ಕರ್ನಾಟಕ

ಹೈದರಾಬಾದ್‌ಗೆ ಹಾರಿದ ‘ಜೀವಂತ ಹೃದಯ’: ಯಶಸ್ವಿ ಶಸ್ತ್ರಚಿಕಿತ್ಸೆ

Pinterest LinkedIn Tumblr

pvec01 Heart 04

ಬೆಂಗಳೂರು:ನಗರದ ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿನ   ಪ್ರಧಾನ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆ (ಪಿಎಂಎಸ್‌ಎಸ್‌ವೈ) ಆಸ್ಪತ್ರೆಯಿಂದ ಹೈದರಾಬಾದ್‌ನ ಯಶೋದಾ ಆಸ್ಪತ್ರೆಗೆ ಶನಿವಾರ ‘ಜೀವಂತ ಹೃದಯ’ ಸಾಗಿಸಿ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ.ಹೃದಯ ಅಷ್ಟೇ ಅಲ್ಲದೆ, ಮೂತ್ರಪಿಂಡ, ಯಕೃತ್ತು, ಕಣ್ಣುಗಳನ್ನು ಬೇರೆ ಬೇರೆ ಆಸ್ಪತ್ರೆಗಳಿಗೆ ಸಾಗಿಸಿ ಕಸಿ ಮಾಡಲಾಗಿದೆ.

ಕೋರಮಂಗಲದ ಖಾಸಗಿ ಕಂಪೆನಿಯ ಭದ್ರತಾ ಅಧಿಕಾರಿ  ಪಂಡಿತ್‌ ಶಿವರಾಯ ಬಜೆ (28) ಅವರಿಗೆ ಗುರುವಾರ (ಫೆ.26) ರಂದು ರಸ್ತೆ ದಾಟುವಾಗ ಖಾಸಗಿ ಬಸ್ಸೊಂದು ಡಿಕ್ಕಿ ಹೊಡೆದು ಅಪಘಾತವಾಗಿತ್ತು. ‘ಅಪಘಾತವಾದ ನಂತರ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದೆವು. ಅಲ್ಲಿ ಚಿಕಿತ್ಸೆ ನೀಡಿದ ವೈದ್ಯರು ಹೃದಯ ಬಡಿತ ಎಲ್ಲವೂ ಸಾಮಾನ್ಯವಾಗಿದೆ.

ಆದರೆ, ತಲೆಗೆ ತೀವ್ರ ಪೆಟ್ಟಾಗಿರುವುದರಿಂದ ನಿಮ್ಹಾನ್ಸ್‌ಗೆ ದಾಖಲಿಸುವಂತೆ ಸಲಹೆ ನೀಡಿದರು. ಅಲ್ಲಿಂದ ನಿಮ್ಹಾನ್ಸ್‌ಗೆ ದಾಖಲಿಸಿ, ಅಲ್ಲಿ ತೀವ್ರ ನಿಗಾ ಘಟಕ ಇಲ್ಲದೇ ಇದ್ದುದರಿಂದ, ಫೋರ್ಟಿಸ್‌ ಆಸ್ಪತ್ರೆಗೆ ದಾಖಲಿಸಿದ್ದೆವು’ ಎಂದು ಕಂಪೆನಿಯ ಆಡಳಿತ ವಿಭಾಗದ ವ್ಯವಸ್ಥಾಪಕ ದಿನೇಶ್‌ ಹೆಗ್ಡೆ ತಿಳಿಸಿದರು. ‘ಫೋರ್ಟಿಸ್‌ ಆಸ್ಪತ್ರೆಯಿಂದ ಪಿಎಂಎಸ್‌ಎಸ್‌ವೈ ಆಸ್ಪತ್ರೆಗೆ ಕರೆದುಕೊಂಡು ಬರಲಾಯಿತು. ಶುಕ್ರವಾರ ರಾತ್ರಿ ಮೆದುಳು ನಿಷ್ಕ್ರಿಯಗೊಂಡಿರು­ವುದಾಗಿ ವೈದ್ಯರು ತಿಳಿಸಿದರು. ಹೀಗಾಗಿ, ಪೋಷಕರನ್ನು ಸಂಪರ್ಕಿಸಿ ಅಂಗಾಂಗ ದಾನ ಮಾಡಲಾಯಿತು’ ಎಂದರು.

