ಅಂತರಾಷ್ಟ್ರೀಯ

ಸ್ಫೋಟಕ ಹೊಂದಿದ ದೋಣಿ ಪತ್ತೆ ಕಟ್ಟು ಕತೆ: ಪಾಕಿಸ್ತಾನ: ಪಾಕ್ ದೋಣಿ ಸಿಬ್ಬಂದಿ ಮೀನುಗಾರರಂತೆ ಕಾಣುತ್ತಿರಲಿಲ್ಲ: ಕರಾವಳಿ ಕಾವಲು ಪಡೆ

Pinterest LinkedIn Tumblr

309230-pakistanboat-020114-ra1

ಇಸ್ಲಾಮಾಬಾದ್, ಜ. 3: ಸ್ಫೋಟಕಗಳನ್ನು ಸಾಗಿಸುತ್ತಿತ್ತು ಎನ್ನಲಾದ ಪಾಕಿಸ್ತಾನದ ಮೀನುಗಾರಿಕಾ ದೋಣಿಯೊಂದನ್ನು ಭಾರತೀಯ ತಟ ರಕ್ಷಣಾ ಪಡೆ ಗುಜರಾತ್ ಕರಾವಳಿಯಲ್ಲಿ ತಡೆಯಿತು ಹಾಗೂ ದೋಣಿ ಸ್ಫೋಟಗೊಂಡು ಅದರಲ್ಲಿದ್ದ ನಾಲ್ವರು ವ್ಯಕ್ತಿಗಳ ಸಮೇತ ಮುಳುಗಿತು ಎಂಬ ವರದಿಗಳನ್ನು ಪಾಕಿಸ್ತಾನ ಇಂದು ನಿರಾಕರಿಸಿದೆ.

ಕರಾಚಿಯಿಂದ ಯಾವ ದೋಣಿಯೂ ಅಂತಾರಾಷ್ಟ್ರೀಯ ಸಮುದ್ರಕ್ಕೆ ಪ್ರಯಾಣಿಸಿಲ್ಲ ಎಂದು ಪಾಕಿಸ್ತಾನ ವಿದೇಶ ಕಚೇರಿಯ ವಕ್ತಾರ ತನ್ಸಿಮ್ ಅಸ್ಲಂ ಮಾಧ್ಯಮಗಳಿಗೆ ತಿಳಿಸಿದರು.

ಡಿಸೆಂಬರ್ 31 ಮತ್ತು ಜನವರಿ 1ರ ನಡುವಿನ ರಾತ್ರಿ ಪೋರಬಂದರ್ ಕರಾವಳಿಯಿಂದ 365 ಕಿ.ಮೀ. ದೂರದಲ್ಲಿ ಘಟನೆ ನಡೆದಿದೆ ಎಂಬುದಾಗಿ ವರದಿಗಳು ಹೇಳಿವೆ. 2008ರಲ್ಲಿ ಮುಂಬೈಯ ಮೇಲೆ ನಡೆದ ಭಯೋತ್ಪಾದಕ ದಾಳಿಯ ಮಾದರಿಯಲ್ಲೇ ಭಾರತದ ಮೇಲೆ ಇನ್ನೊಂದು ದಾಳಿ ನಡೆಸಲು ಪ್ರಯತ್ನ ನಡೆಸಲಾಗಿತ್ತು ಎಂಬ ಊಹಾಪೋಹಗಳನ್ನು ಈ ಘಟನೆ ಸೃಷ್ಟಿಸಿತ್ತು.
ಪಾಕಿಸ್ತಾನದ ರಕ್ಷಣಾ ಸಚಿವಾಲಯದ ಅಧಿಕಾರಿಗಳೂ ಈ ವರದಿಗಳನ್ನು ನಿರಾಕರಿಸಿದ್ದಾರೆ.

