ನವದೆಹಲಿ: ದೆಹಲಿ ಅತ್ಯಾಚಾರ ಪ್ರಕರಣದ ಅಪರಾಧಿ ಮುಕೇಶ್ ಸಿಂಗ್‌ನ ಸಂದರ್ಶನ ಒಳಗೊಂಡಿರುವ ‘ಬಿಬಿಸಿ’ ಯ ವಿವಾದಾತ್ಮಕ ಸಾಕ್ಷ್ಯಚಿತ್ರ ಪ್ರಸಾರ ಮಾಡದಂತೆ ಸರ್ಕಾರ ಹಾಗೂ ನ್ಯಾಯಾಂಗ ಬುಧವಾರ ಕ್ರಮ ಕೈಗೊಂಡಿವೆ.
ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ಎದ್ದ ವಿವಾದ ತಣ್ಣಗಾಗಿಸಲು ಕೇಂದ್ರ ಗೃಹ ಸಚಿವಾಲಯ ಮುಂದಾಗಿದ್ದು, ಯಾವುದೇ ಮಾಧ್ಯಮದಲ್ಲೂ ಇದು ಪ್ರಸಾರವಾಗದಂತೆ ನೋಡಿಕೊಳ್ಳಬೇಕು ಎಂದು ವಿದೇಶಾಂಗ ವ್ಯವಹಾರ ಸಚಿವಾಲಯ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ಆದೇಶಿಸಿದೆ. ಬ್ರಿಟನ್ನಿನ ಸುದ್ದಿ ವಾಹಿನಿ ‘ಬಿಬಿಸಿ’ಗೂ ಸಾಕ್ಷ್ಯಚಿತ್ರ ಪ್ರಸಾರ ಮಾಡದಂತೆ ಸೂಚನೆ ನೀಡಿದೆ.
ಕಾನೂನುಕ್ರಮಕ್ಕೆ ಚಿಂತನೆ: ಸಂದರ್ಶನ ಮಾಡಲು ಅನುಮತಿ ನೀಡುವ ಮುನ್ನ ಹಾಕಲಾಗಿದ್ದ ಷರತ್ತುಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಲೆಸ್ವಿ ಉಡ್ವಿನ್ ವಿರುದ್ಧ ಕಾನೂನು ಕ್ರಮ ಜರುಗಿಸಲು ಸಹ ಗೃಹ ಸಚಿವಾಲಯ ಚಿಂತಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ವಿದ್ಯಮಾನದ ಕಾರಣ ಜೈಲಿನಲ್ಲಿ ಚಿತ್ರೀಕರಣಕ್ಕೆ ಅನುಮತಿ ನೀಡಲು ಇರುವ ನಿಯಮಾವಳಿಗಳನ್ನು ಹೊಸದಾಗಿ ಪರಿಶೀಲಿಸಲಾಗುತ್ತಿದೆ ಎಂದು ಗೃಹಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.
ಕೋರ್ಟ್ ನಿರ್ಬಂಧ: ಈ ನಡುವೆ ದೆಹಲಿಯ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಸಂಜಯ್ ಖಾನಗ್ವಾಲ್ ಅವರು ಮುಂದಿನ ಆದೇಶ ಹೊರಡಿಸುವವರೆಗೂ ಈ ಸಂದರ್ಶನವನ್ನು ಪ್ರಸಾರ ಮಾಡದಂತೆ ಆದೇಶ ಹೊರಡಿಸಿದ್ದಾರೆ.
