ಪ್ರಮುಖ ವರದಿಗಳು

ಏಕದಿನ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಗೆ ಭಾರತ ತಂಡ ಪ್ರಕಟ, ಉತ್ತಪ್ಪ ಕಡೆಗಣನೆ, ಯುವರಾಜ್‌ಗೂ ಇಲ್ಲ ಸ್ಥಾನ; ಸ್ಟುವರ್ಟ್‌ ಬಿನ್ನಿ, ಅಕ್ಷರ್‌ಗೆ ಒಲಿದ ಅವಕಾಶ

Pinterest LinkedIn Tumblr

crick

ಮುಂಬೈ: ಕರ್ನಾಟಕದ ಆಲ್‌ರೌಂಡರ್‌ ಸ್ಟುವರ್ಟ್‌ ಬಿನ್ನಿ ಮತ್ತು ಗುಜರಾತ್‌ನ ಯುವ ಬೌಲರ್‌ ಅಕ್ಷರ್‌ ಪಟೇಲ್‌ ಅವರು ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಸಂದೀಪ್‌ ಪಾಟೀಲ್‌ ನೇತೃತ್ವದ ರಾಷ್ಟ್ರೀಯ ಆಯ್ಕೆ ಸಮಿತಿ ಮಂಗಳವಾರ ಇಲ್ಲಿ ಸಭೆ ನಡೆಸಿ 15 ಸದಸ್ಯರ ತಂಡವನ್ನು ಆಯ್ಕೆ ಮಾಡಿದೆ. ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ ಕಾರ್ಯದರ್ಶಿ ಸಂಜಯ್‌ ಪಟೇಲ್‌ ಅವರು ಸಭೆಯ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಆಟಗಾರರ ಹೆಸರನ್ನು ಪ್ರಕಟಿಸಿದರು.

ಕರ್ನಾಟಕದ ರಾಬಿನ್‌ ಉತ್ತಪ್ಪ ಅವರನ್ನು ಕಡೆಗಣಿಸಲಾಗಿದೆ. ಪ್ರಸಕ್ತ ರಣಜಿ ಟೂರ್ನಿಯಲ್ಲಿ ಉತ್ತಮ ಆಟ ತೋರಿರುವ ಕೊಡಗಿನ ಈ ಆಟಗಾರ ತಂಡದಲ್ಲಿ ಸ್ಥಾನ ಪಡೆಯುವರು ಎಂದು ನಿರೀಕ್ಷಿಸಲಾಗಿತ್ತು.

ಅದೇ ರೀತಿ ಯುವರಾಜ್‌ ಸಿಂಗ್‌ ಮತ್ತೊಂದು ವಿಶ್ವಕಪ್‌ನಲ್ಲಿ ಆಡುವ ಅವಕಾಶ ಪಡೆಯುವರು ಎಂಬ ನಿರೀಕ್ಷೆಯೂ ಹುಸಿಯಾಗಿದೆ. 30 ಸದಸ್ಯರ ಸಂಭವನೀಯರ ಪಟ್ಟಿಯಲ್ಲಿ ಯುವರಾಜ್‌ ಇರಲಿಲ್ಲ. ರಣಜಿಯಲ್ಲಿ ಸತತ ಮೂರು ಶತಕ ಗಳಿಸಿದ್ದರಿಂದ ಆಯ್ಕೆಗಾರರು ಅವರ ಮೇಲೆ ಚಿತ್ತ ಹರಿಸುವರು ಎಂದು ನಿರೀಕ್ಷಿಸಲಾಗಿತ್ತು.

‘ಯುವರಾಜ್‌ ಒಳಗೊಂಡಂತೆ ಇತರ ಕೆಲವರ ಹೆಸರು ಸಭೆಯಲ್ಲಿ ಚರ್ಚೆಗೆ ಬಂದವು. ಆದರೆ ಅವರನ್ನು ಆಯ್ಕೆ ಮಾಡದಿರಲು ನಿರ್ಧರಿಸಲಾಯಿತು. ಆಸ್ಟ್ರೇಲಿಯಾದಲ್ಲಿರುವ ನಾಯಕ ಮಹೇಂದ್ರ ಸಿಂಗ್‌ ದೋನಿ ಮತ್ತು ಕೋಚ್‌ ಡಂಕನ್‌ ಫ್ಲೆಚರ್‌ ವಿಡಿಯೊ ಕಾನ್ಫರೆನ್ಸ್‌ ಮೂಲಕ ಸಭೆಯಲ್ಲಿ ಭಾಗವಹಿಸಿದ್ದರು’ ಎಂದು ಸಂಜಯ್‌ ಪಟೇಲ್ ಹೇಳಿದ್ದಾರೆ.

