ಪ್ರಮುಖ ವರದಿಗಳು

ಐಪಿಎಲ್‌ ಹರಾಜು: ಭಾರಿ ಬೆಲೆ ಪಡೆದ ಯುವರಾಜ್‌; ₨ 10.50 ಕೋಟಿಗೆ ದಿನೇಶ್‌ ಕಾರ್ತಿಕ್‌ ಆರ್‌ಸಿಬಿ ಪಾಲು

Pinterest LinkedIn Tumblr

1

ಬೆಂಗಳೂರು: ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯಲ್ಲಿ ಯುವರಾಜ್‌ ಸಿಂಗ್‌ ಅವರ ‘ಬೆಲೆ’ ಕಡಿಮೆಯಾಗಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

ಭಾರತ ತಂಡದಲ್ಲಿ ಸ್ಥಾನ ಕಳೆದುಕೊಂಡಿರುವ ಪಂಜಾಬ್‌ನ ಈ ಎಡಗೈ ಬ್ಯಾಟ್ಸ್‌ಮನ್‌ ಹರಾಜಿನಲ್ಲಿ ಕಡಿಮೆ ಬೆಲೆ ಪಡೆಯುವರು ಎಂದು ನಿರೀಕ್ಷಿಸಲಾಗಿತ್ತು. ಆದರೆ ಎಲ್ಲರ ಲೆಕ್ಕಾಚಾರಗಳು ತಲೆಕೆಳಗಾದವು.

ಸೋಮವಾರ ಹರಾಜು ಪ್ರಕ್ರಿಯೆ ನಡೆಸಿದ ಇಂಗ್ಲೆಂಡ್‌ನ ರಿಚರ್ಡ್‌ ಮೆಡ್ಲೆ ಅವರು ಯುವರಾಜ್‌ ಸಿಂಗ್‌ ಹೆಸರು ಕರೆಯುತ್ತಿದ್ದಂತೆಯೇ ಕುತೂಹಲ ಗರಿಗೆದರಿತು. ಎಲ್ಲ ಫ್ರಾಂಚೈಸ್‌ಗಳ ಪ್ರತಿನಿಧಿಗಳು ಸಮಾಲೋಚನೆಯಲ್ಲಿ ತೊಡಗಿದರು.

33ರ ಹರೆಯದ ಯುವಿಗೆ ₨ 2 ಕೋಟಿ ಮೂಲಬೆಲೆ ನಿಗದಿಪಡಿಸಲಾಗಿತ್ತು. ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ಮತ್ತು ರಾಜಸ್ತಾನ ರಾಯಲ್ಸ್‌

ತಂಡಗಳು ಅವರನ್ನು ತಮ್ಮದಾಗಿಸಿಕೊಳ್ಳಲು ಆರಂಭದಲ್ಲಿ ಆಸಕ್ತಿ ತೋರಿದವು. ಆದರೆ ₨ 7 ಕೋಟಿ ದಾಟುತ್ತಿದ್ದಂತೆಯೇ ಇವೆರಡು ತಂಡಗಳು ಹಿಂದೆ ಸರಿದವು.

2

ಆ ಬಳಿಕ ಡೆಲ್ಲಿ ಡೇರ್‌ಡೆವಿಲ್ಸ್‌ ಮತ್ತು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಗಳ ನಡುವೆ ನೇರ ಹಣಾಹಣಿ ನಡೆದವು. ಹೋದ ವರ್ಷ ನಡೆದ ಹರಾಜಿನಲ್ಲಿ ಆರ್‌ಸಿಬಿ ₨ 14 ಕೋಟಿ ನೀಡಿ ಯುವರಾಜ್‌ ಅವರನ್ನು ಖರೀದಿಸಿತ್ತು. ಈ ಬಾರಿ ಅವರನ್ನು ಅದಕ್ಕಿಂತ ಕಡಿಮೆ ಮೊತ್ತಕ್ಕೆ ಖರೀದಿಸಿ ‘ಹಣ ಉಳಿಸುವ’ ಯೋಜನೆಯನ್ನು ಆರ್‌ಸಿಬಿ ಹಾಕಿಕೊಂಡಿತ್ತು.