ಪಾಕ್ ದೋಣಿ ಸಿಬ್ಬಂದಿ ಮೀನುಗಾರರಂತೆ ಕಾಣುತ್ತಿರಲಿಲ್ಲ: ಕರಾವಳಿ ಕಾವಲು ಪಡೆ
ಗಾಂಧಿನಗರ: ಗುಜರಾತ್ ಕರಾವಳಿಯಲ್ಲಿ ಅರಬ್ಬಿ ಸಮುದ್ರದಲ್ಲಿ ಗುರುವಾರ ಮುಂಜಾನೆ ಸ್ಫೋಟಗೊಂಡ ದೋಣಿಯಲ್ಲಿದ್ದ ಸಿಬ್ಬಂದಿಗಳು ತೊಟ್ಟಿದ್ದ ದಿರಿಸಿನ ಶೈಲಿಯನ್ನು ನೋಡಿದರೆ ಅವರು ಮೀನುಗಾರರಂತೆ ಕಾಣುತ್ತಿರಲಿಲ್ಲ. ಅಲ್ಲದೆ ಮೀನುಗಾರಿಕಾ ಬಲೆಗಳನ್ನು ಹೊಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಸ್ಫೋಟಕಗಳನ್ನು ತುಂಬಿದ್ದ ದೋಣಿಯಲ್ಲಿದ್ದ ಸಿಬ್ಬಂದಿಗಳ ಗುರುತಿನ ಬಗ್ಗೆ ಶಂಕೆ ವ್ಯಕ್ತವಾಗಿದೆ ಎಂದು ಭಾರತೀಯ ಕರಾವಳಿ ಕಾವಲು ಪಡೆ ಶನಿವಾರ ತಿಳಿಸಿದೆ.

ಪಾಕಿಸ್ತಾನದ ಬಂದರು ನಗರ ಕರಾಚಿಯಿಂದ ಹೊರಟಿತ್ತು ಎನ್ನಲಾದ ಶಂಕಿತ ದೋಣಿಯನ್ನು ಅಡ್ಡಗಟ್ಟುವಾಗ ಸಾಮಾನ್ಯ ಕಾರ್ಯಾಚರಣೆಯ ನಿಯಮಾವಳಿಗಳನ್ನು ಪಾಲಿಸಲಾಗಿತ್ತು ಎಂದು ಕಾವಲು ಪಡೆ ತಿಳಿಸಿದೆ.
ದೋಣಿಯಲ್ಲಿದ್ದ ಸಿಬ್ಬಂದಿಯೇ ದೋಣಿಗೆ ಬೆಂಕಿ ಹಚ್ಚಿಕೊಂಡಿದ್ದರು. ಇದರಿಂದ ಸ್ಫೋಟಗೊಂಡ ದೋಣಿ ನಂತರ ಸಮುದ್ರದಲ್ಲಿ ಮುಳುಗಿತು ಎಂದು ಕಾವಲು ಪಡೆ ಸ್ಪಷ್ಟಪಡಿಸಿದೆ.

‘ದೋಣಿಯಲ್ಲಿ ನಾಲ್ವರು ವ್ಯಕ್ತಿಗಳು ಇರುವುದನ್ನು ನಾವು ಕಂಡೆವು. ಅವರು ಟೀ-ಶರ್ಟ್‌ಗಳು ಮತ್ತು ಹಾಫ್ ಪ್ಯಾಂಟ್‌ಗಳನ್ನು ಧರಿಸಿದ್ದರು. ಅವರೆಲ್ಲ ಮೀನುಗಾರರಂತೆ ಕಾಣುತ್ತಿರಲಿಲ್ಲ. ಇದರಿಂದ ನಮ್ಮಲ್ಲಿ ಶಂಕೆ ವ್ಯಕ್ತವಾಯಿತು’ ಎಂದು ಕರಾವಳಿ ಕಾವಲು ಪಡೆಯ ಕಮಾಂಡರ್ (ವಾಯವ್ಯ ವಲಯ) ಕುಲದೀಪ್ ಸಿಂಗ್ ಶಿಯೋರಾನ್ ಶನಿವಾರ ಇಲ್ಲಿ ವರದಿಗಾರರೊಂದಿಗೆ ಮಾತನಾಡುತ್ತ ಹೇಳಿದರು.ದೋಣಿಯ ಅವಶೇಷಗಳು ಮತ್ತು ಸಿಬ್ಬಂದಿಯ ಕಳೇಬರ ಪತ್ತೆಗೆ ಕಾರ್ಯಾಚರಣೆ ಮುಂದುವರಿದಿದೆ ಎಂದು ಅವರು ತಿಳಿಸಿದರು.

