ಶಿವಮೊಗ್ಗ: ಇಲ್ಲಿಯ ವಿನೋಬ ನಗರದ ವಿಕಾಸ ಶಾಲೆ ಹಿಂಭಾಗದ ರಸ್ತೆಯಲ್ಲಿ ಬುಧವಾರ ‘ಐಸ್‌ಕ್ರೀಂ ಬಾಲ್’ನಲ್ಲಿ ಸ್ಫೋಟಕ ಪತ್ತೆಯಾಗಿದೆ. ಸ್ಥಳೀಯ ಪತ್ರಿಕಾ ಕಚೇರಿಗಳಿಗೆ ಮಂಗಳವಾರ ಬಾಂಬ್ ಸ್ಫೋಟಿಸುವ ಬೆದರಿಕೆ ಪತ್ರ ಬಂದ 24 ಗಂಟೆಯ ಅಂತರದಲ್ಲಿ ಈ ಸ್ಫೋಟಕ ಪತ್ತೆಯಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿತು.
ರಾಮಮೋಹನ್ ಎನ್ನುವವರ ಮನೆಯ ಮುಂದೆ ನಿಲ್ಲಿಸಲಾಗಿದ್ದ ಜೀಪ್ ಬಳಿ ಈ ಸ್ಫೋಟಕಗಳಿದ್ದ ಬಾಲ್ ಪತ್ತೆಯಾಗಿದ್ದು, ಉಪಯೋಗಿಸಿ ಬೀಸಾಡಿದ ಐಸ್‌ಕ್ರೀಂ ಬಾಲ್ ಒಳಗೆ ಸ್ಫೋಟಕ ಸಾಮಗ್ರಿ ತುಂಬಿ, ಹೊರಭಾಗದಲ್ಲಿ ನಟ್, ಬೋಲ್ಟ್ ಅಳವಡಿಸಿ ನಂತರ ಕಾಗದದಲ್ಲಿ ಸುತ್ತಿ ಇಡಲಾಗಿತ್ತು. ಜೀಪ್ ಚಾಲಕ ಸುರೇಶ್ ಅದನ್ನು ಗಮನಿಸಿ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.
ಬಾಂಬ್ ನಿಷ್ಕ್ರಿಯದಳ ಹಾಗೂ ಶ್ವಾನದಳದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನಂತರ ಅದನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಯಿತು.
ಸಿಸಿ ಟಿವಿ ದೃಶ್ಯಾವಳಿ ಪರಿಶೀಲನೆ: ಸ್ಫೋಟಕ ವಸ್ತು ದೊರೆತ ರಸ್ತೆಯ ಹಲವು ಮನೆಗಳಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಿಕೊಂಡಿದ್ದು, ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಕಿಡಿಗೇಡಿಗಳ ಕೃತ್ಯ: ಐಜಿಪಿ
ವಿನೋಬನಗರ ಬಳಿ ಪತ್ತೆಯಾಗಿರುವುದು ನೈಜ ಬಾಂಬ್ ಅಲ್ಲ. ಕೆಲ ಕಿಡಿಗೇಡಿಗಳು ಪರಿಸ್ಥಿತಿಯ ಲಾಭ ಪಡೆಯಲು ಇಂತಹ ಸಂಚು ರೂಪಿಸಿರಬಹುದು. ಬಾಂಬ್ ಸ್ಫೋಟ-ಗೊಳ್ಳುವ ಸಾಮರ್ಥ್ಯ ಹೊಂದಿರಲಿಲ್ಲ. ಬಾಂಬ್ ನಿಷ್ಕ್ರಿಯ ದಳ ಸಹ ಅದನ್ನು ದೃಢಪಡಿಸಿದೆ. ಆದರೆ, ಅದರಲ್ಲಿದ್ದ ಸಾಮಗ್ರಿಗಳ ಕುರಿತು ಪರಿಶೀಲಿಸಲು ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ.
ನಾಗರಿಕರು ಭಯಪಡುವ ಅಗತ್ಯವಿಲ್ಲ. ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಲಾಗುತ್ತಿದ್ದು, ಶೀಘ್ರದಲ್ಲೇ ಕಿಡಿಗೇಡಿಗಳನ್ನು ಬಂಧಿಸಲಾಗುವುದು. ಮುಂಜಾಗ್ರತಾ ಕ್ರಮವಾಗಿ ಬೆಂಗಳೂರು ಮತ್ತಿತರ ಭಾಗಗಳಿಂದ ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನ ದಳ ಕರೆಸಲಾಗಿದೆ. ಬೆದರಿಕೆ ಪತ್ರದ ಕುರಿತು ತನಿಖೆ ನಡೆಯುತ್ತಿದೆ.
–ನಂಜುಂಡಸ್ವಾಮಿ, ಪೂರ್ವವಲಯ ಐಜಿಪಿ.