ಕರ್ನಾಟಕ

ಸೈಕಲ್‌ನಲ್ಲಿ ಕೊರಿಯಾ ಯುವಕ ವಿಶ್ವ ಪರ್ಯಟನೆ

Pinterest LinkedIn Tumblr

ko

ಹೊಸಪೇಟೆ: ಸಾಧನೆಗೆ ಸಮಸ್ಯೆಗಳು ಅಡ್ಡಿಯಾಗ­ಲಾರವು ಎಂಬುದಕ್ಕೆ ಸೈಕಲ್‌ನಲ್ಲಿ ವಿಶ್ವ ಪರ್ಯಟನೆ ಕೈಗೊಂಡಿರುವ ದಕ್ಷಿಣ ಕೊರಿಯಾದ ಚಾ ಒನ್‌ಮಿನ್‌ ಉತ್ತಮ ನಿದರ್ಶನ.

ಈಗಾಗಲೇ 18 ದೇಶಗಳನ್ನು ಸೈಕಲ್‌ ಮೂಲಕವೇ ಸುತ್ತಿರುವ 32ರ ಹರೆಯದ ಒನ್‌ಮಿನ್‌ ಅವರಿಗೆ ಅತ್ಯಂತ ಕಡಿಮೆ ಖರ್ಚಿನಲ್ಲಿ ಪ್ರಪಂಚ ಸುತ್ತುವ ಆಸೆ. ಈಗ ಅವರು ಭಾರತದಲ್ಲಿ ಪ್ರವಾಸ ಕೈಗೊಂಡಿದ್ದು, ಮೊನ್ನೆ ಹೊಸಪೇಟೆ­ಯಲ್ಲಿದ್ದರು.

ಅನಿವಾರ್ಯ ಎಂಬಲ್ಲಿ ಹಡಗು ಅಥವಾ ವಿಮಾನಗಳ ಮೂಲಕ ಆಯಾ ದೇಶ ತಲುಪುವ ಅವರು, ನಂತರದ ಓಡಾಟಕ್ಕೆ ಸೈಕಲ್‌ ಅವಲಂಬಿಸುತ್ತಾರೆ.

ನಾಲ್ಕು ವರ್ಷಗಳ ಹಿಂದೆ ದಕ್ಷಿಣ ಕೊರಿಯಾದ ಬೂಸಾನ್‌ ನಗರದಿಂದ ಪಯಣ ಆರಂಭಿಸಿದ ಅವರು, ಭೇಟಿ ನೀಡಿದ ಪ್ರತಿಯೊಂದು ಸ್ಥಳಗಳ ಚಿತ್ರಗಳ ಜತೆಗೆ ಎಲ್ಲ ಮಾಹಿತಿಯನ್ನೂ ತಮ್ಮ ವೆಬ್‌ಸೈಟ್‌ http://mini677.tistory.com ನಲ್ಲಿ ದಾಖಲಿಸಿದ್ದಾರೆ.

ಪ್ರತಿದಿನ ಅಂದಾಜು 130 ರಿಂದ 150 ಕಿ.ಮೀ. ಸೈಕಲ್‌ ತುಳಿಯುವ ಇವರು, ಮೊಬೈಲ್‌ ನೆರವಿನೊಂದಿಗೆ ನಕಾಶೆ ನೋಡಿ, ಪ್ರಯಾಣದ ದಿಕ್ಕು ಅರಿತು, ಮುನ್ನಡೆಯುತ್ತಾರೆ. ಊಟ–ತಿಂಡಿಗಾಗಿ ಹೋಟೆಲ್‌ಗಳನ್ನೇ ಅವಲಂಬಿ­ಸಿರುವ ಒನ್‌ಮಿನ್‌ ಅವರಿಗೆ ಯಾವ ದೇಶದಲ್ಲೂ ಆರೋಗ್ಯ ಕೈ ಕೊಟ್ಟಿಲ್ಲ.