ಆದರೆ ₨ 39 ಕೋಟಿಗಳ ಭಾರಿ ಮೊತ್ತದೊಂದಿಗೆ ಹರಾಜಿಗೆ ಬಂದಿದ್ದ ಡೇರ್‌ಡೆವಿಲ್ಸ್‌ ತಂಡ ಅದಕ್ಕೆ ಅವಕಾಶ ನೀಡಲಿಲ್ಲ. ಯುವಿ ಮೊತ್ತ ₨ 14 ಕೋಟಿ ದಾಟುತ್ತಿದ್ದಂತೆಯೇ ಆರ್‌ಸಿಬಿ ಪ್ರತಿನಿಧಿಗಳು ತುಂಬಾ ಹೊತ್ತು ಸಮಾಲೋಚನೆ ನಡೆಸಿದರು. ಆ ಬಳಿಕ ಆಸ್ಟ್ರೇಲಿಯಾದಲ್ಲಿರುವ ನಾಯಕ ವಿರಾಟ್‌ ಕೊಹ್ಲಿ ಮತ್ತು ಕೋಚ್‌ ಡೇನಿಯಲ್‌ ವೆಟೋರಿ ಜತೆ ದೂರವಾಣಿ ಮೂಲಕ ಮಾತುಕತೆ ನಡೆಸಿ ₨14.50 ಕೋಟಿಗೆ ಬಿಡ್‌ ಸಲ್ಲಿಸಿತು.

ಡೇರ್‌ಡೆವಿಲ್ಸ್‌ ಮೊತ್ತವನ್ನು ₨ 15 ಕೋಟಿಗೆ ಹೆಚ್ಚಿಸಿತು. ಆರ್‌ಸಿಬಿ ಮತ್ತೆ ₨ 50 ಲಕ್ಷ ಅಧಿಕ ನೀಡಲು ಮುಂದಾಯಿತು. ಆದರೆ ಯುವಿ ಅವರನ್ನು ಪಡೆದೇ ತೀರಬೇಕೆಂಬ ದೃಢನಿಶ್ಚಯ ಮಾಡಿದ್ದ ಡೇರ್‌ಡೆವಿಲ್ಸ್‌ ₨ 16 ಕೋಟಿಗೆ ಬಿಡ್‌ ಸಲ್ಲಿಸಿತು. ಆರ್‌ಸಿಬಿ ಅನ್ಯ ಮಾರ್ಗವಿಲ್ಲದೆ ಹಿಂದೆ ಸರಿಯಿತು.

ಐಪಿಎಲ್‌ ಏಳನೇ ಋತುವಿನ ಟೂರ್ನಿಯಲ್ಲಿ ಡೇರ್‌ಡೆವಿಲ್ಸ್‌ ತಂಡ ಕೊನೆಯ ಸ್ಥಾನ ಪಡೆದುಕೊಂಡಿತ್ತು. ಯುವರಾಜ್‌ ಸಿಂಗ್‌ ತಂಡದ ‘ಅದೃಷ್ಟ’ ಬದಲಾಯಿಸಲಿದ್ದಾರೆ ಎಂಬ ನಿರೀಕ್ಷೆಯನ್ನು ಡೇರ್‌ಡೆವಿಲ್ಸ್‌ ಮಾಲೀಕರು ಹೊಂದಿದ್ದಾರೆ.

‘ನಮಗೆ ಒಬ್ಬ ಸ್ಟಾರ್ ಆಟಗಾರನ ಅಗತ್ಯವಿತ್ತು. ಈ ಕಾರಣ ಅವರನ್ನು ತಂಡಕ್ಕೆ ಸೇರಿಸಿಕೊಂಡಿದ್ದೇವೆ. ಯುವರಾಜ್‌ ದೇಸಿ ಕ್ರಿಕೆಟ್‌ನಲ್ಲಿ ಉತ್ತಮ ಆಟ ತೋರುತ್ತಿದ್ದಾರೆ’ ಎಂದು ಡೇರ್‌ಡೆವಿಲ್ಸ್‌ ತಂಡದ ಸಿಇಒ ಹೇಮಂತ್‌ ದುವಾ ತಿಳಿಸಿದರು.

ಡೇರ್‌ ಡೆವಿಲ್ಸ್‌ ಏಂಜೆಲೊ ಮ್ಯಾಥ್ಯೂಸ್‌ (₨ 7.50 ಕೋಟಿ), ಜಹೀರ್‌ ಖಾನ್‌ (₨ 4.00 ಕೋಟಿ), ಅಮಿತ್‌ ಮಿಶ್ರಾ (₨ 3.50 ಕೋಟಿ) ಮತ್ತು ಶ್ರೇಯಸ್‌ ಅಯ್ಯರ್‌ (₨ 2.60 ಕೋಟಿ) ಅವರನ್ನೂ ಹೆಚ್ಚಿನ ಮೊತ್ತ ನೀಡಿ ಖರೀದಿಸಿತು.