ಝಡ್‌ಸಿಸಿಕೆ ಪಾತ್ರ: ‘ವಿಷಯ ತಿಳಿದ ನಂತರ ಕೂಡಲೇ ಕಾರ್ಯೋನ್ಮುಖರಾಗಿ ಯುವಕನ ಪೋಷಕರನ್ನು ಸಂಪರ್ಕಿಸಿ ಅಂಗಾಂಗ ದಾನ ಮಾಡುವಂತೆ ಕೋರಲಾಯಿತು. ಪೋಷಕರು ಸಕಾರಾತ್ಮಕವಾಗಿ ಸ್ಪಂದಿಸಿದರು’ ಎಂದು ಝಡ್‌ಸಿಸಿಕೆ ಮುಖ್ಯ  ಸಂಯೋಜಕಿ ಕೆ.ಯು. ಮಂಜುಳಾ ತಿಳಿಸಿದರು.

‘ಹೈದರಾಬಾದ್‌ನ ಯಶೋದಾ ಆಸ್ಪತ್ರೆಯಲ್ಲಿ ವ್ಯಕ್ತಿಯೊಬ್ಬರಿಗೆ ಹೃದಯ ಅಗತ್ಯವಿರುವುದರ ಬಗೆಗೆ ಮಾಹಿತಿ ಬಂದಿತು. ಹೀಗಾಗಿ, ಅಲ್ಲಿಗೆ ಹೃದಯ ಸಾಗಿಸಲಾಗಿದೆ. ಕಣ್ಣುಗಳನ್ನು ಮಿಂಟೋ ಆಸ್ಪತ್ರೆಗೆ, ಯಕೃತ್ತು ಎಚ್‌ಸಿಜಿ ಆಸ್ಪತ್ರೆಗೆ, ಮೂತ್ರ­ಪಿಂಡಗಳನ್ನು ನೆಫ್ರೊ ಯೂರಾಲಜಿ ಸಂಸ್ಥೆ ಹಾಗೂ ಸೇಂಟ್‌ ಜಾನ್ ಆಸ್ಪತ್ರೆಗೆ ದಾನ ಮಾಡಲಾಗಿದೆ’ ಎಂದರು.

ಯಶಸ್ವಿ ಶಸ್ತ್ರಚಿಕಿತ್ಸೆ: ಯಶೋದಾ ಆಸ್ಪತ್ರೆಯಲ್ಲಿ ಹೃದಯ ತೊಂದರೆಯಿಂದ ಬಳಲುತ್ತಿದ್ದ ಮಹಿಳೆ­ಯೊಬ್ಬರಿಗೆ ಹೃದಯವನ್ನು ಕಸಿ ಮಾಡಲಾಗಿದೆ. ಸತತ ಐದು ಗಂಟೆಗಳ ಕಾಲ ನಡೆಸಿದ ಹೃದಯ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ.

11 ನಿಮಿಷದಲ್ಲಿ ಎಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ…
ಬೆಳಿಗ್ಗೆಯೇ ಹೃದಯ ಸಾಗಿಸಬೇಕಾದ ಕುರಿತು ಮಾಹಿತಿ ಸಿಕ್ಕಿತ್ತು. ಹೀಗಾಗಿ, ವೈರ್‌ಲೆಸ್‌ ಮುಖಾಂತರ ಸಿಗ್ನಲ್‌ನಿಂದ ಸಿಗ್ನಲ್‌ಗಳಿಗೆ ಮಾಹಿತಿ ನೀಡಲಾಗುತ್ತಿತ್ತು. ಮಧ್ಯಾಹ್ನ 12 ಗಂಟೆಗೆ ವಿಕ್ಟೋರಿಯಾ ಆಸ್ಪತ್ರೆಯಿಂದ ಹೊರಟ ಆಂಬುಲೆನ್ಸ್‌ ಸಿಟಿ ಮಾರುಕಟ್ಟೆ, ಹಡ್ಸನ್‌ ವೃತ್ತ, ಕ್ವೀನ್ಸ್‌ ರಾಣಿ ಪ್ರತಿಮೆ, ಅನಿಲ್‌ ಕುಂಬ್ಳೆ ವೃತ್ತ, ಮೆಯೋಹಾಲ್‌, ಟ್ರಿನಿಟಿ ವೃತ್ತ, ಹಳೆಯ ವಿಮಾನ ನಿಲ್ದಾಣದ ಮೂಲಕ ಎಚ್‌ಎಎಲ್‌ ವಿಮಾನ ನಿಲ್ದಾಣವನ್ನು 11 ನಿಮಿಷದಲ್ಲಿ ತಲುಪಿತು.
ಬಾಬು ರಾಜೇಂದ್ರ ಪ್ರಸಾದ್‌, ಡಿಸಿಪಿ, ಪೂರ್ವ ವಿಭಾಗ.