ಈಗಾಗಲೇ ಚೀನಾ, ವಿಯೆಟ್ನಾಂ, ಲಾವೋಸ್‌, ಕಾಂಬೋಡಿಯಾ, ಥಾಯ್ಲೆಂಡ್‌, ಮಲೇಷ್ಯಾ, ಸಿಂಗಪುರ, ಆಸ್ಟ್ರೇಲಿಯಾ, ನ್ಯೂಜಿಲೆಂಡ್‌್‌, ಇಂಡೊನೇಷ್ಯಾ, ಫಿಲಿಪ್ಪೀನ್ಸ್‌, ಮಕಾವೊ, ಹಾಂಕಾಂಗ್‌, ತೈವಾನ್‌, ಜಪಾನ್‌, ನೇಪಾಳ, ಮಾಲ್ಡೀವ್ಸ್‌, ಶ್ರೀಲಂಕಾಗೆ ಭೇಟಿ ನೀಡಿದ್ದಾರೆ.

ತಮ್ಮ ಪ್ರಯಾಣದ ಭಾಗವಾಗಿ ಹೊಸಪೇಟೆಗೆ ಬಂದಿದ್ದ ಅವರು ನಗರದ ಆಕಾಂಕ್ಷಾ ಬುದ್ಧಿಮಾಂದ್ಯ ಶಾಲೆಯಲ್ಲಿ ತಂಗಿದ್ದರು.
ಎರಡು ದಿನಗಳ ಕಾಲ ಹಂಪಿ ಸೇರಿದಂತೆ ಸುತ್ತಮುತ್ತಲ ಪ್ರದೇಶ­ಗಳನ್ನು ವೀಕ್ಷಿಸಿ ನಂತರ ಇಲ್ಲಿಂದ ನಾಗ­ಪುರಕ್ಕೆ ತೆರಳಿದರು.

ಈ ಕುರಿತು ‘ಪ್ರಜಾವಾಣಿ’ ಜತೆ ಮಾತನಾಡಿದ ಅವರು, ‘ಜೀವನದಲ್ಲಿ ಏನನ್ನನಾದರೂ ಸಾಧಿಸಬೇಕು ಎಂಬ ಹುಚ್ಚು ಚಿಕ್ಕಂದಿನಿಂದಲೂ ಇತ್ತು. ಆದರೆ, ಆರ್ಥಿಕ ಮುಗ್ಗಟ್ಟು ನನ್ನ ಆಸೆಗೆ ತಣ್ಣೀರೆರಚಿತ್ತು. ಈಗಾಗಲೇ 18 ದೇಶಗಳಿಗೆ ಭೇಟಿ ನೀಡಿದ್ದು, ಮುಂದಿನ ಹಂತದಲ್ಲಿ ಅರಬ್‌ ರಾಷ್ಟ್ರಗಳು, ದಕ್ಷಿಣ ಆಫ್ರಿಕಾ, ಅಮೆರಿಕದ ವಿವಿಧ ದೇಶಗಳನ್ನು ನೋಡಬೇಕೆಂಬ ಬಯಕೆ ಇದೆ. ಈವರೆಗಿನ ಪ್ರಯಾಣದಲ್ಲಿ ಎಲ್ಲ ದೇಶಗಳ ಸಾರ್ವಜನಿಕರಿಂದ ಉತ್ತಮ ಸಹಕಾರ ದೊರೆತಿದೆ’ ಎಂದರು.

‘ಬೂಸಾನ್‌ಲ್ಲಿ ವ್ಯಾಪಾರ ನಡೆಸುತ್ತಿ­ರುವ ತಾಯಿ, ಅಕ್ಕ ಅವರನ್ನು ಒಳಗೊಂಡ ಚಿಕ್ಕ ಕುಟುಂಬ ನಮ್ಮದು. ವ್ಯಾಪಾರ ಮುಂದುವರಿಸುವ ಇಷ್ಟ ಇಲ್ಲ. ಅಂತೆಯೇ ಸಾಧಿಸಬೇಕೆಂಬ ಹಂಬಲದೊಂದಿಗೆ ಸೈಕಲ್‌ ಯಾತ್ರೆ ನಡೆಸುತ್ತಿದ್ದೇನೆ’ ಎಂದೂ ಅವರು ಹೇಳಿದರು.

Write A Comment