ಆರ್‌ಸಿಬಿಗೆ ಕಾರ್ತಿಕ್‌: ವಿಜಯ್‌ ಮಲ್ಯ ಒಡೆತನದ ಆರ್‌ಸಿಬಿ ತಂಡ ₨ 10.5 ಕೋಟಿ ನೀಡಿ ತಮಿಳುನಾಡಿನ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ದಿನೇಶ್‌ ಕಾರ್ತಿಕ್‌ ಅವರನ್ನು ತನ್ನದಾಗಿಸಿಕೊಂಡಿತು.

ಕಾರ್ತಿಕ್‌ ಅವರಿಗಾಗಿ ಆರ್‌ಸಿಬಿ ಮತ್ತು ಡೆಲ್ಲಿ ನಡುವೆ ಪೈಪೋಟಿ ನಡೆಯಿತು. ಹರಾಜಿನ ಮೊತ್ತ ₨ 9 ಕೋಟಿ ಆದಾಗ ಡೇರ್‌ಡೆವಿಲ್ಸ್‌ ಹಿಂದೆ ಸರಿಯಿತು. ಆದರೆ ಸನ್‌ರೈಸರ್ಸ್‌ ಹೈದರಾಬಾದ್‌ ಸ್ಪರ್ಧೆಗಿಳಿಯಿತು. ಕಾರ್ತಿಕ್‌ ಬೆಲೆ ₨ 10.50 ಕೋಟಿಗೆ ಏರಿದಾಗ ಸನ್‌ರೈಸರ್ಸ್‌ ಕೂಡಾ ಹಿಂದೆ ಸರಿಯಿತು.

ಆಸ್ಟ್ರೇಲಿಯಾದ ಸೀನ್‌ ಅಬಾಟ್‌ ಮತ್ತು ನ್ಯೂಜಿಲೆಂಡ್‌ನ ಆ್ಯಡಮ್‌ ಮಿಲ್ನ್‌ ಅವರನ್ನು ಸೇರಿಸಿಕೊಳ್ಳುವ ಮೂಲಕ ಆರ್‌ಸಿಬಿ ತನ್ನ ವೇಗದ ಬೌಲಿಂಗ್‌ ವಿಭಾಗವನ್ನು ಬಲಪಡಿಸಿಕೊಂಡಿತು.

ಜಹೀರ್‌ಗೆ ‘ಅದೃಷ್ಟ’: ಅನುಭವಿ ಬೌಲರ್‌ ಜಹೀರ್‌ ಖಾನ್‌ ಅವರನ್ನು ಮೊದಲ ಸುತ್ತಿನಲ್ಲಿ ಯಾರೂ ಕೊಳ್ಳಲಿಲ್ಲ. ಎರಡನೇ ಸುತ್ತಿನಲ್ಲಿ ಉತ್ತಮ ಮೊತ್ತಕ್ಕೆ ಡೇರ್‌ಡೆವಿಲ್ಸ್‌ ತಂಡದ ಪಾಲಾದರು.

ಇರ್ಫಾನ್‌ ಪಠಾಣ್‌ ಅವರೂ ಮೊದಲ ಸುತ್ತಿನಲ್ಲಿ ಹರಾಜಾಗಲಿಲ್ಲ. ಎರಡನೇ ಸುತ್ತಿನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಮೂಲಬೆಲೆಗೆ (₨ 1.50 ಕೋಟಿ) ತನ್ನದಾಗಿಸಿಕೊಂಡಿತು.

ಕರ್ನಾಟಕದ ಕೆ.ಸಿ. ಅಯ್ಯಪ್ಪ ಅವರನ್ನು ₨ 2.40 ಕೋಟಿ ಮೊತ್ತಕ್ಕೆ ಖರೀದಿಸಿದ ಕೋಲ್ಕತ್ತ ನೈಟ್‌ ರೈಡರ್ಸ್‌ ತಂಡ ಎಲ್ಲರಿಗೂ ಅಚ್ಚರಿ ಉಂಟುಮಾಡಿತು. ₨ 10 ಲಕ್ಷ ಮೂಲಬೆಲೆ ಹೊಂದಿದ್ದ ಈ ಸ್ಪಿನ್ನರ್‌ ‘ಕೋಟ್ಯಧಿಪತಿ’ಯಾಗಿ ಎಲ್ಲರ ಗಮನ ಸೆಳೆದರು.  ಮುಂಬೈನ ಯುವ ಆಟಗಾರ ಶ್ರೇಯಸ್‌ ಅಯ್ಯರ್‌ ಅವರೂ ನಿರೀಕ್ಷೆಗಿಂತ ಹೆಚ್ಚು ಮೊತ್ತ ಪಡೆದರು.