ದೋಣಿಯಲ್ಲಿದ್ದವರು ಉಗ್ರಗಾಮಿಗಳೇ ಎಂದು ಅವರನ್ನು ಪ್ರಶ್ನಿಸಿದಾಗ, ‘ದೇಶದ ಗುಪ್ತಚರ ಸಂಸ್ಥೆಗಳು ಘಟನೆಯ ಕುರಿತು ಜಂಟಿ ತನಿಖೆ ನಡೆಸುತ್ತಿವೆ. ಅದರ ತಳಬುಡವನ್ನು ಅವರು ಕಂಡುಕೊಳ್ಳುತ್ತಾರೆ’ ಎಂದು ಉತ್ತರಿಸಿದರು.
‘ಶಂಕಿತ ದೋಣಿಯ ಬಗ್ಗೆ ಡಿಸೆಂಬರ್ 31ರ ಬೆಳಗ್ಗೆ ನಮಗೆ ಗುಪ್ತಚರ ಮಾಹಿತಿಗಳು ಲಭಿಸಿದವು. ನಾವು ನಮ್ಮ ಡೊರ್ನಿಯರ್ ವಿಮಾನ ಮತ್ತು ನೌಕೆಯನ್ನು ಆ ದಿಕ್ಕಿನತ್ತ ಕಳುಹಿಸಿದೆವು. ಮಧ್ಯಾಹ್ನ ಒಂದು ಗಂಟೆ ಹೊತ್ತಿಗೆ ನಾವು ಶಂಕಿತ ದೋಣಿಯ ಗುರುತು ಪತ್ತೆ ಮಾಡಿದ್ದೆವು’ ಎಂದು ಅವರು ತಿಳಿಸಿದರು.

‘ಅಂದು ಮಧ್ಯರಾತ್ರಿ ಹೊತ್ತಿಗೆ ನಮ್ಮ ನೌಕೆ ‘ರಾಜ್‌ರತನ್’ ಶಂಕಿತ ದೋಣಿಯ ಬಳಿಗೆ ತೆರಳಿ ಅದನ್ನು ನಿಲ್ಲಿಸಲು ಪ್ರಯತ್ನಿಸಿತು. ನಮ್ಮ ಎಚ್ಚರಿಕೆಗೆ ಶರಣಾಗತಿಯಾಗುವ ಬದಲು ದೋಣಿ ದೀಪ ಆರಿಸಿಕೊಂಡು ವೇಗವನ್ನು ಹೆಚ್ಚಿಸಿಕೊಂಡು ಪರಾರಿಯಾಯಿತು. ನಾವು ಸುಮಾರು ಒಂದೂವರೆ ಗಂಟೆ ಕಾಲ ದೋಣಿಯನ್ನು ಬೆನ್ನಟ್ಟಿದೆವು’ ಎಂದು ಅವರು ತಿಳಿಸಿದರು.