ಆಲ್‌ರೌಂಡರ್‌ ರವೀಂದ್ರ ಜಡೇಜ ಅವರಿಗೆ ತಂಡದಲ್ಲಿ ಅವಕಾಶ ಲಭಿಸಿದೆ. ಭುಜದ ನೋವಿನಿಂದ ಬಳಲುತ್ತಿರುವ ಜಡೇಜ ಇನ್ನೂ ಚೇತರಿಸಿಕೊಂಡಿಲ್ಲ. ‘ಜಡೇಜ ಮರುಚೈತನ್ಯ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. ಬಿಸಿಸಿಐ ಫಿಸಿಯೊ ಜತೆ ಸಮಾಲೋಚನೆ ನಡೆಸಿದ ಬಳಿಕ ನಾವು ಅವರಿಗೆ ಸ್ಥಾನ ನೀಡಲು ನಿರ್ಧರಿಸಿದ್ದೇವೆ. 10 ದಿನಗಳ ಒಳಗಾಗಿ ಅವರು ತರಬೇತಿ ಆರಂಭಿಸಲಿದ್ದಾರೆ’ ಎಂದು ಸಂಜಯ್‌ ಪಟೇಲ್‌ ವಿವರಿಸಿದರು.

ದೋನಿ ಮುನ್ನಡೆಸಲಿರುವ ತಂಡದಲ್ಲಿ ನಾಲ್ಕು ಮಂದಿ ವೇಗಿಗಳಿಗೆ ಅವಕಾಶ ಲಭಿಸಿದೆ. ಅವರೆಂದರೆ ಭುವನೇಶ್ವರ್‌ ಕುಮಾರ್‌, ಮೊಹಮ್ಮದ್‌ ಶಮಿ, ಇಶಾಂತ್‌ ಶರ್ಮ ಮತ್ತು ಉಮೇಶ್‌ ಯಾದವ್‌. ರೋಹಿತ್‌ ಶರ್ಮ, ಶಿಖರ್‌ ಧವನ್‌ ಮತ್ತು ಅಜಿಂಕ್ಯ ರಹಾನೆ ಆರಂಭಿಕ ಆಟಗಾರರ ಜವಾಬ್ದಾರಿ ನಿರ್ವಹಿಸಬಲ್ಲರು. ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟೆಸ್ಟ್‌ ಸರಣಿಯಲ್ಲಿ ಧವನ್‌ ವಿಫಲರಾಗಿದ್ದಾರೆ. ಆದರೂ ಆಯ್ಕೆಗಾರರು ಅವರ ಮೇಲೆ ವಿಶ್ವಾಸ ಇಟ್ಟಿದ್ದಾರೆ.

ವಿರಾಟ್‌ ಕೊಹ್ಲಿ, ಸುರೇಶ್‌ ರೈನಾ, ಅಂಬಟಿ ರಾಯುಡು ಮತ್ತು ದೋನಿ ಮಧ್ಯಮ ಕ್ರಮಾಂಕದಲ್ಲಿ ಆಡಲಿದ್ದಾರೆ. ಸ್ಪಿನ್ನರ್‌ಗಳಾಗಿ ಆರ್‌. ಅಶ್ವಿನ್‌, ಅಕ್ಷರ್‌ ಪಟೇಲ್‌ ಮತ್ತು ಜಡೇಜ ಇದ್ದಾರೆ.

ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ತ್ರಿಕೋನ ಏಕದಿನ ಕ್ರಿಕೆಟ್‌ ಸರಣಿಗೆ ಭಾರತ ತಂಡವನ್ನು ಇದೇ ವೇಳೆ ಪ್ರಕಟಿಸಲಾಗಿದೆ. ಈ 15 ಆಟಗಾರರಲ್ಲದೆ, ಧವಳ್‌ ಕುಲಕರ್ಣಿ, ಮತ್ತು ಮೋಹಿತ್‌ ಶರ್ಮ ತ್ರಿಕೋನ ಸರಣಿಗೆ ಅವಕಾಶ ಪಡೆದಿದ್ದಾರೆ.

ತ್ರಿಕೋನ ಏಕದಿನ ಸರಣಿಗೆ ತಂಡ
ಮಹೇಂದ್ರ ಸಿಂಗ್‌ ದೋನಿ (ನಾಯಕ), ವಿರಾಟ್‌ ಕೊಹ್ಲಿ, ಶಿಖರ್‌ ಧವನ್‌, ರೋಹಿತ್‌ ಶರ್ಮ, ಅಜಿಂಕ್ಯ ರಹಾನೆ, ಸುರೇಶ್‌ ರೈನಾ, ಅಂಬಟಿ ರಾಯುಡು, ರವೀಂದ್ರ ಜಡೇಜ, ಆರ್‌. ಅಶ್ವಿನ್‌, ಅಕ್ಷರ್‌ ಪಟೇಲ್‌, ಭುವನೇಶ್ವರ್‌ ಕುಮಾರ್‌, ಇಶಾಂತ್‌ ಶರ್ಮ, ಮೊಹಮ್ಮದ್ ಶಮಿ, ಸ್ಟುವರ್ಟ್‌ ಬಿನ್ನಿ, ಉಮೇಶ್‌ ಯಾದವ್‌, ಧವಳ್‌ ಕುಲಕರ್ಣಿ, ಮೋಹಿತ್‌ ಶರ್ಮ

Write A Comment