ಸಂಸತ್ತಿನಲ್ಲಿ ಹೇಳಿಕೆ: ವಿವಾದಕ್ಕೆ ಸಂಬಂಧಿಸಿ ಸಂಸತ್ತಿನ ಉಭಯ ಸದನಗಳಲ್ಲಿ ಹೇಳಿಕೆ ನೀಡಿದ ರಾಜನಾಥ್ ಸಿಂಗ್, ತಿಹಾರ್ ಜೈಲಿನಲ್ಲಿ ಅಪರಾಧಿಯ ಸಂದರ್ಶನ ಮಾಡಲು ಹೇಗೆ ಅನುಮತಿ ನೀಡಲಾಯಿತು ಎಂಬ ಬಗ್ಗೆ ತನಿಖೆಗೆ ಆದೇಶಿಸಲಾಗುವುದು ಎಂದರು. ಈ ಘಟನೆ ತಮಗೆ ತೀವ್ರ ‘ಆಘಾತ’ ಹಾಗೂ ‘ನೋವು’ ತಂದಿದೆ ಎಂದೂ ಸಚಿವರು ತಿಳಿಸಿದರು. ಎಂಥದ್ದೇ ಸನ್ನಿವೇಶದಲ್ಲೂ ಈ ಸಂದರ್ಶನ ಪ್ರಸಾರಕ್ಕೆ ಅನುಮತಿ ನೀಡುವುದಿಲ್ಲ ಎಂದು ಭರವಸೆ ನೀಡಿದರು.
ತಿಹಾರ್ ಜೈಲಿನಲ್ಲಿ ಸಾಕ್ಷ್ಯಚಿತ್ರ ಚಿತ್ರೀಕರಣಕ್ಕೆ 2013ರ ಜುಲೈನಲ್ಲಿ ‘ನಿರಾಕ್ಷೇಪಣಾ ಪತ್ರ’ ನೀಡಲಾಗಿತ್ತು ಎಂದೂ ಸಚಿವರು ತಿಳಿಸಿದರು.
ಯುಪಿಎ ಸರ್ಕಾರದಲ್ಲಿ ಗೃಹಸಚಿವರಾಗಿದ್ದ ಕಾಂಗ್ರೆಸ್ ನಾಯಕ ಸುಶೀಲ್ ಕುಮಾರ್ ಶಿಂಧೆ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಸಾಕ್ಷ್ಯಚಿತ್ರ ನಿರ್ಮಿಸಲು ತಾನು ಅನುಮತಿ ನೀಡಿರಲಿಲ್ಲ. ಇದಕ್ಕೆ ಸಂಬಂಧಿಸಿದ ಯಾವುದೇ ಕಾಗದಪತ್ರಗಳು ತಮ್ಮ ಬಳಿ ಬಂದಿರಲಿಲ್ಲ ಎಂದಿದ್ದಾರೆ.
ಅಧಿಕಾರಿಯೊಬ್ಬರ ಪ್ರಕಾರ, ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುರೇಶ್ ಕುಮಾರ್, ಸಾಕ್ಷ್ಯಚಿತ್ರ ನಿರ್ಮಾಪಕರಿಗೆ ಅನುಮತಿ ನೀಡಿದ್ದರು. ಈ ಸಂಬಂಧ ಸರ್ಕಾರಕ್ಕೆ ಯಾವುದೇ ಆಕ್ಷೇಪ ಇಲ್ಲ ಎಂದೂ ಹೇಳಿದ್ದರು.
ಗೃಹ ಸಚಿವಾಲಯವು, ಮಾಹಿತಿ ತಂತ್ರಜ್ಞಾನ ಇಲಾಖೆಗೆ ಸಾಕ್ಷ್ಯಚಿತ್ರವನ್ನು ಯಾವುದೇ ಸಾಮಾಜಿಕ ತಾಣ ಅಥವಾ ಯೂಟ್ಯೂಬ್‌ನಲ್ಲಿ ಪ್ರಸರಣ ಮಾಡದಂತೆ ಕ್ರಮ ತೆಗೆದುಕೊಳ್ಳಬೇಕು ಎಂದೂ ಸೂಚಿಸಿದೆ.
