ಬೆಂಗಳೂರು: 2013ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟಿಸಿದ್ದು, ಜೀವಮಾನದ ಸಾಧನೆಗಾಗಿ ನೀಡುವ ಡಾ. ರಾಜ್ಕುಮಾರ್ ಪ್ರಶಸ್ತಿಗೆ ಹಿರಿಯ ನಟ ಶ್ರೀನಾಥ್, ಪುಟ್ಟಣ್ಣ ಕಣಗಾಲ್ ಪ್ರಶಸ್ತಿಗೆ ನಿರ್ದೇಶಕ ಪಿ.ಎಚ್. ವಿಶ್ವನಾಥ್, ಡಾ. ವಿಷ್ಣುವರ್ಧನ್ ಪ್ರಶಸ್ತಿಗೆ ನಿರ್ಮಾಪಕ ಕೆ.ವಿ.ಗುಪ್ತಾ ಆಯ್ಕೆಯಾಗಿದ್ದಾರೆ.
ಪ್ರಶಸ್ತಿಯು ರೂ 2 ಲಕ್ಷ ನಗದು ಮತ್ತು ಚಿನ್ನದ ಪದಕ ಒಳಗೊಂಡಿದೆ. ಅತ್ಯುತ್ತಮ ನಟಿ ಪ್ರಶಸ್ತಿಗೆ ನಿವೇದಿತಾ (ಚಿತ್ರ: ಡಿಸೆಂಬರ್1), ಅತ್ಯುತ್ತಮ ನಟ ಪ್ರಶಸ್ತಿಗೆ (ಚಿತ್ರ: ಹಜ್) ನಿಖಿಲ್ ಮಂಜು ಪಾತ್ರರಾಗಿದ್ದಾರೆ. ಪ್ರಶಸ್ತಿಯು ₨ 20ಸಾವಿರ ನಗದು ಮತ್ತು ಬೆಳ್ಳಿಯ ಪದಕ ಒಳಗೊಂಡಿದೆ. ಅತ್ಯುತ್ತಮ ಚಿತ್ರ: ‘ಹಜ್’ ಪ್ರಥಮ (ನಿರ್ದೇಶನ: ನಿಖಿಲ್ ಮಂಜು), ‘ಜಟ್ಟ’ ದ್ವಿತೀಯ (ನಿ. ಬಿ.ಎಂ.ಗಿರಿರಾಜ್), ‘ಪ್ರಕೃತಿ’ಗೆ ತೃತೀಯ (ನಿ: ಪಂಚಾಕ್ಷರಿ) ಪ್ರಶಸ್ತಿ ಲಭಿಸಿದೆ.
‘ಇಂಗಳೆ ಮಾರ್ಗ’ (ನಿರ್ದೇಶನ: ವಿಶಾಲ್ ರಾಜ್) ವಿಶೇಷ ಸಾಮಾಜಿಕ ಕಾಳಜಿಯ ಚಿತ್ರವಾಗಿ ಹೊರಹೊಮ್ಮಿದೆ.
ಪ್ರಥಮ ಚಿತ್ರ ರೂ1ಲಕ್ಷ ನಗದು ಮತ್ತು ಚಿನ್ನದ ಪದಕ, ದ್ವಿತೀಯ ಚಿತ್ರ ರೂ 75 ಸಾವಿರ ನಗದು ಮತ್ತು ಬೆಳ್ಳಿಯ ಪದಕ, ತೃತೀಯ ಚಿತ್ರ ರೂ50 ಸಾವಿರ ನಗದು ಮತ್ತು ಬೆಳ್ಳಿಯ ಪದಕ, ವಿಶೇಷ ಚಿತ್ರ ರೂ 75 ಸಾವಿರ ನಗದು ಮತ್ತು ಬೆಳ್ಳಿಯ ಪದಕ ಒಳಗೊಂಡಿದೆ.
ಇತರ ಪ್ರಶಸ್ತಿಗಳ ವಿವರ: ಚಾರ್ ಮಿನಾರ್– ಅತ್ಯುತ್ತಮ ಮನರಂಜನಾ ಚಿತ್ರ (ನಿರ್ದೇಶನ: ಆರ್.ಚಂದ್ರಶೇಖರ್), ಹಾಡು ಹಕ್ಕಿ ಹಾಡು– ಅತ್ಯುತ್ತಮ ಮಕ್ಕಳ ಚಿತ್ರ (ನಿರ್ದೇಶನ: ವಿ.ನಾಗೇಂದ್ರ ಶಾ), ಅಗಸಿ ಪಾರ್ಲರ್– ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ (ನಿರ್ದೇಶನ: ಮಹಾಂತೇಶ ರಾಮದುರ್ಗ), ರಿಕ್ಷಾ ಡ್ರೈವರ್ (ತುಳು)–ಅತ್ಯುತ್ತಮ ಪ್ರಾದೇಶಿಕ ಭಾಷಾ ಚಿತ್ರ (ನಿರ್ದೇಶನ: ಹ.ಸು. ರಾಜಶೇಖರ್). ಪ್ರಶಸ್ತಿ ₨50 ಸಾವಿರ ನಗದು ಮತ್ತು ಬೆಳ್ಳಿಯ ಪದಕ ಒಳಗೊಂಡಿದೆ.