ಇಂಗ್ಲೆಂಡ್‌ನ ಮೂವರು ಪ್ರಮುಖ ಆಟಗಾರರಾದ ಕೆವಿನ್‌ ಪೀಟರ್ಸನ್‌, ಎಯೊನ್‌ ಮಾರ್ಗನ್‌ ಮತ್ತು ರವಿ ಬೋಪಾರ ಅವರನ್ನು ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ತನ್ನದಾಗಿಸಿಕೊಂಡಿತು.

ಶ್ರೀಲಂಕಾದ ಅನುಭವಿ ಆಟಗಾರರಾದ ತಿಲಕರತ್ನೆ ದಿಲ್ಶಾನ್‌, ಕುಮಾರ ಸಂಗಕ್ಕಾರ ಮತ್ತು ಮಾಹೇಲ ಜಯವರ್ಧನೆ ಅವರನ್ನು ಕೊಂಡುಕೊಳ್ಳಲು ಯಾವುದೇ ಫ್ರಾಂಚೈಸ್‌ಗಳೂ ಮುಂದಾಗಲಿಲ್ಲ. ಅದೇ ರೀತಿ ದಕ್ಷಿಣ ಆಫ್ರಿಕಾದ ಹಾಶಿಮ್‌ ಆಮ್ಲಾ, ವೆಸ್ಟ್‌ ಇಂಡೀಸ್‌ನ ಮಾರ್ಲೊನ್‌ ಸ್ಯಾಮುಯೆಲ್ಸ್‌, ಆಸ್ಟ್ರೇಲಿಯಾದ ಡೇವಿಡ್‌ ಹಸ್ಸಿ ಅವರೂ ಹರಾಜಾಗದೆ ಉಳಿದುಕೊಂಡರು.

ತಾರಾ ಮೆರುಗು: ಹೋಟೆಲ್‌ ಐಟಿಸಿ ಗಾರ್ಡೇನಿಯಾದಲ್ಲಿ ನಡೆದ ಹರಾಜು ಪ್ರಕ್ರಿಯೆಗೆ ತಾರಾ ಮೆರುಗು ಲಭಿಸಿತ್ತು. ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡದ ಒಡತಿ ಬಾಲಿವುಡ್‌ ನಟಿ ಪ್ರೀತಿ ಜಿಂಟಾ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

ಮುಂಬೈ ಇಂಡಿಯನ್ಸ್‌ ತಂಡದ ಒಡತಿ ನೀತಾ ಅಂಬಾನಿ, ಪುತ್ರ ಆಕಾಶ್‌ ಅಂಬಾನಿ ಮಾಜಿ ಆಟಗಾರರಾದ ಅನಿಲ್‌ ಕುಂಬ್ಳೆ, ರಾಹುಲ್‌ ದ್ರಾವಿಡ್‌, ರಿಕಿ ಪಾಂಟಿಂಗ್‌, ವಿವಿಎಸ್‌ ಲಕ್ಷ್ಮಣ್‌, ಸ್ಟೀಫನ್‌ ಫ್ಲೆಮಿಂಗ್‌, ಗ್ಯಾರಿ ಕರ್ಸ್ಟನ್‌ ಮತ್ತು ಟಾಮ್‌ ಮೂಡಿ ಅವರು ವಿವಿಧ ತಂಡಗಳನ್ನು ಪ್ರತಿನಿಧಿಸಿದರು.

ಮುಖ್ಯಾಂಶಗಳು
*ಹರಾಜಿನಲ್ಲಿ ಒಟ್ಟು 67 ಆಟಗಾರರು ವಿವಿಧ ತಂಡಗಳ ಪಾಲಾದರು. ಭಾರತದ 44 ಮತ್ತು ವಿದೇಶದ 23 ಆಟಗಾರರು ಹರಾಜಾದರು.
*ಹರಾಜು ಪಟ್ಟಿಯಲ್ಲಿ ಒಟ್ಟು 349 ಆಟಗಾರರಿದ್ದರು
*ಎಂಟು ಫ್ರಾಂಚೈಸ್‌ಗಳು ಒಟ್ಟು ₨ 87.60 ಕೋಟಿ ಮೊತ್ತ ವ್ಯಯಿಸಿದವು.
*ಒಟ್ಟು 123 ಆಟಗಾರರನ್ನು (ಭಾರತದ 79, ವಿದೇಶದ 44) ವಿವಿಧ ತಂಡಗಳು ಈಗಾಗಲೇ ತಮ್ಮಲ್ಲಿ ಉಳಿಸಿಕೊಂಡಿವೆ.

3f

Write A Comment