‘ಹೀಗೆ ದೋಣಿಯನ್ನು ಬೆನ್ನಟ್ಟುವಾಗ ಗಾಳಿಯಲ್ಲಿ ಬೆದರಿಕೆಯ ಗುಂಡು ಹಾರಿಸಿದೆವು. ಆದರೂ ದೋಣಿ ನಿಲ್ಲಲಿಲ್ಲ. ನಾವು ಇನ್ನಷ್ಟು ಬೆದರಿಕೆಯ ಗುಂಡುಗಳನ್ನು ಹಾರಿಸಿದೆವು. ಆಗ ದೋಣಿಯಲ್ಲಿದ್ದ ಸಿಬ್ಬಂದಿಯು ದೋಣಿಗೆ ಬೆಂಕಿ ಹಚ್ಚಿದರು. ನಂತರ ಸಿಬ್ಬಂದಿಯ ಸಹಿತ ದೋಣಿ ಸಮುದ್ರದಲ್ಲಿ ಮುಳುಗಿತು’ ಎಂದು ಅವರು ತಿಳಿಸಿದ್ದಾರೆ.

ಅರಬ್ಬಿ ಸಮುದ್ರದಲ್ಲಿ ಇನ್ನೆರಡು ಶಂಕಿತ ದೋಣಿಗಳಿದ್ದವು ಎಂಬ ವರದಿಗಳ ಬಗ್ಗೆ ಪ್ರಶ್ನಿಸಿದಾಗ, ಅಂತಹ ಯಾವುದೇ ಮಾಹಿತಿಗಳಿರಲಿಲ್ಲ ಎಂದು ಅವರು ಉತ್ತರಿಸಿದರು.
ದೋಣಿ ಸ್ಫೋಟ ಘಟನೆ ಮತ್ತು ‘ಪ್ರವಾಸಿ ಭಾರತೀಯ ದಿವಸ್’ ಹಾಗೂ ‘ವೈಬ್ರೆಂಟ್ ಗುಜರಾತ್’ ಶೃಂಗಸಭೆಯ ಹಿನ್ನೆಲೆಯಲ್ಲಿ ಗುಜರಾತ್ ಕರಾವಳಿಯುದ್ದಕ್ಕೂ ಭದ್ರತೆ ಮತ್ತು ನಿಗಾ ವ್ಯವಸ್ಥೆಯನ್ನು ಹೆಚ್ಚಿಸಲಾಗಿದೆ ಎಂದು ಐಸಿಜಿ ಕಮಾಂಡರ್ ತಿಳಿಸಿದರು.

ಡಿಸೆಂಬರ್ 31ರಂದು ಇಬ್ಬರು ಪಾಕಿಸ್ತಾನಿ ರೇಂಜರ್‌ಗಳನ್ನು ಹತ್ಯೆಗೈದ ಘಟನೆಯಿಂದ ಗಮನವನ್ನು ಬೇರೆಡೆ ಸೆಳೆಯಲು ಭಾರತೀಯರು ಯತ್ನಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ

”ಇದು ಪಾಕಿಸ್ತಾನದ ಘನತೆಗೆ ಕಳಂಕ ತರಲು ಭಾರತೀಯರು ನಡೆಸುತ್ತಿರುವ ಪ್ರಚಾರ ತಂತ್ರದ ಒಂದು ಭಾಗ” ಎಂದು ರಕ್ಷಣಾ ಸಚಿವಾಲಯದ ಅಧಿಕಾರಿಯೊಬ್ಬರು ಪಿಟಿಐಗೆ ಹೇಳಿದರು.

ತಪಾಸಣೆ ನಡೆಸುವುದಕ್ಕಾಗಿ ದೋಣಿಯನ್ನು ನಿಲ್ಲಿಸುವಂತೆ ತಟ ರಕ್ಷಣಾ ಸಿಬ್ಬಂದಿ ಸೂಚಿಸಿದರು, ಆದರೆ ದೋಣಿ ತನ್ನ ವೇಗವನ್ನು ಹೆಚ್ಚಿಸಿಕೊಂಡು ಭಾರತೀಯ ಜಲಪ್ರದೇಶದಿಂದ ತಪ್ಪಿಸಿಕೊಳ್ಳಲು ಯತ್ನಿಸಿತು ಎಂಬುದಾಗಿ ಭಾರತೀಯ ರಕ್ಷಣಾ ಸಚಿವಾಲಯ ಹೇಳಿದೆ.

Write A Comment