6 ತಿಂಗಳಿನಲ್ಲಿ 4ನೇ ಬಾರಿ ‘ಹೃದಯ’ ದಾನ
ಕಳೆದ ಆರು ತಿಂಗಳಿನಲ್ಲಿ ಇದು ನಾಲ್ಕನೇ ಬಾರಿ ಹೃದಯ ದಾನ ಮತ್ತು ಯಶಸ್ವಿ ಶಸ್ತ್ರ ಚಿಕಿತ್ಸೆಯಾಗಿದೆ.ಸೆ.3 ರಂದು  ಬಿಜಿಎಸ್ ಗ್ಲೋಬಲ್ ಆಸ್ಪತ್ರೆ ಯಿಂದ ಚೆನ್ನೈನ ಫೋರ್ಟಿಸ್‌ ಆಸ್ಪತ್ರೆಗೆ ವಿಶೇಷ ವಿಮಾನದ ಮೂಲಕ ‘ಹೃದಯ’ ವನ್ನು ಸಾಗಿಸಲಾಗಿತ್ತು.

ಆಗ ಅಪಘಾತದಿಂದ ಚಿಕಿತ್ಸೆಗೆ ಸ್ಪಂದಿಸದೆ, ಮೆದುಳು ನಿಷ್ಕ್ರಿ ಯಗೊಂಡಿದ್ದ ಮಹಿಳೆಯ ಹೃದಯವನ್ನು ರವಾನಿಸಲಾಗಿತ್ತು.ಡಿ.20 ರಂದು ಎರಡು ವರ್ಷ 10 ತಿಂಗಳ ಮಗುವಿನ ಹೃದಯವನ್ನು ಮಣಿಪಾಲ್ ಆಸ್ಪತ್ರೆಯಿಂದ ಚೆನ್ನೈನ ಫೋರ್ಟಿಸ್ ಆಸ್ಪತ್ರೆಗೆ ಸಾಗಿಸಲಾಗಿತ್ತು.

ಜ. 3 ರಂದು ನಗರದ ಎಂ.ಎಸ್‌. ರಾಮಯ್ಯ ಆಸ್ಪತ್ರೆಯಿಂದ ಕೆಂಗೇರಿ ಬಳಿಯಿ ರುವ ಬಿ.ಜಿ.ಎಸ್‌.ಗ್ಲೋಬಲ್‌ ಆಸ್ಪತ್ರೆಗೆ ‘ಹೃದಯ’ ಸಾಗಿಸಿ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಆಗ, ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡಿದ್ದ ಯುವಕನ ಹೃದಯವನ್ನು ಸಾಗಿಸಲಾಗಿತ್ತು.

ಸರ್ಕಾರಿ ಆಸ್ಪತ್ರೆಯಲ್ಲಿ ಮೊದಲ ‘ಹೃದಯ’ ರವಾನೆ
ನಗರದಲ್ಲಿ ಸರ್ಕಾರಿ ಆಸ್ಪತ್ರೆಯಿಂದ ಇದೇ ಮೊದಲ ಬಾರಿ ‘ಹೃದಯ’ ರವಾನೆಯಾಗಿದೆ. ಇದಕ್ಕೂ ಮೊದಲು ಒಂದು ತಿಂಗಳ ಹಿಂದೆ ಮೂತ್ರಪಿಂಡ ದಾನ ಮಾಡಲಾಗಿತ್ತು.

Write A Comment