ಅತ್ಯುತ್ತಮ ಪೋಷಕನಟ–ಶರತ್ ಲೋಹಿತಾಶ್ವ (ಚಿತ್ರ: ಮತ್ತೆ ಸತ್ಯಾಗ್ರಹ), ಪೋಷಕ ನಟಿ– ಭಾಗೀರತಿ ಬಾಯಿ ಕದಂ (ಚಿತ್ರ: ಅಗಸಿ ಪಾರ್ಲರ್), ಕತೆ– ಹಜ್ (ಶ್ರೀಲಲಿತೆ), ಚಿತ್ರಕತೆ–ಟೋನಿ (ಜಯತೀರ್ಥ), ಸಂಭಾಷಣೆ–ಮೈನಾ (ನಾಗಶೇಖರ), ಛಾಯಾಗ್ರಹಣ–ಚಂದ್ರ (ಪಿ.ಎಚ್.ಕೆ. ದಾಸ್), ಸಂಗೀತ ನಿರ್ದೇಶನ–ಲೂಸಿಯಾ (ಪೂರ್ಣಚಂದ್ರ ತೇಜಸ್ವಿ), ಸಂಕಲನ– ಟೋನಿ (ಕೆ.ಎಂ.ಪ್ರಕಾಶ್), ಬಾಲನಟ–ಪ್ರದ್ಯುಮ್ನ (ಚಿತ್ರ:ಕರಿಯಾ ಕಣ್ಬಿಟ್ಟ), ಬಾಲನಟಿ– ಶ್ರೇಯಾ (ಚಿತ್ರ: ಅತಿ ಅಪರೂಪ), ಕಲಾ ನಿರ್ದೇಶನ– ರವಿ (ಚಿತ್ರ: ಭಜರಂಗಿ), ಗೀತರಚನೆ– ಅರಸು ಅಂತಾರೆ (ಚಿತ್ರ: ಮದರಂಗಿ), ಹಿನ್ನೆಲೆ ಗಾಯನ– ನವೀನ್ ಸಜ್ಜು (ಚಿತ್ರ:ಲೂಸಿಯಾ), ಹಿನ್ನೆಲೆ ಗಾಯನ–ಸಚಿನ್ ಹೆಗ್ಗಾರ್ (ಚಿತ್ರ: ಕಡ್ಡಿಪುಡಿ). ಪ್ರಶಸ್ತಿಯು ₨25 ಸಾವಿರ ನಗದು ಮತ್ತು ಬೆಳ್ಳಿಯ ಪದಕ ಒಳಗೊಂಡಿದೆ.
ಮೈಸೂರಿನಲ್ಲಿ ಪ್ರಶಸ್ತಿ ಪ್ರದಾನ: ‘ಪ್ರಶಸ್ತಿ ಪ್ರದಾನ ಸಮಾರಂಭ ಫೆಬ್ರುವರಿಯಲ್ಲಿ ಮೈಸೂರಿನಲ್ಲಿ ನಡೆಯಲಿದೆ’ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಚಿವ ರೋಷನ್‌ಬೇಗ್ ಮಾಹಿತಿ ನೀಡಿದರು.
ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷ ಪ್ರೊ.ಜಿ.ಕೆ. ಗೋವಿಂದರಾವ್, ಸಮಿತಿಯ ಸದಸ್ಯರಾದ ನಿರ್ದೇಶಕ ಎಸ್. ಮಹೇಂದರ್, ಸುಮನಾ ಕಿತ್ತೂರು, ಇಲಾಖೆಯ ನಿರ್ದೇಶಕ ಎನ್.ಆರ್. ವಿಶುಕುಮಾರ್ ಉಪಸ್ಥಿತರಿದ್ದರು.
ಸಂಭಾಷಣೆ ಪ್ರಶಸ್ತಿ ವಿವಾದ
2013ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಸಂಭಾಷಣೆಕಾರ ಪ್ರಶಸ್ತಿಯನ್ನು ‘ಮೈನಾ’ ಚಿತ್ರದ ನಿರ್ದೇಶಕ ನಾಗಶೇಖರ್ ಅವರಿಗೆ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ.
‘ಮೈನಾ’ ಚಿತ್ರಕ್ಕೆ ತಾವು ಸಂಭಾಷಣೆ ಬರೆದಿದ್ದು, ಚಿತ್ರದ ‘ಟೈಟಲ್ ಕಾರ್ಡ್’ನಲ್ಲೂ ತಮ್ಮ ಹೆಸರನ್ನೇ ಪ್ರಕಟಿಸಲಾಗಿದೆ. ಆದರೆ ನಿರ್ದೇಶಕ ನಾಗಶೇಖರ್ ಅವರಿಗೆ ಸಂಭಾಷಣೆಕಾರ ಪ್ರಶಸ್ತಿ ನೀಡಲಾಗಿದೆ ಎಂದು ಮಂಜುನಾಥ್ ಸಂಜೀವ್ ಅವರು ಮಾಧ್ಯಮಗಳ ಮುಂದೆ ಆಕ್ಷೇಪ ಎತ್ತಿದ್ದಾರೆ.
ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ನಾಗಶೇಖರ್, ‘ಚಿತ್ರದ ಹೆಚ್ಚಿನ ಭಾಗದ ಸಂಭಾಷಣೆಯನ್ನು ನಾನೇ ಬರೆದಿದ್ದೆ. ಮಂಜುನಾಥ್ ಸಂಜೀವ್ ನನ್ನ ಆತ್ಮೀಯ ಗೆಳೆಯ. ವಿಶ್ವಾಸದ ಕಾರಣಕ್ಕಾಗಿ ‘ಟೈಟಲ್ ಕಾರ್ಡ್’ನಲ್ಲಿ ಅವರ ಹೆಸರನ್ನು ಹಾಕಿಸಿದ್ದೆ. ಅವರೇ ಸಂಭಾಷಣೆ ಬರೆದಿರುವುದು ಎಂಬುದು ಸಾಬೀತುಪಡಿಸಿದರೆ ಅವರಿಗೇ ಪ್ರಶಸ್ತಿ ಕೊಡುತ್ತೇನೆ’ ಎಂದರು.
