಗೊಳಿಸಲು ಹಾಗೂ ಮರಳು ಗಣಿಗಾರಿಕೆಗೆ ತಡೆಯೊಡ್ಡುವ ದೃಢ ನಿರ್ಧಾರ ಕೈಗೊಳ್ಳುವ ಮೂಲಕ ಪ್ರಭಾವಿಗಳ ಕೆಂಗಣ್ಣಿಗೂ ಗುರಿಯಾಗಿದ್ದರು. ಆದರೆ, ಇಂತಹ ದಕ್ಷ ಅಧಿಕಾರಿಯನ್ನು ಸರಕಾರ ಯಾವುದೋ ಒತ್ತಡ, ಪ್ರಭಾವಕ್ಕೆ ಒಳಗಾಗಿ ವರ್ಗ ಮಾಡಿತ್ತು ಎಂಬ ಆಪಾದನೆಯೂ ಕೇಳಿಬರುತ್ತಿದೆ. ವಾಣಿಜ್ಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತರಾಗಿ ಹೊಸ ಹುದ್ದೆಗೆ ವರ್ಗವಾಗಿದ್ದ ರವಿಯವರು, ಅಲ್ಲೂ ಸಹ ತಮ್ಮ ದಕ್ಷತೆ ಮತ್ತು ಪ್ರಾಮಾಣಿಕತೆಯನ್ನು ಮೆರೆದಿದ್ದರು. ಆ ಹುದ್ದೆಗೆ ಬಂದ ನಾಲ್ಕೇ ತಿಂಗಳಲ್ಲಿ 129 ಕೋಟಿ ರೂ. ತೆರಿಗೆ ವಸೂಲಿ ಮಾಡಿ ವಿಕ್ರಮ ಸಾಧಿಸಿದ್ದರು. ವಾರಕ್ಕೆ ಎರಡು ದಾಳಿ ನಡೆಸಿ ವಾಣಿಜ್ಯ ತೆರಿಗೆ ಇಲಾಖೆ ಜೀವಂತವಿದೆ ಎಂಬುದನ್ನು ತೋರಿದ್ದರು. ರಿಯಲ್‌ಎಸ್ಟೇಟ್ ಸಂಸ್ಥೆಗಳ ಮೇಲೆ, ಬಿಲ್ಡರ್‌ಗಳ ಮನೆ ಮೇಲೆ ದಾಳಿ ಮಾಡಿ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಹಲವಾರು ಬೆದರಿಕೆ ಕರೆಗಳು ಬಂದಿದ್ದವೆಂಬ ಸುದ್ದಿ ಇದೆ. ಇಂತಹ ಅಪರೂಪದ ಅಧಿಕಾರಿ ಇವತ್ತು ನಿಗೂಢ ರೀತಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದು, ಈ ಸಂಬಂಧ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ರವಿ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನಗರದ ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಲಾಗಿದೆ. ಕೋರಮಂಗಲ ಠಾಣಾ ಪೊಲೀಸರು ಮೊಕದ್ದಮೆ ದಾಖಲು ಮಾಡಿಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ.
ಗುಪ್ತದಳದ ವರದಿ ತರಿಸಿಕೊಂಡ ಸಿಎಂ
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗುಪ್ತದಳ ಮತ್ತು ಪೊಲೀಸ್ ಉನ್ನತ ಅಧಿಕಾರಿಗಳನ್ನು ಕರೆಸಿಕೊಂಡು, ಡಿ.ಕೆ. ರವಿಯವರ ಸಾವಿಗೆ ಸಂಬಂಧಿಸಿ ವರದಿ ತರಿಸಿಕೊಂಡಿದ್ದಾರೆಂಬ ಮಾಹಿತಿ ಇದೆ. ಡಿ.ಕೆ. ರವಿಯವರ ಸಾವಿನ ಸಂಬಂಧ ಪೊಲೀಸ್ ಆಯುಕ್ತ ಎಂ.ಎನ್. ರೆಡ್ಡಿಯವರ ನೇತೃತ್ವದಲ್ಲಿ ತನಿಖೆಯನ್ನು ಚುರುಕುಗೊಳಿಸಲಾಗಿದೆ. ಅಧಿವೇಶನ ನಡೆಯುತ್ತಿರುವ ಈ ಸಂದರ್ಭದಲ್ಲಿ ದಕ್ಷ, ಪ್ರಾಮಾಣಿಕ ಅಧಿಕಾರಿ ರವಿಯವರ ಅನುಮಾನಾಸ್ಪದ ಸಾವು ಮುಖ್ಯವಾಗಿ ಚರ್ಚೆಗೆ ಬರಲಿದೆ, ಕೋಲಾಹಲ ಎಬ್ಬಿಸಲಿದೆ ಎನ್ನಲಾಗುತ್ತಿದೆ.
ಕರ್ನಾಟಕ