ಬಿಬಿಸಿಗೆ ಸಾಕ್ಷ್ಯಚಿತ್ರ ಮಾರಾಟ ಮಾಡುವ ಮೂಲಕ ಚಿತ್ರ ನಿರ್ಮಾಪಕಿ ಷರತ್ತುಗಳನ್ನು ಉಲ್ಲಂಘಿಸಿದ್ದಾರೆ. ವಾಣಿಜ್ಯ ಉದ್ದೇಶಕ್ಕೆ ಚಿತ್ರವನ್ನು ಆಕೆ ಮಾರಾಟ ಮಾಡುವಂತೆ ಇರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿವಾದಕ್ಕೆ ಸಂಬಂಧಿಸಿ ರಾಜನಾಥ್ ಸಿಂಗ್, ದೆಹಲಿಯ ಲೆಫ್ಟಿನೆಂಟ್ ಜನರಲ್ ನಜೀಬ್ ಜಂಗ್, ಗೃಹ ಕಾರ್ಯದರ್ಶಿ ಎಲ್.ಸಿ. ಗೋಯಲ್ ಹಾಗೂ ದೆಹಲಿ ಪೊಲೀಸ್ ಆಯುಕ್ತ ಬಿ. ಎಸ್. ಬಸ್ಸಿ ಅವರ ಸಭೆ ನಡೆಸಿದರು. ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ವ್ಯವಸ್ಥೆಯನ್ನು ಹೇಗೆ ಬಲಪಡಿಸಬೇಕು ಎಂಬ ಬಗ್ಗೆ ಅಲ್ಲಿ ಚರ್ಚಿಸಲಾಯಿತು.
ಸಂಸತ್ತಿನಲ್ಲಿ ವಾಗ್ವಾದ: ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ಬುಧವಾರ ವಾಗ್ವಾದ, ಪ್ರತಿಭಟನೆಗಳು ನಡೆದಿವೆ. ರಾಜ್ಯಸಭೆಯಲ್ಲಿ ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್ ನೇತೃತ್ವದಲ್ಲಿ ಸಭಾಧ್ಯಕ್ಷರ ಪೀಠದ ಮುಂದೆ ನುಗ್ಗಿ ಪ್ರತಿಭಟನೆ ನಡೆಸಿದ ಸಂಸದೆಯರು, ಅಪರಾಧಿಯ ಸಂದರ್ಶನಕ್ಕೆ ಅವಕಾಶ ಮಾಡಿಕೊಟ್ಟಿರುವುದರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
‘ಮಹಿಳೆಯರಿಗೆ ನಿಮ್ಮ ಮೊಸಳೆ ಕಣ್ಣೀರು ಬೇಕಾಗಿಲ್ಲ. ಕ್ರಮ ಜರುಗಿಸಿ’ ಎಂದು ಜಯಾ ಬಚ್ಚನ್ ಆಗ್ರಹಿಸಿದರು. ಆದರೆ, ನಾಮಕರಣ ಸದಸ್ಯರಾದ ಜಾವೇದ್ ಅಖ್ತರ್ ಹಾಗೂ ಅನು ಆಗಾ ಬೇರೆಯದೇ ಅಭಿಪ್ರಾಯ ವ್ಯಕ್ತಪಡಿಸಿದರು.
‘ವಾಸ್ತವದಲ್ಲಿ ಆತ (ಅಪರಾಧಿ) ಮಾತನಾಡಿದ್ದು ಭಾರತದ ಹಲವು ಪುರುಷರ ಮನಸ್ಥಿತಿಗೆ ಕನ್ನಡಿ ಹಿಡಿಯುವಂತಿದೆ. ನಾವ್ಯಾಕೆ ವಾಸ್ತವದಿಂದ ದೂರ ಇರಬೇಕು. ನಾವು ಅದನ್ನು ಎದುರಿಸಬೇಕು. ಇದು ಜೈಲಿನಲ್ಲಿರುವ ವ್ಯಕ್ತಿಯೊಬ್ಬನ ಅಭಿಪ್ರಾಯವಲ್ಲ. ಇದರ ಬಗ್ಗೆ ಅರಿವಿರಲಿ. ಎಲ್ಲವೂ ಚೆನ್ನಾಗಿದೆ ಅಂದುಕೊಳ್ಳುವುದು ಬೇಡ’ ಎಂದು ಆಗಾ ಹೇಳಿದರು.